ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ಅವನು ಮತ್ತು ನಾನೂ..

Last Updated 5 ಮೇ 2018, 19:30 IST
ಅಕ್ಷರ ಗಾತ್ರ

ಕಪಾಟಿನಲ್ಲಿ ಹ್ಯಾಂಗರ್‌ಗೆ ಬೇತಾಳದಂತೆ ನೇತಾಡುತ್ತಿದ್ದ ನನ್ನ ಬಟ್ಟೆಗಳನ್ನೆಲ್ಲ ಸುರಿದು ಬ್ಯಾಗಿನೊಳಗೆ ತುರುಕಿಕೊಳ್ಳುತ್ತಿದ್ದೆ. ಯಾಕೆ ಬೇಕು ಇವನೊಟ್ಟಿಗಿನ ಸಂಸಾರ. ಹೆಂಡತಿ ಎಂದರೆ ಸಡೆ, ಮನೆಯಲ್ಲಿ ಕುಳಿತು ಐಷಾರಾಮಿ ಜೀವನ ನಡೆಸುವವಳು, ದುಡಿತ ತನಗೊಂದೇ ತಿಳಿದಿರುವ ವಿದ್ಯೆ ಎಂದು ನಂಬಿರುವ ಅವನೂ ಈ ಬಟ್ಟೆಗಳಂತೆ ನೇತಾಡುವ ಬೇತಾಳವೆ, ಕಪಾಟಿನೊಳಗಿಲ್ಲ ಎನ್ನುವುದೊಂದನ್ನು ಬಿಟ್ಟರೆ. ಸ್ವಂತಿಕೆಯೇ ಇಲ್ಲ ಅವನಲ್ಲಿ.

ಅವನಮ್ಮ ಅವನನ್ನು ಹಡೆದಳೋ ಇಲ್ಲಾ ಬೊಂಬೆ ಅಂಗಡಿಯಿಂದ ಮನುವೆಂಬ ಈ ತೊಗಲುಗೊಂಬೆಯನ್ನು ಹಾರಿಸಿಕೊಂಡು ಬಂದಳೋ ಗೊತ್ತಿಲ್ಲ. ತನ್ನ ಸೀನು, ಕೆಮ್ಮು, ತೇಗುಗಳ ಲೆಕ್ಕವನ್ನು, ತಾನು ತಿಂದ ಆಹಾರ ಪದಾರ್ಥಗಳೊಟ್ಟಿಗೆ ತಾಳೆ ಹಾಕಿ ನೋಡಿ, ದೇಖರೇಕಿಯಲ್ಲಿನ ಊನದ ಪಟ್ಟಿ ಮಾಡಿ, ಹೆಂಡತಿಯೆಂಬ ನನ್ನ ಮೇಲೆ ಆಪಾದನೆ ಎರಚಲು ಕಾದಿರುತ್ತಾನೆ. ಅದಕ್ಕೆ ಅವನಮ್ಮನೆಂಬ ಸೂತ್ರಧಾರಿಯ ಸಲಹೆ ಮಾರ್ಗದರ್ಶನ ಬೇರೆ... ಕೇಳಬೇಕಾದವರನ್ನು ತಲುಪಲಿ ಎಂದೇ ದೊಡ್ಡದಾಗಿ ಗೊಣಗುತ್ತಿದ್ದೆ.

ಇಷ್ಟಿದ್ದರೂ ಅವನ ಹತ್ತಿರದ ಒಡನಾಟ ಇದ್ದವರಿಗೆ ಮಾತ್ರ ಅವನು ಜೊಳ್ಳು ಅಂತ ತಿಳಿದೀತೇ ವಿನಾ ನನ್ನ ಮಾತು ಕಟ್ಟಿಕೊಂಡು ಅವನ ಸಾಚಾತನ ಅಳೆಯಲು ಹೋದವರಿಗೆ ನಾನೇ ಕೆಟ್ಟವಳಂತೆ ಕಾಣುತ್ತೇನೆ. ಎಲ್ಲರ ದೃಷ್ಟಿಯಲ್ಲೂ ಅವನು ಘನಂದಾರಿಯೇ. ಅದಕ್ಕಾಗಿಯೇ ಅಲ್ಲವೇ, ಹಿತೈಷಿಗಳೆನಿಸಿಕೊಂಡವರು ನಮ್ಮಿಬ್ಬರ ನಡುವೆ ಮೂಡಿದ ಬಿರುಕು ಮುಚ್ಚಲು ಅವನ ಸತ್ಕಾರ್ಯಗಳನ್ನೆಲ್ಲ ಪಿಸಿದು ಹೊಗಳಿ ನನ್ನೆದುರು ಅವನನ್ನು ಅಟ್ಟಕ್ಕೇರಿಸಲು ಪ್ರಯತ್ನಿಸಿದ್ದು. ಮೊದಮೊದಲು ಮಲ್ಲಿಗೆ ಮಾಲೆಯನ್ನು ಎಳೆದರೆ ಸ್ವಲ್ಪ ಉದ್ದವಾದಂತೆ ಅನಿಸಿ ಖುಷಿಯಾದರೂ, ಒತ್ತಟ್ಟಿಗಿದ್ದ ಹೂವುಗಳ ನಡುವೆ ಅಂತರ ಹೆಚ್ಚಿದ್ದು ಕಾಣಲಾರದಷ್ಟು ಎಳಸೇ ನಾನು? ಹಿಡಿತ ಇನ್ನಷ್ಟು ಬಿಗಿಯಾಗಿ ನರಳುವುದು ಹೂವಿಗಷ್ಟೇ ಅಲ್ಲ, ಅದು ನನಗೂ ಹಿತವಲ್ಲ, ಯಾರಿಗೂ ಸಹ!

ಮದುವೆ ಮಂಟಪದಲ್ಲಿ ಅವನ ಹಿಂದೆ ಏಳು ಹೆಜ್ಜೆಗಳನ್ನಿಟ್ಟಿದ್ದೇನೆ ಬಿಟ್ಟರೆ ಅವನಿಗೂ ನನಗೂ ಸೆರಬೆರೆಸಿ ಬರಲೂ ಇಲ್ಲ, ಜೊತೆಯಾಗಿ ಪಕ್ಕದ ಮನೆವರೆಗೆ ನಾವು ನಡೆದದ್ದೂ ಇಲ್ಲ. ಅಂಥದ್ದರಲ್ಲಿ ಜೀವನಪೂರ್ತಿ ಮನುವಿನ ಜೊತೆ ನಾನು ನೆಮ್ಮದಿಯಿಂದಿರಲು ಸಾಧ್ಯವೇ, ನಂಬಿಕೆ ನನಗೇ ಇಲ್ಲ.

ತನ್ನ ರೂಪವನ್ನೇ ಕಣ್ತುಂಬಿಕೊಂಡವನಿಗೆ ಇತರರಲ್ಲಿನ ದೋಷದ ಹೊರತು ಮಿಕ್ಕಿದ್ದು ಕಂಡರೆ ಕೇಳಿ. ತನ್ನನ್ನೇ ಪ್ರೀತಿಸಿಕೊಂಡು ಮುಗಿಯದ ಅಮ್ಮನ ಮುದ್ದು ಕಂದ ಮನುವಿನ ಕಣ್ಣಲ್ಲಿ ಕಸವಾದರೂ ಬೀಳಬಹುದು, ಆದರೆ ಈ ಸದರದ ಹೆಂಡತಿ ಮಗನಲ್ಲ!! ಇಂತಹ ಸ್ವರತಿ ಕಾಮಿಗಳ ಸಹವಾಸವನ್ನು ಇವತ್ತಿಗೆ ಮುಗಿಸಲೇಬೇಕು ಎಂಬಲ್ಲಿಗೆ ‘ನನ್ನ ಬಟ್ಟೆಯನ್ನೂ ತುಂಬು’ ಎಂಬ ಪೀಡನೆ ಕೊಡಲು ಕೈಯಲ್ಲೊಂದು ಪುಟ್ಟ ಚೀಲ ಹಿಡಿದು ಆರವ ಬಂದ. ನಾನೆಲ್ಲೋ ತಿರುಗಲು ಕರೆದೊಯ್ಯುತ್ತಿದ್ದೇನೆ ಎಂದು ತಿಳಿದಿದ್ದಾನೆ ಕಾಣಿಸುತ್ತದೆ. ಈಗಲೇ ತಲೆಚಿಟ್ಟು ಹಿಡಿದಂತಾಗಿರುವಾಗ ಮೇಲಿಂದ ಅವನ ರಿಪಿರಿಪಿ ಕೇಳಲಾರೆ ಎನ್ನಿಸಿತು. ಅವನ ಕೈಚೀಲಕ್ಕೂ ನಾಲ್ಕು ಅಂಗಿಚೆಡ್ಡಿಗಳನ್ನು ಗಿಡಿದೆ.

ಬೇರೆಯಾಗುವ ನಿರ್ಧಾರವನ್ನು ನಾನು ಎಂದೋ ತೆಗೆದುಕೊಂಡುಬಿಡುತ್ತಿದ್ದೆ. ಆರವ ಹುಟ್ಟುವ ಮೊದಲೇ ಮೊಳಕೆಯೊಡೆದಿದ್ದ ನಿಲುವಿಗೆ ನಿರ್ಧಾರದ ರೂಪ ಕೊಡಲು ಆರವ ಹುಟ್ಟಿದ್ದು ನನಗೆ ತಡಸಣೆಯಂತಾಯಿತು. ಇಷ್ಟು ಚಿಕ್ಕ ಮಗುವನ್ನು ಹೊತ್ತು ಎಲ್ಲಿ ಹೋಗಲಿ ಎಂಬ ದಿಗಿಲು ಒಂದು ಕಡೆಯಿತ್ತು. ಜೊತೆಗೆ ಮಗನನ್ನು ಅಪ್ಪನಿಂದ ದೂರ ಮಾಡಿದ ಪಾಪ ನನಗ್ಯಾಕೆ ಎಂಬೆಲ್ಲ ಭಾರದ ಯೋಚನೆಗಳಿಗೆ ಬಲಿಯಾಗಿ ಇಷ್ಟು ವರ್ಷ ಸವೆದೆ. ಮಗನೆದುರು ಇಲ್ಲಸಲ್ಲದ ಗೌಜಿಯೇಕೆ ಎಂದು ಸುಖದ- ನೆಮ್ಮದಿಯ ಬದುಕಿನ ನಾಟಕವಾಡುತ್ತಲೇ ಬಂದೆ.

ಆಟದ ಸಾಮಾನಿನ ಹಡಪ- ಪುಸಗೋತ್ರಗಳನ್ನೆಲ್ಲ ಇನ್ನೊಂದು ಬ್ಯಾಗಿನಲ್ಲಿ ತುಂಬಿಸುತ್ತಿದ್ದ ನನ್ನ ಆವೇಶವನ್ನು ಆರವ ನೋಡುತ್ತಲೇ ಇದ್ದ. ಅಮ್ಮನ ಜೊತೆ ಹೊರಡುವುದೆಂಬ ಖುಷಿಗಿಂತಲೂ ಗಾಬರಿಯ ಕಣ್ಣುಗಳು ಎಲ್ಲಿ- ಎತ್ತ- ಏನು ತಾನು ಎಂದು ಕೇಳುತ್ತಿದ್ದಂತೆ ಭಾಸವಾಯಿತು ನನಗೆ. ಆದರೆ ಈ ಕ್ಷಣದಲ್ಲಿ ಅವನ ಕೇಳದ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬ ಆರ್ದ್ರತೆಯಾಗಲಿ, ಅವಶ್ಯಕತೆಯಾಗಲಿ ನನ್ನಲ್ಲಿ ಮೂಡಲಿಲ್ಲ. ಎಲ್ಲರಿಗೂ ಉತ್ತರಿಸಲೇಬೇಕೆಂದು ಪಣ ತೊಟ್ಟವಳೂ ನಾನಲ್ಲ. ಇವತ್ತಲ್ಲದಿದ್ದರೆ ಮುಂದೊಂದು ದಿನವಾದರೂ ಆರವ ಪ್ರಶ್ನೆಗಳ ಈಟಿಯಿಂದ ನನ್ನನ್ನು ತಿವಿದಾನು, ಕಣ್ಣೀರ ಕೋಡಿಯಿಂದ ನನ್ನನ್ನು ತೋಯಿಸಿಯಾನು ಎಂಬ ಖಬರಿಲ್ಲದವಳೂ ಅಲ್ಲ ನಾನು. ಏನನ್ನೇ ಆದರೂ ಎದುರಿಸಬಲ್ಲೆ, ಆದರೆ ಮನುವಿನ ಸೊಕ್ಕನ್ನಲ್ಲ ಎನ್ನುವುದನ್ನು ಇಂದು ನಿರ್ಧರಿಸಿಕೊಂಡುಬಿಟ್ಟಿದ್ದೆ ಅಷ್ಟೇ.

ವಿಚಿತ್ರ ಏನೆಂದರೆ, ಮನು ತನ್ನ ಮಾತನ್ನು ನನ್ನ ಮೇಲೆ ಎಂದೂ ಹೇರಿಲ್ಲ, ಬಹುಶಃ ಹಾಗೊಂದು ವೇಳೆ ಹೇರಿದ್ದರೂ ಪರವಾಗಿರಲಿಲ್ಲವೇನೋ. ಮೌನವನ್ನು ಹೇರುತ್ತಾನಲ್ಲ, ಆಗ ಅವನ ದರ್ಪವೊಂದೇ ಎದ್ದು ಠಳಾಯಿಸುತ್ತದೆ ಅವನ ಮುಖದಲ್ಲಿ. ಅದು ಹೇಕರಿಕೆ ತರಿಸುವಂಥದ್ದು. ನಮ್ಮಿಬ್ಬರ ನಡುವೆ ಎಂದೂ ನಡೆಯದ ಹರಟೆ ಎಂಬ ಉಪಯೋಗವಿಲ್ಲದಂತಹ ಯಾವ ಮಾತುಕತೆಯೂ ಇನ್ನುವರೆಗೂ ನಡೆದದ್ದೇ ಇಲ್ಲವಾದ್ದರಿಂದ ಮನುವಿನ ಎಲ್ಲಾ ಅವಶ್ಯಕತೆಗಳೂ ನನಗೆ ನನ್ನ ಮೇಲಿನ ದೌರ್ಜನ್ಯ ಎನ್ನಿಸಿದರೆ ನನ್ನ ತಪ್ಪೇ?!

ಒಂದು ದಿನದ ಅಡುಗೆ ರುಚಿಯಾಗಿಲ್ಲವೆನಿಸಿದರೆ ನಾಲ್ಕು ದಿನ ಮನೆಯ ಊಟವನ್ನು ತಪ್ಪಿಸುತ್ತಾನೆ. ಆಗಲೂ ಒಂದೇ ಒಂದು ಮಾತು, ಆಕ್ಷೇಪಣೆ ಅವನ ತುಟಿಯೊಡೆದು ಹೊರಬರದು. ಇಂದು ಉಣ್ಣಬಹುದು- ನಾಳೆ ಉಣ್ಣಬಹುದು ಎಂಬ ಸಂದೇಹದಿಂದ ಪ್ರತಿದಿನ ಮಾಡಿದ ಅಡುಗೆಯನ್ನೆಲ್ಲ ನಾಲ್ಕಾರು ದಿನದವರೆಗೆ ಇಟ್ಟುಕೊಂಡು ತಣ್ಣೆ ತಿಂದು ನಾನು ಬಿದ್ದಿರಬೇಕು. ಒಂಥರ ವಿಚಿತ್ರ ಶಿಕ್ಷೆ ನನಗೆ.

ಹಾಗಂತ ಅವನ ಬದುಕಲ್ಲಿ ಸಂತಸದ ಕ್ಷಣಗಳಿಲ್ಲ ಅಂತಲ್ಲ. ಕಂಪೈಲಿಗೆ ಹಾಕಿದ ಪ್ರೊಗ್ರಾಮು ಯಾವ ಎರರ್‌ ಅನ್ನೂ ತೋರಿಸದಿದ್ದರೆ ಮೂಡುವ ಸಣ್ಣ ಖುಷಿಯನ್ನು (ಮನುವಿನ ಖುಷಿಯೆಲ್ಲ ಅವನು ಬರೆದ ಕೋಡನ್ನೇ ಅವಲಂಬಿಸಿದೆ ಎಂದು ನಾನು ಬಾಯ್ಬಿಟ್ಟು ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ) ಹಂಚಿಕೊಳ್ಳುವ ರೀತಿಯಾದರೂ ಹೇಗೆ ಗೊತ್ತಾ? ವಠಾರಕ್ಕೆಲ್ಲ ಹಬ್ಬುವಂತಹ ಘಾಟಿರುವ ಜೆಲ್‌ ಅನ್ನು ಕನ್ನಡಿ ಮುಂದೆ ನಿಂತು ಬಣ್ಣಗೆಡದ ತನ್ನ ಕಪ್ಪು ಕೂದಲಿಗೆ ಸವರುತ್ತಾ, ‘ನೀನು ಕನ್ನಡಕ ತೊಟ್ಟು ಹುಡುಕಿದರೂ ನನ್ನಂತಹ ಚೆಂದದ ಹುಡುಗ ನಿನಗೆ ಸಿಗ್ತಿರ್ಲಿಲ್ಲ. ನಿನ್ನಷ್ಟು ಭಾಗ್ಯ ನನಗಿಲ್ಲ ನೋಡು’ ಎಂದು ಕೊಂಕು ನುಡಿಯುತ್ತಾನೆ. ನಾನು ಮತ್ತೆ ಕುಗ್ಗುತ್ತೇನೆ, ನಾನು ಇವನಂತೆ ಚೆಂದವಿಲ್ಲವೆಂದೇ ಇವನ ಮಾತಿನರ್ಥ? ಮದುವೆಗಿಂತ ಮೊದಲೇ ಯೋಚಿಸಬೇಕಾದ್ದನ್ನೆಲ್ಲ ಈಗ ಯೋಚಿಸುತ್ತಿರುವ ಮನುವಿನ ಮೇಲೆ ತಡೆಯಲಾರದ ಕೋಪ ಕೊತಗುಡಿಯುತ್ತದೆ. ‘ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಾಗಲೇನು ಕಣ್ಣಿಗೆ ಕಾಮಾಲೆ ಅಂಟಿತ್ತೇ?’ ಎಂದು ನಾನೂ ಅವನ ಮೇಲೆ ದಂಡೆತ್ತಿ ಹೋಗುತ್ತೇನೆ. ಹೀಗೆ ಜಗಳದಲ್ಲೇ ದಿನ ಕಳೆದು ಆರವ ಕೈಗೆ ಬಂದು ಏಳು ವರ್ಷವೂ ಕಳೆಯಿತು. ಮಗನನ್ನು ಕಂಡು ನನ್ನ ಚಿಂತೆಗೊಂದಿಷ್ಟು ಸಮಜಾಯಿಷಿ ಸಿಕ್ಕಂತಾದರೂ ಮತ್ತೆಲ್ಲೋ ಮನುವಿನ ಚೇಳಿನಂತಹ ಮಾತು ನನ್ನನ್ನು ಕುಟುಕುತ್ತಿತ್ತಲೇ ಇರುತ್ತಿತ್ತು...

ಆಫೀಸಿನಲ್ಲಿಯೇ ಬದುಕಿ ಪಾಪ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಬದುಕುವ ರೀತಿಯೇ ಮರೆತು ಹೋಗುತ್ತಿತ್ತೇ ಮನುವಿಗೆ? ಟಿ.ವಿ. ನೋಡಲು ಸೋಫಾದ ಮೇಲೆ ಕುಳಿತಿದ್ದಾನೋ, ಅಥವಾ ಅರ್ನಬ್ ಗೋಸ್ವಾಮಿಗೆ ಸಂದರ್ಶನ ಕೊಡಲೋ ಎಂದು ತಿಳಿಯದಷ್ಟು ಸಾವಧಾನ್ ಸ್ಥಿತಿಯಲ್ಲಿರುತ್ತಿದ್ದವನಿಗೆ ಮನೆಯಲ್ಲಿ ಸಣ್ಣ ಶಬ್ದವೂ ಆಗಕೂಡದು. ಮನೆಯಲ್ಲೂ ಲೆಕ್ಕ ಮಾಡಿ ಮಾತುಗಳನ್ನಾಡಿ, ನಗುವಾಗ ಕೊಂಚ ಮಾತ್ರ ತುಟಿಯರಳಿಸಿ, ದನಿ ನಡುಗಿಸಿ ಸುಮ್ಮನಾಗುತ್ತಿದ್ದವನಿಗೆ ತನ್ನ ಹೊಗಳಿಕೆಯ ಒಂದು ನೆಪ ಸಿಕ್ಕರೆ ಮಾತ್ರ ಸಾವಧಾನ್ ವಿಶ್ರಾಮಗಳೆರಡನ್ನೂ ಮರೆತು ಅಂದಾದುಂದಿ ಮಾತುಗಳನ್ನುದುರಿಸುತ್ತಿದ್ದ...

ಮದುವೆಯಾದ ತಿಂಗಳೊಳಗೆ ಗೊಟಾರಿಯಂತಹ ಕೈಚೀಲವನ್ನು ನನ್ನೆದುರು ತಂದು ಸುರುವಿ ‘ಇಷ್ಟೆಲ್ಲ ಹುಡುಗಿಯರ ಜಾತಕ ಬಂದಿದ್ದವು ನನಗೆ, ಗೊತ್ತೇ?’, ‘ಇವಳು ಐಬಿಎಮ್ಮಿನಲ್ಲಿದ್ದಳು, ನಲವತ್ತೈದು ಸಾವಿರ ಪಗಾರಿನವಳು.. ಅವಳದ್ದು ಶಿಫ್ಟಿನಲ್ಲಿ ಕೆಲಸವೆಂದು ನನಗೆ ಹೊಂದಿಕೆಯಾಗಲಿಲ್ಲ’, ‘ಇವಳು ಯೂಜಿಸಿ ಸ್ಕೇಲಿನವಳು, ರಾಣೆಬೆನ್ನೂರಿನ ಡಿಗ್ರಿ ಕಾಲೇಜಲ್ಲಿದ್ದಾಳೆ. ಬೆಂಗಳೂರಿಗೆ ವರ್ಗ ತಕ್ಕೊಳ್ಳುವುದು ಸುಲಭಕ್ಕಿಲ್ಲ ಎಂದಮೇಲೆ ನಾನು ಮುಂದುವರಿಯಲಿಲ್ಲ...’ ಎಂದು ಬಾಯ್ತುಂಬ ಟೊಣಪನಂತಹ ನಗು ನಕ್ಕಾಗ ಮನು ತಮಾಷೆ ಮಾಡುವ ಜಾತಿಯವನು ಎಂದು ಭಾವಿಸಲು ಪ್ರಯತ್ನಪಟ್ಟರೂ ಆಗಿರಲಿಲ್ಲ. ನಗುತ್ತಿದ್ದ ಹುಡುಗಿಯರ ಫೋಟೊ ಕಂಡು ಕನಿಕರ ಬಂತು, ಮನುವಿನ ದರ್ಪಕ್ಕೆ ಇವರೆಲ್ಲ ಅರಿಯದೆ ಸಾಕ್ಷಿಯಾಗಿದ್ದರು.

ಕೆಂಬಣ್ಣದ ಸೀರೆ ಉಟ್ಟು, ಪಕ್ಕದ ಮನೆಯವರ ಗಿಡದಲ್ಲರಳಿದ ಮಲ್ಲಿಗೆಯನ್ನು ಕೊಯ್ದು ಮಾಲೆ ಹೆಣೆದು, ಜುಟ್ಟಿಗೆ ಸಿಕ್ಕಿಸಿ ಹೆಗಲ ಮೇಲೆ ಮಾಲೆಯ ಗೊಂಚಲನ್ನು ಇಳಿಬಿಟ್ಟು ಜಯಂತ್ ಸ್ಟೂಡಿಯೊದಲ್ಲಿ ಸಳ್ಳೇ ನಗು ನಗುತ್ತ ಕುಳಿತಿದ್ದ ನನ್ನ ಫೋಟೊವನ್ನು ಹಿಡಿದು ಒಳ್ಳೆಯ ಹುಡುಗ ಎಂದು ಶಿಫಾರಸು ಬಂದಲ್ಲೆಲ್ಲ ಅಪ್ಪ ಜಾತಕದೊಂದಿಗೆ ಫೋಟೊವನ್ನೂ ಪುಗ್ಸಟ್ಟೆ ಹಂಚಿ ಬಂದಿದ್ದ. ಬಹುಶಃ ನನ್ನ ಫೋಟೊ ಕೂಡ ಈಗ ಯಾವುದೋ ಹೆಣ್ಣಿನೆದುರು ಬಿದ್ದುಕೊಂಡು, ಇಂತಹ ಹುಡುಗ ನಿನಗೆ ಸಿಕ್ಕಿದ್ದು ನಿನ್ನ ಪುಣ್ಯ ಎಂದು ಸಾಬೀತುಪಡಿಸಲು ಹೆಣಗುತ್ತಿರಬಹುದೆಂಬಂತೆ ಅರಿವಿಗೆ ಬಂದು ಘಾಸಿಯಾಯಿತು.

ಮನುವಿನ ಬಳಿ ನನ್ನ ಫೋಟೊ ಇದೆಯೇ ಎಂಬ ಖಾತ್ರಿಯಿಲ್ಲ ನನಗೆ. ಆದರೆ ಮನುವಿನ ಕಪಾಟನ್ನು ಸೋಯ್ಸಿದರೆ ಈಗಲೂ ಜಾತಕದ ಜೊತೆ ಬಂದ ಫೋಟೊ ತುಂಬಿದ ಆ ಗೊಟಾರಿ ಚೀಲ ಜೋಪಾನವಾಗಿದೆ. ನನ್ನ ನೋವುಗಳೆಲ್ಲ ಯಾರಿಗೆ ಅರ್ಥವಾಗುತ್ತದೆಂದು ಅರುಹಿಕೊಳ್ಳಲಿ...

‘ಎಂತೆಂಥಾ ಗಂಡಂದಿರಿರುತ್ತಾರೆ ಗೊತ್ತಾ, ಕುಡಿದು ಬಂದು ಹೆಂಡತಿ ಮಕ್ಕಳನ್ನು ಹೊಡೆಯುವವರು, ವರದಕ್ಷಿಣೆಗಾಗಿ ಕಾಡುವವರು, ಬೇರೆ ಹೆಂಗಸರ ಸಂಗ ಮಾಡುವವರು.. ನೆನೆಸಿಕೊಂಡರೆ ಭಯವಾಗುತ್ತದೆ. ನಮ್ಮ ಮನು ಅಪ್ಪಟ ಚಿನ್ನ ಕಣೆ... ನಿಂಗಿನ್ನೂ ಏನು ಬೇಕಿತ್ತು, ಗಂಡ, ಮಗ, ಮನೆ.. ಮದುವೆಯಾಗಿ ಹನ್ನೆರಡು ವರ್ಷ ಕಳೆದ ಮೇಲೂ ಮನುವಿನೊಂದಿಗಿರುವುದು ಹಿಂಸೆ ಅಂತಿದ್ದೀಯಲ್ಲ. ಅಪ್ಪ, ಅಮ್ಮ, ಗಂಡ, ಅತ್ತೆ, ಮಾವ ಈ ಐವರ ಬಳಿ ಯಾವ ಸ್ವಾಭಿಮಾನ- ಅಹಮ್ಮೂ ಇರಬಾರದು ಗೊತ್ತಾ, ಪ್ರೀತಿಯಿಂದ ಏನೋ ಮಾತನಾಡಿರುತ್ತಾರಪ್ಪ, ಅದನ್ನೇ ಮೆಲಕಾಡುವುದು ಯಾಕೆ, ಒಂದನ್ನೇ ಪದೇ ಪದೇ ಯೋಚಿಸಿದಷ್ಟೂ ಅಪಾರ್ಥವೇ ಎದ್ದು ಕಾಣಿಸುತ್ತದೆ..!’

ಸತೀ ಸಕ್ಕುಬಾಯಿಯ ಅಪರಾವತಾರದಂತಿದ್ದ ಅಮ್ಮನ ಬಾಯಲ್ಲಿ ಈ ಮಾತುಗಳನ್ನಲ್ಲದೆ ನಾನಿನ್ನೇನನ್ನು ನಿರೀಕ್ಷಿಸಲು ಸಾಧ್ಯ? ಹೊಡೆಯುತ್ತಿಲ್ಲ, ಬಡಿಯುತ್ತಿಲ್ಲ ಎನ್ನುವ ಅರ್ಹತೆ ನನ್ನನ್ನು ದಾಸಿಯನ್ನಾಗಿಸಿ ಮನುವನ್ನು ದೇವರನ್ನಾಗಿಸಿತೇ ಅಂತ ನನ್ನ ಸಂದೇಹ.

ಇವಿಷ್ಟೇ ಅಲ್ಲ, ಇವತ್ತು ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳಲು ತತ್‌ಕ್ಷಣದ ಕಾರಣ ಒಂದಿದೆ. ನಾನು ಎಲ್ಲೋ ಅಲ್ಪಸ್ವಲ್ಪ ತರಕಾರಿ- ದಿನಸಿಯಲ್ಲಿ ಉಳಿಸಿದ ದುಡ್ಡಲ್ಲೇ ಮೊನ್ನೆ ಮನುವಿಗೊಂದು ಚೆಂದದ ಶರ್ಟ್ ಉಡುಗೊರೆಯಾಗಿ ತಂದಿದ್ದೆ.

‘ಪೇದ್ರು, ಶರ್ಟ್ ಆರಿಸೋಕೂ ಬರಲ್ವಲ್ಲ ನಿನಗೆ, ಮಹಾ ಕಂಜೂಸ್ ನೀನು. ಬ್ರಾಂಡ್ ಇಲ್ಲದ ಯಾವುದೋ ಕಾಂಜಿಪೀಂಜಿ ಶರ್ಟ್ ತಂದರೆ ಯಾರು ತೊಟ್ಟುಕೊಳ್ತಾರೆ. ಎಲ್ಲಾ ನಿಮ್ಮಪ್ಪನ ಬುದ್ಧಿ, ಅವರಿಗೇ ಕೊಟ್ಟುಬಿಡು’ ಎಂದು ಬೇಕಾಬಿಟ್ಟಿ ನನ್ನ ಅಪ್ಪನ ಮನೆಯವರನ್ನೆಲ್ಲಾ ಎಳೆದುತಂದು ಸಲ್ಲದ ಆಪಾದನೆ ಹೊರಿಸಿ ಶರ್ಟನ್ನು ಕಾಟಿನ ಮೇಲೆಸೆದು ಹೋದ. ಸಂದರ್ಭ ಸಿಕ್ಕಾಗಲೆಲ್ಲ ನನ್ನ ಅಪ್ಪನ ಮನೆಯವರನ್ನು ಮಾತಿಗೆಳೆದು ತಂದು ನನ್ನನ್ನು ಬಗ್ಗಿಸಲು ಯಾವತ್ತಿಗೂ ತವಕಿಸುತ್ತಾನೆ. ಮನುವಿನ ನಿರೀಕ್ಷೆ ಹೇಗಿರುತ್ತದೆಯೆಂದರೆ, ಕೋಪ ಬಂದು ನಾನು ಕಿರುಚಬೇಕು, ಅವನು ಶಾಂತವಾಗಿ, ಸಣ್ಣ ಸಣ್ಣ ವಿಷಯವನ್ನೂ ದೊಡ್ಡ ಮಾಡುತ್ತೀಯ ಎಂದು ನನ್ನನ್ನು ದೂರುತ್ತಲೇ ಮಾತು ಮುಗಿಸಬೇಕು. ನನ್ನದು ಅಸಹನೆಯ ಸ್ವಭಾವ ಎಂದು ಆಗಾಗ ಖಾತ್ರಿಯಾಗುತ್ತಲೇ ಇರಬೇಕು, ನನಗೂ ಮತ್ತು ಅವನಿಗೂ..! ಯಾವುದನ್ನು ಕೆದಕಿದರೆ ನಾನು ಕುದಿಯುತ್ತೇನೆ ಎಂದು ಚೆನ್ನಾಗಿ ಅರಿತಿದ್ದಾನೆ ಅವನು.

ನನ್ನ ಮತ್ತು ಆರವನ ಬಟ್ಟೆಗಳನ್ನು ತುಂಬಿದ್ದಾಯ್ತು. ಋಣ ತೀರಿತೆಂದು ಮನುವಿಗೆ ಮುಖಕ್ಕೆ ಬಾರಿಸಿದಂತೆ ಹೇಳಿ ಹೋಗಬೇಕೆಂದು ಚೀಲಗಳ ಸಮೇತ ಮೂರು ದಿನದಿಂದ ಜಗಳಕ್ಕೂ ಸಿಗದೆ ಗೆಸ್ಟ್ ರೂಮಿನಲ್ಲಿ ತಲೆಮರೆಸಿಕೊಂಡಿದ್ದ ಮನುವಿನ ಬಳಿ ಹೋದೆ.

ಸಣ್ಣ ಮುಖ ಮಾಡಿ, ನಿದ್ರೆಗೆಟ್ಟ ಕೆಂಗಣ್ಣಲ್ಲಿ ಬಳಿಯುತ್ತಿರುವ ನೀರು... ಸೊರಬರ ಮೂಗನ್ನು ಹಿಂಡುತ್ತ ಮುದುಡಿ ಕುಳಿತಿದ್ದ ಮನು.!! ನಾನು ಮನೆಬಿಟ್ಟು ಹೋಗುತ್ತೇನೆಂದರೆ ಅಳು ಬರುವಷ್ಟಾದರೂ ಪ್ರೀತಿ ಇದೆಯೇ ಅವನಲ್ಲಿ.!!

ನಾನೂ ಕೊಂಚ ಮೆತ್ತಗಾದೆ.

ಹೆಂಡತಿಯಿಲ್ಲದ ಮನೆಯಲ್ಲಿ ಹೇಗೆ ದಿನ ಕಳೆಯಲಿ, ಆರವನಿಲ್ಲದೆ ಹೇಗೆ ಖುಷಿಯಿಂದಿರಲಿ ಎಂದು ಮನು ಪರಿತಪಿಸುತ್ತಿದ್ದಾನಾದರೆ ನಾನು ಹುಡುಕುತ್ತಿರುವ ಪ್ರೀತಿ ಮನುವಿನಲ್ಲಲ್ಲದೆ ಬೇರೆಲ್ಲಿರಲು ಸಾಧ್ಯ!?

ನಡುಗುವ ಉಸಿರೊಡೆದು, ಕ್ಷೀಣ ಸ್ವರದಲ್ಲಿ ಮನುವೆಂದ, ‘ನಿನ್ನೆಯಿಂದ ಸಿಕ್ಕಾಪಟ್ಟೆ ನೆಗಡಿ, ಮೈ- ಕೈ ನೋವು, ಸಣ್ಣ ಜ್ವರವೂ ಬರುವ ಹಾಗಿದೆ. ಮನೆಬಿಡೋ ನಿನ್ನ ಪ್ಲಾನೆಲ್ಲ ಇನ್ನೊಂದು ವಾರಬಿಟ್ಟು ಇಟ್ಕೋ ಪ್ಲೀಸ್... ಈಗ ಒಂದು ಒಳ್ಳೇ ಬೋಳುಕಾಳಿನ ಕಷಾಯ ಮಾಡ್ಕೊಂಡು ಬರ್ತೀಯಾ?’

ಇಲ್ಲ, ಮನು ಬದಲಾಗುವ ಮನುಷ್ಯನೇ ಅಲ್ಲ. ಭಾವನೆಗಳೇ ಇಲ್ಲ ಅವನಲ್ಲಿ. ತನ್ನ ಕೆಲಸವಾದರಾಯ್ತು, ಹೆಂಡತಿ ಮಕ್ಕಳ ಪರಿವೆಯೇ ಇಲ್ಲ ಅವನಿಗೆ, ಸ್ವಾರ್ಥಿ...

ಮನುವಿಗೆ ಆರಾಮಿಲ್ಲದಿದ್ದರೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ, ನಾನ್ಯಾಕೆ ಕರಗಲಿ..? ಮನುವನ್ನು ನಾನು ದ್ವೇಷಿಸುತ್ತಿರುವುದು ಹೌದಾದರೂ ಅವನ ಮೇಲಿನ ಪ್ರೀತಿ, ದ್ವೇಷಕ್ಕಿಂತ ಎಳ್ಳಷ್ಟು ಹೆಚ್ಚಿರಲು ಸಾಧ್ಯವೆ? ಮನುವನ್ನು ಬಿಟ್ಟುಹೋಗಿ ನಾನು ಸಾಧಿಸುವುದಾದರೂ ಏನಿದೆ, ಅವನನ್ನು ದ್ವೇಷಿಸುತ್ತಲೇ ಜೊತೆಗಿರುವುದು ನನಗೆ ಅಭ್ಯಾಸವಾಗಿ ಹೋಗಿದೆಯಾ ಎಂಬ ಗುಮಾನಿ ನನಗೂ ಇದೆ. ನನ್ನ ಪ್ರೀತಿಗೇ ಆಗಲಿ, ದ್ವೇಷಕ್ಕೇ ಆಗಲಿ ಈ ಮನೆಯಲ್ಲಿ ಸಿಗುವ ಬೆಲೆಯಲ್ಲೇನೂ ವ್ಯತ್ಯಾಸ ಬಹಳವಿಲ್ಲ. ಸಪ್ತಸ್ವರಗಳಲ್ಲಿಯೂ ಏಕತಾನತೆ ಬಯಸುವ ಮನಸ್ಸಿರುವಾಗ ಮಂದ್ರ- ತಾರಕಗಳನ್ನರಿಯದ ಕಿವಿಗಳನ್ನು ಅಂದೇನು ಪ್ರಯೋಜನ..!

ಗಂಡ ಹೆಂಡಿರ ಪಾತ್ರವನ್ನು ಮೈಮೇಲೆಳೆದುಕೊಂಡು ಈ ಜೀವನಪೂರ್ತಿ ಜೊತೆಯಲ್ಲೇ ಕಳೆದರೂ ಸಹ ಅವೆರಡೂ ಪಾತ್ರಗಳಲ್ಲಿರಬೇಕಾದ ಭಾವನೆಗಳ ನವಿರು, ನಾಜೂಕು ನಮ್ಮ ನಡುವೆ ಮೂಡದೆ ಇರಬಹುದು. ಭಾವವಿಲ್ಲದೆಯೂ ಮನುವಿನೊಟ್ಟಿಗೆ ಬದುಕಬಹುದೆಂದು ಭರವಸೆ ಬಂದಿದ್ದು ಆರವನಿಂದಲೇ ಆಗಿದ್ದರೆ ಮುಂದಿನ ಬದುಕನ್ನೂ ಆರವನ ಭರವಸೆಯಲ್ಲಿ ಎಲ್ಲಿಯೇ ಆದರೂ ಕಳೆಯಬಲ್ಲೆ, ಇಲ್ಲಿಯೇ ಆದರೂ ಸಹ!!

ಹಬೆಯಾಡುತ್ತಿದ್ದ ಕಷಾಯ ಕುದಿಯುವಷ್ಟರಲ್ಲಿ ನನಗೂ ಖಾತ್ರಿಯಾಗತೊಡಗಿತ್ತು, ಬಹುಶಃ ಮನುವಷ್ಟೇ ಅಲ್ಲ, ನಾನೂ ಬದಲಾಗಲು ಸಾಧ್ಯವಿಲ್ಲ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT