ಶುಕ್ರವಾರ, ಮಾರ್ಚ್ 5, 2021
29 °C
ಜನಾಂಗೀಯ ದಾಳಿ ಆರೋಪಿ ಆ್ಯಡಂಗೆ ಪೆರೋಲ್‌ ನೀಡಲು ನಿರ್ಬಂಧ

ಕೂಚಿಬೊಟ್ಲ ಹಂತಕನಿಗೆ ಜೀವಾವಧಿ ಶಿಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೂಚಿಬೊಟ್ಲ ಹಂತಕನಿಗೆ ಜೀವಾವಧಿ ಶಿಕ್ಷೆ

ವಾಷಿಂಗ್ಟನ್‌: ಭಾರತ ಸಂಜಾತ ಎಂಜಿನಿಯರ್‌ ಶ್ರೀನಿವಾಸ ಕೂಚಿಬೊಟ್ಲ ಅವರನ್ನು ಹತ್ಯೆ ಮಾಡಿದ್ದ ಆರೋಪಿ ಆ್ಯಡಂ ಪ್ಯುರಿಂಟನ್‌ಗೆ (52) ಶನಿವಾರ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಅವಧಿ 78 ವರ್ಷವಾಗಿದ್ದು, ಆ್ಯಡಂಗೆ 100 ವರ್ಷ ಆಗುವವರೆಗೂ ಪೆರೋಲ್‌ ನೀಡಲು ನಿರ್ಬಂಧವಿದೆ.

2017ರ ಫೆಬ್ರುವರಿ 22ರಂದು ಕಾನ್ಸಸ್‌ನ ಬಾರ್‌ವೊಂದರ ಸಮೀಪ ಕೂಚಿಬೊಟ್ಲ ಮತ್ತು ಅವರ ಸ್ನೇಹಿತ ಅಲೋಕ್ ಮದಸಾನಿ ಮೇಲೆ ಆ್ಯಡಂ ಗುಂಡಿನ ದಾಳಿ ನಡೆಸಿದ್ದ. ತನ್ನನ್ನು ಬೆನ್ನಟ್ಟಿದ್ದವನ ಮೇಲೂ ಆ್ಯಡಂ ಗುಂಡಿನ ದಾಳಿ ನಡೆಸಿದ್ದ.

ಈ ದಾಳಿಯಿಂದಾಗಿ ಕೂಚಿಬೊಟ್ಲ ಮೃತಪಟ್ಟು, ಅಲೋಕ್ ಹಾಗೂ ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು.

ಆ್ಯಡಂ ಈ ಗುಂಡಿನ ದಾಳಿ ಮಾಡುವ ಮುನ್ನ ‘ನನ್ನ ದೇಶ ಬಿಟ್ಟು ತೊಲಗು’ ಎಂದಿದ್ದ.

ಈ ಕುರಿತು ಕಳೆದ ವರ್ಷದ ಜೂನ್‌ನಲ್ಲಿ ಅಮೆರಿಕದ ಅಟಾರ್ನಿ ಕಚೇರಿ ಆ್ಯಡಂ ವಿರುದ್ಧ ದೂರು ದಾಖಲಿಸಿತ್ತು. ಇದರ ವಿಚಾರಣೆ ಫೆಡರಲ್ ಕೋರ್ಟ್‌ನಲ್ಲಿ ಇನ್ನೂ ಬಾಕಿಯಿದೆ.

ಕೂಚಿಬೊಟ್ಲ ಅವರ ಪತ್ನಿ ಸುನಯನಾ ದುಮಾಲ, ಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದಾರೆ. ‘ಆರೋಪಿಗೆ ಶಿಕ್ಷೆ ವಿಧಿಸಿರುವುದು ನನ್ನ ಗಂಡನನ್ನು ವಾಪಸ್‌ ನೀಡುವುದಿಲ್ಲ. ಆದರೆ ದ್ವೇಷವನ್ನು ಎಂದಿಗೂ ಒಪ್ಪಿಕೊಳ್ಳಲಾಗದು ಎಂಬ ಕಠಿಣ ಸಂದೇಶವನ್ನು ಸಾರಿದೆ’ ಎಂದು  ಪ್ರತಿಕ್ರಿಯಿಸಿದ್ದಾರೆ.

‘ಆರೋಪಿಗೆ ಶಿಕ್ಷೆ ವಿಧಿಸಲು ಶ್ರಮಿಸಿದ ಜಿಲ್ಲಾ ಅಟಾರ್ನಿ ಕಚೇರಿ ಮತ್ತು ಒಲೇಥ್‌ನ ಪೊಲೀಸರಿಗೆ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ’ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಹೈದರಾಬಾದ್‌ನವರಾದ ಕೂಚಿಬೊಟ್ಲ, ಜವಾಹರಲಾಲ್‌ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಟಿಯು) ಪದವಿ ಅಧ್ಯಯನ ಮಾಡಿದ್ದರು.

ನಂತರ ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಲ್ಲಿಯ ಜಿಪಿಎಸ್‌ ತಯಾರಿಕಾ ಕಂಪೆನಿ ‘ಗಾರ್ಮಿನ್‌’ನಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.