ಭಾನುವಾರ, ಮಾರ್ಚ್ 7, 2021
19 °C
ಕೊಹ್ಲಿ ಪಡೆಯನ್ನು ಕಟ್ಟಿ ಹಾಕಿದ ಸ್ಪಿನ್‌ ಜೋಡಿ ರವೀಂದ್ರ ಜಡೇಜ, ಹರಭಜನ್ ಸಿಂಗ್

ಮತ್ತೆ ಚೆನ್ನೈಗೆ ಮಣಿದ ಆರ್‌ಸಿಬಿ

ಪಿಟಿಐ Updated:

ಅಕ್ಷರ ಗಾತ್ರ : | |

ಮತ್ತೆ ಚೆನ್ನೈಗೆ ಮಣಿದ ಆರ್‌ಸಿಬಿ

ಪುಣೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡಕ್ಕೆ ಮತ್ತೊಮ್ಮೆ ಮಣಿಯಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಆರು ವಿಕೆಟ್‌ಗಳಿಂದ ಗೆದ್ದಿತು.

ಆರ್‌ಸಿಬಿ, ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲೂ ಸಿಎಸ್‌ಕೆ ಎದುರು ಸೋತಿತ್ತು.

ಶನಿವಾರ 128 ರನ್‌ಗಳ ಸಾಧಾರಣ ಗುರಿಯನ್ನು ಸಿಎಸ್‌ಕೆ 18 ಓವರ್‌ಗಳಲ್ಲಿ ಯಶಸ್ವಿಯಾಗಿ ಮುಟ್ಟಿತು.

ತಂಡದ ಮೊತ್ತ 18 ರನ್‌ಗಳಾಗಿದ್ದಾಗ ಸ್ಫೋಟಕ ಬ್ಯಾಟ್ಸ್‌ಮನ್‌ ಶೇನ್ ವಾಟ್ಸನ್ ಅವರನ್ನು ವೇಗಿ ಉಮೇಶ್ ಯಾದವ್ ಬೌಲ್ಡ್‌ ಮಾಡಿದರು.

ಅಂಬಟಿ ರಾಯುಡು ಜೊತೆಗೂಡಿದ ಸುರೇಶ್‌ ರೈನಾ ಎರಡನೇ ವಿಕೆಟ್‌ಗೆ 44 ರನ್‌ ಸೇರಿಸಿದರು.

ಬೌಂಡರಿ ಗೆರೆ ಬಳಿ ಟಿಮ್ ಸೌಥಿ ಪಡೆದ ಮೋಹಕ ಕ್ಯಾಚ್‌ಗೆ ರೈನಾ ಔಟಾದರು. 12ನೇ ಓವರ್‌ನಲ್ಲಿ ರಾಯುಡು ಕೂಡ ಮರಳಿದರು. ಧ್ರುವ ಶೋರೆ ಎರಡಂಕಿ ಮೊತ್ತ ಗಳಿಸಲಾಗದೆ ವಾಪಸಾದರು.

ಆದರೆ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಡ್ವೇನ್‌ ಬ್ರಾವೊ ಮುರಿಯದ ಐದನೇ ವಿಕೆಟ್‌ಗೆ 48 ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೋಡಿ ಮಾಡಿದ ಸ್ಪಿನ್‌ ಜೋಡಿ: ಟಾಸ್ ಗೆದ್ದ ಸಿಎಸ್‌ಕೆ ನಾಯಕ ದೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎರಡನೇ ಓವರ್‌ನಲ್ಲೇ ವಿಕೆಟ್ ಕಬಳಿಸಿದ ಲುಂಗಿ ಗಿಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಸ್ಫೋಟಕ ಬ್ಯಾಟ್ಸ್‌ಮನ್‌ ಬ್ರೆಂಡನ್ ಮೆಕ್ಲಮ್‌ ಕೇವಲ ಐದು ರನ್ ಗಳಿಸಿ ಔಟಾದಾಗ ತಂಡದ ಖಾತೆಯಲ್ಲಿದ್ದದ್ದು ಒಂಬತ್ತು ರನ್ ಮಾತ್ರ.

ನಂತರ ಎಡಗೈ ಮತ್ತು ಆಫ್‌ ಸ್ಪಿನ್ ಜೋಡಿ ರವೀಂದ್ರ ಜಡೇಜ ಹಾಗೂ ಹರಭಜನ್ ಸಿಂಗ್‌ ಆರ್‌ಸಿಬಿಗೆ ನಿರಂತರ ಪೆಟ್ಟು ನೀಡಿದರು. ವಿರಾಟ್ ಕೊಹ್ಲಿ ಏಳನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಪಾರ್ಥಿವ್ ಪಟೇಲ್ ಜೊತೆ ಎರಡನೇ ವಿಕೆಟ್‌ಗೆ 36 ರನ್‌ ಸೇರಿಸಿದ ಅವರನ್ನು ಜಡೇಜ ಬೌಲ್ಡ್ ಮಾಡಿದರು. ನೇರ ಎಸೆತವನ್ನು ಡ್ರೈವ್ ಮಾಡಲು ಪ್ರಯತ್ನಿಸಿದ ಕೊಹ್ಲಿ ಎಡವಿದರು. ಚೆಂಡು ಆಫ್ ಸ್ಪಂಪ್‌ಗೆ ಬಡಿದಾಗ ಆರ್‌ಸಿಬಿ ಅಭಿಮಾನಿಗಳು ಸ್ಥಬ್ದರಾದರು.

ಸ್ಪೋಟಿಸಿದ ಪಾರ್ಥಿವ್‌– ಟಿಮ್‌ ಸೌಥಿ: ಕೊಹ್ಲಿ ವಾಪಸಾದ ನಂತರ ಬ್ಯಾಟ್ಸ್‌ಮನ್‌ಗಳು ಡಗ್ಔಟ್ ಕಡೆಗೆ ಪರೇಡ್ ನಡೆಸಿದರು.

ಏಳನೇ ಕ್ರಮಾಂಕದವರೆಗಿನ ಬ್ಯಾಟ್ಸ್‌ ಮನ್‌ಗಳು ಎರಡಂಕಿ ತಲುಪಲಾಗದೆ ಔಟಾದರು.

ಆದರೆ ಪಾರ್ಥಿವ್ ಪಟೇಲ್ (53; 41 ಎ; 2 ಸಿ, 5 ಬೌಂ) ಏಕಾಂಗಿ ಹೋರಾಟ ನಡೆಸಿ ತಂಡವನ್ನು ಮೂರಂಕಿ ಮೊತ್ತದ ಸಮೀಪ ತಲುಪಿಸಿದರು. 13ನೇ ಓವರ್‌ನಲ್ಲಿ ತಮ್ಮದೇ ಬೌಲಿಂಗ್‌ನಲ್ಲಿ ಸುಲಭ ಕ್ಯಾಚ್ ಪಡೆದು ಅವರನ್ನು ಜಡೇಜ ಔಟ್ ಮಾಡಿದರು.

ನಂತರ ಟಿಮ್‌ ಸೌಥಿ ಮಿಂಚಿದರು. 26 ಎಸೆತಗಳಲ್ಲಿ 36 ರನ್‌ ಗಳಿಸಿದ ಅವರು ಒಂದು ಸಿಕ್ಸರ್ ಮತ್ತು ಮೂರು ಬೌಂಡರಿ ಸಿಡಿಸಿದರು. ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ನೂರರ ಗಡಿ ದಾಟಿತು.

**

ಟಿಮ್ ಸೌಥಿ ಜಾದೂ

ಆರ್‌ಸಿಬಿ ಸವಾಲಿನ ಮೊತ್ತ ಗಳಿಸಲು ನೆರವಾದ ನ್ಯೂಜಿಲೆಂಡ್‌ನ ವೇಗದ ಬೌಲರ್‌ ಟಿಮ್ ಸೌಥಿ ಫೀಲ್ಡಿಂಗ್‌ನಲ್ಲೂ ಮಿಂಚಿದರು. ವೇಗಿ ಉಮೇಶ್ ಯಾದವ್ ಹಾಕಿದ ಒಂಬತ್ತನೇ ಓವರ್‌ನಲ್ಲಿ ಅವರು ಬೌಂಡರಿ ಗೆರೆ ಬಳಿ ಜಾದೂ ಮಾಡಿದರು.

ಓವರ್‌ನ ನಾಲ್ಕನೇ ಎಸೆತವನ್ನು ಪುಲ್ ಮಾಡಲು ಪ್ರಯತ್ನಿಸಿದ ರೈನಾ ಎಡವಿದರು. ಚೆಂಡು ಲಾಂಗ್ ಆನ್ ಬೌಂಡರಿಯತ್ತ ಚಿಮ್ಮಿತು. ಬೌಂಡರಿ ಗೆರೆ ಬಳಿ ಹಿಂದಕ್ಕೆ ಬಾಗಿ ಚೆಂಡನ್ನು ಹಿಡಿತಕ್ಕೆ ಪಡೆದುಕೊಂಡ ಸೌಥಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಚೆಂಡನ್ನು ಮೇಲೆ ಎಸೆದು ಬೌಂಡರಿ ಗೆರೆಯಿಂದ ಹೊರಗೆ ಹೋಗಿ ವಾಪಸ್ ಬಂದು ಮತ್ತೆ ಹಿಡಿದರು. ಪರಿಶೀಲನೆ ನಡೆಸಿದ ಮೂರನೇ ಅಂಪೈರ್‌ ಔಟ್‌ ಎಂದು ಘೋಷಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.