ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ನವನಿರ್ಮಾಣಕ್ಕೆ ನಮ್ಮೊಂದಿಗೆ ಕೈಜೋಡಿಸಿ: ಗೃಹಸಚಿವ ರಾಜನಾಥ್ ಸಿಂಗ್

Last Updated 6 ಮೇ 2018, 11:03 IST
ಅಕ್ಷರ ಗಾತ್ರ

ಬೆಂಗಳೂರು: ‘ಜನ ತಾನು ತನ್ನದು ಎಂಬ ಸಂಕುಚಿತ ಭಾವನೆಗಳನ್ನು ಬಿಟ್ಟು ದೇಶದ ನವನಿರ್ಮಾಣಕ್ಕೆ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು.

ನಗರದ ಪುರಭವನದಲ್ಲಿ ಭಾನುವಾರ ಜೈನ ಸಮುದಾಯದೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

‘ಸಣ್ಣ ವ್ಯಕ್ತಿಗಳು ತಾನು ಹಾಗೂ ತನ್ನ ಪರಿವಾರದ ಬಗ್ಗೆ ಮಾತ್ರ ವಿಚಾರ ಮಾಡುತ್ತಾರೆ. ಆದರೆ, ವಸುಧೈವ ಕುಟುಂಬದ ಮಹತ್ವ ಅರಿತು ಜಗತ್ತನ್ನು ಪ್ರೀತಿಸುವವರು ವಿಶ್ವಕ್ಕೇ ನಾಯಕರಾಗುತ್ತಾರೆ. ಸಣ್ಣ ಮನಸ್ಸಿನಿಂದ ಯಾರೂ ದೊಡ್ಡವಾಗುವುದಿಲ್ಲ. ಒಡೆದ ಮನಸ್ಸು ಯಾರನ್ನೂ ಮೇಲೆತ್ತುವುದಿಲ್ಲ. ಅನೇಕ ಸಾಧು, ಸಂತರನ್ನು ಕಂಡಿರುವ ದಕ್ಷಿಣ ಭಾರತದಿಂದ ದೇಶದ ಸಂಸ್ಕೃತಿ ಉನ್ನತ ಮಟ್ಟಕ್ಕೆ ಏರಿದೆ. ಈ ಭಾಗದ ಜನರಲ್ಲಿ ಮೇಲು, ಕೀಳು, ವರ್ಣ ಭೇದಗಳಿಲ್ಲ. ಬಿಜೆಪಿ ಸಹ ಅದೇ ತತ್ವವನ್ನು ಅನುಸರಿಸುತ್ತಿದೆ’ ಎಂದರು.

‘ಇನ್ನು ಐದು ವರ್ಷಗಳಲ್ಲಿ ನವ ಭಾರತ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಭಾರತದಲ್ಲಿ ಶೇ 65ರಷ್ಟು ಯುವಕರು ಇದ್ದಾರೆ. ಈ ಬಲದೊಂದಿಗೆ ದೇಶವನ್ನು ಸೂಪರ್ ಪವರ್ ಅಷ್ಟೇ ಅಲ್ಲ, ವಿಶ್ವ ಗುರುವಿನ ಮಟ್ಟಕ್ಕೆ ಬೆಳೆಸುವ ಸಂಕಲ್ಪ ಹೊಂದಿದ್ದೇವೆ.’

‘ಬಿಜೆಪಿ ಆಡಳಿತದಲ್ಲಿ ದೇಶದ ಜಿಡಿಪಿ ಶೇ 7.2ಕ್ಕೆ ವೃದ್ಧಿಯಾಗಿದೆ. ಕಾಂಗ್ರೆಸ್ ಯಾವತ್ತೂ ಈ ಪ್ರಮಾಣವನ್ನು ತಲುಪಿಲ್ಲ. ಬೆಂಗಳೂರನ್ನು ನಾನು ‘ಗಾರ್ಬೇಜ್ ಸಿಟಿ’ ಎಂದು ಕರೆಯಲು ಇಷ್ಟಪಡುವುದಿಲ್ಲ. ಆದರೆ, ಪ್ರಧಾನಿ ಮೋದಿ ಪ್ರಾರಂಭಿಸಿದ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ರಾಜ್ಯದಲ್ಲಿ ಪ್ರೋತ್ಸಾಹ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಟ್ಟಿದೆ’ ಎಂದರು.

ಧರ್ಮ ರಾಜಕೀಯ ಮಾಡಲ್ಲ: ‌‘ರಾಮ ರಾಜಕೀಯದಲ್ಲಿ ನಿಷ್ಣಾತನಾಗಿದ್ದ. ಅದಕ್ಕಾಗಿಯೇ ರಾಮರಾಜ್ಯ ನಿರ್ಮಾಣ ಮಾಡಿ ರಾಜಕೀಯ ಮಾಡಿದ್ದ. ತನ್ನ ಧರ್ಮದ ಒಳಿತಿಗಾಗಿ ಭಗವಾನ್‌ ಕೃಷ್ಣ ಸಹ ರಾಜಕೀಯ ಮಾಡಿದ್ದ. ರಾಮನ ಕೈಲಿ ರಾಜಕೀಯವಿದ್ದಾಗ ಅದು ಭಕ್ತಿಯಾಗಿತ್ತು. ಕೃಷ್ಣನ ಕೈಲಿ ರಾಜಕೀಯವಿದ್ದಾಗ ತರ್ಕ ಹಾಗೂ ತಂತ್ರಗಾರಿಕೆಯಿಂದ ಕೂಡಿತ್ತು. ಅದೇ ರಾಜಕೀಯ ಗಾಂಧೀಜಿ, ಸುಭಾಷ್ ಚಂದ್ರ ಬೋಸ್‌ ಅವರ ಕೈಗೆ ಬಂದಾಗ ಸ್ವಾತಂತ್ರ್ಯಕ್ಕಾಗಿ ಬಳಕೆಯಾಯಿತು’ ಎಂದು ವಿವರಿಸಿದರು.

‘ಬಿಜೆಪಿ ಸಹ ಅಧಿಕಾರದ ಆಸೆಗೆ ರಾಜಕೀಯ ಮಾಡುತ್ತಿಲ್ಲ. ರಾಮರಾಜ್ಯ ನಿರ್ಮಿಸಲು ನಾವೆಲ್ಲ ಶ್ರಮಿಸುತ್ತಿದ್ದಾರೆ. ಯುವಕರು ರಾಜಕೀಯಕ್ಕೆ ಬರಬೇಕು. ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವಂತಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT