ಶುಕ್ರವಾರ, ಫೆಬ್ರವರಿ 26, 2021
27 °C

ಅನ್ನಭಾಗ್ಯದಲ್ಲಿಯೂ ಕೇಂದ್ರ ಸರ್ಕಾರದ ಪಾಲಿದೆ: ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನ್ನಭಾಗ್ಯದಲ್ಲಿಯೂ ಕೇಂದ್ರ ಸರ್ಕಾರದ ಪಾಲಿದೆ: ಪ್ರಧಾನಿ ಮೋದಿ

ರಾಯಚೂರು: ರಾಜ್ಯ ಸರ್ಕಾರದ ಅನ್ನಭಾಗ್ಯದಲ್ಲಿಯೂ ಕೇಂದ್ರ ಸರ್ಕಾರದ ಪಾಲಿದೆ. ಆದರೆ ಕಾಂಗ್ರೆಸ್ ಈ ಮಾತನ್ನು ಮುಚ್ಚಿಟ್ಟಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇಲ್ಲಿನ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಂತ್ರಾಲಯ ರಾಯರಿಗೆ, ಪುರಂದರದಾಸರು, ವಿಜಯದಾಸರು, ಜಗನ್ನಾಥದಾಸರು, ಆಯ್ದಕ್ಕಿ ಲಕ್ಕಮ್ಮ ಅವರಿಗೆ ನಮಿಸಿ, ರಾಯಚೂರು ಜನತೆಗೆ ನಮಸ್ಕಾರಗಳನ್ನು ತಿಳಿಸಿದರು.

ರಾಯಚೂರಿನ ಉರಿಬಿಸಿಲಿನಲ್ಲಿ ನಿಂತಿರುವ ನೀವು ಎಸಿ ಕೊಠಡಿಗಳಲ್ಲಿ ಕುಳಿತು ಅತಂತ್ರ ವಿಧಾನಸಭೆ  ಎಂದು ಮಾತನಾಡುವವರಿಗೆ ಉತ್ತರಕೊಡ್ತಿದ್ದೀರಿ ಎಂದರು. ನಾನು ಮೊದಲ ಬಾರಿಗೆ 1991ರಲ್ಲಿ ಏಕತಾ ಯಾತ್ರೆಗಾಗಿ ನಸುಕಿನ 3 ಗಂಟೆಗೆ ರಾಯಚೂರು ತಲುಪಿದ್ದೆ. ಇಷ್ಟೊತ್ತಲ್ಲಿ ಯಾರು ಇರ್ತಾರೆ ಅಂದುಕೊಂಡಿದ್ದೆ. ಆದರೆ ಅಷ್ಟೊತ್ತಿನಲ್ಲಿ ಮಹಾತ್ಮಾ ಕ್ರೀಡಾಂಗಣದಲ್ಲಿ ಸಭೆ ನಡೆಯಿತು.

ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಭಾಷೆಯ ತಡೆ ಇಲ್ಲ. ಒಂದು ಭಾರತ, ಶ್ರೇಷ್ಠ ಭಾರತ. ನಿಮ್ಮ ಪ್ರೀತಿ ಇದನ್ನು ತೋರಿಸುತ್ತಿದೆ. ಅನುವಾದದ ಅಗತ್ಯ ಇಲ್ಲ ಎಂದರು. ನೀವು ನನ್ನ ಮಾಲೀಕರು, ನೀವು ಆಜ್ಞೆ ಮಾಡಿದಿರಿ, ನಾನು ಶಿರಸಾವಹಿಸಿದೆ. (ಜನರಿಂದ ಮೋದಿ ಮೋದಿ ಮೋದಿ ಘೋಷಣೆ) ರಾಯಚೂರು ಹರಿದಾಸರು ಮತ್ತು ವಚನಕಾರರ ಭೂಮಿ. ಅನೇಕ ಸಾಂಸ್ಕೃತಿಕ ಪರಂಪರೆಗಳು ಬೆಳಗಿವೆ. ಇಷ್ಟಾದರೂ ಕಾಂಗ್ರೆಸ್ ಇಲ್ಲಿಂದ ಏನನ್ನೂ ಕಲಿತಿಲ್ಲ. ಈಗ ಕರ್ನಾಟಕ ಅನೇಕರ ಬಲಿದಾನ, ಯೋಗದಾನಗಳಿಂದ ಈ ಸ್ಥಿತಿಗೆ ತಲುಪಿದೆ. ಈ ಚುನಾವಣೆಯಲ್ಲಿ ಯಾರು ಎಂಎಲ್‌ಎ ಆಗ್ತಾರೆ ಅನ್ನೋದಷ್ಟಕ್ಕಾಗಿ ಆಗ್ತಿಲ್ಲ. ರಾಜ್ಯದ ಭವಿಷ್ಯ ಏನಾಗುತ್ತೆ ಎನ್ನುವ ನಿರ್ಣಾಯಕ ವಿಷಯದ ಮೇಲೆ ಆಗ್ತಿದೆ ಎಂದರು.

ಒಂದು ಕಡೆ ಅಭಿವೃದ್ಧಿಗೆ ಬದ್ಧವಾಗಿರುವ, ಎಲ್ಲರೊಡನೆ ಅಭಿವೃದ್ಧಿ ಎಂದು ಪ್ರತಿಪಾದಿಸುವ ಬಿಜೆಪಿ, ಇನ್ನೊಂದು ಕಡೆ ಅಭಿವೃದ್ಧಿ ವಿರೋಧಿಸುವ, ಸಮಾಜವನ್ನು ಒಡೆಯುವ ಕಾಂಗ್ರೆಸ್ ಇದೆ. ಇದು ಈ ಎರಡರ ನಡುವಣ ಚುನಾವಣೆಯಾಗಿದೆ. ಜನರನ್ನು ಒಡೆಯುವ, ಅಣ್ಣತಮ್ಮಂದಿರಲ್ಲಿ ಸಂಘರ್ಷ ಸೃಷ್ಟಿಸುವ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಐದು ವರ್ಷಗಳಿಂದ ಏನು ಮಾಡದ ಕಾಂಗ್ರೆಸ್ ಈಗ ಆರೋಪಗಳ ಮೇಲೆ ಆರೋಪ ಮಾಡುತ್ತಿದೆ. ಐದು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತ ಅದರ ದಿಲ್ಲಿ-ಗಲ್ಲಿ ನಾಯಕರು ಹೇಳಲಿ. ನಿಮಗಾದರೂ ಹೇಳಿದ್ದಾರಾ? ಈ ಚುನಾವಣೆಯಲ್ಲಿ ನೀವು ಅವರು ಉತ್ತರ ಹೇಳಬೇಕೇ? ಬೇಡವೇ? ನೀವು ಪ್ರಶ್ನಿಸಬೇಕಲ್ಲವಾ? ಎಂದರು.

ಕಾಂಗ್ರೆಸ್‌ ಹಗಲು ರಾತ್ರಿ ಮೋದಿ ಮೋದಿ ಅನ್ನುತ್ತೆ, ಮೋದಿಗೆ ಬೈಯುವುದೇ ಅವರ ಕಾರ್ಯತಂತ್ರವೇ? ಕಾಂಗ್ರೆಸ್‌ಗೆ ವಿದಾಯ ಹೇಳಲು ಇದು ಶುಭ ಸಮಯ. ದೇಶದ ಜನರು ವಿದಾಯ ಹೇಳಿದ್ದಾರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ತ್ರಿಪುರ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಘಡದಲ್ಲಿ ಕಾಂಗ್ರೆಸ್ ಸೋತಿದೆ. ಇಲ್ಲೂ ಸೋಲುತ್ತೆ ಎಂದರು.

ಈಗ ಕಾಂಗ್ರೆಸ್‌ ಪಕ್ಷವನ್ನು ಕಾಪಾಡಲು ಯಾರಿಗೂ ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದ ಇಷ್ಟೂ ವರ್ಷಗಳಲ್ಲಿ ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿಸಿ ಆಡಳಿತ ಮಾಡಿದೆ. ಸುಳ್ಳುಸುಳ್ಳಿನ ಪ್ರಚಾರವೇ ಕಾಂಗ್ರೆಸ್‌ ಮಂತ್ರವಾಗಿದೆ. ಚಿತ್ರ ವಿಚಿತ್ರವಾಗಿ ಸತತವಾಗಿ ಕಾಂಗ್ರೆಸ್ ಸುಳ್ಳು ಹೇಳುವ ಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್ ಸಂಸತ್ ಅಧಿವೇಶನ ನಡೆಸಲು ಬಿಡ್ತಿಲ್ಲ. ಅವರಿಗೆ ಮೋದಿ ಕೆಲಸಗಳ ಬಗ್ಗೆ ಭಯ ಬಂದುಬಿಟ್ಟಿದೆ. ಬಿಜೆಪಿ ಈ ದೇಶದ ಬಡವರ ಕಲ್ಯಾಣಕ್ಕೆ ಸಮರ್ಪಿತವಾಗಿದೆ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

ಒಬಿಸಿ ವರ್ಗಕ್ಕೆ ಸೇರಿದವರು ಸಂವಿಧಾನದತ್ತ ಅಧಿಕಾರ ಪಡೆದುಕೊಳ್ಳಲು ಕಾಂಗ್ರೆಸ್‌ ಎದುರು ಗೋಗರೆದಿದ್ದರು. ಆದರೆ ಯಾರೂ ಅತ್ತ ಗಮನ ಕೊಡಲಿಲ್ಲ. ನಮ್ಮ ಸರ್ಕಾರ ಒಬಿಸಿ ಆಯೋಗಕ್ಕೆ ಸಂವಿಧಾನದತ್ತ ಅಧಿಕಾರ ಕೊಡಲು ಹೆಜ್ಜೆ ಇಟ್ಟೆವು. ನನ್ನ ಸರ್ಕಾರ ಬಡವರ ಕಲ್ಯಾಣಕ್ಕೆ ಸಮರ್ಪಿತ. ಬಡವರ ಹೊಟ್ಟೆ ತುಂಬಿಸುವುದು ನಮ್ಮ ಉದ್ದೇಶ. ಸಾವಿರಾರು ಕೋಟಿ ರೂಪಾಯಿಯನ್ನು ಬಡವರ ಹೊಟ್ಟೆ ತುಂಬಿಸಲು ಬಳಸುತ್ತಿದೆ ಎಂದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.