ತರೀಕೆರೆ ಕಾಂಗ್ರೆಸ್‌ನ ಭದ್ರಕೋಟೆ

7
ಕ್ಷೇತ್ರದಲ್ಲಿ ಪಕ್ಷದ ಗೆಲುವು ನಿಶ್ಚಿತ: ಶಿವಾನಂದಸ್ವಾಮಿ ವಿಶ್ವಾಸ

ತರೀಕೆರೆ ಕಾಂಗ್ರೆಸ್‌ನ ಭದ್ರಕೋಟೆ

Published:
Updated:

ಅಜ್ಜಂಪುರ: ‘ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೆಸರಾಗಿರುವ ತರೀಕೆರೆ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿ ಎಸ್.ಎಂ.ನಾಗರಾಜ್ ಅವರನ್ನು ಆಶೀರ್ವದಿಸುವ ಮೂಲಕ ಕ್ಷೇತ್ರದ ಜನತೆ ಆಡಳಿತಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರದ ಭಾಗವಾಗಲಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣ ಸಮೀಪದ ಚಿಕ್ಕಾನವಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ಎಸ್.ಎಂ.ನಾಗರಾಜ್ ಪರ ಮತಯಾಚಿಸಿದ ಅವರು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮತ್ತು ಕಳಂಕ ರಹಿತ ಸ್ಥಿರ ಆಡಳಿತ ನೀಡಿದೆ. ಜತೆಗೆ ಅಭಿವೃದ್ಧಿ ಪೂರಕ ಮತ್ತು ದುರ್ಬಲ ವರ್ಗದವರ ಪರ ಕೆಲಸ ಮಾಡಿದೆ. ಹಾಗಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಹೆಚ್ಚಾಗಿದೆ. ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿ ಜಯಗಳಿಸಲು ಮತ್ತು ಕ್ಷೇತ್ರ ಬರಲಿರುವ ಕಾಂಗ್ರೆಸ್ ಸರ್ಕಾರದ ಭಾಗವಾಗಲು ಮತದಾರರು ಪಕ್ಷದ ಅಭ್ಯರ್ಥಿ ಎಸ್.ಎಂ.ನಾಗರಾಜ್ ಅವರನ್ನು ಬೆಂಬಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

1985ರಿಂದ ಇದುವರೆಗೂ 30 ವರ್ಷಗಳ ಕಾಲ ರಾಜಕಾರಣದಲ್ಲಿರುವ ಪಕ್ಷದ ಅಭ್ಯರ್ಥಿ ಎಸ್.ಎಂ.ನಾಗರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆಗ ನೀರಾವರಿ ಮತ್ತು ಗ್ರಾಮೀಣ ರಸ್ತೆ ಅಭಿವೃದ್ಧಿಯಂತಹ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿದ್ದ ಏಕೈಕ ಶಾಸಕರಾಗಿ ಕಾಣಿಸಿಕೊಂಡಿದ್ದಾರೆ. ಆಗ ಮಾಡಿದ ಕೆಲಸಗಳು ಮತ್ತು ಇಂದಿಗೂ ಜನಸಾಮಾನ್ಯರೊಂದಿಗಿನ ಅವರ ಬಾಂಧವ್ಯಗಳು, ಕ್ಷೇತ್ರದ ಜನತೆಗೆ ಚಿರಪರಿತರಾಗಿರುವಂತೆ ಮಾಡಿವೆ ಎಂದರು.

ವಿದ್ಯಾರ್ಥಿ ದಿಸೆಯಿಂದಲೇ ರಾಜಕಾರಣಕ್ಕೆ ಅಡಿಯಿಟ್ಟು, ಪ್ರಸ್ತುತ ನೊಳಂಬ ಸಮಾಜದ ರಾಜ್ಯಾಧ್ಯಕ್ಷರೂ ಆಗಿರುವ ಎಸ್.ಎಂ.ನಾಗರಾಜ್ ಅವರು ಭದ್ರಾ ಮೇಲ್ದಂಡೆ ಸಂತ್ರಸ್ತ ಗ್ರಾಮಗಳ 16 ಕೆರೆಗಳಿಗೆ ನೀರು ಹರಿಸುವ ಸಂಬಂದ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಿ ಯಶಸ್ವಿಯಾಗಿರುವುದು ರೈತರಿಗೆ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ಅವರನ್ನು ಕ್ಷೇತ್ರದ ಜನತೆ ಬೆಂಬಲಿಸುವಂತೆ ಮನವಿ ಮಾಡಿದರು.

ಚುನಾವಣಾ ಪ್ರಚಾರದಲ್ಲಿ ಮುಖಂಡ ಬಸವರಾಜಪ್ಪ, ಮಲ್ಲೇಶಪ್ಪ, ಗಂಗಪ್ಪ, ಮಹೇಶ್ಚರಪ್ಪ, ಗೌರಮ್ಮ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry