ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಧಾರಣೆ ಕುಸಿತ; ರೈತರಿಗೆ ಸಂಕಷ್ಟ

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಬೆಳೆ
Last Updated 6 ಮೇ 2018, 14:22 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡಿದ್ದ ಭತ್ತ ಮಾರಾಟ ಮಾಡಲು ಸಿದ್ಧತಾ ಪ್ರಕ್ರಿಯೆ ನಡೆಯುತ್ತಿರುವ ಹೊತ್ತಿನಲ್ಲೇ ಧಾರಣೆ ಕುಸಿದಿದೆ. ಇದರಿಂದಾಗಿ ಭತ್ತ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಏಪ್ರಿಲ್ ಮೊದಲ ವಾರದಲ್ಲಿ ಕ್ವಿಂಟಲ್ ಭತ್ತಕ್ಕೆ ₹1,150 ರಿಂದ 1,200 ದರ ಇತ್ತು. ಭತ್ತ ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಧಾರಣೆ ಇಳಿಮುಖವಾಗಿದ್ದು ಪ್ರತಿ ಕ್ವಿಂಟಲ್ ಧಾರಣೆಯು ₹800 ರಿಂದ ₹900ಕ್ಕೆ ಕುಸಿದಿದೆ. ಬೆಳೆದ ಬೆಳೆಗೆ ಬೆಲೆಯೇ ಇಲ್ಲದಂತೆ ಆಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ. ರೈತರು ಅನಿವಾರ್ಯವಾಗಿ ಹೆದ್ದಾರಿ ಬದಿಯಲ್ಲಿ ಭತ್ತದ ರಾಶಿ ಹಾಕಿ ಬಿಸಿಲಿನ ಪ್ರಖರತೆ ಲೆಕ್ಕಿಸದೆ ಒಣಗಿಸುತ್ತಾ ಕೂತಿದ್ದಾರೆ’ ಎಂದು ರೈತ ಹಣಮಂತರಾಯ ತಿಳಿಸಿದರು.

‘ಬೇಸಿಗೆಯಲ್ಲಿ ಕಾಲುವೆ ನೀರಿನ ಸಮಸ್ಯೆ ಉಂಟಾಗುವುದೆಂದು ಭಾವಿಸಿ ಬಹುತೇಕ ರೈತರು 90 ದಿನದಲ್ಲಿ ಭತ್ತ ಕೈ ಸೇರುವ ಆಶಾಭಾವದಿಂದ ಸುಜಾತ, ಎಮರ್ಜೆನ್ಸಿ, ಆರ್ಎಸ್ 22 ತಳಿಯನ್ನು ನಾಟಿ ಮಾಡಿದ್ದರು. ಇಳುವರಿಯು ಸಹ ಪ್ರತಿ ಎಕರೆಗೆ 35ರಿಂದ40 ಚೀಲ ಬಂತು. ಎಕರೆಗೆ ₹24 ಸಾವಿರ ವೆಚ್ಚ ಮಾಡಿದ್ದೇವೆ’ ಎಂದು ರೈತ ಶಂಕರಪ್ಪ ತಿಳಿಸಿದರು.

‘ಎಪ್ರಿಲ್ ಎರಡನೇ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಭೀತಿಯಾಯಿತು. ಭತ್ತ ಕಟಾವು ಮಾಡುವ ಯಂತ್ರದ ಬೇಡಿಕೆಯು ಹೆಚ್ಚಾಯಿತು. ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ ₹2,300 ನೀಡಿದೆವು. ರಾಶಿ ಮಾಡಿದ ಭತ್ತವನ್ನು ಸಾಗಿಸಲು ಟ್ರ್ಯಾಕ್ಟರ್ ನವರಿಗೆ ಒಂದು ದಿನಕ್ಕೆ ₹2,500 ಬಾಡಿಗೆ ನೀಡಿದೆವು’ ಎಂದು ರೈತ ನಾಗಪ್ಪ ವಿವರಿಸಿದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮಾರಲು ಸೂಕ್ತವಾದ ಮಾರುಕಟ್ಟೆ ಇಲ್ಲ. ಅನಿವಾರ್ಯವಾಗಿ ನೆರೆ ಜಿಲ್ಲೆ ರಾಯಚೂರು, ದಾವಣಗೆರೆಗೆ ಒಯ್ಯಬೇಕು. ಇಲ್ಲದಿದ್ದರೆ, ದಲ್ಲಾಳಿ ನಿಗದಿಪಡಿಸಿದ ಬೆಲೆಗೆ ಭತ್ತ ಮಾರಬೇಕು. ಗೋದಾಮುಗಳಲ್ಲಿ ಭತ್ತವನ್ನು ಸಂಗ್ರಹಿಸಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಪ್ರಯತ್ನಿಸಿದರೂ ಬ್ಯಾಂಕ್‌ ಅಧಿಕಾರಿಗಳು ಸಹಕಾರ ಸಿಗುವುದಿಲ್ಲ. ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ’ ಎಂದು ರೈತ ಧರ್ಮರಾಜ ತಿಳಿಸಿದರು.

ಧಾರಣೆ ಕುಸಿತವಾದಲ್ಲಿ, ಸರ್ಕಾರ ಬೆಂಬಲ ಬೆಲೆ ಘೋಷಿಸುವುದೆಂದು ನಿರೀಕ್ಷಿಸಬಹುದಿತ್ತು. ಆದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಿಷೇಧಿತ ಬೆಳೆ. ಬೆಂಬಲ ಬೆಲೆ ಸಿಗುವುದು ದುಸ್ತರ’ ಎಂದು ಕಾಲುವೆ ಕೆಳಭಾಗದ ರೈತ ಹಿತ ರಕ್ಷಣಾ ಸಮಿತಿ ಸಂಚಾಲಕ ಶರಣುರಡ್ಡಿ ಹತ್ತಿಗೂಡೂರ ತಿಳಿಸಿದರು.

**
ಕೇಂದ್ರ ಸರ್ಕಾರ ಅಕ್ಕಿ ರಫ್ತು ಮಾಡುವುದನ್ನು ನಿಷೇಧಿಸಿದ್ದರಿಂದ ಬೆಲೆ ಕುಸಿದಿದೆ. ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಿದರೆ ರೈತರು ಸಂಕಷ್ಟದಿಂದ ಹೊರ ಬರಲು ಸಾಧ್ಯ
– ಭಾಸ್ಕರರಾವ್ ಮುಡಬೂಳ, ರೈತ ಮುಖಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT