ವಿಧಾನಸಭಾ ಚುನಾವಣಾ ಭದ್ರತೆಗೆ ಅರೆ ಸೇನಾಪಡೆ

7
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ– ಮತಚೀಟಿ ವಿತರಣೆ ಆರಂಭ

ವಿಧಾನಸಭಾ ಚುನಾವಣಾ ಭದ್ರತೆಗೆ ಅರೆ ಸೇನಾಪಡೆ

Published:
Updated:

ಮಂಗಳೂರು: ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಸಂಪೂರ್ಣ ಭದ್ರತಾ ಉಸ್ತುವಾರಿಯನ್ನು ಅರೆ ಸೇನಾಪಡೆಗೆ ವಹಿಸಲಾಗಿದೆ. ಇದಕ್ಕಾಗಿ ಅರೆ ಸೇನಾಪಡೆಯ 3,000ಕ್ಕೂ ಹೆಚ್ಚು ಯೋಧರನ್ನು ನಿಯೋಜನೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ್ ಸೆಂಥಿಲ್‌ ತಿಳಿಸಿದರು.

ಚುನಾವಣಾ ಸಿದ್ಧತೆ ಕುರಿತು ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಚುನಾವಣಾ ಪ್ರಕ್ರಿಯೆಯಲ್ಲಿ ಭದ್ರತೆ ಒದಗಿಸುವುದಕ್ಕಾಗಿ ಅರೆ ಸೇನಾಪಡೆಯ 25 ಕಂಪೆನಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಬಹುತೇಕ ಎಲ್ಲ ಮತಗಟ್ಟೆಗಳಿಗೂ ಈ ಯೋಧರು ಭದ್ರತೆ ಒದಗಿಸುತ್ತಾರೆ’ ಎಂದರು.

ಹೆಚ್ಚುವರಿಯಾಗಿ ರಾಜ್ಯದ ಮೀಸಲು ಪೊಲೀಸ್ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ತಂಡಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಸನ್ನದ್ಧವಾಗಿ ಇರಿಸಲಾಗುವುದು. ಅರೆ ಸೇನಾಪಡೆಗಳ ಯೋಧರ ಜೊತೆ ಜಿಲ್ಲೆಯ ಜನರು ಸಹಕರಿಸಬೇಕು. ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಸಮಸ್ಯೆ ಕಂಡುಬಂದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ವೋಟರ್ಸ್ ಸ್ಲಿಪ್‌ ವಿತರಣೆ: ಜಿಲ್ಲೆಯ ಎಲ್ಲ ಮತದಾರರಿಗೆ ಚುನಾವಣಾ ಆಯೋಗದ ವತಿಯಿಂದ ಫೋಟೊ ವೋಟರ್ಸ್ ಸ್ಲಿಪ್‌ ವಿತರಿಸುವ ಕೆಲಸ ಆರಂಭವಾಗಿದೆ. ಮತಗಟ್ಟೆ ಹಂತದ ಅಧಿಕಾರಿಗಳು ಭಾನುವಾರದವರೆಗೂ ಮನೆ ಮನೆಗಳಿಗೆ ತೆರಳಿ ಸ್ಲಿಪ್ ವಿತರಿಸುವರು. ಸೋಮವಾರ ಆಯಾ ಮತಗಟ್ಟೆಗಳಲ್ಲಿ ಇಡೀ ದಿನ ಹಾಜರಿರುವವರು. ಅಲ್ಲಿಯೂ ಸ್ಲಿಪ್‌ ಪಡೆಯಲು ಅವಕಾಶವಿದೆ ಎಂದರು.

ಸೋಮವಾರ ಸಂಜೆಯ ನಂತರವೂ ಹಂಚಿಕೆಯಾಗದೇ ಉಳಿಯುವ ವೋಟರ್ಸ್ ಸ್ಲಿಪ್‌ಗಳನ್ನು ಆಯಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿಗಳ ವಶಕ್ಕೆ ತಲುಪಿಸಲಾಗುತ್ತದೆ. ಅವರು ಅದನ್ನು ಮೊಹರು ಮಾಡಿ ಭದ್ರತಾ ಕಪಾಟಿನಲ್ಲಿ ಇರಿಸುವರು. ಸೋಮವಾರದ ಬಳಿಕ ಯಾರಿಗೂ ಸ್ಲಿಪ್‌ಗಳನ್ನು ವಿತರಿಸುವುದಿಲ್ಲ ಎಂದು ತಿಳಿಸಿದರು.

ವಿನಾಯಿತಿ ಇಲ್ಲ: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ 10,980 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಈ ಪೈಕಿ 6,988 ಮಹಿಳೆಯರಿದ್ದರೆ, 3,992 ಪುರುಷರಿದ್ದಾರೆ. ಇವರೊಂದಿಗೆ ‘ಡಿ’ ದರ್ಜೆ ನೌಕರರು, ವಾಹನ ಚಾಲಕರು ಮತ್ತು ಪೊಲೀಸ್‌ ಸಿಬ್ಬಂದಿ ಕೂಡ ಇರುತ್ತಾರೆ. ಮಹಿಳೆಯರನ್ನು ಅವರು ಕಾರ್ಯನಿರ್ವಹಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಮತಗಟ್ಟೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಶೇಕಡ 20ರಷ್ಟು ಸಿಬ್ಬಂದಿಯನ್ನು ತುರ್ತು ಅಗತ್ಯಕ್ಕೆಂದು ಕಾಯ್ದಿರಿಸಿಕೊಳ್ಳಬೇಕಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ವಿಷಯದಲ್ಲಿ ಯಾವುದೇ ಸಿಬ್ಬಂದಿಗೂ ವಿನಾಯ್ತಿ ನೀಡುವುದಿಲ್ಲ. ತೀರಾ ಅನಿವಾರ್ಯ ಪ್ರಕರಣಗಳಲ್ಲಿ ಅವರ ಹಿರಿಯ ಅಧಿಕಾರಿಗಳು ಪ್ರಮಾಣೀಕರಿಸಿದರೆ ಮಾತ್ರವೇ ಅಂತಹವರಿಗೆ ವಿನಾಯ್ತಿ ನೀಡುವ ಕುರಿತು ಯೋಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಇಎಲ್‌ ಎಂಜಿಯರುಗಳ ತಂಡ ಗುರುವಾರದಿಂದಲೇ ವಿದ್ಯುನ್ಮಾನ ಮತಯಂತ್ರಗಳಿಗೆ ಬ್ಯಾಲೆಟ್ ಅಳವಡಿಸುವ ಕೆಲಸ ಮಾಡುತ್ತಿದೆ. ಅಂಚೆ ಮತಪತ್ರಗಳಿಗೆ ಅರ್ಜಿ ಸಲ್ಲಿಸಲು ಮಂಗಳವಾರ (ಮೇ 8) ಕೊನೆಯ ದಿನವಾಗಿದೆ. ಸೇವಾ ಮತದಾರರಿಗೆ ಎಲೆಕ್ಟ್ರಾನಿಕ್‌ ಮತಪತ್ರಗಳನ್ನು ರವಾನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜೀಪ್‌ ಬೇಡಿಕೆಗೆ ನಕಾರ: ಜಿಲ್ಲೆಯ ಹಲವು ಭಾಗಗಳಲ್ಲಿ ಮತದಾರರು ಮತಗಟ್ಟೆಗೆ ಬರಲು ಜೀಪ್ ಸೌಲಭ್ಯ ಒದಗಿಸುವಂತೆ ಕೋರಿದ್ದಾರೆ. ಆದರೆ. ಜೀಪ್‌ ಬಳಕೆಗೆ ನಿಯಮಗಳಲ್ಲಿ ಅವಕಾಶವಿಲ್ಲ. ಕೆಲವು ಪ್ರದೇಶಗಳಲ್ಲಿ ಬಸ್‌ ಓಡಿಸುವ ಕುರಿತು ತಯಾರಿ ನಡೆಸಲಾಗುತ್ತಿದೆ. ಅಂಗವಿಕಲ ಮತದಾರರನ್ನು ಕರೆತರಲು ಪ್ರತ್ಯೇಕವಾದ ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸೆಂಥಿಲ್‌ ಹೇಳಿದರು.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ‘ಸಮಾಧಾನ್‌’ ಪೋರ್ಟಲ್‌ನಲ್ಲಿ 182 ದೂರುಗಳು ಬಂದಿದ್ದವು. ಈ ಪೈಕಿ 177 ದೂರುಗಳನ್ನು ವಿಲೇವಾರಿ ಮಾಡಿದ್ದು, ಐದು ದೂರುಗಳು ಬಾಕಿ ಇವೆ. 22 ಪ್ರಕರಣಗಳಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಚುನಾವಣಾ ಆ್ಯಪ್‌

ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೇಂದ್ರ ಚುನಾವಣಾ ಆಯೋಗವೇ ‘CHUNAVANA’ ಎಂಬ ಆ್ಯಪ್‌ ರೂಪಿಸಿದೆ. ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಆ್ಯಪ್‌ನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿ, ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ವಿವರಗಳು ಸೇರಿದಂತೆ ಹಲವು ಮಾಹಿತಿ ದೊರಕಲಿದೆ. ಅಂಗವಿಕಲ ಮತದಾರರು ಗಾಲಿ ಕುರ್ಚಿ ಕಾಯ್ದಿರಿಸುವುದಕ್ಕೂ ಅವಕಾಶವಿದೆ.

₹ 1.34 ಕೋಟಿ ಮೌಲ್ಯದ ಮದ್ಯ ವಶ

ಚುನಾವಣಾ ನೀತಿಸಂಹಿತೆ ಜಾರಿಯಾದ ಬಳಿಕ ಅಕ್ರಮವಾಗಿ ಸಂಗ್ರಹಿಸಿದ್ದ ಮತ್ತು ಮಾರಾಟ ಮಾಡುತ್ತಿದ್ದ ₹ 1.34 ಕೋಟಿ ಮೌಲ್ಯದ 23,952 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ. ಏಳು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ₹ 15.89 ಲಕ್ಷ ನಗದು ವಶಪಡಿಸಿಕೊಂಡಿದ್ದು, ₹ 12.89 ಲಕ್ಷವನ್ನು ವಾರಸುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry