ಮನೆಬಾಗಿಲಲ್ಲಿ ಶಾಸಕ; ಮತದಾರರ ಮಂದಹಾಸ

7
ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ; ಮತದಾರರೊಂದಿಗೆ ಮನದಾಳ ಹಂಚಿಕೊಂಡ ಪಟ್ಟಣ

ಮನೆಬಾಗಿಲಲ್ಲಿ ಶಾಸಕ; ಮತದಾರರ ಮಂದಹಾಸ

Published:
Updated:

ಬೆಳಗಾವಿ: ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅಶೋಕ ಪಟ್ಟಣ ಅವರು ಶನಿವಾರ ಹಲವು ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ತಮ್ಮ ಮನೆ ಬಾಗಿಲಿಗೆ ಶಾಸಕರು ಬಂದಿರುವುದನ್ನು ನೋಡಿದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಕಂಡುಬಂದಿತು.

ಬೆಳಿಗ್ಗೆ 8 ಗಂಟೆಗೆ ರಾಮದುರ್ಗದ ಮುಖ್ಯ ಮಾರ್ಕೆಟ್‌ನಲ್ಲಿರುವ ತಮ್ಮ ಮನೆಯಿಂದ ಹೊರಬಿದ್ದ ಶಾಸಕರು, ಪ್ರಚಾರ ಆರಂಭಿಸಿದ್ದರು. ಅವರ ಜೊತೆ ಪಕ್ಷದ ಮುಖಂಡರಾದ ಪರಪ್ಪಣ್ಣ ಜಂಗವಾಡ, ಕಲ್ಲಪ್ಪಣ್ಣ, ಬಾಬಣ್ಣ ಫತ್ತೆಪುರ, ಕೊಂಗವಾಡ, ಪುಂಡಲೀಕ ಹಳ್ಳ ಸೇರಿದಂತೆ ಹಲವರು ಅಶೋಕ ಪಟ್ಟಣ ಅವರಿಗೆ ಸಾಥ್‌ ನೀಡಿದರು.

ಇಡಗಲ್‌, ಲಿಂಗದಾಳ, ಹಿರೇಮೂಲಂಗಿ ಹಾಗೂ ಹೊಸಕೆರೆಯಲ್ಲಿ ಮತದಾರರ ಮನೆ ಬಾಗಿಲ ಬಳಿ ತೆರಳಿ ಮತಯಾಚಿಸಿದರು. ಶಾಸಕರು ಬಂದಿದ್ದಾರೆ ಎಂದು ಗ್ರಾಮಸ್ಥರು ಮನೆಯಿಂದ ಹೊರಬಂದು, ಶಾಸಕರ ಮಾತು

ಗಳಿಗೆ ಕಿವಿಯಾದರು.

ಓಣಿಗಳಲ್ಲಿ ಪಾದಯಾತ್ರೆ: ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸಿ ಶಾಸಕರು ಓಣಿ, ಓಣಿಗಳಲ್ಲಿ ಸಂಚರಿಸಿದರು. ಬಿಸಿಲು ಏರುತ್ತಿದ್ದಂತೆ ಕಣ್ಣಿಗೆ ತಂಪುಗನ್ನಡಕ ಹಾಕಿಕೊಂಡರು. ಹಿಂಬಾಲಕರ ಜೊತೆ ಹೆಜ್ಜೆ ಹಾಕಿದರು. ಪಕ್ಷದ ಬಾವುಟಗಳು, ಚಿಹ್ನೆಗಳು ಹಾಗೂ ಹಸ್ತಪ್ರತಿಗಳು ರಾರಾಜಿಸುತ್ತಿದ್ದವು. ಮತದಾರರಲ್ಲಿ ಅವರು ಮಾಡಿಕೊಂಡ ಮನವಿಯ ಹಸ್ತಪ್ರತಿಗಳನ್ನು ಹಂಚಿದರು.

ಮನೆ ಬಾಗಿಲಿಗೆ ಬಂದ ಶಾಸಕರನ್ನು ಕೆಲವರು ಮನೆಯೊಳಗೆ ಆಹ್ವಾನಿಸಿದರು. ‘ಸಮಯದ ಅಭಾವ ಇರುವುದರಿಂದ ಬರುವುದಿಲ್ಲ. ಗೆದ್ದ ಮೇಲೆ ಬರುತ್ತೇನೆ’ ಎಂದು ಅವರು ಆಶ್ವಾಸನೆ ನೀಡಿ ಹೊರಟರು.

ಬೇವಿನಮರದ ಕೆಳಗೆ ಪ್ರಚಾರಸಭೆ: ಮಧ್ಯಾಹ್ನ 2 ಗಂಟೆಗೆ ಹೊಸಕೆರೆ ಗ್ರಾಮದಲ್ಲಿ ಪ್ರಚಾರ ನಡೆಸಿದರು. ನಂತರ ತಾಲ್ಲೂಕಿನ ಕೊನೆಯ ಹಳ್ಳಿ ಕರಡಿಗುಡ್ಡ ಗ್ರಾಮಕ್ಕೆ ತೆರಳಿದರು. ಇದು ಜಿಲ್ಲೆಯ ಕೊನೆಯ ಹಳ್ಳಿ ಕೂಡ ಆಗಿದೆ. ಒಂದಿಷ್ಟು ದೂರ ಕ್ರಮಸಿದರೆ, ಬಾಗಲಕೋಟೆ ಜಿಲ್ಲೆಯ ಸರಹದ್ದು ಆರಂಭಗೊಳ್ಳುತ್ತದೆ. ಶಾಸಕರು ಇಲ್ಲಿಗೆ ಬಂದಾಗ ಸಮಯ ಮಧ್ಯಾಹ್ನ 2.30ಕ್ಕೆ ಆಗಿತ್ತು. ಬಿಸಿಲು ಚುರುಗುಟ್ಟುತ್ತಿತ್ತು. ಇದನ್ನು ಮೊದಲೇ ಅಂದಾಜಿಸಿದ್ದ ಗ್ರಾಮಸ್ಥರು, ಇಲ್ಲಿನ ಶ್ರೀರಾಮ ಸೀತಾ ಲಕ್ಷ್ಮಣ ದೇವಸ್ಥಾನದ ಪಕ್ಕದಲ್ಲಿರುವ ಬೇವಿನಮರದ ಕಟ್ಟೆಯಲ್ಲಿ ಸಭೆ ನಡೆಸಲು ವ್ಯವಸ್ಥೆ ಮಾಡಿದ್ದರು.

ಬೇವಿನಮರದ ನೆರಳಿನಲ್ಲಿ ಗ್ರಾಮಸ್ಥರ ಮಧ್ಯೆ, ಅಶೋಕ ಅವರು ಕುಳಿತುಕೊಂಡರು. ಕಳೆದ ಎರಡು ಅವಧಿಯಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಗರು ಮೆಲುಕು ಹಾಕಿದರು. ರಸ್ತೆ ಕಾಮಗಾರಿಗಳನ್ನು ಮಾಡುತ್ತಿದ್ದ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಅವರನ್ನು ಬದಲಾಯಿಸಿ, ಹೊಸ ಗುತ್ತಿಗೆದಾರರಿಗೆ ನೀಡಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗೆ ಶುದ್ಧ ಕುಡಿಯುವ ನೀರು ಘಟಕ (ಆರ್‌.ಒ) ಸ್ಥಾಪಿಸಿದ್ದಾರೆ ಎಂದು ಸ್ಮರಿಸಿದರು.

ಒಳ ಒಪ್ಪಂದ: ಆರೋಪ

‘ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿಸಬೇಕೆನ್ನುವ ಕಾರಣದಿಂದಲೇ ಬಿಜೆಪಿ ಹಾಗೂ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ.  ಈ ಕ್ಷೇತ್ರದವರೇ ಅಲ್ಲದ ಎಂ.ಜಾವೇದ್ ಎನ್ನುವವರನ್ನು ಜೆಡಿಎಸ್‌ ಕಣಕ್ಕಿಳಿಸಿದೆ. ಅವರು ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಾರೆ ಎಂದು ಕೇಳಿದ್ದೇನೆ. ಎಲ್ಲಿಂದಲೋ ಹಣ ಮಾಡಿ ಬಂದು, ಇಲ್ಲಿ ಖರ್ಚು ಮಾಡುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು‘ ಎಂದು ಅಶೋಕ ಪಟ್ಟಣ ಮನವಿ ಮಾಡಿದರು.

ಅವರ ಮಾತಿಗೆ ಸ್ಪಂದಿಸಿದ ಕೆಲವು ಗ್ರಾಮಸ್ಥರು, ತಾಲ್ಲೂಕಿನ ಅಭಿವೃದ್ಧಿ ತಮಗೆ ಮುಖ್ಯವಾಗಿದೆ. ಅಭಿವೃದ್ಧಿ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಭರವಸೆ ನೀಡಿದರು. ಶಾಸಕರು ನಂತರ ಮುದಕವಿ ಗ್ರಾಮದತ್ತ ಪ್ರಚಾರ ನಡೆಸಲು ತೆರಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry