ಭಾನುವಾರ, ಮಾರ್ಚ್ 7, 2021
30 °C
ಚೆರಿಯಮನೆ ಕ್ರಿಕೆಟ್‌ ಟೂರ್ನಿ: ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ಕುದುಪಜೆ ತಂಡ

ತಳೂರು ತಂಡಕ್ಕೆ ಚಾಂಪಿಯನ್‌ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಳೂರು ತಂಡಕ್ಕೆ ಚಾಂಪಿಯನ್‌ ಪಟ್ಟ

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಹಾಗೂ ಚೆರಿಯಮನೆ ಕುಟುಂಬದ ಆಶ್ರಯದಲ್ಲಿ 21 ದಿನಗಳ ಕಾಲ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ಚೆರಿಯಮನೆ ಕ್ರಿಕೆಟ್ ಕಪ್ ಟೂರ್ನಿ’ಯಲ್ಲಿ ಹಾಲಿ ಚಾಂಪಿಯನ್‌ ತಳೂರು ತಂಡವು ಈ ಬಾರಿಯು ಪ್ರಶಸ್ತಿಯನ್ನು ತನ್ನ ಮಡಿಲಲ್ಲೇ ಉಳಿಸಿಕೊಂಡಿತು.

ಪ್ರಥಮ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕುವ ಕನಸಿನಲ್ಲಿ ಮೈದಾನಕ್ಕೆ ಇಳಿದ ಕುದುಪಜೆ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಫೈನಲ್‌ನಲ್ಲಿ ಸಮಬಲದ ಹೋರಾಟ ನಿರೀಕ್ಷೆ ಮಾಡಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಕುದುಪಜೆ ತಂಡದ ಆಟಗಾರರು ನಿರಾಸೆ ಮೂಡಿಸಿದರು.

ಒಟ್ಟು 207 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ತಳೂರು ಹಾಗೂ ಕುದುಪಜೆ ತಂಡಗಳು ಫೈನಲ್‌ ಪ್ರವೇಶಿಸಿದ್ದವು. ಶನಿವಾರ ಬೆಳಿಗ್ಗೆ ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್‌ ಸೋತ ಕುದುಪಜೆ ತಂಡವು ಮೊದಲು ಬ್ಯಾಟಿಂಗ್‌ಗೆ ಇಳಿಯಿತು. 12 ಓವರ್‌ನಲ್ಲಿ 49 ರನ್‌ಗೆ ಗಳಿಸಲು ಮಾತ್ರ ಶಕ್ತವಾಯಿತು.

ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಆರಂಭಿಕ ಆಟಗಾರರ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದ್ವಿತೀಯ ವಿಕೆಟ್‌ನಲ್ಲಿ ಉತ್ತಮ ಆಟ ಮೂಡಿಬಂದರೂ, ನಿರೀಕ್ಷಿತ ಸ್ಕೋರ್‌ ಗಳಿಸಲು ಸಾಧ್ಯವಾಗಲಿಲ್ಲ. ನಿರಂತರವಾಗಿ ವಿಕೆಟ್ ಬಿದ್ದವು. ತಳೂರು ತಂಡ ಪರ ಜೀತು 3 ವಿಕೆಟ್, ಪವನ್ ಹಾಗೂ ವಿಜು ತಲಾ 2 ವಿಕೆಟ್, ಪ್ರತೀಕ್ 1 ವಿಕೆಟ್ ಕಬಳಿಸಿದರು.

ಅಲ್ಪಮೊತ್ತವನ್ನು ಬೆನ್ನಟ್ಟಿದ ತಳೂರು ತಂಡ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. 7.4 ಓವರ್‌ನಲ್ಲಿ ಗುರಿ ಮುಟ್ಟಿತು. ತಳೂರು ತಂಡದ ಪರ ಜೀತು 21, ವಿಕ್ಕಿ 14 ರನ್ ಬಾರಿಸಿದರು. ಕುದುಪಜೆ ತಂಡದ ಪರ ಸಚಿನ್, ರೋಷನ್ ತಲಾ 2 ವಿಕೆಟ್ ಕಬಳಿಸಿದರು.

ಪ್ರಥಮ ಸ್ಥಾನ ಪಡೆದ ತಳೂರು ತಂಡಕ್ಕೆ ₹ 50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಕುದುಪಜೆ ತಂಡಕ್ಕೆ ₹ 35 ಸಾವಿರ ನಗದು, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ಉಳುವಾರ ಹಾಗೂ ದಂಬೆಕೋಡಿ ತಂಡಕ್ಕೆ ತಲಾ ₹ 15 ಸಾವಿರ ನಗದು, ಟ್ರೋಫಿ ವಿತರಣೆ ಮಾಡಲಾಯಿತು.

ತಳೂರು ತಂಡದ ಜೀತು ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬೆಸ್ಟ್‌ ಬೌಲರ್‌ ಪ್ರಶಸ್ತಿಯನ್ನು -ಕುದುಪಜೆ ರೋಷನ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ- ಕುಡೆಕಲ್ಲು ಕಾರ್ತಿಕ್, ಉತ್ತಮ ತಂಡ ಪ್ರಶಸ್ತಿ- ಅಯ್ಯಂಡ್ರ ತಂಡ ಪಡೆದುಕೊಂಡಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಚೆರಿಯಮನೆ ಕ್ರಿಕೆಟ್ ಕಪ್ ಕ್ರೀಡಾ ಸಮಿತಿ ಅಧ್ಯಕ್ಷ ಡಾ.ಚೆರಿಯಮನೆ ರಾಮಚಂದ್ರ, ಚೆರಿಯಮನೆ ಕುಟುಂಬದ ಪಟ್ಟೆದಾರರಾದ ಕೆಂಚಪ್ಪ, ಬೆಳ್ಯಪ್ಪ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.