ಹೊಸ ಕನ್ನಂಬಾಡಿಯಲ್ಲೊಂದು ಸುತ್ತು...

7

ಹೊಸ ಕನ್ನಂಬಾಡಿಯಲ್ಲೊಂದು ಸುತ್ತು...

Published:
Updated:
ಹೊಸ ಕನ್ನಂಬಾಡಿಯಲ್ಲೊಂದು ಸುತ್ತು...

ಕಾಲೇಜಿನ ಕೊನೆಯ ವರ್ಷ,  ಕಾಲೇಜು ಬೇರೆ ಇಲ್ಲ. ಸೋಮವಾರ ಏನ್ಮಾಡೋದು ಅಂತ ಇದ್ದಾಗ,  ಹೊಸ ಕನ್ನಂಬಾಡಿ ಊರಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡೋಣ ಅಂತ ಯೋಚನೆ ಮಾಡಿ ನಾನು ಮತ್ತೆ ಗೆಳೆಯ ನನ್ನದೇ ಬೈಕ್‌ನಲ್ಲಿ ಹೊರಟೆವು. ನಮ್ಮ ಕಾಲೇಜಿಂದ ಸುಮಾರು 25 ಕಿ.ಮೀ. ಇದೆ ಆ ದೇವಸ್ಥಾನ.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹೊರಟಿದ್ದು. ಅದೇ ದಾರೀಲಿ ಮೊದಲು ಬಲಮುರಿಗೆ ಹೋಗೋ ದಾರಿ ತಿರುವು ಬರತ್ತೆ. ಆದ್ರೆ ನಾನು ಸುಮಾರು ಸಲ ನೋಡಿದ್ರಿಂದ ಅಲ್ಲಿಗೆ ಹೋಗದೇ ಹಾಗೆಯೇ ಮುಂದೆ ಹೋದೆವು. ಮೈಸೂರಿಂದ 14 ಕಿ.ಮೀ. ದೂರ ಅಲ್ಲಿ ಕೆ.ಆರ್.ಎಸ್. ಅಣೆಕಟ್ಟು (ಕನ್ನಂಬಾಡಿ)ಮತ್ತು ಬೃಂದಾವನ ಉದ್ಯಾನ ಇದೆ. ನೋಡಿ ಎರಡು ವರ್ಷ ಆಗಿದ್ರಿಂದ ನೋಡೋಣ ಅಂತ ಹೋದೆವು. ಒಬ್ಬರಿಗೆ ₹25 ಟಿಕೇಟು. ಯಪ್ಪಾ, ತುಂಬಾ ಬಿಸಿಲು. ಎಷ್ಟು ಬಿಸಿಲು ಅಂದ್ರೆ ಕಾಲು ನೆಲದ ಮೇಲೆ ಇಡಕಾಗಲ್ಲ ಅಷ್ಟು. ಹಾಕಿರೋ ಬಟ್ಟೆನೂ ಸುಡೋ ತರಹ ಭಾಸವಾಗ್ತಾ ಇತ್ತು. ಅಲ್ಲಿರೋ ಕಾವೇರಮ್ಮನಿಗೆ ನಮಸ್ಕಾರ ಮಾಡಿ ವಾಪಸ್ ಬರೋ ದಾರೀಲಿ ಗೇಟ್ ಹತ್ರ ಮತ್ಸ್ಯಾಲಯ ಇತ್ತು. ₹5 ಟಿಕೆಟ್. ಸಖತ್ ಇತ್ತು, ಹೋದ್ರೆ ಮರೀದೆ ನೋಡ್ಬೇಕು. ಥರ-ಥರದ ಮೀನು ಇದ್ವು. ಎಲ್ಲಾ ಆಲಂಕಾರಿಕ ಮೀನುಗಳು. ಅವುಗಳನ್ನು ನೋಡಿ ಆ ಬಿಸಿಲಿಗೆ ಸ್ವಲ್ಪ ತಂಪಾದಂಗೆ ಆಯ್ತು.

ಸರಿ, ಅಲ್ಲಿಂದ 8 ಕಿ.ಮೀ. ದೂರದ ಹೊಸಕನ್ನಂಬಾಡಿಯಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇರೋದು. 3.30ರ ಸುಮಾರಿಗೆ ಇಲ್ಲಿಂದ ಹೊರಟು ದಾರಿ ಗೊತ್ತಿಲ್ದೆ ಈ ಗೂಗಲ್ ಮ್ಯಾಪ್ ನಂಬಿ ಎಲ್ಲೆಲ್ಲೋ ಸುತ್ತಿ, ಕೊನೆಗೆ ದಾರಿಹೋಕರಿಂದ ಹಾದಿ ತಿಳಿದು ಹೊಸಕನ್ನಂಬಾಡಿ ಕಡೆಗೆ ಹೊರಟ್ವಿ. ಹೊಸ ಕನ್ನಂಬಾಡಿ ಅನ್ನೋದು ಊರು. ಅಲ್ಲಿಂದ ಒಳಗೆ 2 ಕಿ.ಮೀ. ಹೋದ್ರೆ ಅಲ್ಲೇ ವೇಣುಗೋಪಾಲಸ್ವಾಮಿ ದೇವಸ್ಥಾನ ಇರೋದು. ಕೆ.ಆರ್.ಎಸ್ ಹಿನ್ನೀರಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ.

ಇತಿಹಾಸ ಹೀಗಿದೆ

ಆ ದೇವಸ್ಥಾನಕ್ಕೆ ಇತಿಹಾಸವೂ ಇದೆ. ಅದೇನಂದ್ರೆ ತುಂಬಾ ಹಿಂದೆ ಹೊಯ್ಸಳರ ಕಾಲದಲ್ಲಿ ದೇವಸ್ಥಾನ ನಿರ್ಮಾಣ ಆಗಿತ್ತು. ಆದರೆ ಕನ್ನಂಬಾಡಿ ನಿರ್ಮಾಣದ ನಂತರ ಹಿನ್ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಯಿತು. 2003ರ ತೀವ್ರ ಬರಗಾಲದ ಸಂದರ್ಭದಲ್ಲಿ ನೀರು ಬತ್ತಿ ದೇವಸ್ಥಾನ ಪ್ರತ್ಯಕ್ಷವಾಯಿತು. ಆಗ ಅದನ್ನು ದಡದಲ್ಲಿ ಮತ್ತೆ ನಿರ್ಮಿಸಬೇಕು ಅಂತ ಆಯ್ತಂತೆ. ಖೋಡೆ ಅನ್ನುವವರ ಸಹಕಾರದಲ್ಲಿ ಅದು ನಿರ್ಮಾಣ ಆಗಿದೆ. ಸೋಮನಾಥಪುರದ ಚೆನ್ನಕೇಶವ ದೇವಾಲಯದ ಮಾದರಿಯಲ್ಲಿಯೇ ಇದೆ ಅಂತ ನಂಗನ್ನಿಸ್ತು.

ಸುತ್ತ ನೀರು, ತಂಪಾಗಿ ಬೀಸೋ ಗಾಳಿ ಕೂರೋಕೆ ಕಲ್ಲಿನ ಬೆಂಚುಗಳು ಎದ್ದು ಬರೋಕೆ ಮನಸ್ಸಾಗಲ್ಲ. ಸೂರ್ಯಾಸ್ತಮಾನವಂತೂ ಕಣ್ಣಿಗೊಂದು ಹಬ್ಬ. ಮನಸ್ಸು ತನ್ನಿಂತಾನೇ ಎಲ್ಲಾ ಭಾರವನ್ನು ಕಳೆದುಕೊಂಡು ಪ್ರಕೃತಿಯೊಂದಿಗೆ ಕರಗಿ, ಚಿಲಿಪಿಲಿಗುಡುತ್ತಾ ಹಾರಾಡುವ ಹಕ್ಕಿಗಳೊಂದಿಗೆ ಒಂದು ಸುತ್ತು ಸುತ್ತಿ ಬರುತ್ತದೆ.

ಸುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ಮುಕುಟಪ್ರಾಯವಾದ ದೇವಾಲಯವನ್ನು ಹೊಸತಾಗಿ ನಿರ್ಮಿಸಿದರೂ ಹಳೆಯ ಕಲಾಶೈಲಿಯಲ್ಲಿಯೇ ಸುಂದರವಾಗಿ ನಿರ್ಮಿಸಲಾಗಿದೆ. ಇದು ಹಲವು ಸಿನಿಮಾಗಳನ್ನು ಚಿತ್ರೀಕರಿಸಿರುವ ಸ್ಥಳವೂ ಹೌದು. ನಾವು ಹೋಗುವಾಗ ಆಗಲೇ ಇಳಿಸಂಜೆಯಾದ್ದರಿಂದ ಸುಮಾರು ಜನ ಜಮಾಯಿಸಿದ್ದರು. ಉತ್ತರ ಕರ್ನಾಟಕದಿಂದ ಬಂದ ಎರಡು ಕುಟುಂಬಗಳೂ ಕಂಡವು. ಮಳೆ ಕಡಿಮೆ ಇರುವ ಕಾರಣ ಜಲಾಶಯದಲ್ಲಿ ನೀರು ತೀರಾ ಕಮ್ಮಿ ಇದ್ದು, ಅಂದಕ್ಕೊಂದು ಕೊರತೆಯಾಗಿತ್ತು. ಏರಿಯಿಂದ ಕೆಳಕ್ಕೆ ಇಳಿಯಲು ಕಟ್ಟಿಸಿದ್ದ ಮೆಟ್ಟಿಲುಗಳು ನೀರಿಲ್ಲದೆ ಹಪಹಪಿಸುತ್ತಿದ್ದು, ಹೊಸಕನ್ನಂಬಾಡಿ ಹಳ್ಳಿಯ ಹುಡುಗರಿಗೆ ಸಿಕ್ಕಿದ್ದೇ ಜಾಗವಾಗಿ ಮೆಟ್ಟಿಲಿನ ಮುಂಭಾಗಕ್ಕೆ ವಿಕೆಟ್ ನಿಲ್ಲಿಸಿ ಕ್ರಿಕೆಟ್‌ನಲ್ಲಿ ಮುಳುಗಿದ್ದರು. ಇನ್ನೊಂದು ದಡದಿಂದ ದೂರಕ್ಕೆ ಮೀನುಗಾರರು ತೆಪ್ಪದಲ್ಲಿ ಮೀನು ಹಿಡಿಯುತ್ತಿರುವುದು ಕಾಣುತ್ತಿತ್ತು. ಒಂದು ಬದಿಯಲ್ಲಿ ಊರ ಹೆಂಗಸರು ಬಟ್ಟೆ-ಬರೆ ಒಗೆಯುತ್ತಿದ್ದರು.

ಅಲ್ಲೇ ಇದ್ದ ಒಂದು ಪುಟ್ಟ ಅಂಗಡಿಯಲ್ಲಿ ಚಹಾ ಕುಡಿಯಲು ಹೋದಾಗ, ಅದೇ ಊರಿನ ಒಬ್ಬ ಹಿರಿಯರು ಮಾತನಾಡುತ್ತಾ ಜಲಾಶಯ ಭರ್ತಿಯಾದಾಗ ಊರಿನ ಮಗ್ಗುಲಿನವರೆಗೂ ನೀರಿರುತ್ತಿತ್ತೆಂದೂ, ಎಲ್ಲಕ್ಕೂ ಅನುಕೂಲಕರವಿತ್ತೆಂದು ಮೆಲುಕು ಹಾಕಿದರು. ಆದರೆ ಕೆಲ ವರ್ಷಗಳಿಂದ ಜಲಾಶಯದ ಹಿನ್ನೀರು ಒಂದು ಕಿ.ಮೀ.ಗೂ ಹೆಚ್ಚು ಹಿಂದಕ್ಕೆ ಸರಿದಿದೆ. ಈಗಿನ ಜಾಗತಿಕ ತಾಪಮಾನ, ನಗರೀಕರಣ, ಜಾಗತೀಕರಣ, ಆಮ್ಲಮಳೆಗಳ ಕಾರಣದಿಂದಾಗಿ ಜಲಚಕ್ರ, ಜಲವಾಸಿಗಳೂ ಸೇರಿದಂತೆ ಇವುಗಳ ಮೇಲೆ ಅವಲಂಬಿತವಾದ ನಿವಾಸಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿರುವುದು ಸುಳ್ಳಲ್ಲ.

ದೇವಸ್ಥಾನದ ಸುತ್ತಲೂ ಇನ್ನೂ ಸ್ವಲ್ಪ ಅಭಿವೃದ್ಧಿಯ ಅವಶ್ಯಕತೆ ಇದೆ ಅಂತ ಅನ್ನಿಸಿತು. ಈ ಹೊಸಕನ್ನಂಬಾಡಿ, ಕನ್ನಂಬಾಡಿಯಿಂದ 8 ಕಿ.ಮೀ. ದೂರದಲ್ಲೇ ಇದ್ದರೂ ಅಷ್ಟಾಗಿ ಈ ಜಾಗದ ಬಗ್ಗೆ ಮಾಹಿತಿ ಕಮ್ಮಿ. ನನ್ನ ಮೈಸೂರಿನ ಗೆಳೆಯನಿಂದ ಇದು ನನ್ನ ಗಮನಕ್ಕೆ ಬಂದದ್ದು. ಇಲ್ಲೂ ಒಂದು ಉದ್ಯಾನ, ಬರುವ ಪ್ರವಾಸಿಗರಿಗೆ ಮೂಲಸೌಕರ್ಯದ ವ್ಯವಸ್ಥೆ ಹಾಗೂ ಈ ಸ್ಥಳದ ಬಗ್ಗೆ ಪ್ರಚಾರ, ಅರಿವು ಅವಶ್ಯವಾಗಿ ಬೇಕೆನಿಸಿತು.

ಸಂಜೆ ಹೊರಡಬೇಕು. ಒಲ್ಲದ ಮನಸ್ಸಿನಿಂದ 5.40ಕ್ಕೆ ಅಲ್ಲಿಂದ ಹೊರಟೆವು. ಅಷ್ಟೊತ್ತು ಇದ್ದ ಬಿಸಿಲು ಮಾಯ ಆಗಿ, ಮೋಡ ಮುಚ್ಚಿ ಕಪ್ಪು ರಾಕ್ಷಸನಂತೆ ಭಾಸವಾಗತೊಡಗಿತ್ತು. ನಂಗೂ ಸ್ವಲ್ಪ ಭಯ ಆಯ್ತು, 30 ಕಿ.ಮೀ. ಬೇರೆ ಹೋಗ್ಬೇಕು. ಸರಿ, ಬೇಗ ಹೊರಟೆವು. ನಾನು ಬೈಕ್‌ ಅನ್ನು 50ರಲ್ಲೇ ಓಡಿಸ್ತಿದ್ದೆ. ಎಷ್ಟೇ ಆಗ್ಲಿ ಪ್ರಕೃತಿಯನ್ನು ಮೀರಿಸೋಕಾಗತ್ತಾ? ಬೆಳಗೋಳ ಅನ್ನೋ ಊರ ಹತ್ರ ಬಂದ್ವಿ, ಗುಡುಗು ಸಿಡಿಲಿನ ಜೊತೆಗೆ ಮಳೆಹನಿಗಳು ಬೀಳಲು ಪ್ರಾರಂಭ ಆಯ್ತು. ಇನ್ನು ಆಗಲ್ಲ ಅಂತ ಅಲ್ಲೇ ಬೈಕ್ ನಿಲ್ಸಿ ಪಕ್ಕದಲ್ಲೇ ಇದ್ದ ಬೇಕರಿಗೆ ಓಡಿದ್ವಿ. ಬೇಕರಿಯ ಮುಂದೆ ಹೆಂಚು ಹಾಕಿಸಿದ್ದು ನಮಗೆ ಉಪಯುಕ್ತ ಆಯಿತು. ಅಲ್ಲಿ ನಿಂತ್ವಿ. ಮಳೆ ಹೊಡಿತೂ ಹೊಡೀತು. ಅನಾಹುತ ಮಳೆ. 6 ಗಂಟೆಯಿಂದ ಬರ್ತಾನೆ ಇತ್ತು. ನಮಗೆ ರಾತ್ರಿ 8 ಗಂಟೆ ಒಳಗಡೆ ಮೈಸೂರಿನ ಹಾಸ್ಟೆಲ್‌ನಲ್ಲಿ ಇರಲೇಬೇಕು. ಏನ್ಮಾಡೋದು ಅನ್ನೋ ಭಯ. ಇನ್ನೂ ಕನಿಷ್ಠ 15 ಕಿ.ಮೀ. ಹೋಗ್ಬೇಕಿತ್ತು.

ಅಂತೂ ಇಂತೂ ಗುಡುಗು-ಮಿಂಚು ಸಹಿತ ಭರ್ಜರಿ ಮಳೆ 6.40ಕ್ಕೆ ನಿಂತಿತು. ನಾವು ಅಲ್ಲಿಂದ ಹೊರಟೆವು. ಆವಾಗಿನ ಬೈಕ್ ಸವಾರಿ, ಮಳೆಬಿದ್ದು ನಿಂತ ಆ ಕಾರ್ಮೋಡ ಕವಿದ ವಾತಾವರಣಕ್ಕೆ ಅದ್ಭುತವಾಗಿತ್ತು.

ದಾರೀಲಿ ಒಂದು ಚಾಯ್ ಕುಡಿದು ನಾನು ಹಾಸ್ಟೆಲ್ ತಲುಪುವ ಹೊತ್ತಿಗೆ 8.15 ಆಗಿತ್ತು. ಮಳೆಗೆ ನೆಂದಿದ್ದ ಬಟ್ಟೆ ಬದಲಾಯಿಸಿ ಮಲಗಿದಲ್ಲಿಗೆ ಒಂದು ದಿನದ ಟ್ರಿಪ್ ಮುಗಿದಿತ್ತು. ಮಾರನೇ ಅದನ್ನು ಮೆಲುಕು ಹಾಕೋ ಕೆಲಸ ನಡೆದಿತ್ತು. ಈಗಲೂ ನಡೀತಿರುತ್ತೆ ಆವಾಗಾವಾಗ.

ವಂದನೆಗಳೊಂದಿಗೆ,

ಚೇತನ್ ಎಂ.ಬಿ.

9482090184

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry