ಓಡುವ ಆಸೆಗೆ ಬಲ ತುಂಬಿದ ತೀರ್ಪು...

7

ಓಡುವ ಆಸೆಗೆ ಬಲ ತುಂಬಿದ ತೀರ್ಪು...

Published:
Updated:
ಓಡುವ ಆಸೆಗೆ ಬಲ ತುಂಬಿದ ತೀರ್ಪು...

ರಾ ಷ್ಟ್ರೀಯ ಕ್ರೀಡಾಕೂಟ, ಏಷ್ಯನ್‌ ಚಾಂಪಿಯನ್‌ಷಿಪ್‌ ಹೀಗೆ ಹತ್ತಾರು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಟೂರ್ನಿಗಳಲ್ಲಿ ಗೆದ್ದ ಪದಕಗಳ ಗೊಂಚಲು ಭಾರತದ ಭರವಸೆಯ ಅಥ್ಲೀಟ್‌ ದ್ಯುತಿ ಚಾಂದ್ ಕೈಯಲ್ಲಿವೆ.

ರಿಯೊ ಒಲಿಂಪಿಕ್ಸ್‌ ಕೂಟದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದರು.  36 ವರ್ಷಗಳ ಬಳಿಕ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎನ್ನುವ ಹೆಗ್ಗಳಿಕೆ ಅವರದ್ದು. ಆದರೆ, ದ್ಯುತಿ ದೇಹದಲ್ಲಿ ಆಗುತ್ತಿದ್ದ ಹಾರ್ಮೋನ್‌ಗಳ ಬದಲಾವಣೆ ಅವರನ್ನು ನೆಚ್ಚಿನ ಓಟದಿಂದಲೇ ದೂರ ಇರುವಂತೆ ಮಾಡಿತ್ತು. ಅಂತರರಾಷ್ಟ್ರೀಯ ಕ್ರೀಡಾ  ನ್ಯಾಯಾಲಯ ಕಳೆದ ವಾರ ನೀಡಿರುವ ತೀರ್ಪು ದ್ಯುತಿ ಓಟದ ಕನಸಿಗೆ ಬಲ ತುಂಬಿದೆ.

ದ್ಯುತಿ  ದೇಹದಲ್ಲಿ ಟೆಸ್ಟೊಸ್ಟಿರೊನ್‌ ಎಂಬ ಗ್ರಂಥಿಗಳ ಪ್ರಮಾಣ ಸಾಮಾನ್ಯ ಮಹಿಳೆಗಿಂತ ಹೆಚ್ಚಿವೆ. ಆದ್ದರಿಂದ ಆಕೆ ಓಡುವಾಗ ಪುರುಷರಷ್ಟೇ ಸಾಮರ್ಥ್ಯದಿಂದ ಓಡುತ್ತಾಳೆ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ ಹೇಳಿತ್ತು. ಈ ಆರೋಪವನ್ನು ಎದುರಿಸುತ್ತಲೇ ನಾಲ್ಕು ವರ್ಷಗಳನ್ನು ಕಳೆದಿರುವ ದ್ಯುತಿಗೆ ಈಗ ಕ್ರೀಡಾ ನ್ಯಾಯಾಲಯ ನೀಡಿರುವ ತೀರ್ಪು ಸಮಾಧಾನ ತಂದಿದೆ. ಗ್ರಂಥಿಗಳ ಪ್ರಮಾಣ ಹೆಚ್ಚಿವೆ ಎಂದು ಸಾಬೀತು ಮಾಡಲು ಅಗತ್ಯವಿರುವಷ್ಟು ಪುರಾವೆಗಳನ್ನು ನೀಡಲು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದರಿಂದ ಭಾರತದ ಅಥ್ಲೀಟ್‌ ಮುಂಬರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ಹಾದಿ ಸುಗಮವಾಗಿದೆ. ಇದಕ್ಕೆ ಅರ್ಹತೆ ಪಡೆಯಲು ಜೂನ್‌ನಲ್ಲಿ ಗುವಾಹಟಿಯಲ್ಲಿ ನಡೆಯಲಿರುವ ಅಂತರರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ವೇದಿಕೆಯಾಗಿದೆ.

ಏಷ್ಯನ್‌ ಕ್ರೀಡಾಕೂಟದ 100 ಮೀಟರ್ಸ್ ಓಟದ ಸ್ಪರ್ಧೆಗೆ ಅರ್ಹತೆ ಪಡೆಯಲು 11.67 ಸೆಕೆಂಡುಗಳಲ್ಲಿ ಗುರಿ ಮುಟ್ಟಬೇಕಿದೆ. ದ್ಯುತಿ ಈ ಋತುವಿನಲ್ಲಿ 11.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. 2016ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 11.52 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ಪಡೆದಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರದ ಸಾಧನೆ ಮಾಡಿದರೂ ಭಾರತದ ಅಥ್ಲೀಟ್‌ಗೆ ಟೀಕೆಗಳನ್ನು ಎದುರಿಸುವುದು ತಪ್ಪಿಲ್ಲ. ‘ದ್ಯುತಿ ನೀನು ಪುರುಷನೋ, ಮಹಿಳೆಯೋ’ ಎಂದು ಹಲವರು ನೇರವಾಗಿ ಅವರನ್ನೇ ಪ್ರಶ್ನಿಸಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ‘ನಾಲ್ಕು ವರ್ಷಗಳಿಂದ ನಿರಂತರ ಯಾತನೆ ಅನುಭವಿಸಿದ್ದೇನೆ. ಒಂಟಿಯಾಗಿ ಕಣ್ಣೀರು ಹಾಕಿದ್ದೇನೆ.  ಆಗ ನನ್ನ ಜೊತೆ ಯಾರೂ ಇರಲಿಲ್ಲ. ನನ್ನ ನೋವಿಗೆ ಯಾರೂ ಕಣ್ಣೀರಾಗಲಿಲ್ಲ. ಕೋರ್ಟ್‌ನಿಂದ ಈಗ ಸಮಾಧಾನಕರ ತೀರ್ಪು ಬಂದಿದ್ದು, ಎಲ್ಲರೂ ಸಂಭ್ರಮಿಸಬೇಕೆಂದು ನಿರೀಕ್ಷೆ ಮಾಡುವುದಿಲ್ಲ. ಟೆಸ್ಟೊಸ್ಟಿರೊನ್‌ ಬಗ್ಗೆ ಜನರಿಗೆ ಗೊತ್ತೇ ಇಲ್ಲ’ ಎಂದು ಚಾಟಿ ಬೀಸಿದ್ದಾರೆ.

ಹೈದರಾಬಾದ್‌ನಲ್ಲಿ ಅಭ್ಯಾಸ: ದ್ಯುತಿ ಸದ್ಯಕ್ಕೆ ಯುವ ಅಥ್ಲೀಟ್‌ಗಳ ಜೊತೆ ಹೈದರಾಬಾದ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭವಿಷ್ಯದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿರುವ ದ್ಯುತಿ 2020ರ ಒಲಿಂಪಿಕ್ಸ್‌ಗೆ ಮತ್ತೆ ಅರ್ಹತೆ ಪಡೆಯುವ ಹೆಗ್ಗುರಿ ಹೊಂದಿದ್ದಾರೆ. 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕಕ್ಕೆ ಮುತ್ತಿಕ್ಕುವ ಗುರಿ ಇಟ್ಟುಕೊಂಡಿದ್ದಾರೆ.

ಅಥ್ಲೆಟಿಕ್‌ ಟ್ರ್ಯಾಕ್‌ನ ಮಿಂಚು: 22 ವರ್ಷದ ದ್ಯುತಿ ಚಾಂದ್‌ ಅಥ್ಲೆಟಿಕ್‌ ಟ್ರ್ಯಾಕ್‌ನ ಮಿಂಚಿನ ಓಟಗಾರ್ತಿ ಎಂದೇ ಖ್ಯಾತಿ ಹೊಂದಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹಲವು ಸಾಧನೆಗಳ ಒಡತಿಯಾಗಿದ್ದಾರೆ.

18 ವರ್ಷದ ಒಳಗಿನವರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಅವರು 11.8 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. 2013ರ ವಿಶ್ವ ಯೂತ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಅದೇ ವರ್ಷ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಸೀನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಗುರಿಯನ್ನು 11.73 ಸೆಕೆಂಡುಗಳಲ್ಲಿ ಮುಟ್ಟಿದ್ದರು. 200 ಮೀಟರ್‌ ಗುರಿಯನ್ನು 23.74 ಸೆಕೆಂಡುಗಳಲ್ಲಿ ತಲುಪಿದ್ದರು. ಇದು ದ್ಯುತಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಅಂತರರಾಜ್ಯ ಅಥ್ಲೆಟಿಕ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. ಮತ್ತೆ ಪದಕಗಳ ಬೇಟೆ ಮುಂದುವರಿಯುತ್ತದೆ ಎಂಬುದು ದ್ಯುತಿ ಅವರ ಭರವಸೆಯ ಮಾತು. ಮಾತಿನಷ್ಟೇ ತೂಕ, ಅವರ ಓಟದಲ್ಲಿಯೂ ಇದೆ. 

ಕಾಸ್ಟರ್‌ ಸೆಮೆನ್ಯಾ ಹೋರಾಟ...

ಪುರುಷ ಹಾರ್ಮೋನ್‌ ಅಧಿಕವಾಗಿರುವ ಮಹಿಳೆಯರ ಸ್ಪರ್ಧೆಗೆ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ ಒಡ್ಡಿದ್ದ ತಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದವರು ದಕ್ಷಿಣ ಆಫ್ರಿಕಾದ ಕ್ರೀಡಾಪಟು ಕಾಸ್ಟರ್‌ ಸೆಮೆನ್ಯಾ. ಸೆಮೆನ್ಯಾ ಅವರ ದೇಹದಲ್ಲಿ ಹೆಚ್ಚು ಪುರುಷ ಹಾರ್ಮೋನ್‌ಗಳು ಇದ್ದವು. ಅದರಿಂದಾಗಿ ಅವರು ಅನೇಕ ಬಾರಿ ಪರೀಕ್ಷೆಗೊಳಪಟ್ಟಿದ್ದರು. ಜೊತೆಗೆ, ವಿಶ್ವಮಟ್ಟದ ಅನೇಕ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಫೆಡರೇಷನ್‌ನ ನಿರ್ಧಾರವನ್ನು‌ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯದಲ್ಲಿ ಸೆಮೆನ್ಯಾ ಪ್ರಶ್ನಿಸಿದ್ದರು.

ಈಗ, ಐಎಎಎಫ್‌ ತನ್ನ ನಿಯಮಾವಳಿಗಳಲ್ಲಿ ತಂದಿರುವ ತಿದ್ದುಪಡಿ ಪ್ರಕಾರ ನೈಸರ್ಗಿಕವಾಗಿ ಇಂತಹ ಹಾರ್ಮೋನ್‌ಗಳನ್ನು ಹೊಂದಿರುವ ಕ್ರೀಡಾಪಟುಗಳು ಇನ್ನು ಮುಂದೆ ಸ್ಪರ್ಧೆ ಮಾಡಬಹುದು. ಆದರೆ, ದೇಹದಲ್ಲಿ ಅಂತಹ ಹಾರ್ಮೋನ್‌ಗಳನ್ನು ಕಡಿಮೆ ಮಾಡುವ ವೈದ್ಯಕೀಯ ಚಿಕಿತ್ಸೆಗಳಿಗೆ ಅವರು ಒಳಪಡಬೇಕಾಗುತ್ತದೆ ಎಂದು ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ಆಡಳಿತ ಮಂಡಳಿಯು ಸ್ಪಷ್ಟಪಡಿಸಿದೆ.

ಇಂತಹ ಹಾರ್ಮೋನ್‌ಗಳನ್ನು ಹೊಂದಿರುವ ಅಥ್ಲೀಟ್‌ಗಳು 400 ಮೀಟರ್ಸ್, 800 ಮೀಟರ್ಸ್, 1500 ಮೀಟರ್ಸ್ ಹಾಗೂ ಹರ್ಡಲ್ಸ್‌ ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸಬಹುದು ಎಂದು ಅದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಮೆನ್ಯಾ, ‘ನೈಸರ್ಗಿಕವಾಗಿ ನನ್ನ ದೇಹ ಇರುವುದೇ ಹಾಗೆ. ಈ ಬಗ್ಗೆ ನನಗೆ ಬೇಸರವಿಲ್ಲ’ ಎಂದು ಹೇಳಿದ್ದಾರೆ.

ಸೆಮೆನ್ಯಾ ಅವರು ಒಲಿಂಪಿಕ್ಸ್‌ನಲ್ಲಿ 800 ಮೀಟರ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry