ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಕಣದಲ್ಲಿ ಫಸಲಿನ ತವಕ

ಜೆಡಿಎಸ್‌ಗೆ ಹೊಗಳಿಕೆ– ತೆಗಳಿಕೆಯ ಭಿನ್ನ ಬಾಣ
Last Updated 5 ಮೇ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಗೆ ನಿಚ್ಚಳ ಬಹುಮತ ಸಿಗುವುದಿಲ್ಲ ಎಂಬ ಸಂಶಯ ದಟ್ಟವಾಗುತ್ತಿದ್ದಂತೆ ಜೆಡಿಎಸ್‌ ಜತೆಗಿರುವ ಒಕ್ಕಲಿಗರ ಮತಗಳನ್ನು ‘ಕಮಲ’ದತ್ತ ಆಕರ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಎರಡು ‘ದಾಳ’ಗಳನ್ನು ಉರುಳಿಸಿ, ‘ದಳ’ ವಿದಳಗೊಳಿಸುವ ಕಸರತ್ತಿಗೆ ಕೈ ಹಾಕಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರನ್ನು ‘ಕರ್ನಾಟಕದ ಮಣ್ಣಿನ ಮಗ’ ಎಂದು ಹೊಗಳಿದ ಮೋದಿ, ಅದರ ಮಗ್ಗುಲಲ್ಲೇ ‘ಜೆಡಿಎಸ್‌ಗೆ ಹಾಕುವ ಮತ ವ್ಯರ್ಥ’ ಎಂದರು. ಬಿಟ್ಟ ಬಾಣವನ್ನು ವಾಪಸ್ ಪಡೆದು, ಮತ್ತೊಂದು ‘ಅಸ್ತ್ರ’ ಉಡಾಯಿಸಿದ್ದರ ಹಿಂದಿರುವ ಮರ್ಮವೇನು ಎಂಬ ಚರ್ಚೆ ರಾಜಕೀಯ ಅಂಗಳದಲ್ಲಿ ಈಗ ಬಿರುಸುಗೊಂಡಿದೆ.

ಅವರ ಎರಡೂ ಹೇಳಿಕೆಗಳು ತದ್ವಿರುದ್ಧವಾಗಿವೆ. ‘ಬಡ ಬೋರೇಗೌಡ’ರಲ್ಲಿ ಗೊಂದಲ ಹುಟ್ಟು ಹಾಕಿವೆ. ಹಳ್ಳಿಕಟ್ಟೆಗಳಲ್ಲಿ ಕುಳಿತು ಹರಟೆ ಕೊಚ್ಚುವ ಒಕ್ಕಲುತನದ ಹಿರೀಕರು ಮೋದಿ ಅವರ ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ಮತ ನಿರ್ಣಯವನ್ನೇನೂ ಬದಲಿಸುವುದಿಲ್ಲ.

ಪ್ರಧಾನಿ ಮಾತಿನ ಹಿಂದಿನ ‘ಸತ್ಯ’ದ ಹುಡುಕಾಟಕ್ಕೆ ರಾಜಕೀಯ ವಿಶ್ಲೇಷಕರು ತಮ್ಮದೇ ಆದ ಸಮರ್ಥನೆ ಕೊಡಬಹುದು. ಆದರೆ, ಸಾಮಾನ್ಯ ಮತದಾರರು ಮಾತ್ರ ಮೋದಿ ಮಾತು ಅರ್ಥವಾಗದೇ, ದೇವೇಗೌಡರನ್ನು ಹಣಿಯಲು ಹೂಡಿದ ತಂತ್ರ ಇದೆಂದು ಸರಳವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಹೀಗಾಗಿ ತಂತ್ರಗಾರಿಕೆ, ಲೆಕ್ಕಾಚಾರವಿಟ್ಟು ಮೋದಿ ಪದಗಳನ್ನು ಉದುರಿಸಿದರೂ, ಅದು ಕಮಲ ಅರಳಲು ‘ವರ’ವಾಗುವುದು ಕಷ್ಟ ಎಂಬ ಅಭಿ‍ಪ್ರಾಯವೂ ಇದೆ.

‘ಗೌಡರ’ ಮತದ ಮೇಲೆ ಕಣ್ಣು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧ್ರುವೀಕರಣಗೊಳ್ಳುತ್ತಿರುವ ಗ್ರಾಮೀಣ ಸಮುದಾಯದ ಒಕ್ಕಲಿಗರ ಸಿಟ್ಟನ್ನು ತಮ್ಮ ಪರವಾದ ಮತವಾಗಿಸಲು ಅವರು ಮೊದಲದಾಳ ಬಿಟ್ಟರು.

‘ಸಿದ್ದರಾಮಯ್ಯ ಒಕ್ಕಲಿಗ ವಿರೋಧಿ’ ಎಂದು ದೇವೇಗೌಡ, ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅನೇಕ ಬಾರಿ ನೇರ ಅಥವಾ ಪರೋಕ್ಷವಾಗಿ ಹೇಳಿ
ದ್ದುಂಟು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ ಎದುರು ಮುಖ್ಯಮಂತ್ರಿ ಸ್ಪರ್ಧೆಯು ಒಕ್ಕಲಿಗ ಮತ್ತು ಸಿದ್ದರಾಮಯ್ಯ ಮಧ್ಯದ ಸಂಘರ್ಷ ಎಂದೇ ಒಕ್ಕಲಿಗರು ಹೆಚ್ಚಿರುವ ಭಾಗದಲ್ಲಿ ಬಿಂಬಿಸಲಾಯಿತು. ಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ದಂತೆ ಇದು ಇನ್ನಷ್ಟು ಪ್ರಖರಗೊಳ್ಳುತ್ತಲೇ ಹೋಯಿತು.

‘ಕುಮಾರಸ್ವಾಮಿ ಅವರಪ್ಪನಾಣೆಗೂ ಸಿ.ಎಂ ಆಗುವುದಿಲ್ಲ’ ಎಂದು ಪದೇ ಪದೇ ಸಿದ್ದರಾಮಯ್ಯ ಹೇಳಿದ್ದನ್ನು ಬೇರೆ ರೀತಿಯಲ್ಲಿ ಅರ್ಥೈಸಿ ಅದಕ್ಕೊಂದು ‘ನಂಬಿಕೆ’ಯ ರೂಪವನ್ನೂ ವ್ಯವಸ್ಥಿತವಾಗಿ ನೀಡಲಾಯಿತು. ಹೀಗೆ ಹುರಿಗಟ್ಟಿರುವ ಒಕ್ಕಲಿಗರ ಆಕ್ರೋಶವನ್ನು ಮತವಾಗಿ ಪರಿವರ್ತಿಸಲು ದೇವೇಗೌಡರು ಸತತ ಪ್ರಯತ್ನ ನಡೆಸಿದರು.

‘ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಹಿರಿಯರಿಗೆ ಗೌರವ ನೀಡುವುದಿಲ್ಲ’ ಎಂದು ಹೇಳಲು ಹೋದ ಮೋದಿ, ಗೌಡರನ್ನು ಹೊಗಳಿ ಅಟ್ಟಕ್ಕೇರಿಸಿದರು. ಗೌಡರ ಬಗ್ಗೆ ಅನುಕಂಪ ತೋರಿಸುವ ಮುಖೇನ, ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ, ಹಾಸನ, ತುಮಕೂರನ್ನು ಬಿಟ್ಟು ಉಳಿದ ಕಡೆಗಳಲ್ಲಿರುವ ಒಕ್ಕಲಿಗರ ಮತಗಳಲ್ಲಿ ಶೇ 10–15ರಷ್ಟು ಮತಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಹಾಕಿಸುವುದು ಮೋದಿಯವರ ಸರಳ ಲೆಕ್ಕಾಚಾರವಾಗಿತ್ತು.

ಇದರ ಜತೆಗೆ,‘ ಗೌಡರು ನಮ್ಮ ಶತ್ರುವಲ್ಲ; ಸಂದರ್ಭ ಒದಗಿದರೆ ನಮ್ಮ ಸಂಗಡ ಬರಬಹುದಾದ ಕಟ್ಟಾಳು, ಅವರ ಜತೆಗೆ ಉತ್ತಮ ಒಡನಾಟವಿದೆ’ ಎಂಬ ಸಂದೇಶ ನೀಡುವುದೂ ಮೋದಿ ಇರಾದೆಯಾಗಿತ್ತು. ಅಷ್ಟರಮಟ್ಟಿಗೆ ಅವರು ಯಶಸ್ಸಿನ ದಡ ಹತ್ತಿದರು. ಹೀಗೆ ಇಬ್ಬಾಯಿಯ ಖಡ್ಗ ಬಳಸುವ ಮೂಲಕ ಜೆಡಿಎಸ್‌ ಒಲವು ಇದೆ ಎಂದು ತೋರಿಸಿಕೊಳ್ಳುವುದು, ಅದೇ ಹೊತ್ತಿಗೆ ಆ ಪಕ್ಷಕ್ಕೆ ಇರುವ ಮತಬಲವನ್ನು ಕುಗ್ಗಿಸುವ ಕೆಲಸವನ್ನೂ ಒತ್ತಟ್ಟಿಗೆ ಮಾಡಿದರು.

ತಿರುಗುಬಾಣ?

ಮೋದಿ ಅವರು ದ್ವಂದ್ವ ಹೇಳಿಕೆ ನೀಡುವ ಮೂಲಕ ಒಕ್ಕಲಿಗರ ಒಲವು ಕಳೆದುಕೊಂಡು, ‘ಕಮಲ’ದ ಮೇಲೆ ಕಲ್ಲು ಹಾಕಿದರಾ?ಎಂಬ ಸಂದೇಹವನ್ನು ಬಿಜೆಪಿ ನಾಯಕರೊಬ್ಬರು ವ್ಯಕ್ತಪಡಿಸಿದರು.

ಗೌಡರನ್ನು ಹೊಗಳಿದ್ದರಿಂದಾಗಿ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿತ್ತು. ಅದನ್ನು ಬಿಟ್ಟು ಜೆಡಿಎಸ್‌ ಮೂದಲಿಸುವ ಮೂಲಕ ಒಕ್ಕಲಿಗರು ಬಿಜೆಪಿ ವಿರುದ್ಧ ಪುಟಿದೇಳಲು, ಮತಗಳು ಕೈತಪ್ಪಲು ಕಾರಣವಾಗಬಹುದು. ಆದರೆ, ಈ ಆತಂಕವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದು ಎಂದೂ ಅವರು ಹೇಳಿದರು.

ಎರಡನೇ ದಾಳದ ಪಾಳಿ:

ಒಕ್ಕಲಿಗರ ಮತಗಳು ನಿರ್ಣಾಯಕವಾಗಿರುವ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಬಿಜೆಪಿಗೆ ಸೋಲಿನ ರುಚಿ ತೋರಿಸಬಹುದಾದ ಕ್ಷೇತ್ರಗಳಲ್ಲಿನ ಮತಗಳನ್ನು ಕೇಸರಿ ಪಕ್ಷಕ್ಕೆ ಒಲಿಸಿಕೊಳ್ಳಲು ಮೋದಿ ಮತ್ತೊಂದು ದಾಳವನ್ನು ಉರುಳಿಸಿದರು. ಇದರ ಹಿಂದೆ ನಗರ ಪ್ರದೇಶಗಳಲ್ಲಿರುವ ಒಕ್ಕಲಿಗರನ್ನು ಒಲಿಸಿಕೊಳ್ಳುವ ಅಪೇಕ್ಷೆ ಇತ್ತು.

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್‌ ಅಭ್ಯರ್ಥಿಗಳು ನೇರ ಎದುರಾಳಿಗಳಾಗಿದ್ದಾರೆ. ಈ ಮಾಹಿತಿ ಇಟ್ಟುಕೊಂಡಿರುವ ಮೋದಿ, ‘ಬುದ್ಧಿ ಇರುವವರು ಜೆಡಿಎಸ್‌ಗೆ ಮತ ಹಾಕುವುದಿಲ್ಲ. ಆ ಪಕ್ಷಕ್ಕೆ ಹಾಕುವ ಮತ ವ್ಯರ್ಥ. ಜೆಡಿಎಸ್‌ ಕುಂಟುತ್ತಾ ಮೂರನೇ ಸ್ಥಾನಕ್ಕೆ ತಲುಪಲಿದೆ’ ಎಂದು ಕುಟುಕಿದ್ದರು.

ಇವು ತೇಲಿಕೆಯ ಮಾತುಗಳಲ್ಲ. ಈಗ ಸರಿಸುಮಾರು ಶೇ 27ರಷ್ಟಿರುವ ಬೆಂಬಲವನ್ನು ಶೇ 30ಕ್ಕೆ ದಾಟಿಸಿದರೆ ಇನ್ನೂ ಹೆಚ್ಚಿನ ಸೀಟುಗಳು ಸಲೀಸಾಗಿ ಕಮಲದ ತೆಕ್ಕೆಗೆ ಸೇರಲಿವೆ ಎಂಬ ಅಂದಾಜಿನಿಂದಲೇ ಅವರು ಈ ಮಾತು ಆಡಿರುವುದು ಸ್ಪಷ್ಟ.

‘ನೀವು ಜೆಡಿಎಸ್‌ಗೆ ಮತ ಹಾಕಿದರೆ ಸಿದ್ದರಾಮಯ್ಯ ವಿರುದ್ಧ ಇರುವ ನಿಮ್ಮ ಸಿಟ್ಟಿಗೆ ಫಲ ಸಿಗದು. ಜೆಡಿಎಸ್‌ಗೆ ಮತ ಹಾಕಿದರೆ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಬೇಕಾದರೆ ಬಿಜೆಪಿಗೆ ಮತ ಹಾಕಬೇಕು’ ಎಂಬ ಅಭಿಪ್ರಾಯವನ್ನು ಒಕ್ಕಲಿಗರಲ್ಲಿ ಮೂಡಿಸುವುದಕ್ಕಾಗಿ ಈ ಮಾತನ್ನು ಪ್ರಧಾನಿ ಹೇಳಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅವರು, ‘ಕಾಂಗ್ರೆಸ್–ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ’ ಎಂಬ ಪಟಾಕಿಯನ್ನೂ ಸಿಡಿಸಿದ್ದಾರೆ. ಹೀಗೆ ಮೇಲಿಂದ ಮೇಲೆ ಜೆಡಿಎಸ್‌ ಪರ–ವಿರೋಧ ಹೇಳಿಕೆ ನೀಡುತ್ತಲೇ ಹೋದರೆ, ಅದು ಪರೋಕ್ಷವಾಗಿ ಕಾಂಗ್ರೆಸ್–ಜೆಡಿಎಸ್‌ಗೆ ಪೆಟ್ಟುಕೊಟ್ಟು, ಬಿಜೆಪಿಗೆ ನೆರವಾಗಬಹುದೆಂಬ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಅವರು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT