ಶನಿವಾರ, ಫೆಬ್ರವರಿ 27, 2021
31 °C
ವಿಜಯನಗರದಲ್ಲಿ ವಸತಿ ಸಚಿವ ಎಂ.ಕೃಷ್ಣಪ್ಪ ಪಾದಯಾತ್ರೆ

ಮತಯಾಚನೆಗೆ ಜನಜಾತ್ರೆ

ಪಿ. ವಿ. ಪ್ರವೀಣ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಮತಯಾಚನೆಗೆ ಜನಜಾತ್ರೆ

ಬೆಂಗಳೂರು: ಬೆಂಬಲಿಗರ ದೊಡ್ಡ ಬಳಗದೊಂದಿಗೆ ಶನಿವಾರ ಚುನಾವಣಾ ಪ್ರಚಾರಕ್ಕೆ ತೆರಳಿದ ವಸತಿ ಸಚಿವ ಎ.ಕೃಷ್ಣಪ್ಪ ಅವರಿಗೆ ಹಲವೆಡೆ ಹಾರ– ತುರಾಯಿಗಳ ಅದ್ಧೂರಿ ಸ್ವಾಗತ ಸಿಕ್ಕಿತು. ಮೂಲಸೌಕರ್ಯ ಸಮಸ್ಯೆಗಳಿರುವ ಕಡೆ ಜನರ ಕೋಪದ ದರ್ಶನವೂ ಆಯಿತು.

ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕೃಷ್ಣಪ್ಪ ಪ್ರಚಾರಕ್ಕೆ ಹೊರಡಲು ಬೆಳಿಗ್ಗೆ 7 ಗಂಟೆಗೇ ಸಜ್ಜಾಗಿದ್ದರು. ಆದರೆ, ಮನೆಯಲ್ಲಿ ಅದಾ

ಗಲೇ ಅನೇಕರು ಅವರ ಭೇಟಿಗಾಗಿ ಕಾಯುತ್ತಿದ್ದರು. ಅವರನ್ನೆಲ್ಲ ಮಾತನಾಡಿಸಿ, ಮನೆಯಿಂದ ಬೆಂಜ್‌ ಕಾರಿನಲ್ಲಿ ಹೊರಬೀಳುವಾಗ ಬೆಳಿಗ್ಗೆ 8.45 ಆಗಿತ್ತು. ಬಾಪೂಜಿನಗರ ವಾರ್ಡ್‌ನ ಹೊಸಗುಡ್ಡದಹಳ್ಳಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬೆಳಿಗ್ಗೆ 9 ಗಂಟೆಗೆ ಅಲ್ಲಿಂದಲೇ ಪಾದಯಾತ್ರೆ ಆರಂಭಿಸಿದರು.

ಪುಷ್ಪವೃಷ್ಟಿ:  ಕೈ ಮುಗಿದು ಮತ ಕೇಳುತ್ತಾ ಹೋಗುವಾಗ ಅಭಿಮಾನಿಗಳು ಪುಷ್ಪವೃಷ್ಟಿಗರೆದರು. ಕಾರ್ಯಕರ್ತರ ಜೈಕಾರದೊಂದಿಗೆ ಸಾಗುತ್ತಿದ್ದ ಅವರಿಗೆ ಹೊಸಗುಡ್ಡದಹಳ್ಳಿಯ ಬೀದಿಗಳಲ್ಲಿ ಸಮಸ್ಯೆಗಳ ದರ್ಶನವೂ ಆಯಿತು. ಕೆಲವೆಡೆ ಕಸದ ರಾಶಿ ಹಾಗೆಯೇ ಇತ್ತು. ರಾಜಕಾಲುವೆ ಸೆರಗಿನಲ್ಲಿರುವ ಮನೆಗಳ ಬಳಿ ಒಳಚರಂಡಿ ಕಟ್ಟಿಕೊಂಡಿತ್ತು. ಇದು ಕೆಲವು ಮತದಾರರಲ್ಲಿ ಆಕ್ರೋಶ ಮಡುಗಟ್ಟಲು ಕಾರಣವಾಗಿತ್ತು.

‘ಒಳಚರಂಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದೀರಿ. ಇನ್ನೂ ಹಾಗೆಯೇ ಇದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುತ್ತೀರಿ’ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸದಸ್ಯ ಅಜ್ಮಲ್‌ ಬೇಗ್‌ಗೆ ಸಚಿವರು ಸೂಚಿಸಿದರು. ಆ ಬಳಿಕವೂ ಮಹಿಳೆಯರು ಸುಮ್ಮನಾಗದಿದ್ದಾಗ, ‘ಸ್ವಲ್ಪ ಕೇಳ್ರಮ್ಮಾ ಇಲ್ಲಿ. ಇಷ್ಟೊಂದು ಸಮಸ್ಯೆ ಇರುವುದು ಗೊತ್ತಿರಲಿಲ್ಲ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಲ್ಪಿಸುತ್ತೇವೆ. ಬಗೆಹರಿಯದಿದ್ದರೆ ನನಗೆ ಕರೆ ಮಾಡಿ’ ಎಂದು ತಮ್ಮ ವಿಸಿಟಿಂಗ್‌ ಕಾರ್ಡ್‌ ನೀಡಿದರು.

‘ಕಾವೇರಿ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ಇನ್ನೊಂದು ಬೀದಿಯ ಮಹಿಳೆಯರು ಅಳಲು ತೋಡಿಕೊಂಡರು. ಅವರನ್ನು ಸಮಾಧಾನಪ

ಡಿಸಿದ ಸಚಿವರು, ‘ಎತ್ತರದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ಇದಕ್ಕೆ ಏನಾದರೂ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಮಹಿಳೆಯೊಬ್ಬರಿಗೆ ಸಚಿವರ ಬಳಿ ಮಾತನಾಡಬೇಕಿತ್ತು. ಜನಜಂಗುಳಿಯನ್ನು ನೋಡಿ ಹಿಂದೇಟು ಹಾಕಿದ ಅವರು, ಕರಪತ್ರ ನೀಡಲು ಬಂದ ಕಾರ್ಯಕರ್ತೆಯನ್ನು ಮನೆಯೊಳಗೆ ಕರೆದು ಸಮಸ್ಯೆ ಹೇಳಿಕೊಂಡರು.

‘20 ವರ್ಷಗಳಿಂದ ಬಾಡಿಗೆ ಆಟೊರಿಕ್ಷಾ ಓಡಿಸುತ್ತಿರುವ ನನ್ನ ಯಜಮಾನರಿಗೆ ಸ್ವಂತ ರಿಕ್ಷಾ ಖರೀದಿಸಲು ನೆರವು ಸಿಗುತ್ತದೆಯೇ ಎಂದು ಕೇಳಬೇ

ಕಿತ್ತು. ಆದರೆ, ಇಷ್ಟೊಂದು ಜನರ ನಡುವೆ ಕೇಳುವುದು ಹೇಗೆ’ ಎಂದು ಅಳುಕುತ್ತಲೇ ಕೇಳಿದರು. ಕೃಷ್ಣಪ್ಪ ಅವರನ್ನು ಮನೆಯಲ್ಲೇ ಭೇಟಿಯಾಗು

ವಂತೆ ಕಾರ್ಯಕರ್ತೆ ಸಲಹೆ ನೀಡಿದರು.

ಸತತ ಎರಡು ಗಂಟೆ ನಡೆಯುತ್ತಲೇ ಮತ ಯಾಚಿಸಿದ ಅವರು ಬಳಿಕ ಪಕ್ಷದ ಸ್ಥಳೀಯ ಮುಖಂಡರೊಬ್ಬರ ಮನೆಯಲ್ಲಿ ಲಘು ಉಪಾಹಾರ ಸೇವಿಸಿ ದಣಿವಾರಿಸಿಕೊಂಡರು. ಈ ಅಲ್ಪವಿರಾಮದ ನಡುವೆ ಕೆಲವು ಮುಖಂಡರಿಗೆ ಕರೆ ಮಾಡಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ವಿವರಿಸಿದರು. ಅಭಿಮಾನಿಗಳ ಜೊತೆ ಫೋಟೊಗೆ ಫೋಸು ನೀಡಿದರು.

ಅಲ್ಲಿಂದ ಮಲೆಮಹಾದೇಶ್ವರ ದೇವರ ಗುಡಿಗೆ ಹೋಗಿ ನಮಿಸಿದರು. ಬಳಿಕ ಬಿಜೆಪಿ ಮುಖಂಡ ವಿ.ಸೋಮಣ್ಣ ಅವರ ಸಮೀಪದ ಸಂಬಂಧಿಯೊಬ್ಬರ ಮನೆಗೂ ತೆರಳಿ 10 ನಿಮಿಷ ಕಳೆದರು.

ಬೆಳಿಗ್ಗೆ ಬೆರಳೆಣಿಕೆಯಷ್ಟಿದ್ದ ಬೆಂಬಲಿಗರ ಸಾಲು ಮಧ್ಯಾಹ್ನವಾಗುವಷ್ಟರಲ್ಲಿ ಆಂಜನೇಯನ ಬಾಲದಂತೆ ಬೆಳೆದಿತ್ತು. ನೆಚ್ಚಿನ ನಾಯಕನ ಪರ ಘೋಷಣೆ ಕೂಗಲು ಬೆಂಬಲಿಗ ಹುಡುಗರ ನಡುವೆ ಪೈಪೋಟಿ ಏರ್ಪಟ್ಟಿತ್ತು. ‘ಈ ಸಲವೂ ಕಪ್‌ ನಮ್ದೆ’ ಎಂದು ಕೆಲವು ಚಿಗುರು ಮೀಸೆ ಹುಡುಗರು ಆಡಿಕೊಳ್ಳುತ್ತಿದ್ದರು.

ಆರತಿ ಎತ್ತಿದರು, ಸನ್ಮಾನ ಮಾಡಿದರು!

ಕೆಲವು ವಠಾರಗಳಲ್ಲಿ ಮಹಿಳೆಯರು ಕೃಷ್ಣಪ್ಪ ಅವರಿಗೆ ವೀಳ್ಯದೆಲೆಯಲ್ಲಿ ಕರ್ಪೂರವಿಟ್ಟು ಆರತಿ ಎತ್ತಿದರು. ಕೆನ್ನೀರಿನಿಂದ ದೃಷ್ಟಿ ತೆಗೆದರು. ಕೆಲ ಅಭಿಮಾನಿಗಳು ಹಾರ ಹಾಕಿ ಬರಮಾಡಿಕೊಂಡರು. ಹಲವು ಮತದಾರರು ಶಾಲು ಹೊದಿಸಿ ಸನ್ಮಾನ ಮಾಡಿದರು. ಕೆಲವೆಡೆ ಬೆಂಬಲಿಗರು  ಪಟಾಕಿ ಸಿಡಿಸಿ ಬರಮಾಡಿಕೊಂಡರು.

‘ಅಜ್ಮಲ್‌ ಬೇಗ್‌ ಯಾರು?’

ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡ ಸ್ಥಳೀಯರೊಬ್ಬರು, ‘ನಾವು ಇಲ್ಲಿನ ಪಾಲಿಕೆ ಸದಸ್ಯ ಅಜ್ಮಲ್‌ ಬೇಗ್‌ ಅವರನ್ನು ಭೇಟಿಯಾಗಿ ಎರಡೆರಡು ಬಾರಿ ದೂರು ಕೊಟ್ಟಿದ್ದೇವೆ. ನೀವು ಮತ ನೀಡಿಲ್ಲ ಎಂದು ಅವರು ನಮ್ಮನ್ನು ಹಿಂದಕ್ಕೆ ಕಳುಹಿಸಿದರು’ ಎಂದು ದೂರಿದರು.

‘ಯಾರ್ರೀ ಅವರು ಅಜ್ಮಲ್‌ ಬೇಗ್‌’ ಎಂದು ಸಚಿವರು ಏರುಧ್ವನಿಯಲ್ಲಿ ಕೂಗುವಾಗ ಪಕ್ಕದಲ್ಲೇ ಇದ್ದ ಬೇಗ್‌ ಅರೆಕ್ಷಣ ಅವಾಕ್ಕಾದರು.

ಬಳಿಕ, ಸಚಿವರು, ಬೇಗ್‌ ಅವರನ್ನು ತೋರಿಸಿ ‘ಇವರು ಯಾರು ಗೊತ್ತಾ’ ಎಂದು ಸ್ಥಳೀಯರಲ್ಲಿ  ಪ್ರಶ್ನಿಸಿದರು.

‘ಗೊತ್ತಿಲ್ಲ’ ಎಂಬ ಉತ್ತರ ಬಂತು.

‘ಇವರೇ ಅಜ್ಮಲ್‌ ಬೇಗ್‌. ನೀವು ಬೇರೆ ಯಾರದೋ ಬಳಿ ದೂರು ಕೊಟ್ಟಿರಬೇಕು. ಮತ ನೀಡಿಲ್ಲ ಎಂಬ ಕಾರಣಕ್ಕೆ ಯಾರೂ ಕೆಲಸ ಮಾಡಿಕೊಡದೇ ಇರುವುದಿಲ್ಲ. ಸುಮ್ಮನೆ ಆರೋಪ ಮಾಡಬೇಡಿ. ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ’ ಎಂದರು.

ವ್ಯಾಯಾಮಕ್ಕೆ ಪುರುಸೊತ್ತೆಲ್ಲಿಂದ?

ಬೆಳಿಗ್ಗೆ 6.30ಕ್ಕೆ ಏಳುತ್ತೇನೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಚುನಾವಣಾ ಪ್ರಚಾರ ನಡೆಸಿ ಮನೆಗೆ ಮರಳುತ್ತೇನೆ. ಸಂಜೆ 4 ಗಂಟೆವರೆಗೆ ಮನೆಯಲ್ಲೇ ಇರುತ್ತೇನೆ. ಈ ಅವಧಿಯಲ್ಲಿ ಕೆಲವು ಮುಖಂಡರನ್ನು ಭೇಟಿಯಾಗುತ್ತೇನೆ. ಸಂಜೆ 4ರಿಂದ ರಾತ್ರಿ 10 ಗಂಟೆವರೆಗೂ ಮತ್ತೆ ಪ್ರಚಾರ ನಡೆಸುತ್ತೇನೆ.  ನಂತರ ರಾತ್ರಿ 11ರವರೆಗೂ ಕೆಲವು ನಾಯಕರನ್ನು ಭೇಟಿಯಾಗುತ್ತೇನೆ ಎಂದು ಕೃಷ್ಣಪ್ಪ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ದಿನಚರಿ ಬದಲಾಗಿಲ್ಲ. ಯೋಗ ವ್ಯಾಯಾಮ ಮಾಡಲು ಸಮಯವೇ ಸಿಗುವುದಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.