ಶನಿವಾರ, ಮಾರ್ಚ್ 6, 2021
32 °C
ಸಂತೆಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಾಗ್ದಾಳಿ

ರಾಷ್ಟ್ರೀಯ ಪಕ್ಷಗಳಿಂದ ನೀರಿನ ಸಮಸ್ಯೆ ನೀಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಪಕ್ಷಗಳಿಂದ ನೀರಿನ ಸಮಸ್ಯೆ ನೀಗದು

ಕುಣಿಗಲ್: ದೇಶದ ಎರಡು ರಾಷ್ಟ್ರೀಯ ಪಕ್ಷಗಳಿಂದ ಕನ್ನಡನಾಡಿನ ರೈತರ ಸಮಸ್ಯೆ, ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೆಗೌಡ ಹೇಳಿದರು.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸಂತೆಪೇಟೆಯಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಪರ ಮತಯಾಚಿಸಿ ಮಾತನಾಡಿದರು.

‘ಜಿಲ್ಲೆಯ ಅಡಿಕೆ ಮತ್ತು ತೆಂಗು ಬೆಳೆಗಾರರ ಸಮಸ್ಯೆಗಳನ್ನು ಸಂಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ವರದಿ ನೀಡಿದೆ; ಚಕಾರ ಎತ್ತಲಿಲ್ಲ. ಕೇರಳ ರಾಜ್ಯದ ಮಾದರಿಯಲ್ಲಿ ಪರಿಹಾರ ನೀಡಲು ಮನಸ್ಸು ಮಾಡಲಿಲ್ಲ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರ ಶರಣಾಗಿ ಸವಲತ್ತುಗಳನ್ನು ನೀಡುತ್ತಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ರಚನೆಯಾಗಬೇಕಾದರೆ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯುವ ಸ್ಥಿತಿ ನಿರ್ಮಾಣವಾಗಬೇಕು’ ಎಂದರು.

‘ನಮ್ಮ ನೀರು, ನಮ್ಮ ಹಣದಲ್ಲಿ ಜಲಾಶಯ ನಿರ್ಮಾಣವಾಗಿದೆ. ಆದರೆ, ನೀರು ಪಡೆದುಕೊಳ್ಳಲು ನಮಗೆ ಹಕ್ಕಿಲ್ಲದಂತಾಗಿದೆ. ಕನ್ನಡಿಗರು ರಾಷ್ಟ್ರೀಯ ಪಕ್ಷಗಳ ಗುಲಾಮರಾಗದೆ, ಸ್ವಾಭಿಮಾನಿಗಳಾಗಿ ನೆಲ– ಜಲ ಭಾಷೆಗಳ ಬಗ್ಗೆ ಪ್ರಾದೇಶಿಕ ಪಕ್ಷದ ಮೂಲಕ ಹೋರಾಟ ಮಾಡಬೇಕಿದೆ’ ಎಂದರು.

ಅಭ್ಯರ್ಥಿ ಡಿ.ನಾಗರಾಜಯ್ಯ ಮಾತನಾಡಿ, ‘ಕಾಂಗ್ರೆಸ್‌ನ ಕನಕಪುರ ದವರು ತಾಲ್ಲೂಕಿನ ಹುತ್ತಿಬೆಟ್ಟ, ಉಜ್ಜನಿ, ಅರಮನೆ ಹೊನ್ನಮಾಚನಹಳ್ಳಿ ಮತ್ತು ತಾವರೆಕೆರೆ ಕಲ್ಲುಬಂಡೆಗಳ ಮೇಲೆ ಗಮನ ಹರಿಸಿ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯೋನುಮುಖರಾಗಿದ್ದಾರೆ. ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಡೈರಿ ರಾಜಕಾರಣದಲ್ಲಿ ಮುಳುಗಿ ಶಾಸಕರಾಗಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ವಿಧಾನಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು, ರಮೇಶ್ ಬಾಬು, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ಡಾ.ಬಿ.ಎನ್.ರವಿ, ಜಗದೀಶ್, ಲಿಯಾಖತ್, ಶಿವಣ್ಣ, ರಾಮಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ನಾಯಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್ ಹಾಜರಿದ್ದರು.

ಸಮಗ್ರ ಅಭಿವೃದ್ಧಿ ಜೆಡಿಎಸ್ ಇಚ್ಛಾಶಕ್ತಿ

ಹುಲಿಯೂರುದುರ್ಗ: ‘ಪ್ರತಿಪಕ್ಷಗಳ ಅಣಕದ ಮಾತುಗಳನ್ನು ಮೀರಿ ನಾಡಿನ ನಾಗರಿಕರ ಹಿತ ಕಾಯುವ ಇಚ್ಛಾಶಕ್ತಿಯನ್ನು ಜೆಡಿಎಸ್ ಹೊಂದಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಪಕ್ಷದ ಪ್ರಣಾಳಿಕೆಗಳ ವಿವರ ನೀಡಿ, ಅವುಗಳ ಅನುಷ್ಠಾನಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕಿದೆ ಎಂದರು.

ಮಾಜಿ ಶಾಸಕ ಎಚ್. ನಿಂಗಪ್ಪ, ತುರುವೆಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಕಾಂತರಾಜು, ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ನಾಗರಾಜಯ್ಯ, ಮಾಜಿ ಸದಸ್ಯ ಅಣ್ಣಯ್ಯ, ಹಳೇಪೇಟೆ ಕೃಷ್ಣಪ್ಪ ಇದ್ದರು.

**

ನನ್ನ ಜೀವಮಾನದಲ್ಲೇ ಸಿದ್ದರಾಮಯ್ಯ ಅವರಂತ ಭ್ರಷ್ಟ ಮುಖ್ಯಮಂತ್ರಿಯನ್ನು ನೋಡಲಿಲ್ಲ. ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿ, ಎಸಿಬಿ ಮೂಲಕ ಗೊಂದಲ ಸೃಷ್ಟಿಸಿದರು 

– ಎಚ್.ಡಿ.ದೇವೆಗೌಡ, ಜೆಡಿಎಸ್‌ ವರಿಷ್ಠ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.