ನೋಟ್‌ಬ್ಯಾನ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ

7
ಕಾಂಗ್ರೆಸ್‌ ಸ್ಥಿತಿ ಲೇವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನೋಟ್‌ಬ್ಯಾನ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ

Published:
Updated:
ನೋಟ್‌ಬ್ಯಾನ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ

ಮಂಗಳೂರು: 60 ವರ್ಷದ ದೇಶದ ಬಡಜನರಿಂದ ಲೂಟಿ ಮಾಡಿದ್ದನ್ನು ಮರಳಿ ಬಡವರಿಗೆ ಕೊಡಿಸುವವರೆಗೆ ವಿರಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಮೊದಲು ದೇಶದ ಇಷ್ಟು ಮೊತ್ತದ ಅವ್ಯವಹಾರವಾಗಿದೆ ಎಂಬ ಸುದ್ದಿಗಳೇ ಹೆಚ್ಚಾಗಿದ್ದವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಖಜಾನೆಗೆ ಎಷ್ಟು ದುಡ್ಡು ಜಮೆಯಾಯಿತು ಎನ್ನುವ ಸುದ್ದಿಗಳೇ ಬರುತ್ತಿವೆ ಎಂದರು.

ದೆಹಲಿಯಿಂದ ₹1 ಬಿಡುಗಡೆಯಾದರೆ, ಅದರಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂಬುದನ್ನು ಕಾಂಗ್ರೆಸ್‌ ಮುಖ್ಯಸ್ಥರ ತಂದೆಯೇ (ರಾಜೀವ್‌ ಗಾಂಧಿ) ಹೇಳಿದ್ದರು. ಆ ಸಂದರ್ಭದಲ್ಲಿ ಗ್ರಾಮದಿಂದ ಹಿಡಿದು ದೆಹಲಿವರೆಗೆ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಹಾಗಾದರೆ ₹1 ರಲ್ಲಿ 85 ಪೈಸೆ ಕಾಂಗ್ರೆಸ್ಸಿಗರ ಜೇಬು ಸೇರುತ್ತಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಡಿಬಿಟಿ (ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್‌) ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ಇದರಿಂದಾಗಿ ಅಸ್ತಿತ್ವದಲ್ಲಿ ಇಲ್ಲದೇ ಇರುವವರೇ ಹೆಚ್ಚಾಗಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವುದು ಬಯಲಿಗೆ ಬಂದಿದೆ. ಡಿಬಿಟಿಯಿಂದಾಗಿ ₹80 ಸಾವಿರ ಕೋಟಿಯಷ್ಟು ಸೋರಿ ಕೆಯನ್ನು ತಡೆಗಟ್ಟಲಾಗಿದೆ ಎಂದರು.

ಮೋದಿ ಶಬ್ದ ಕೇಳಿದರೆ ಸಾಕು ವಿರೋಧ ಮಾಡಬೇಕು ಎನ್ನುವ ಮನೋಭಾವ ಕಾಂಗ್ರೆಸ್ಸಿಗರದ್ದಾಗಿದೆ. ಪ್ರತಿಯೊಂದು ವಿಷಯಕ್ಕೂ ವಿರೋಧ ಮಾಡುತ್ತಲೇ ಬರುತ್ತಿದ್ದಾರೆ. ದೊಡ್ಡ ಮೊತ್ತ ನೋಟುಗಳನ್ನು ರದ್ದು ಮಾಡಿದ ಪರಿಣಾಮ ಕಾಂಗ್ರೆಸ್ಸಿಗರ ಮನೆಯಿಂದ ಕಂತೆ, ಕಂತೆ ನೋಟುಗಳು ಹೊರಗೆ ಬಂದವು. ನೋಟ್‌ ಬ್ಯಾನ್‌ನಿಂದ ಕಾಂಗ್ರೆಸ್ಸಿಗರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಲೇವಡಿ ಮಾಡಿದರು.

ಸ್ವಚ್ಛ ಭಾರತ್ ಅಭಿಯಾನಕ್ಕೂ ವಿರೋಧ ವ್ಯಕ್ತಪಡಿಸುತ್ತಿದೆ. ಶೌಚಾಲಯ ನಿರ್ಮಾಣ ಮಾಡಿದರೆ, ‘ಪ್ರಧಾನಿ ಕೆಂಪುಕೋಟೆಯಿಂದ ಶೌಚಾಲಯದ ಮಾತನಾಡುತ್ತಾರೆ’ ಎಂದು ಟೀಕಿ ಸುತ್ತಿದೆ. ಯೋಗ ಮಾಡಿದರೂ ಟೀಕೆ ಕೇಳಿ ಬರುತ್ತಿದೆ. ಕಾಂಗ್ರೆಸ್ಸಿಗರಿಗೆ ಬೇರಾ ವುದೇ ವಿಷಯಗಳೂ ಇಲ್ಲದಾ ಗಿದ್ದು, ಮೋದಿ ವಿರೋಧಿ ಅಜೆಂಡಾ ಮಾತ್ರ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಸರಕು ನಿಮ್ಮಲ್ಲಿಯೇ ಇದೆ: ಐಎಂಎಫ್‌, ವಿಶ್ವಬ್ಯಾಂಕ್‌ ಸೇರಿದಂತೆ ಜಗತ್ತಿನ ಹಲವು ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಶ್ಲಾಘಿಸಿದರೆ, ಮೋದಿ ಅವುಗಳನ್ನೂ ಖರಿಸಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ನಾನು ಖರೀದಿಗೆ ನಿಂತವನಲ್ಲ. ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡುತ್ತೇನೆ. ಖರೀದಿಗೆ ನಿಂತಿದ್ದರೆ ಸರಕು ನಿಮ್ಮಲ್ಲಿ ಯೇ ಇದೆ ಎಂದರು.

ಚುನಾವಣಾ ಆಯೋಗ, ಭಾರತೀಯ ಸೇನೆ, ಭಾರತೀಯ ರಿಸರ್ವ್‌ ಬ್ಯಾಂಕ್‌, ಸಂಸತ್ತು ಹೀಗೆ ಎಲ್ಲ ಸಂಸ್ಥೆಗಳನ್ನು ಕಾಂಗ್ರೆಸ್ ಸಂಶಯದ ದೃಷ್ಟಿಯಿಂದಲೇ ನೋಡುತ್ತಿದೆ. 50–60 ವರ್ಷ ಅಧಿಕಾರ ನಡೆಸಿದ ಪಕ್ಷ ಈಗ ಹೀನಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ಸಿಗರ ಮಾನಸಿಕ ಸ್ಥಿಮಿತ ಸರಿಯಾಗಿ ಇದೆಯೇ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗಿದೆ ಎಂದು ಹೇಳಿದರು.

‘ಅಹಂಕಾರದ ರಾಜಕೀಯ ನಡೆಯಲ್ಲ’

ದೇಶದಲ್ಲಿ ಅಹಂಕಾರ ಕುಟುಂಬ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಕಾಂಗ್ರೆಸ್‌ ಬರೆದಿಟ್ಟುಕೊಳ್ಳಬೇಕು. ಕಾಂಗ್ರೆಸ್‌ನ ನೆಪಗಳು ಇನ್ನು ನಡೆಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

400 ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್‌, ತನ್ನ ಅಹಂಕಾರದಿಂದಾಗಿ ಒಂದೊಂದೇ ಕೋಟೆಗಳನ್ನು ಕಳೆದುಕೊಳ್ಳುತ್ತಿದೆ. ಅಧಿಕಾರವಿಲ್ಲದ ಕಾಂಗ್ರೆಸ್‌, ನೀರಿಲ್ಲದ ಮೀನಿನಂತೆ ಪರಿತಪಿಸುತ್ತಿದೆ ಎಂದರು.

**

ಕರ್ನಾಟಕದ ಭವಿಷ್ಯದ ಚಿಂತೆ ಇರುವವರು ಕಾಂಗ್ರೆಸ್‌ ಅನ್ನು ಸ್ವೀಕರಿಸಲಾರರು. ಅಂತಹ ಪಾಪವನ್ನು ಕಾಂಗ್ರೆಸ್‌ ಮಾಡಿದೆ

– ನರೇಂದ್ರ ಮೋದಿ, ಪ್ರಧಾನಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry