ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ಅಂಬೇಡ್ಕರ್‌, ಹೃದಯದಲ್ಲಿ ಮನುಸ್ಮೃತಿ

‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಜಿಗ್ನೇಶ್‌ ಮೇವಾನಿ ಹೇಳಿಕೆ
Last Updated 6 ಮೇ 2018, 12:54 IST
ಅಕ್ಷರ ಗಾತ್ರ

ರಾಯಚೂರು: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಯಲ್ಲಿ ಮಾತ್ರ ಡಾ.ಅಂಬೇಡ್ಕರ್‌, ಆದರೆ ಹೃದಯದಲ್ಲಿ ಮನುಸ್ಪೃತಿ ಅಡಗಿದೆ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಟೀಕಿಸಿದರು.

ನಗರದ ಜೆ.ಸಿ. ಭವನದಲ್ಲಿ ಸಂವಿ ಧಾನದ ಉಳಿವಿಗಾಗಿ ಕರ್ನಾಟಕ ದಿಂದ ಶನಿವಾರ ಏರ್ಪಡಿಸಿದ್ದ ಪ್ರಗತಿಪರರೊಂದಿಗೆ ಸಂವಾದದಲ್ಲಿ ಮಾತನಾಡಿದರು.

‘ಅಂಬೇಡ್ಕರ್‌ ಭಕ್ತ ಎಂದು ಹೇಳಿಕೊಳ್ಳುತ್ತಾರೆ. ಇನ್ನೊಂದು ಕಡೆ ಜಾತಿ ನಿಂದನೆ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರುತ್ತಿದ್ದಾರೆ. ಅಂಬೇಡ್ಕರವಾದಿ ಚಂದ್ರಶೇಖರ ರಾಮಲ್ ಅವರನ್ನು ಉತ್ತರ ಪ್ರದೇಶದ ಯೋಗಿ ಸರ್ಕಾರ ಜೈಲಿಗೆ ಹಾಕಿದೆ. ಇಬ್ಬರಿಗೂ ದಲಿತರ ಮೇಲೆ ಏಕೆ ದ್ವೇಷ’ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ದಲಿತರ ಬಗ್ಗೆ ಕಾಳಜಿ ತೋರಿಸುವ ನಾಟಕವಾಡುತ್ತಿದ್ದಾರೆ. ಆದರೆ ಗುಜರಾತ್‌ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮೋದಿ ಹಾಗೂ ಬಿಜೆಪಿ ಮುಖಂಡರು ಎಲ್ಲಿಗೆ ಹೋಗಿದ್ದರು. ಮೋದಿ ನಟನೆಯ ಎದುರು ನಟ ಪ್ರಕಾಶರಾಜ್‌ ಕೂಡಾ ಸಮವಾಗುವುದಿಲ್ಲ ಎಂದು ಅವರು ಹೇಳಿದರು.

‘ಪ್ರಧಾನಮಂತ್ರಿ ಯಂತಹ ಹುದ್ದೆಯಲ್ಲಿದ್ದು ಬಡ ಜನರ ಸೇವೆ ಮಾಡಲು ಹಾಗೂ ಅಭಿವೃದ್ಧಿ ಕೆಲಸ ಮಾಡುವುದನ್ನು ಎಲ್ಲರೂ ನಿರೀಕ್ಷಿಸು ತ್ತಿದ್ದಾರೆ. ನಾಟಕ ಮಾಡುವುದು ಆ ಹುದ್ದೆಗೆ ಶೋಭೆ ತರುವುದಿಲ್ಲ. ಬ್ಯಾಂಕುಗಳನ್ನು ಕಾವಲು ಮಾಡಬೇಕಿದ್ದ ಪ್ರಧಾನಿಯೆ ಕಳ್ಳರಾಗಿದ್ದಾರೆ. ಭ್ರಷ್ಟಾಚಾರ ತಡೆಯುವ ಕೆಲಸ ಮಾಡುವುದನ್ನು ಬಿಟ್ಟು, ವಿಜಯ ಮಲ್ಯ, ನೀರವ ಮೋದಿ ಅವರು ಹಣ ಪಡೆದು ಓಡಿಹೋಗುವುವುದಕ್ಕೆ ಕಾರಣರಾಗಿದ್ದಾರೆ’ ಎಂದು ಹೇಳಿದರು.

‘ಬ್ಯಾಂಕ್‌ ಖಾತೆಯಲ್ಲಿ ₹15 ಲಕ್ಷ ಹಾಕುವುದಾಗಿ ಜನರಿಗೆ ನಂಬಿಕೆ ಹುಟ್ಟಿಸಿ ಮೋಸ ಮಾಡಿದ್ದೀರಿ. ಆದರೆ ಭಾರಿ ಉದ್ಯಮಿಗಳು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು, ಬೇರೆ ದೇಶಗಳಲ್ಲಿ ಸುಖವಾಗಿದ್ದಾರೆ. ಜನರ ಏಳ್ಗೆಗೆ ಯೋಜನೆಗಳನ್ನು ರೂಪಿಸಿದೆ, ಕೋಮು ಭಾವನೆ ಹರಡುತ್ತಿದ್ದಾರೆ. ಕರ್ನಾಟಕ ರಾಜ್ಯವು ಬಸವಣ್ಣ ಹಾಗೂ ನಾರಾಯಣಗುರು ತತ್ವ ಒಪ್ಪಿಕೊಂಡಿರುವ ರಾಜ್ಯ. ಈ ರಾಜ್ಯದಲ್ಲಿ ಮೋದಿ ಆಟ ನಡೆಯುವುದಿಲ್ಲ’ ಎಂದು ತಿಳಿಸಿದರು.

ಸಂವಿಧಾನ ವಿರೋಧಿ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಉಳಿಯುವುದಿಲ್ಲ, ದಲಿತರು ಉಳಿಯುವುದಿಲ್ಲ, ಪ್ರಶ್ನಿಸುವ ಹಕ್ಕು ಕೂಡಾ ಇರುವುದಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದ ಜನ ಈ ಬಾರಿ ಬಿಜೆಪಿಗೆ ಮತ ನೀಡಬಾರದು. ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಮಾಧ್ಯಮಗಳಿಗೂ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕ ಪದಾಧಿಕಾರಿ ನೂರ್‌ ಶ್ರೀಧರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್. ವೆಂಕಟೇಶ, ವಡ್ಡಗೇರಿ ನಾಗರಾಜಯ್ಯ, ಕುಮಾರ ಸಮತಾಳ, ಎಂ.ಆರ್‌.ಭೇರಿ, ಖಾಜಾ ಅಕ್ರಮ ಪಾಷಾ, ಎನ್‌.ಪದ್ಮನಾಭ, ಎಸ್‌. ಮಾರೆಪ್ಪ ಇದ್ದರು.

**
ಜನ ರಾಜಕಾರಣದ ಹೊಸ ಪ್ರಯೋಗ ಕರ್ನಾಟಕದಲ್ಲಿ ನಡೆಯುತ್ತಿದೆ. ಜನರೆ ಒಂದು ಪಕ್ಷ ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕಿದೆ
– ನೂರ್‌ ಶ್ರೀಧರ್‌, ಸಂವಿಧಾನ ಉಳಿವಿಗಾಗಿ ಕರ್ನಾಟಕ ಪದಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT