ಸೋಮವಾರ, ಮಾರ್ಚ್ 8, 2021
24 °C
ಇಂದು ನಗರಕ್ಕೆ ದೇವೇಗೌಡ, ಮಾಯಾವತಿ, 9 ರಂದು ಮೋದಿ

ಮತ ಬೇಟೆಗೆ ರಾಷ್ಟ್ರೀಯ ನಾಯಕರ ದಂಡು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಮತ ಬೇಟೆಗೆ ರಾಷ್ಟ್ರೀಯ ನಾಯಕರ ದಂಡು

ಬೀದರ್: ವಿಧಾನಸಭೆ ಚುನಾವಣೆಗೆ ಆರು ದಿನಗಳು ಮಾತ್ರ ಬಾಕಿ ಇವೆ. ಕೊನೆಯ ಹಂತದ ಪ್ರಚಾರಕ್ಕೆ ಮೇ 6 ರಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, 7 ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ 9 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೀದರ್‌ ಜಿಲ್ಲೆಗೆ ಬರಲಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎರಡು ಬಾರಿಗೆ ಜಿಲ್ಲೆಗೆ ಬಂದು ಹೋಗಿದ್ದಾರೆ. ರಾಹುಲ್, ಮೊದಲ ಹಂತದಲ್ಲಿ ಬಸವಕಲ್ಯಾಣಕ್ಕೆ ಬಂದು ಪ್ರಚಾರ ಮಾಡಿದರೆ, ಎರಡನೇ ಹಂತದಲ್ಲಿ ಐದು ಕ್ಷೇತ್ರಗಳಲ್ಲಿ ಮಿಂಚಿನಂತೆ ಸಂಚರಿಸಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಂದು ಹೋಗಿದ್ದು, ಈಗ ನರೇಂದ್ರ ಮೋದಿ ಕಾಂಗ್ರೆಸ್‌ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಮತ ಬೇಟೆಗೆ ಬರುತ್ತಿದ್ದಾರೆ.

ದಲಿತ ಮತಗಳನ್ನು ಸೆಳೆಯುವ ಉದ್ದೇಶದಿಂದ ಎಚ್‌.ಡಿ.ದೇವೇಗೌಡರು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿಗೆ ಪ್ರಚಾರಕ್ಕಾಗಿ ಆಹ್ವಾನ ನೀಡಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಎಸ್‌ಪಿ ಖಾತೆ ತೆರೆದಿದ್ದ ಬೀದರ್‌ ಕ್ಷೇತ್ರದಲ್ಲಿ ಮಾಯಾವತಿ ಪ್ರಚಾರ ಕೈಗೊಳ್ಳಲಿದ್ದಾರೆ. ಜೆಡಿಎಸ್‌ ಹಾಗೂ ಬಿಎಸ್‌ಪಿ ಜಂಟಿಯಾಗಿ ಶಕ್ತಿ ಪ್ರದರ್ಶನ ಮಾಡಲಿವೆ.

ನಗರದ ನೆಹರೂ ಕ್ರೀಡಾಂಗಣದಲ್ಲಿ ಮೇ 6 ರಂದು ಸಂಜೆ 4 ಗಂಟೆಗೆ ಎಚ್‌.ಡಿ. ದೇವೇಗೌಡ ಹಾಗೂ ಮಾಯಾವತಿ ಜೆಡಿಎಸ್‌–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನೀಶ್‌ ಅಲಿ, ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶಚಂದ್ರ ಮಿಶ್ರಾ, ರಾಜ್ಯ ಉಸ್ತುವಾರಿ ಅಶೋಕ

ಸಿದ್ಧಾರ್ಥ್‌ ಅವರೂ ಭಾಗವಹಿಸಲಿದ್ದಾರೆ.

‘ಜಿಲ್ಲೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಸಾರ್ವಜನಿಕರು ಹಾಗೂ ಕಾರ್ಯಕರ್ತರ ಅನುಕೂಲ ಕ್ಕಾಗಿ ಸಂಜೆ ಕಾರ್ಯಕ್ರಮ ಏರ್ಪಡಿಸ ಲಾಗಿದೆ. ನೆಹರೂ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, 25 ಸಾವಿರ ಆಸನಗಳನ್ನು ಹಾಕಲಾಗಿದೆ. ಜಿಲ್ಲೆಯ ಆರೂ ಕ್ಷೇತ್ರಗಳ ಎರಡೂ ಪಕ್ಷಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್:

ರಾಷ್ಟ್ರೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಬರುತ್ತಿರುವ ಪ್ರಯುಕ್ತ ಜಿಲ್ಲೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ. ನಗರಕ್ಕೆ ಬಂದು ಹೋಗುವ ಪ್ರತಿಯೊಂದು ವಾಹನದ ಮೇಲೆ ನಿಗಾ ಇಡಲಾಗಿದೆ.  ಪೊಲೀಸರು ವಾಹನಗಳ ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ(ಸಿಐಎಸ್ಎಫ್), ಸಿಆರ್‌ಪಿಎಫ್‌ ಹಾಗೂ ಎಸ್‌ಎಸ್‌ಬಿ ಸಿಬ್ಬಂದಿಯನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸ ಲಾಗಿದೆ. ಬಂದೋಬಸ್ತ್‌ ಕಾರ್ಯಕ್ಕೆ ಸಿವಿಲ್‌ ಪೊಲೀಸ್‌ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ.

ಮೇ 9ಕ್ಕೆ ನರೇಂದ್ರ ಮೋದಿ

ಕೊನೆಯ ಹಂತದ ಪ್ರಚಾರ ಕೈಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಸಂಜೆ 6.30ಕ್ಕೆ ನಗರಕ್ಕೆ ಬರಲಿದ್ದಾರೆ. ಭೂಮರಡ್ಡಿ ಕಾಲೇಜು ಮೈದಾನ ಅಥವಾ ನೆಹರೂ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಎಸ್‌ಪಿಜಿ ತಂಡ ಪರಿಶೀಲಿಸಿದ ನಂತರ ಕಾರ್ಯಕ್ರಮದ ಸ್ಥಳ ನಿಗದಿಯಾಗಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

‘ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಬಿಜೆಪಿ ಮುಖಂಡ ಶಿವರಾಜ್‌ ಗಂದಗೆ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ ನಾಳೆ

7 ರಂದು ಭಾಲ್ಕಿ ಹಾಗೂ ಹುಮನಾಬಾದ್‌ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಕಾಂಗ್ರೆಸ್‌ ಪ್ರಬಲವಾಗಿರುವ ಕ್ಷೇತ್ರಗಳಲ್ಲೇ ಬಿಜೆಪಿ ಮುಖಂಡರು ಬಿರುಸಿನ ಪ್ರಚಾರದಲ್ಲಿ ತೊಡಗುತ್ತಿದ್ದಾರೆ.

**

ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಪ್ರಚಾರಕ್ಕೆ ಜಾತ್ರೆಗೆ ಬಂದಂತೆ ಬರುತ್ತಿದ್ದಾರೆ. ರಾಜಕಾರಣಿಗಳ ಮಾತಿಗೆ ಮರುಳಾಗದೆ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ

- ಜಯಶ್ರೀ ಸುಕಾಲೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.