ದೇಶದ ಆರ್ಥಿಕ ವ್ಯವಸ್ಥೆ ಭದ್ರಪಡಿಸಿದ್ದು ಮೋದಿ

7
ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿಕೆ

ದೇಶದ ಆರ್ಥಿಕ ವ್ಯವಸ್ಥೆ ಭದ್ರಪಡಿಸಿದ್ದು ಮೋದಿ

Published:
Updated:

ಸೇಡಂ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿಷ್ಕಳಂಕ ಹಾಗೂ ಭ್ರಷ್ಟಾಚಾರರಹಿತ ಸರ್ಕಾರವಾಗಿದೆ. ಇಲ್ಲಿಯವರೆಗೂ ಯಾವೊಬ್ಬ ಕೇಂದ್ರ ಸಚಿವರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಲುಕಿದ ಉದಾಹರಣೆ ಇಲ್ಲ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.

ಪಟ್ಟಣದ ಮಾತೃಛಾಯಾ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶದ ಬೊಕ್ಕಸ ಖಾಲಿಯಾಗಿದ್ದ ಪರಿಸ್ಥಿತಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಪಾವಧಿಯಲ್ಲೇ ಅರ್ಥ ವ್ಯವಸ್ಥೆ ಬಲಪಿಡಿಸಿದ್ದಾರೆ. ಇದರಿಂದ ಹೊರದೇಶಗಳ ಅರ್ಥಶಾಸ್ತ್ರಜ್ಞರೂ ನಮ್ಮ ಆರ್ಥಿಕ ಸದೃಢತೆ ಕುರಿತು ಕೊಂಡಾಡುತ್ತಿದ್ದಾರೆ’ ಎಂದರು.

‘ರಾಜ್ಯದ ಜನತೆಗೆ ರಕ್ಷಣೆ ಇಲ್ಲ ಎಂಬುದು ಅಧಿಕಾರಿಗಳ ಆತ್ಮಹತ್ಯೆಯಿಂದ ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇದು ಮುಂದುವರಿ ಯುವುದಿಲ್ಲ’ ಎಂದರು.

ಪಕ್ಷದ ನಾಯಕಿ, ನಟಿ ಶ್ರುತಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ. ನಮ್ಮ ದುರ್ದೈವ. ಇದರಿಂದ ಇಲ್ಲಿಯವರೆಗೂ ನಮ್ಮ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಾಗಿಲ್ಲ. ಅಲ್ಲದೆ ರಾಜ್ಯದಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಿವೆ.

ಆದರೆ, ಇದರ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದರೆ ಮುಖ್ಯಮಂತ್ರಿಗಳು ನಿದ್ದೆ ಮಾಡುತ್ತಾರೆ’ ಎಂದು ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ, ಬಿಜೆಪಿ ಚುನಾವಣಾ ಪ್ರಮುಖ ರಘುನಾಥ ಮಲ್ಕಾಪೂರೆ, ರಾಜಶೇಖರ ನೀಲಂಗಿ, ಪರ್ವತರೆಡ್ಡಿ ಪಾಟೀಲ , ನಾಗಪ್ಪ ಕೊಳ್ಳಿ, ಚಂದ್ರಶೇಖರ ರೆಡ್ಡಿ ದೇಶಮುಖ, ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ಎಕ್ಬಲ್ ಖಾನ್, ಶರಣು ಮೆಡಿಕಲ್, ಶರಣಪ್ಪ ತಳವಾರ, ವಿಜಯಕುಮಾರ ಶರ್ಮಾ, ಸಂಜೀವನ ಯಾಕಾಪೂರ, ವಿಶ್ವನಾಥರೆಡ್ಡಿ ಕುರಕುಂಟಾ, ಮುರಗೇಂದ್ರರೆಡ್ಡಿ ಬಿಲಕಲ್, ಮಧೂಸೂದನರೆಡ್ಡಿ ಮುಧೋಳ, ಲಕ್ಷ್ಮಿ ನಾರಾಯಣ ಚಿಮ್ಮನಚೋಡ್ಕರ್, ಓಂಪ್ರಕಾಶ ಪಾಟೀಲ ಇದ್ದರು.

ವೇದಿಕೆ ಮೇಲೆ ಕಣ್ಣೀರಿಟ್ಟ ರಾಜಕುಮಾರ ಪಾಟೀಲ

ಸೇಡಂ: ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ ಅವರು ವೇದಿಕೆ ಮೇಲೆ ಸಾಷ್ಟಾಂಗ ನಮಸ್ಕಾರ ಹಾಕಿ, ಮನದಾಳದ ನೋವನ್ನು ಬಿಚ್ಚಿಟ್ಟರು.

‘ಸತತ 3 ಬಾರಿ ಚುನಾವಣೆಯಲ್ಲಿ ಸೋತು ನನ್ನ ಕೈ ಬರಿದಾಗಿದ್ದು, ಹಣ ಖಾಲಿಯಾಗಿದೆ. ಕಾರ್ಯಕರ್ತರ ವಿಶ್ವಾಸ, ನಂಬಿಕೆ ಮತ್ತು ಅಭಿಮಾನದ ಮೇಲೆ ಈ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರ ಪ್ರೀತಿ ಬಿಟ್ಟರೆ ನನ್ನಲ್ಲಿ ಏನು ಉಳಿದಿಲ್ಲ’ ಎನ್ನುತ್ತಾ ಕಣ್ಣೀರು ಹಾಕಿದರು. ಇದರಿಂದ ವೇದಿಕೆ ಮೇಲಿದ್ದ ಜನಪ್ರತಿನಿಧಿಗಳು ಹಾಗೂ ಸಭಾಂಗಣದಲ್ಲಿ ನೆರೆದ ಬಿಜೆಪಿ ಕಾರ್ಯಕರ್ತರು ವಿಚಲಿತರಾದರು.

ನಂತರ ಭಾಷಣ ಮಾಡಿದ ರಾಜನಾಥ ಸಿಂಗ್‌, ರಾಜಕುಮಾರ ಪಾಟೀಲ ಅವರು ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ನಂತರ 4-5 ತಿಂಗಳ ನಂತರ ನಾನು ಅಭಿನಂದನೆ ಸಲ್ಲಿಸಲು ಸೇಡಂಗೆ ಆಗಮಿಸುತ್ತೇನೆ. ಆಗ ರಾಜಕುಮಾರ ಸಾಷ್ಟಾಂಗ ಹಾಕಿ ಧನ್ಯವಾದ ಹೇಳುವುದು ಖಚಿತ’ ಎಂದರು.

ನಟಿ ಶ್ರುತಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಕಾರ್ಯಕರ್ತರು

ಸೇಡಂ: ಪಟ್ಟಣದ ಮಾತೃಛಾಯಾ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಬಂದ ನಟಿ ಶ್ರುತಿ ಅವರೊಂದಿಗೆ ಕಾರ್ಯಕರ್ತರು, ಮುಖಂಡರು, ಪೊಲೀಸ್‌ ಸಿಬ್ಬಂದಿ ಕೂಡ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ವೇದಿಕೆಗೆ ಬಂದ ಶ್ರುತಿ ಅವರು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಆಗ ಸಭಾಂಗಣದಲ್ಲಿ ನೆರೆದ ಕಾರ್ಯಕರ್ತರು ಹಠಾತ್ತನೆ ವೇದಿಕೆಯತ್ತ ಓಡಿದರು. ನೆಚ್ಚಿನ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ನೂರಾರು ಕಾರ್ಯಕರ್ತರು ವೇದಿಕೆ ಮೇಲೆ ನುಗ್ಗಿದ್ದರಿಂದ ಕೆಲ ಕಾಲ ಗೊಂದಲ ಉಂಟಾಯಿತು.

ಕಾರ್ಯಕರ್ತರ ಮಧ್ಯದಿಂದ ಹೊರಬರಲು ಶ್ರುತಿ ಅವರು ಹರಸಾಹಸ ಪಟ್ಟರು. ಸಾಧ್ಯವಾಗದೇ ಇದ್ದಾಗ ನೆರವಿಗೆ ಪೊಲೀಸರನ್ನು ಕರೆದರು. ಸುತ್ತಲೂ ಇದ್ದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಜನರನ್ನು ದೂರ ಸರಿಸಿ, ಕಾರ್‌ವರೆಗೂ ಸುರಕ್ಷಿತವಾಗಿ ಕರೆತಂದರು. ಕಾರಿನ ಬಳಿಯೇ ಕಾರ್ಯಕರ್ತರತ್ತ ಕೈಬೀಸಿ ಧನ್ಯವಾದ ಹೇಳಿ ತೆರಳಿದರು.

**

ಸಂದರ್ಶನದಲ್ಲಿ ಹಣ ಸುಲಿಗೆ ಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಸಂದರ್ಶನ ವ್ಯವಸ್ಥೆ ರದ್ದುಪಡಿಸಿ, ಲಿಖಿತ ಪರೀಕ್ಷೆ ಮೇಲೆ ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗುವುದು

– ರಾಜನಾಥ ಸಿಂಗ್‌‌, ಕೇಂದ್ರ ಗೃಹ ಸಚಿವ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry