ಪತಿಯರ ಪರ ಪತ್ನಿಯರ ಪ್ರಚಾರ

7
ಶಿಲ್ಪಾ, ಶಿವಲೀಲಾ, ಸುಗಂಧಾ, ಸ್ಮೃತಿ, ಕುಸುಮಾ, ಪ್ರೇಮಾ, ಪ್ರಿಯಾ, ಪೂರ್ಣಿಮಾ ಪ್ರಚಾರ ಜೋರು

ಪತಿಯರ ಪರ ಪತ್ನಿಯರ ಪ್ರಚಾರ

Published:
Updated:
ಪತಿಯರ ಪರ ಪತ್ನಿಯರ ಪ್ರಚಾರ

ಹುಬ್ಬಳ್ಳಿ/ಧಾರವಾಡ: ಶಿಲ್ಪಾ ಶೆಟ್ಟರ್, ಶಿವಲೀಲಾ ಕುಲಕರ್ಣಿ, ಸುಗಂಧಾ ನಾಲವಾಡ, ಸ್ಮೃತಿ ಬೆಲ್ಲದ, ಕುಸುಮಾ ಶಿವಳ್ಳಿ, ಪ್ರೇಮಾ ಕೋನರಡ್ಡಿ, ಪ್ರಿಯಾ ದೇಸಾಯಿ, ಪೂರ್ಣಿಮಾ ತಮಟಗಾರ, ಬೀಬಿಜಾನ್‌ ಜೋಡಮನಿ ಅವರ ಹವಾ ಜಿಲ್ಲೆಯ ಚುನಾವಣಾ ಅಖಾಡದಲ್ಲಿ ಜೋರಾಗಿದೆ.

ಹೌದು, ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಹಗಲಿರುಳು ಬೆವರಿಳಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ಅವರ ಪತ್ನಿಯರೂ ಓಣಿ, ಬೀದಿ, ಕಾಲೊನಿ, ಹಳ್ಳಿ, ಹಳ್ಳಿಗಳಲ್ಲಿ ಕಾಲ್ನಡಿಗೆಯಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

ಹು–ಧಾ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರ ಶಿಲ್ಪಾ ಶೆಟ್ಟರ್‌, ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಹೇಶ ನಾಲವಾಡ ಪರ ಸುಗಂಧಾ ನಾಲವಾಡ, ಕುಂದಗೋಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್‌.ಶಿವಳ್ಳಿ ಪರ ಕುಸುಮಾ ಶಿವಳ್ಳಿ, ಜೆಡಿಯು ಅಭ್ಯರ್ಥಿ ಹಜರತ್‌ ಅಲಿ ಜೋಡಮನಿ ಪರ ಬೀಬಿಜಾನ್‌ ಜೋಡಮನಿ, ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಶಿವಲೀಲಾ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಪ್ರಿಯಾ ದೇಸಾಯಿ, ಹು–ಧಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇಸ್ಮಾಯಿಲ್‌ ತಮಟಗಾರ ಪರ ಪೂರ್ಣಿಮಾ ತಮಟಗಾರ(ರುಖಯಾ), ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಪರ ಸ್ಮೃತಿ ಬೆಲ್ಲದ ಹಾಗೂ ನವಲಗುಂದ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎನ್‌.ಎಚ್‌.ಕೋನರಡ್ಡಿ ಪರ ಪ್ರೇಮಾ ಕೋನರಡ್ಡಿ ಅವರು ಪ್ರಚಾರ ನಡೆಸಿದ್ದಾರೆ.

ಕೆಲವರು ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಮನೆ, ಮನೆಯನ್ನು ಬಿಟ್ಟೂಬಿಡದೆ ಅಡ್ಡಾಡುತ್ತಿದ್ದಾರೆ. ಮತ್ತೆ ಕೆಲವರು ತಿಂಗಳಿಂದೀಚೆಗೆ ಕ್ಷೇತ್ರದಲ್ಲಿ ಹತ್ತಾರು ಮಹಿಳೆಯರೊಂದಿಗೆ ಸೇರಿ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಬಹುತೇಕ ಅಭ್ಯರ್ಥಿಗಳ ಪತ್ನಿಯರು ದಿನಕ್ಕೆ ಹತ್ತಾರು ಕಿ.ಮೀ. ಸುತ್ತುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 8ರಿಂದ 12ರ ವರೆಗೆ,  ಸಂಜೆ 4 ರಿಂದ ರಾತ್ರಿ 9ರ ವರೆಗೂ ಮತಯಾಚನೆ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಭರಪೂರ ಭರವಸೆಗಳನ್ನೂ ನೀಡುತ್ತಿದ್ದಾರೆ.

ಪ್ರಚಾರ ಹೊಸದಲ್ಲ: ‘ನನಗೆ ಚುನಾವಣಾ ಪ್ರಚಾರ ಹೊಸದಲ್ಲ. ನನ್ನ ಮಾವ ಚುನಾವಣೆಗೆ ಸ್ಪರ್ಧಿಸಿದ್ದಾಗಲೇ ಅತ್ತೆಯೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದೆ. ಬಳಿಕ ಕಳೆದ 25 ವರ್ಷಗಳಿಂದ ಶೆಟ್ಟರ್‌ ಪರವಾಗಿ ನಿರಂತರ ಪ್ರಚಾರ ನಡೆಸಿದ್ದೇನೆ’ ಎನ್ನುತ್ತಾರೆ ಶಿಲ್ಪಾ ಶೆಟ್ಟರ್‌.

ಪ್ರಚಾರ ಪ್ರೋತ್ಸಾಹ: ‘2013ರ ಚುನಾವಣೆಯಲ್ಲಿಯೂ ಡಾಕ್ಟರ್‌ ಪರವಾಗಿ ಪ್ರಚಾರ ನಡೆಸಿದ್ದೆ. ಈಗಾಗಲೇ ಕ್ಷೇತ್ರದ ಅರ್ಧ ಭಾಗವನ್ನು ಪೂರ್ಣಗೊಳಿಸಿದ್ದೇನೆ. ಉಳಿದ ಭಾಗದಲ್ಲಿಯೂ ಪ್ರಚಾರ ನಡೆಸುತ್ತೇನೆ’ ಎನ್ನುತ್ತಾರೆ ಡಾ.ಸುಗುಂಧಾ ನಾಲವಾಡ.

ಮಗಳಂತೆ ಮಾತನಾಡಿಸುತ್ತಾರೆ: ‘ಎಲ್ಲೆಡೆ ನನ್ನನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಮನೆ ಮಗಳಂತೆ ಮಾತನಾಡಿಸುತ್ತಿದ್ದಾರೆ. ಬೆಳಿಗ್ಗೆ ಮನೆಗೆಲಸ ಮಾಡಿ ನಂತರ ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ’ ಎಂದು ಪೂರ್ಣಿಮಾ ತಮಟಗಾರ ಹೇಳುತ್ತಾರೆ.

ಸಹೋದರಿಯರ ನೆರವು: ‘ಕಳೆದ ಎರಡು ಚುನಾವಣೆ ಸಂದರ್ಭದಲ್ಲಿ ಮಕ್ಕಳು ಚಿಕ್ಕವರಿದಿದ್ದರಿಂದ ಪ್ರಚಾರ ಕಾರ್ಯಕ್ಕೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದರೆ, ಈ ಬಾರಿ ಪ್ರಚಾರಕ್ಕೆ ಇಳಿದಿದ್ದೇನೆ. ನನಗೆ ನನ್ನ ಸಹೋದರಿಯರೂ ನೆರವಾಗಿದ್ದಾರೆ’ ಎನ್ನುತ್ತಾರೆ ಪ್ರಿಯಾ ದೇಸಾಯಿ.

ಬಸವರಾಜ್‌ ಸಂಪಳ್ಳಿ/ಇ.ಎಸ್‌. ಸುಧೀಂದ್ರ ಪ್ರಸಾದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry