ಸೋಮವಾರ, ಮಾರ್ಚ್ 8, 2021
24 °C

ಫುಟ್‌ಬಾಲ್‌ ನನ್ನ ಉಸಿರು:ವಿಘ್ನೇಶ್‌

ವರುಣ ನಾಯ್ಕರ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್‌ ನನ್ನ ಉಸಿರು:ವಿಘ್ನೇಶ್‌

* ಫುಟ್‌ಬಾಲ್‌ ಬಗೆಗಿನ ನಿಮ್ಮ ಆಸಕ್ತಿ ಬಗ್ಗೆ ಹೇಳಿ.

ನಾನು ಬೆಳೆದಿದ್ದು ಬೆಂಗಳೂರಿನ ಆಸ್ಟಿನ್‌ ಟೌನ್‌ನಲ್ಲಿ. ನಗರದ ಅನೇಕ ಫುಟ್‌ಬಾಲ್‌ ಆಟಗಾರರು ಇದೇ ಟೌನ್‌ನ ನಿವಾಸಿಗಳು. ಬಾಲ್ಯದಲ್ಲಿ ನನ್ನ ತಂದೆ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಗ ಹುಡುಗರು ಆಡುತ್ತಿದ್ದ ಈ ಕಾಲ್ಚೆಂಡಿನ ಆಟದ ಸೊಬಗು ನನ್ನನ್ನು ಆಕರ್ಷಿಸಿತು. ಮೊದಲಿಗೆ ಮನರಂಜನೆಗಾಗಿ ಫುಟ್‌ಬಾಲ್‌ ಆಡುತ್ತಿದ್ದೆ. ಆದರೆ, ನಿಧಾನಕ್ಕೆ ಒಬ್ಬ ವೃತ್ತಿಪರ ಆಟಗಾರನಾಗಬೇಕೆಂಬ ಗಮ್ಯದೆಡೆಗೆ ನಾನು ತರಬೇತಿ ಶುರುಮಾಡಿದೆ.

ಆ ದಿನಗಳಲ್ಲಿ ಆಟದ ತಂತ್ರಗಾರಿಕೆ, ಕೌಶಲದ ಕುರಿತು ಹಿರಿಯ ತರಬೇತುದಾರರಾದ ಮೇರಿ ಮೇಡಂ, ದಾದಾಪೀರ್‌ ಅವರು ಕೊಟ್ಟ ತರಬೇತಿ ನನಗೆ ಭದ್ರ ಬುನಾದಿ ಹಾಕಿಕೊಟ್ಟಿತು. 18 ವರ್ಷದೊಳಗೆ ವೃತ್ತಿಪರ ಕ್ಲಬ್‌ ಪುಣೆ ಎಫ್‌ಸಿಗೆ ಆಯ್ಕೆಯಾದೆ. ಅಲ್ಲಿಂದ ಹಿಂದಿರುಗಿ ನೋಡಿಲ್ಲ. ಇಂದು ಫುಟ್‌ಬಾಲ್‌ ನನ್ನ ಉಸಿರಿನಲ್ಲಿ ಬೆರೆತುಹೋಗಿದೆ.

* ರಾಜ್ಯದಲ್ಲಿ ಫುಟ್‌ಬಾಲ್‌ ಹೇಗೆ ಬೆಳವಣಿಗೆ ಹೊಂದುತ್ತಿದೆ?

ಇತ್ತೀಚಿನ ದಿನಗಳಲ್ಲಿ ಆಟಗಾರರಿಗೆ ಅನೇಕ ಅವಕಾಶಗಳಿವೆ. ಎಲ್ಲ ರೀತಿಯ ಅನುಕೂಲಗಳು ಲಭ್ಯ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಫುಟ್‌ಬಾಲ್‌ ಎಲ್ಲೆಡೆ ನಿಧಾನಕ್ಕೆ ಜನಪ್ರಿಯವಾಗುತ್ತಿದೆ. ಯಾವುದೇ ಕ್ರೀಡೆಗೂ ಜನಬೆಂಬಲ ಮುಖ್ಯ. ಆಗ ಮಾತ್ರ ಅದಕ್ಕೆ ಪ್ರಾಮುಖ್ಯತೆ ಸಿಗುತ್ತದೆ. ತರಬೇತಿ ಮಟ್ಟದಲ್ಲಿ ನಾವು ಇನ್ನೂ ಬದಲಾಗಬೇಕಿದೆ ಎಂಬುದು ನನ್ನ ಅಭಿಪ್ರಾಯ. ವಿದೇಶಿ ತಂಡಗಳಲ್ಲಿ ನೀಡುವ ಉನ್ನತಮಟ್ಟದ ತರಬೇತಿ ಇಲ್ಲಿನ ಎಲ್ಲ ಆಟಗಾರರಿಗೂ ಸಿಗಬೇಕು. ಓಜೋನ್‌ ಎಫ್‌ಸಿಯಲ್ಲಿ ಅಂತಹ ಸೌಲಭ್ಯಗಳು ನಮಗಿವೆ.

* ದೇಶದ ಪ್ರತಿಷ್ಠಿತ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ ಅನುಭವ ಹೇಗಿತ್ತು?

ಯಾವುದೇ ಆಟಗಾರ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಂತೋಷ್‌ ಟ್ರೋಫಿ ಒಂದು ಉತ್ತಮ ವೇದಿಕೆ. ರಾಷ್ಟ್ರದ ಮೂಲೆಮೂಲೆಯಿಂದ ಬರುವ ಉತ್ತಮ ಆಟಗಾರರು ತಮ್ಮ ಸಾಮರ್ಥ್ಯ ತೋರಲು ಸ್ಪರ್ಧೆಗೆ ಇಳಿಯುತ್ತಾರೆ. ಅಂತಹ ವಾತಾವರಣದಲ್ಲಿ ಸ್ಪರ್ಧಿಸುವುದೇ ಒಂದು ರೋಮಾಂಚಕಾರಿ ಅನುಭವ. ಕಳೆದ ಬಾರಿ ನಮ್ಮ ತಂಡ ಸೆಮಿಫೈನಲ್‌ ಹಂತದವರೆಗೂ ಹೋಗಿತ್ತು. ಸಂತೋಷ್‌ ಟ್ರೋಫಿಯಲ್ಲಿ ಆಡಿದ ನಂತರ ನನ್ನ

ಆಟದಲ್ಲಿ ಹಲವು ಬದಲಾವಣೆ ಮಾಡಿಕೊಂಡೆ. ಇಂತಹ ಟೂರ್ನಿಗಳು ಶ್ರೇಷ್ಠ ಆಟಗಾರನನ್ನು ಸೃಷ್ಠಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.

* ಮುಂದಿನ ನಿಮ್ಮ ಗುರಿ ಏನು?

ಎಲ್ಲರಂತೆಯೇ ಭಾರತ ತಂಡದಲ್ಲಿ ಆಡಬೇಕೆಂಬುದೇ ನನ್ನ ಗುರಿ. ನಾನು ಓಜೋನ್‌ ಎಫ್‌ಸಿ, ಏರ್‌ ಇಂಡಿಯಾ, ಭಾರತ್‌ ಎಫ್‌ಸಿ, ಡೆಲ್ಲಿ ಡೈನಮೋಸ್‌ ತಂಡಗಳಲ್ಲಿ ಆಡಿದ್ದೇನೆ. ಆದರೆ, ರಾಷ್ಟ್ರ ತಂಡದಲ್ಲಿ ಆಡುವ ಅನುಭವವೇ ಅನನ್ಯ. ಈ ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಿ ಜಾಗತಿಕಮಟ್ಟದಲ್ಲಿ ಮಿಂಚಬೇಕು. ಫಿಫಾ ವಿಶ್ವಕಪ್‌ನಲ್ಲಿ ಭಾರತ ಸ್ಪರ್ಧಿಸಬೇಕು ಮತ್ತು ಆ ತಂಡವನ್ನು ನಾನು ಪ್ರತಿನಿಧಿಸಬೇಕು ಎಂಬುದು ನನ್ನ ಆಕಾಂಕ್ಷೆ. ಆದರ, ಇದಕ್ಕೆ ಸಾಗಬೇಕಾದ ದಾರಿ ಇನ್ನೂ ದೂರವಿದೆ ಎಂಬುದು ಸತ್ಯ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.