ಚಕ್ರ ಉರುಳಿದರೆ ಜೀವನ

7

ಚಕ್ರ ಉರುಳಿದರೆ ಜೀವನ

Published:
Updated:
ಚಕ್ರ ಉರುಳಿದರೆ ಜೀವನ

ಕೈಯ್ಯಲ್ಲಿ ಕಾಸಿದ್ದರೆ, ಕುಟುಂಬದವರ ಸಹಕಾರವಿದ್ದರೆ ವಿಕಲಾಂಗರಿಗೆ ಹೇಗೋ ಜೀವನ ಸಾಗಿಸಲು ಮಾರ್ಗಗಳು ಹಲವಾರು. ಅನುಕೂಲಸ್ಥರಲ್ಲದ, ಕುಟುಂಬ ಜೀವನದಿಂದಲೂ ವಂಚಿತರಾದ ಅಂಗವಿಕಲ ನತದೃಷ್ಟರಿಗೆ ಬದುಕಿನ ಪ್ರತಿ ಕ್ಷಣವೂ ಚಲಿಸಲಾಗದ ಬೃಹತ್ ಬಂಡೆಯಂತೆ ಎದುರಾಗುತ್ತದೆ. ಕಾಲು ಕಳೆದು ಕೊಂಡಂತಹವರಿಗೆ ಇತರೆಲ್ಲರೊಡನೆ ಸಂಚರಿಸುವ ಚಲನೆಯ ಸಾಧ್ಯತೆಯಾದರೂ ಬೇಕೇ ಬೇಕಲ್ಲವೇ.

ಅಂತಹ ಒಬ್ಬ ನತದೃಷ್ಟನ ದೈನಂದಿನ ಬದುಕಿನ ಮನಕರಗುವ ದೃಶ್ಯ ಇದು. ಈ ಬೃಹತ್ ನಗರಿಯ ಶಿವಾಜಿ ನಗರದ ಬಳಿ ದಿನಗೂಲಿ ಮಾಡಿ ಜೀವಿಸುತ್ತಿದ್ದ, ಈ ಒಂಟಿ ಜೀವಿಗೆ ರಸ್ತೆಬದಿಯ ಗೂಡೇ ಆಶ್ರಯ. ಕೆಲವು ವರ್ಷಗಳ ಹಿಂದೆ ಅಚಾನಕ್ ಕಾಲುಗಳಿಗಂಟಿದ ರೋಗದಿಂದ ಕಾಲು ಕತ್ತರಿಸಬೇಕಾಯಿತು. ಆಗ ಆಶಾಕಿರಣವಾಗಿ ದಕ್ಕಿದ್ದು ಮೂರುಗಾಲಿಯ ಈ ಗಾಡಿ… ಹ್ಯಾಂಡ್ ಪೆಡಲ್ಡ್ ಟ್ರೈಸಿಕಲ್. ಇದನ್ನು ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿಯೋ, ಪೀಣ್ಯಾದ ರೋಟರಿ ಸಂಸ್ಥೆಯೋ, ( ಆತನಿಗೆ ನೆನಪಿಗೆ ಬಾರದು), ಈ ಗಾಡಿಯನ್ನು ದಾನ ಕೊಟ್ಟರಂತೆ.

ವಿಧಾನ ಸೌಧದ ಎದುರಿನ ಮೆಟ್ರೊ ನಿಲ್ದಾಣದ ರಸ್ತೆಯ ಬಳಿ ಈ ದೃಶ್ಯವನ್ನು ಕಳೆದವಾರ ಮಧ್ಯಾಹ್ನ ಕ್ಯಾಮೆರಾದಲ್ಲಿ ಸೆರೆಹಿಡಿದವರು, ಬಿ.ಸಿ.ಸಿ. ಲೇ ಔಟ್ ವಾಸಿ ಅದ್ವೈತ್ ರಘುನಂದನ್.ವಿ. ಈ ಛಾಯಾಚಿತ್ರ ಸೆರೆಹಿಡಿದ ನಂತರ ಆತನನ್ನು ಮಾತನಾಡಿಸಿದಾಗ ತಿಳಿದದ್ದು, ಈಗ ಕೂಲಿನಾಲಿ ಮಾಡಲಾಗದಿದ್ದರೂ ಅವರಿವರು ದಾನಕ್ಕೆ ಕೊಡುವ ಪುಡಿಗಾಸು ಪಡೆದು ಹೊಟ್ಟೆ ತುಂಬಿಕೊಳ್ಳುತ್ತಾನಂತೆ. ದಾನಕ್ಕೆ ಬಂದ ಆ ಮೂರುಗಾಲಿಯ ಗಾಡಿಯನ್ನಿಡಲು ಸೂರು ಇರದ ಅವನಿಗೆ ದಿನವಿಡೀ ಬಿಸಿಲಲ್ಲಿ ಅಥವ ಮಳೆಬಂದರೆ ಅದೇ ನೀರಲ್ಲಿ ತೊಯ್ಯುವ ಅಸಹಾಯಕತೆಯನ್ನು ಹೇಳಿಕೊಂಡನಂತೆ. ವೃದ್ಧಾಪ್ಯ ವೇತನ, ಜನ್-ಧನ್ ಖಾತೆ, ಆಧಾರ್ ಕಾರ್ಡ್, ಇದಾವುದರ ಪರಿವೆಯೇ ಇಲ್ಲದ ಇಂತಹವರ ಬದುಕೂ ಈ ಮಹಾನಗರಿಯಲ್ಲಿ ಹೇಗೋ ಸಾಗುತ್ತಿದೆ ಎಂದು ಮಣಿಪಾಲ್ ನ ಎಂ.ಐ. ಟಿ ಯಲ್ಲಿ ವ್ಯಾಸಂಗ ಮಾಡುತ್ತಿರುವ, ಜನಜೀವನ ಮತ್ತು ಕ್ಯಾಂಡಿಡ್ ಛಾಯಾಗ್ರಹಣ ಹವ್ಯಾಸಿ ಛಾಯಾಗ್ರಾಹಕ ಅಧ್ಯೈತ್ ರಘುನಂದನ್ ಅಚ್ಚರಿ ಪಡುತ್ತಿದ್ದಾರೆ.

ಅವರು ಬಳಸಿದ ಕ್ಯಾಮೆರಾ, ನಿಕಾನ್ ಆ 90, ಜೊತೆಗೆ 70-300 ಎಂ.ಎಂ ಜೂಂ ಲೆನ್ಸ್. ಅವರ ಎಕ್ಸ್ ಪೋಶರ್ ವಿವರ ಇಂತಿವೆ: 200 ಎಂ.ಎಂ. ಜೂಂ ಫೋಕಲ್ ಲೆಂಗ್ತ್ ಲೆನ್ಸ್ ನಲ್ಲಿ ಅಪರ್ಚರ್ ಈ 4.8, ಶಟರ್ ವೇಗ 1/ 1600 ಸೆಕೆಂಡ್, ಐ.ಎಸ್.ಒ 200. ಟ್ರೈಪಾಡ್ ಮತ್ತು ಫ್ಲಾಶ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

ಈ ಬಗೆಯ ಕ್ಯಾಂಡಿಡ್ ಛಾಯಾಗ್ರಹಣಕ್ಕೆ (ವಸ್ತು- ವ್ಯಕ್ತಿಗೆ ತಿಳಿಯದಂತೆ ಸಹಜವಾಗಿ ಸೆರೆಹಿಡಿಯುವುದು), ಬಹು ದೊಡ್ಡಳತೆಯ ಜೂಂ ಲೆನ್ಸ್ ನ ಬಳಕೆಯ ಅವಶ್ಯಕತೆ ಇಲ್ಲ. ಹಾಗಾಗಿ ಉತ್ತಮ ಬೆಳಕಿದ್ದಾಗ್ಯೂ ದೊಡ್ಡ ಅಪರ್ಚರ್ ನಿಂದಾಗಿ ಚಿತ್ರದ ಸಂಗಮ ವಲಯ ( ಡೆಪ್ತ್ ಆಫ್ ಫೀಲ್ಡ್) ಸಂಕುಚಿತವಾಗಿದೆ. ಆ ವ್ಯಕ್ತಿಯ ಪರಿಸ್ಥಿತಿ, ಸುತ್ತಲ ಪರಿಸರ ಮತ್ತು ಆತನ ಅತ್ಮಾಭಿಮಾನ, ಜೀವನ ನಿರ್ವಹಣೆಗೆ ಬೇಕಾದ ಪುಡಿಕಾಸು- ದಾನವನ್ನು ಮಾತ್ರ ಪಡೆಯುವ ಮತ್ತು ಅವನ್ನು ನೀಡುವ ಮೆಟ್ರೋ ಪ್ರಯಾಣಿಕರೊಬ್ಬರ ಸಹಿತ ನಾರ್ಮಲ್ ಅಥವಾ ವೈಡ್ ಆ್ಯಂಗಲ್ ಲೆನ್ಸ್ ನಲ್ಲಿ ಸ್ವಲ್ಪ ಕಾಯ್ದು ಕುಳಿತು ಸೆರೆಹಿಡಿಯಬಹುದಿತ್ತು. ಮಧ್ಯಾಹ್ನದ ಸಮಯವಾದ್ದರಿಂದ, ಅಪರ್ಚರ್ ಈ8 ಮತ್ತು ಶಟರ್ ವೇಗ 1/ 250 ಸೆಕೆಂಡ್ ಸರಿ ಹೊಂದಿ, ಚಿತ್ರಣವು ಇನ್ನಷ್ಟು ಸ್ಪುಟವಾಗಿ( ಶಾರ್ಪ್) , ಆತನ ಮುಖಭಾವ ಕೂಡಾ ಉತ್ತಮವಾಗಿ ಕಾಣುವಂತಾಗಿ, ಉತ್ತಮವಾದ ಕಾಂತಿಭೇದ-ವೈರುಧ್ಯದಲ್ಲಿ (ಕಾಂಟ್ರಾಸ್ಟ್) ಮೂಡುತ್ತಿತ್ತು.,

ಕಲಾತ್ಮಕವಾಗಿ ಚಿತ್ರ ಸೋತಿದೆ. ಛಾಯಾಚಿತ್ರಕಾರ, ದೃಶ್ಯವನ್ನು ಸೆರೆಹಿಡಿದ ನಂತರ ಆ ವ್ಯಕ್ತಿಯಿಂದ ಪಡೆದ ಮಾಹಿತಿಯು ಉಪಯುಕ್ತ ಹೌದು. ಆ ಬಗೆಯ ಮಂದಿಯ ಬದುಕಿನ ಚಿತ್ರ- ನುಡಿ ಬರಹ ( ಫೋಟೋ ಫೀಚರ್ ) ಮಾಡುವಲ್ಲಿ ಈ ಮಾದರಿಯ ಚಿತ್ರ ಪೂರಕವಾಗಬಹುದಷ್ಟೆ. ಬದುಕಿನ ಚಿತ್ರಣವನ್ನು ಸೆರೆಹಿಡಿಯುವಲ್ಲಿ, ಎಲ್ಲ ಕತೆಯನ್ನೂ ಸೆರೆಹಿಡಿದ ಚಿತ್ರವೇ ಹೇಳಬಹುದಾದ ಮತ್ತು ಭಾವ ಪೂರ್ಣವಾಗಿ ನಿರೂಪಿಸಬಲ್ಲ ಸಾಕಷ್ಟು ಅವಕಾಶ ಇರುತ್ತದೆ. ಅದರ ಸಾಧ್ಯತೆಗಳ ಅವಲೋಕನ, ಕೌತುಕ ದೃಷ್ಟಿ ಮತ್ತ್ತು ತಾಂತ್ರಿಕ ಪೂರ್ವಾಭ್ಯಾಸ- ತರಬೇತಿ, ಈ ಬಗೆಯ ಸಂದರ್ಭದಲ್ಲಿ ಛಾಯಾಚಿತ್ರಕಾರರಿಗೆ ಸಹಕಾರಿಯಾಗಬಲ್ಲದು.

ಭಾವನಾತ್ಮಕವಾಗಿ, ಮೇಲಿನ ಅಂಶಗಳು ನೋಡುಗನಿಗೆ ಪೂರ್ವ ಮಾಹಿತಿ ಇಲ್ಲದಿದ್ದರೂ, ನಗರದ ದೊಡ್ಡ ರಸ್ತೆಯೊಂದರ ಮೇಲೆ ಇತರೆ ವಾಹನಗಳ ಮಧ್ಯೆಯೇ ತಳ್ಳಿಕೊಂಡು ಸಾಗುವ ಈ ಬಗೆಯ ಅಸಹಾಯಕರ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಲ್ಲಿ ಮತ್ತು ಮನ ಮಿಡಿಯುವಲ್ಲಿ ಈ ಚಿತ್ರ ಗೆದ್ದಿದೆ. ಸೈಕಲ್ ಗಳಿಗೆ ಮತ್ತು ಈ ಥರಹದ ವಿಕಲಾಂಗರ ಗಾಡಿಗಳಿಗೆ ಪರ್ಯಾಯವಾದ ರಸ್ತೆ-ಪಕ್ಕದಲ್ಲೇ ಬೇಕಾಗಿರುವ ಸುರಕ್ಷಿತ ಪುಟ್ಟ ಪಥದ ಅವಶ್ಯಕತೆಯನ್ನು ನಗರಾಭಿವೃಧಿಯ ಅಧಿಕಾರಿಗಳ ಅಥವಾ ಸಂಬಂಧಪಟ್ಟವರ ಗಮನಕ್ಕೆ ತರುವಲ್ಲಿ ಈ ಚಿತ್ರ ಮಾರ್ಗದರ್ಶಿಯೂ ಆಗಿದ್ದು, ಛಾಯಾಚಿತ್ರಕಾರರು ಅಭಿನಂದನಾರ್ಹರು.

ಛಾಯಾಚಿತ್ರಕಾರ: ಅಧ್ವೈತ್ ರಘುನಂದನ್. ವಿ.

ಇಮೇಲ್: adwaith.v3@gmail.com 

ಮೊ. 9483372053

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು. ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್ metropv@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry