ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಇತಿಹಾಸ; ಮೋದಿ ಪ್ರಮಾದ

Last Updated 5 ಮೇ 2018, 19:58 IST
ಅಕ್ಷರ ಗಾತ್ರ

ದೇಶದ ಸೇನಾ ಇತಿಹಾಸದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಲಹೆಗಾರರಿಗೂ ಅಜ್ಞಾನ ಇರುವುದು ಮೊನ್ನೆ ಕಲಬುರ್ಗಿಯಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಬಹಿರಂಗಗೊಂಡಿದೆ.

‘ಫೀಲ್ಡ್‌ ಮಾರ್ಷಲ್‌ ಆಗಿದ್ದ ಕೆ.ಎಂ. ಕಾರಿಯಪ್ಪ ಮತ್ತು ಸೇನಾ ಮುಖ್ಯಸ್ಥರಾಗಿದ್ದ ಕೆ. ತಿಮ್ಮಯ್ಯ ಅವರನ್ನು ಕಾಂಗ್ರೆಸ್‌ ಅವಮಾನಿಸಿತ್ತು. ಅದೊಂದು ಐತಿಹಾಸಿಕ ಸಂಗತಿಯಾಗಿದೆ. 1948ರ ಯುದ್ಧದಲ್ಲಿ ನಾವು ಜನರಲ್‌ ತಿಮ್ಮಯ್ಯ ಅವರ ನಾಯಕತ್ವದಲ್ಲಿ ಗೆಲುವು ಸಾಧಿಸಿದ್ದೆವು. ಕಾಶ್ಮೀರವನ್ನು ಭಾರತದಲ್ಲಿ ಉಳಿಸಿದ್ದ ತಿಮ್ಮಯ್ಯ ಅವರನ್ನು ಪ್ರಧಾನಿ ನೆಹರೂ ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್‌ ಪದೇ ಪದೇ ಅವಮಾನಿಸಿದ್ದರು’ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ತಪ್ಪು ಮಾಹಿತಿ ಉಲ್ಲೇಖಿಸಿದ್ದರು. ಮೋದಿ ಅಥವಾ ಅವರ ಸಹಾಯಕರು ವಿಕಿಪೀಡಿಯದಲ್ಲಿನ ಮಾಹಿತಿ ಮೇಲೆ ಕಣ್ಣಾಡಿಸಿದ್ದರೆ ಅವರಿಗೆ ಅವರ ತಪ್ಪಿನ ಅರಿವಾಗುತ್ತಿತ್ತು.

ಅಂದಿನ ಸೇನಾ ಜನರಲ್‌ ಕೆ.ಎಂ. ಕಾರಿಯಪ್ಪ ಅವರು (ತಿಮ್ಮಯ್ಯ ಅವರಲ್ಲ) 1949ರ ಜನವರಿ 15 ರಂದು ಭಾರತದ ಮೊದಲ ಸೇನಾ ಮುಖ್ಯಸ್ಥರಾಗಿ ನೇಮಕ ಗೊಂಡಿದ್ದರು. ಈ ಕಾರಣಕ್ಕೆ ಆ ದಿನವನ್ನು ಸೇನಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 1899ರಲ್ಲಿ ಜನಿಸಿದ್ದ ಕಾರಿಯಪ್ಪ ಅವರಿಗೆ ಆಗ 50 ವರ್ಷಗಳಾಗಿದ್ದವು. ಆ ಸಮಯದಲ್ಲಿ ಸೇನಾ ಮುಖ್ಯಸ್ಥ ಹುದ್ದೆಗೆ ಏರಿದ್ದ ಮೊದಲ ಕಿರಿಯ ವಯಸ್ಸಿನವರಾಗಿದ್ದರು.

ಅನೇಕ ಬೆಳವಣಿಗೆಗಳು ಮತ್ತು ಒಂದರ ಮೇಲೊಂದು ಪ್ರಭಾವ ಬೀರುವ ವಿದ್ಯಮಾನಗಳ ಕಾರಣಕ್ಕೆ ಇತಿಹಾಸದ ಕೆಲ ವಿವರಗಳು ಕೆಲವೊಮ್ಮೆ ಭಾಗಶಃ ತಿರುಚಿದಂತೆ ಭಾಸವಾಗುತ್ತವೆ. ಇದನ್ನು ಸ್ಪಷ್ಟಪಡಿಸಲು ಇಲ್ಲಿ ನಾನು ಕೆಲ ವಿವರಗಳನ್ನು ನೀಡಲು ಬಯಸುತ್ತೇನೆ. 1947–48ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಬ್ರಿಟಿಷರೇ ಎರಡೂ ಬಣಗಳ ಮುಖ್ಯಸ್ಥರಾಗಿದ್ದರು. ಯುದ್ಧ ನಡೆಯುತ್ತಿದ್ದಾಗ ಅವರಿಬ್ಬರೂ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ಎರಡೂ ದೇಶಗಳು ಸೇನಾ ಮುಖ್ಯಸ್ಥರನ್ನು ಬದಲಿಸಿ ದೇಶಿ ಕಮಾಂಡರ್‌ಗಳ ಸುಪರ್ದಿಗೆ ಒಪ್ಪಿಸಿದ್ದರು. ಈ ಮುಖ್ಯಸ್ಥರು ರಾಜಕೀಯ ಮುಖಂಡರ ಜತೆ ನೇರ ಸಂಪರ್ಕದಲ್ಲಿ ಇದ್ದರು.

ಭಾರತವು ಲೆಫ್ಟಿನೆಂಟ್‌ ಜನರಲ್‌ ಆಗಿದ್ದ ಕಾರಿಯಪ್ಪ ಅವರನ್ನು ತನ್ನ ಸೇನಾ ಕಾರ್ಯಾಚರಣೆಯ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಅವರನ್ನು ದೆಹಲಿ ಮತ್ತು ಪೂರ್ವ ಪಂಜಾಬ್‌ ಕಮಾಂಡ್‌ನ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಈ ಎರಡೂ ಕಮಾಂಡ್‌ಗಳ ಹೆಸರನ್ನು ಅವರು ಪಶ್ಚಿಮ ಕಮಾಂಡ್‌ ಎಂದು ಬದಲಿಸಿದ್ದರು.

ಇಲ್ಲಿ ಗೊಂದಲ ಮೂಡಲು ಕಾರಣ ಏನೆಂದರೆ, ಕೆ.ಎಂ. ಕಾರಿಯಪ್ಪ ಅವರು ಕೊಡಗಿನವರೇ ಆಗಿದ್ದ ಜನರಲ್‌ ಮೇಜರ್‌ ಕೆ.ಎಸ್‌. ತಿಮ್ಮಯ್ಯ ಅವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಇಬ್ಬರ ಹೆಸರಿನಲ್ಲಿಯೂ ವಂಶದ ಸೂಚಕವಾಗಿದ್ದ ‘ಕೊಡಂದೇರ’ ಇದ್ದ ಕಾರಣಕ್ಕೆ ‘ಕೆ’ ಅಕ್ಷರ ಇಬ್ಬರಿಗೂ ಅನ್ವಯವಾಗುತ್ತಿತ್ತು. ಕಾರಿಯಪ್ಪ ಅವರು ತಿಮ್ಮಯ್ಯ ಅವರಿಗೆ ಕಾಶ್ಮೀರ ವಿಭಾಗವನ್ನು ಮುನ್ನಡೆಸುವ ಹೊಣೆಗಾರಿಕೆ ಒಪ್ಪಿಸಿದ್ದರು. ಈ ವಿಭಾಗವು, ಸೇನಾ ಕಾರ್ಯಾಚರಣೆಯ ಆರಂಭಿಕ ದಿನಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು.

ಐವತ್ತರ ದಶಕದಲ್ಲಿ ಇಬ್ಬರ ಹೆಸರೂ ಒಂದೇ ಬಗೆಯಲ್ಲಿ ಇದ್ದ ಕಾರಣಕ್ಕೆ ಕೆಲಮಟ್ಟಿಗೆ ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿತ್ತು. ಇಬ್ಬರೂ ಅಷ್ಟೇನೂ ಜನಾನುರಾಗಿಗಳೂ ಆಗಿರಲಿಲ್ಲ. ಇಬ್ಬರೂ ಜತೆಯಾಗಿಯೇ ಕಾರ್ಯನಿರ್ವಹಿಸಿದ್ದರು. ಸೇನಾ ಪರಾಕ್ರಮವನ್ನೂ ಮೆರೆದಿದ್ದರು. ಇಬ್ಬರೂ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಸ್ನೇಹಪರ ವ್ಯಕ್ತಿತ್ವದ ಸರ್ದಾರ್‌ ಬಲದೇವ್‌ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದಾಗ ಕಾರಿಯಪ್ಪ ಅವರು ಸೇನಾ ಮುಖ್ಯಸ್ಥರಾಗಿದ್ದರು. ಆದರೆ, ತಿಮ್ಮಯ್ಯ ಅವರು ಸೇನಾ ಮುಖ್ಯಸ್ಥರಾಗಿದ್ದಾಗ, ವಿ.ಕೆ. ಕೃಷ್ಣ ಮೆನನ್‌ ಅವರು ರಕ್ಷಣಾ ಸಚಿವರಾಗಿದ್ದರು. ಕಮ್ಯುನಿಸ್ಟ್‌ ಧೋರಣೆಯ ಮತ್ತು ವಿಲಕ್ಷಣ ಸ್ವಭಾವದ ಮೆನನ್‌ ಅವರು ಸೇನಾಪಡೆಗಳ ವಿಷಯದಲ್ಲಿ ನಿರಂತರವಾಗಿ ಹಸ್ತಕ್ಷೇಪ ನಡೆಸುತ್ತಿದ್ದರು.

ರಕ್ಷಣಾ ಸಚಿವರ ಈ ನಡವಳಿಕೆ ತಿಮ್ಮಯ್ಯ ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಮೆನನ್‌ ಜತೆ ಮುಖಾಮಖಿಯಾಗಲು ಅವರು ಯಾವತ್ತೂ ಇಷ್ಟಪಡುತ್ತಿರಲಿಲ್ಲ. ಮೆನನ್‌ ಜತೆಗಿನ ತೀವ್ರ ಸ್ವರೂಪದ ಭಿನ್ನಾಭಿಪ್ರಾಯದಿಂದ ಬೇಸತ್ತ ಅವರು, 1959ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆಯನ್ನೂ ಸಲ್ಲಿಸಿದ್ದರು. ನೆಹರೂ ಅವರ ಮನವೊಲಿಕೆಯಿಂದ ರಾಜೀನಾಮೆ ವಾಪಸ್‌ ತೆಗೆದುಕೊಂಡು 1961ರಲ್ಲಿ ಸೇವಾ ನಿವೃತ್ತರಾಗಿದ್ದರು.

ಈ ಎಲ್ಲ ವಿದ್ಯಮಾನಗಳು ಮತ್ತು ಕೊಡಗಿನ ಕಾಕತಾಳೀಯಗಳು ಜನಸಾಮಾನ್ಯರಲ್ಲಿ ಸಹಜವಾಗಿಯೇ ಗೊಂದಲ ಹುಟ್ಟಿಸುತ್ತವೆ. ಆದರೆ, ಪ್ರಧಾನಿ ಮತ್ತು ಅವರ ಕಚೇರಿಯು ಕೂಡ ಇಂತಹ ಗಂಭೀರ ಸ್ವರೂಪದ ಪ್ರಮಾದ ಎಸಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ.

ಸ್ವಾತಂತ್ರ್ಯಾನಂತರದ 25 ವರ್ಷಗಳ ಕಾಲ ಭಾರತದ ಇತಿಹಾಸದಲ್ಲಿ ಯುದ್ಧಗಳ ಉಲ್ಲೇಖವೇ ಪ್ರಮುಖವಾಗಿದೆ. 1947–48, 1965 ಮತ್ತು 1971ರಲ್ಲಿ ಪಾಕಿಸ್ತಾನದ ಜತೆ ಮತ್ತು 1962ರಲ್ಲಿ ಚೀನಾ ಜತೆಗಿನ ಸಮರಗಳು ದೊಡ್ಡ ಪ್ರಮಾಣದಲ್ಲಿ ನಡೆದಿದ್ದವು. 1947ರಲ್ಲಿ ಹೈದರಾಬಾದ್‌ನಲ್ಲಿ, 1960ರಲ್ಲಿ ಗೋವಾದಲ್ಲಿ ಹಾಗೂ 1967ರಲ್ಲಿ ಸಿಕ್ಕಿಂನ ನಾಥುಲಾದಲ್ಲಿ ಸಣ್ಣ ಪ್ರಮಾಣದ ಸೇನಾ ಕಾರ್ಯಾಚರಣೆಗಳು ನಡೆದಿದ್ದವು. 1971ರಲ್ಲಿನ ಯುದ್ಧವೊಂದನ್ನು ಹೊರತುಪಡಿಸಿದರೆ, ಇತರ ಯುದ್ಧಗಳಲ್ಲಿ ಭಾರತ ಸ್ಪಷ್ಟವಾಗಿ ಗೆಲುವು ಸಾಧಿಸಿಲ್ಲ.

1962ರಲ್ಲಿನ ಯುದ್ಧದಲ್ಲಿ ಭಾರತ ಸ್ಪಷ್ಟವಾಗಿ ಸೋತಿತ್ತು. 1947–48ರಲ್ಲಿನ ಸೇನಾ ಕಾರ್ಯಾಚರಣೆಯು ಇದುವರೆಗೂ ಕೊನೆಗೊಂಡಿಲ್ಲ. 1965ರ ಯುದ್ಧವು ಬಿಕ್ಕಟ್ಟಿಗೆ ಹಾದಿ ಮಾಡಿಕೊಟ್ಟಿತು.

ಆ ದಿನಗಳಲ್ಲಿನ ರಾಜಕೀಯ ಮುಖಂಡರು, ಸೇನೆಯನ್ನು ನಿಕೃಷ್ಟವಾಗಿ ಕಂಡಿರದಿದ್ದರೆ ಸೇನಾ ಪಡೆಗಳ ಸಾಧನೆ ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ದಶಕಗಳ ಕಾಲ ಹೇಳುತ್ತಲೇ ಬರಲಾಗಿದೆ. ಸೇನಾ ಪಡೆಗಳ ವೈಫಲ್ಯವನ್ನು ರಾಜಕಾರಣಿಗಳು ತಮ್ಮ ಮೇಲೆ ಎಳೆದು ಕೊಂಡಿದ್ದಾರೆ ಎಂದು ಹೇಳುವುದು ವಿಷಯವನ್ನು ತುಂಬ ಸರಳೀಕರಣಗೊಳಿಸಿದಂತೆ ಆಗಲಿದೆ. ರಾಜಕಾರಣಿಗಳಿಗೆ ಹಾಗೆ ಮಾಡದೇ ಬೇರೆ ದಾರಿಯೇ ಇದ್ದಿರಲಿಲ್ಲ.

ನೆರೆಯ ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಇನ್ನೂ ವ್ಯವಸ್ಥಿತವಾಗಿ ರೂಪುಗೊಳ್ಳಬೇಕಾಗಿದೆ. ಅಲ್ಲಿ ಸೇನಾ ಪಡೆಗಳ ಕೈಮೇಲಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಭಾರತದಲ್ಲಿ ನಾಗರಿಕ ಮತ್ತು ಸೇನೆಯ ಸಮೀಕರಣ ರೂಪುಗೊಳ್ಳುವ ದಿನಗಳಲ್ಲಿ ನೆಹರೂ ನೇತೃತ್ವದಲ್ಲಿನ ರಾಜಕಾರಣಿಗಳು ಅನೇಕ ಆತಂಕದ ದಿನಗಳನ್ನು ಎದುರಿಸಿದ್ದರು. ನಾಗರಿಕ ಮತ್ತು ರಾಜಕೀಯ ವ್ಯವಸ್ಥೆಯ ಶ್ರೇಷ್ಠತೆ ಸ್ಥಾಪಿಸುವುದು ಆ ದಿನಗಳಲ್ಲಿ ದೊಡ್ಡ ಸವಾಲಾಗಿತ್ತು. ಅದೇ ವೇಳೆಗೆ, ನಾಗರಿಕ ಮತ್ತು ಸೇನಾಪಡೆಗಳ ಮಧ್ಯೆ ಉದ್ವಿಗ್ನತೆ ಉಂಟಾಗುವುದನ್ನೂ ತಪ್ಪಿಸಬೇಕಾಗಿತ್ತು.

ಇಲ್ಲೊಂದು ಸಂಗತಿಯನ್ನು ಉಲ್ಲೇಖಿಸಬೇಕು. ಪಾಕಿಸ್ತಾನದ ಫೀಲ್ಡ್‌ ಮಾರ್ಷಲ್‌ ಆಗಿ ನೇಮಕಗೊಂಡಿದ್ದ ಅಯೂಬ್‌ ಖಾನ್‌ ಅವರು 1958ರಲ್ಲಿ ಅಧಿಕಾರವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಅದಕ್ಕೂ ಕೆಲ ವರ್ಷಗಳ ಹಿಂದೆ ಬ್ರಿಟಿಷರ ಆಡಳಿತದಲ್ಲಿ ಸೇನಾ ಜನರಲ್‌ ಆಗಿದ್ದ ಸಂದರ್ಭದಲ್ಲಿ ಅವರು ಕಾರಿಯಪ್ಪ ಅವರ ಬ್ರಿಗೇಡ್‌ನಲ್ಲಿ ಕರ್ನಲ್‌ ಆಗಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಆರಂಭದ ವರ್ಷಗಳಲ್ಲಿಯೇ ರಾಜಕೀಯ ಮತ್ತು ಸೇನೆ ನಡುವಣ ಬಾಂಧವ್ಯದ ಬಗ್ಗೆ ಇತಿಹಾಸದ ಪುಟಗಳಲ್ಲಿ ವಿವರಗಳನ್ನು ದಾಖಲಿಸುವ ಪ್ರಯತ್ನಗಳು ನಡೆದಿದ್ದವು. ಸೇನಾ ಪಡೆಗಳು ಮತ್ತು ಅವರ ಕಮಾಂಡರ್‌ಗಳು ಯಾವುದೇ ತಪ್ಪು ಎಸಗಿಲ್ಲ. ಸೇನಾ ಹಿನ್ನಡೆ ಅಥವಾ ಯಶಸ್ಸು ಸಾಧಿಸದಿರುವುದರ ಹೊಣೆಗಾರಿಕೆಯನ್ನು ರಾಜಕಾರಣಿಗಳೇ ಹೊತ್ತುಕೊಂಡಿದ್ದಾರೆ. ಕೆಲ ಯಶಸ್ಸನ್ನೂ ರಾಜಕಾರಣಿಗಳು ತಮ್ಮದಾಗಿಸಿಕೊಂಡಿದ್ದಾರೆ. 1971ರ ಯುದ್ಧದ ಯಶಸ್ಸು ಇಂದಿರಾ ಗಾಂಧಿ ಅವರಿಗೆ ಸಂದಿದೆ. ಅಲ್ಲಿಂದಾಚೆಗೆ ಈ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧಕ್ಕೆ ಸೇನಾ ನಾಯಕತ್ವದ ವೈಫಲ್ಯ ಕಾರಣವೇ ಹೊರತು ವಾಜಪೇಯಿ ನೇತೃತ್ವದ ಸರ್ಕಾರ ಕಾರಣವಲ್ಲ. ಪಾಕಿಸ್ತಾನದ ಸೇನೆಯು ಭಾರತದ ಗಡಿ ಒಳಗೆ ಅಷ್ಟು ದೂರದವರೆಗೆ ಬಂದದ್ದು ಮತ್ತು ಗಡಿಯ ಮುಂಚೂಣಿಯಲ್ಲಿ ಕಂದಕ ತೋಡಿದ್ದು ಭಾರತದ ಸೇನೆಯ ಗಮನಕ್ಕೆ ಬರದೆ ಹೋಗಲು ಕಾರಣ ಏನು ಎನ್ನುವುದೂ ಸೇರಿದಂತೆ ಹಲವಾರು ಪ್ರಶ್ನೆಗಳು ಇಲ್ಲಿ ಕಾಡುತ್ತವೆ.

ಇದನ್ನು ನಾಗರಿಕ ಬೇಹುಗಾರಿಕೆಯ ವೈಫಲ್ಯ ಎಂದೂ ಬೊಟ್ಟು ಮಾಡಲಾಯಿತು. ಇದಕ್ಕೆ ಉತ್ತರ ನೀಡಲು ಸೇನೆಯ ಕೆಲವೇ ಕೆಲ ಪ್ರಮುಖರನ್ನು ಹೊಣೆಗಾರರನ್ನಾಗಿ ಮಾಡಲಾಯಿತು. ಕಾರ್ಗಿಲ್‌ ಯುದ್ಧದಲ್ಲಿ ಗೆಲುವು ಸಾಧಿಸಿದ್ದನ್ನು ಮತ್ತು ಸೇನಾಪಡೆಗಳ ಪರಾಕ್ರಮದ ಕಥೆಗಳನ್ನು ನಾವು ಈಗಲೂ ನೆನಪಿಸಿಕೊಳ್ಳುತ್ತೇವೆ.

ಸೇನಾಪಡೆಗಳು ಈಗ ಸಾಂಸ್ಥಿಕ ಸ್ವರೂಪ ಹೊಂದಿವೆ. ವೈಫಲ್ಯಗಳಿಗೆ ವೈಯಕ್ತಿಕ ನೆಲೆಯಲ್ಲಿ ಸೇನಾ ಮುಖಂಡರನ್ನು ದೂಷಿಸುವುದರಿಂದ ಇಡೀ ಸೇನಾಪಡೆಗಳಿಗೆ ಅಪಕೀರ್ತಿ ಬರುತ್ತದೆ. ರಾಜಕಾರಣಿಗಳು ಅಧಿಕಾರಕ್ಕೆ ಬರುತ್ತಾರೆ, ಹೋಗುತ್ತಾರೆ. ರಾಜಕಾರಣಿಗಳ ಪಾತ್ರಗಳು ನಿಯಮಿತವಾಗಿ ಬದಲಾಗುತ್ತಲೇ ಇರುತ್ತವೆ. ಅವರ ಪ್ರತಿಸ್ಪರ್ಧಿಗಳು ಅವರನ್ನು ನಿರಂತರವಾಗಿ ಟೀಕಿಸುತ್ತಲೇ ಇರುತ್ತಾರೆ.

ದೇಶದ ಇತಿಹಾಸದ ಈ ಮಹತ್ವದ ದಶಕಗಳಲ್ಲಿನ ಎಲ್ಲ ಆಗುಹೋಗುಗಳನ್ನು ಯೇಲ್‌ ವಿಶ್ವವಿದ್ಯಾಲದ ಪ್ರಾಧ್ಯಾಪಕ ಸ್ಟೀವನ್‌ ವಿಲ್ಕಿನ್ಸನ್‌ ಅವರು ‘ಆರ್ಮಿ ಆ್ಯಂಡ್‌ ನೇಷನ್‌; ದಿ ಮಿಲಿಟರಿ ಆ್ಯಂಡ್‌ ಇಂಡಿಯನ್‌ ಡೆಮಾಕ್ರಸಿ ಸಿನ್ಸ್‌ ಇಂಡಿಪೆಂಡೆನ್ಸ್‌’ ಗ್ರಂಥದಲ್ಲಿ ಸವಿವರವಾಗಿ ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ.

ನಾಗರಿಕ ಮತ್ತು ಸೇನಾ ವ್ಯವಸ್ಥೆಗಳ ಮಧ್ಯೆಮೂಡಿದ್ದ ಉದ್ವಿಗ್ನತೆಯನ್ನು ಅವರು ವಿವರಿಸಿರುವ ಪರಿ ಕಂಡು ಬಹುತೇಕ ಭಾರತೀಯರು ದಂಗಾಗುತ್ತಾರೆ. ಉದಾಹರಣೆಗೆ, ‘ಸೇನೆಯಲ್ಲಿನ ಪಂಜಾಬಿಗಳ ಪ್ರಾಬಲ್ಯ ಹೆಚ್ಚುತ್ತಿರುವುದು ಮತ್ತು ಅದನ್ನು ಇನ್ನಷ್ಟು ವಿಸ್ತರಿಸಲು ಅವರು ಹಮ್ಮಿಕೊಂಡಿದ್ದ ಕ್ರಮಗಳು ರಾಜಕಾರಣಿಗಳಲ್ಲಿ ತಳಮಳ ಮೂಡಿಸಿದ್ದವು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಅಂತಿಮವಾಗಿ ಬಾಬು ಜಗಜೀವನ್‌ ರಾಂ ಅವರು ರಾಜ್ಯಗಳ ಜನಸಂಖ್ಯೆ ಆಧರಿಸಿ ಸೇನಾ ನೇಮಕಾತಿಯಲ್ಲಿ ಮೀಸಲು ವ್ಯವಸ್ಥೆಯನ್ನು ಜಾರಿಗೆ ತರಬೇಕಾಯಿತು’ ಎಂದು ಅವರು ಬರೆದಿದ್ದಾರೆ.

ವಿಲ್ಕಿನ್ಸನ್‌ ಮತ್ತು ಇತರ ಇತಿಹಾಸ ನಿರೂಪಕರು ಇನ್ನೂ ಒಂದು ಸಂಗತಿಯನ್ನು ನಮ್ಮ ಮುಂದೆ ಇಡುತ್ತಾರೆ. ಕೃಷ್ಣ ಮೆನನ್‌ ಅವರ ವಿಲಕ್ಷಣ ವ್ಯಕ್ತಿತ್ವವು ಸೇನಾಪಡೆಗಳಿಗೆ ಮುಜುಗರ ಉಂಟು ಮಾಡಿದ ‌ಮತ್ತು 1962ರಲ್ಲಿನ ಸೋಲಿನ ನಂತರ ಭಾರತವು ತನ್ನ ಸೇನಾಪಡೆಗಳನ್ನು ಮರು ನಿರ್ಮಾಣ ಮಾಡಿದ್ದನ್ನೂ ಅವರು ದಾಖಲಿಸಿದ್ದಾರೆ.

ತೀಕ್ಷ್ಣಮತಿಗಳಾದ ಇಬ್ಬರು ರಕ್ಷಣಾ ಸಚಿವರಾದ ವೈ. ಬಿ. ಚವಾಣ್‌ ಮತ್ತು ಜಗಜೀವನ್‌ ರಾಂ ಅವರು 1962– 71ರ ಅವಧಿಯಲ್ಲಿ ಸೇನಾಪಡೆಗಳಿಗೆ ಬಲ ತುಂಬಿದ್ದರು. ಇವರಿಬ್ಬರೂ ಸೇನಾ ಮುಖ್ಯಸ್ಥರನ್ನು ತೆಗಳಿದ್ದು ಯಾವತ್ತೂ ಕೇಳಿ ಬಂದಿರಲಿಲ್ಲ. 1962ರ ಸೇನಾ ವೈಫಲ್ಯಕ್ಕೆ ಜನರಲ್‌ಗಳಾದ ಥಾಪರ್‌ ಮತ್ತು ಬಿ.ಎಂ. ಕೌಲ್‌ ಅವರನ್ನು ಹೊಣೆಗಾರರನ್ನಾಗಿಸಲು ಪ್ರಯತ್ನಿಸಲಾಗಿತ್ತು. ಆದರೆ ಅಂತಿಮವಾಗಿ ರಾಜಕಾರಣಿ ಕೃಷ್ಣ ಮೆನನ್‌ ಅವರನ್ನೇ ದೂಷಿಸಲಾಗಿತ್ತು.

1962ರ ಭಾರತ ಮತ್ತು ಚೀನಾ ಯುದ್ಧದ ಕುರಿತು ಸಿದ್ಧಪಡಿಸಿದ್ದ ಹೆಂಡರ್ಸನ್‌ ಬ್ರೂಕ್ಸ್‌– ಭಗತ್‌ ವರದಿಯನ್ನು ವೈ.ಬಿ. ಚವಾಣ್‌ ಅವರು ಸಂಸತ್ತಿಗೆ ಮಂಡಿಸದೆ ಗೋಪ್ಯವಾಗಿ ಇಟ್ಟರು. ಚೀನಾದ ರಹಸ್ಯಗಳನ್ನು ಒಳಗೊಂಡಿರುವ ಕಾರಣಕ್ಕೆ ಅದನ್ನು ಬಹಿರಂಗಪಡಿಸಲಿಲ್ಲ. ಸೇನೆಯ ಕಾರ್ಯಕ್ಷಮತೆ ಮತ್ತು ಸೇನಾ ನಾಯಕತ್ವದ ಬಗ್ಗೆ ವ್ಯಕ್ತವಾದ ಟೀಕೆಗಳಿಗೆ ಇದು ಸಂಬಂಧಿಸಿತ್ತು.

ಯುದ್ಧ ನಡೆದ ಐವತ್ತಾರು ವರ್ಷಗಳ ನಂತರವೂ ಈಗಲೂ ಅದರ ಗೋಪ್ಯತೆ ಕಾಯ್ದುಕೊಳ್ಳಲಾಗಿದೆ. ತೀವ್ರ ರಾಷ್ಟ್ರೀಯತೆಯ ಅಂಗವಾಗಿರುವ ಈ ವಿವರಗಳಿಗೆ ದಶಕಗಳ ಇತಿಹಾಸದಲ್ಲಿ ಇನ್ನಷ್ಟು ರೋಚಕತೆಯ ಸ್ಪರ್ಶ ನೀಡುತ್ತ ಬರಲಾಗಿದೆ. ‘ಸೇನಾ ಮುಖ್ಯಸ್ಥರು ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತ ಬಂದಿದ್ದಾರೆ. ಆದರೆ, ರಾಜಕಾರಣಿಗಳು ಅವರ ಕಾರ್ಯಕ್ಕೆ ಅಡ್ಡಿಪಡಿಸುತ್ತ ಬಂದಿದ್ದಾರೆ’ ಎಂದು ಹೇಳುತ್ತಲೇ ಬರಲಾಗಿದೆ.

ಆ ವಾದ ಸರಣಿಯ ಸಾರಾಂಶ ಏನೆಂದರೆ, ‘ಕಾರಿಯಪ್ಪ, ತಿಮ್ಮಯ್ಯ, ಚೌಧರಿ ಮತ್ತು ಮಾಣಿಕ್‌ ಶಾ ಅವರಿಗೆ ಸೇನಾ ಕಾರ್ಯಾಚರಣೆ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರೆ, ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಇರುತ್ತಿರಲಿಲ್ಲ, ಚೀನಿಯರಿಗೆ ಪಾಠ ಕಲಿಸಿ ಟಿಬೆಟ್‌ಗೆ ಸ್ವಾತಂತ್ರ್ಯ ನೀಡಬಹುದಾಗಿತ್ತು. 1965ರಲ್ಲಿ ಪಾಕ್‌ ಪಡೆಗಳನ್ನು ಸಂಪೂರ್ಣವಾಗಿ ಸದೆಬಡಿಯಬಹುದಾಗಿತ್ತು.

1971ರಲ್ಲಿ ಬಾಂಗ್ಲಾದೇಶದಲ್ಲಿನ ಸಮರ ಕೊನೆಗೊಂಡ ನಂತರ ಇನ್ನೂ ಹದಿನೈದು ದಿನಗಳ ಕಾಲ ಯುದ್ಧ ಮುಂದುವರೆಸಿದ್ದರೆ ಪಶ್ಚಿಮ ಪಾಕಿಸ್ತಾನವನ್ನೂ ಸುಲಭವಾಗಿ ವಶಪಡಿಸಿಕೊಳ್ಳಬಹುದಾಗಿತ್ತು...’ ಎಂದೆಲ್ಲ ಹೇಳುತ್ತ ಬರಲಾಗಿದೆ.

ಹೊಸದಾಗಿ ಜನ್ಮತಳೆದ ಪ್ರಜಾಪ್ರಭುತ್ವ ದೇಶದಲ್ಲಿ ‘ನನ್ನ ಸೇನೆ ಅತ್ಯಂತ ಬಲಿಷ್ಠವಾಗಿದೆ’ ಎನ್ನುವ ಭಾವನೆ ಮೂಡಿಸುವುದು ಅಗತ್ಯವಾಗಿರುತ್ತದೆ.

ಸೈನಿಕರನ್ನು ಅಧಿಕಾರದಿಂದ ದೂರ ಇಡುವುದೂ ಮುಖ್ಯವಾಗಿರುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತದಲ್ಲಿ ಈ ವಾದಸರಣಿಯನ್ನು ಇನ್ನಷ್ಟು ಬಲಗೊಳಿಸಲಾಗುತ್ತಿದೆ. ಆರೆಸ್ಸೆಸ್‌ ದೃಷ್ಟಿಕೋನದಲ್ಲಿ, ಕಾರಿಯಪ್ಪ, ತಿಮ್ಮಯ್ಯ ಮತ್ತು ಚೌಧರಿ ಅವರು ಅಂದಿನ ಪ್ರಧಾನಿಗಳಲ್ಲಿ ತಮಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಗೋಗರೆದಿದ್ದರು. ಆದರೆ, ಗಾಂಧಿ– ನೆಹರೂ ಇದಕ್ಕೆ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದರು. ಇನ್ನೂ ಕೆಟ್ಟದಾಗಿ ಹೇಳಬೇಕೆಂದರೆ, ಅವರೆಲ್ಲ ವಿದೇಶಿ ಶಕ್ತಿಗಳ ಜತೆ ಕೈಜೋಡಿಸಿದ್ದರು. ಆದರೆ, ಇಲ್ಲೊಂದು ಅಪವಾದ ಇದೆ. 1965ರಲ್ಲಿ ಅಧಿಕಾರದಲ್ಲಿದ್ದ ಲಾಲ್‌ ಬಹಾದ್ದೂರ್ ಶಾಸ್ತ್ರಿ ಅವರನ್ನು ಆರೆಸ್ಸೆಸ್‌ ದೈವೀಕರಿಸಿತ್ತು.

ಆರೆಸ್ಸೆಸ್‌ ಸಿದ್ಧಾಂತದಿಂದ ಪ್ರಭಾವಿತರಾದ ಪ್ರತಿಯೊಬ್ಬರಿಂದಲೂ, ನೀವು ಇದೇ ಬಗೆಯ ವಾದವನ್ನು ಆಲಿಸುವಿರಿ. ಆ ಪ್ರಕ್ರಿಯೆಯಲ್ಲಿ ಕಾಲಾನುಕ್ರಮದ ಘಟನಾವಳಿಗಳು, ಹೆಸರುಗಳು ಮತ್ತು ಕಾಲಾವಧಿ ಬಗ್ಗೆಯೂ ತಪ್ಪು ಹೇಳಿಕೆ ನೀಡುವ ಸಾಧ್ಯತೆ ಇದ್ದೇ ಇರುತ್ತದೆ. ನರೇಂದ್ರ ಮೋದಿ ಅವರೂ ಅಂಥವರ ಸಾಲಿಗೆ ಸೇರಿದ್ದಾರೆ. ಇದೇ ಕಾರಣಕ್ಕೆ ಅವರು ಮತ್ತು ಅವರ ಸಹಾಯಕರು ತಪ್ಪು ಮಾಹಿತಿ ನೀಡಿದ್ದಾರೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT