‘ಗೊಂಬೆ ಹೇಳುತೈತೆ ಅವರೇ ರಾಜಕುಮಾರ’

7

‘ಗೊಂಬೆ ಹೇಳುತೈತೆ ಅವರೇ ರಾಜಕುಮಾರ’

Published:
Updated:
‘ಗೊಂಬೆ ಹೇಳುತೈತೆ ಅವರೇ ರಾಜಕುಮಾರ’

* ಮತ್ತೆ ಬೆಂಗಳೂರಿಗೆ ಬಂದಿದ್ದೀರಿ ಹೇಗನಿಸುತ್ತದೆ?

ಬೆಂಗಳೂರಿಗೆ ಬರುವುದು ನನಗೆ ಯಾವಾಗಲೂ ಆಪ್ತವೇ. ಪ್ರತಿ ಬಾರಿ ಬರುವಾಗಲೂ ಇಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ನನ್ನ ಪ್ರಕಾರ ಭಾರತದ ಬೇರಾವ ನಗರಗಳಲ್ಲಿಯೂ ಈ ಬಗೆಯ ವೇಗದ ಬದಲಾವಣೆ ಅಸಾಧ್ಯ. ಸಂಚಾರ ದಟ್ಟಣೆ ಹೊರತುಪಡಿಸಿದರೆ ಬೆಂಗಳೂರು ನನ್ನ ಮೆಚ್ಚಿನ ನಗರಗಳಲ್ಲೊಂದು. ಇಲ್ಲಿನ ವಾತಾವರಣ ಆಹ್ಲಾದಕರ. ಬಹುಸಂಸ್ಕೃತಿಯ ಪ್ರೇಕ್ಷಕವರ್ಗವೇ ಈ ನಗರದ ಜೀವಾಳ. ಶಾಸ್ತ್ರೀಯ ಸಂಗೀತವನ್ನು ತಲೆದೂಗುತ್ತ ಕೇಳುತ್ತಾರೆ. ರಾಕ್ ಮ್ಯೂಸಿಕ್‌ಗೂ ಹೆಜ್ಜೆ ಹಾಕುತ್ತಾರೆ.

* ಕನ್ನಡ ಚಿತ್ರೋದ್ಯಮದೊಂದಿಗೆ ನಿಮ್ಮ ಸಂಬಂಧ?

ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೆ ರಾಜಕುಮಾರ... ಹೌದು ಭಾರತೀಯ ಚಿತ್ರರಂಗದ ಸಾರ್ವಕಾಲಿಕ ರಾಜಕುಮಾರ ಡಾ. ರಾಜ್‌ಕುಮಾರ್. ಅವರ ಎದುರಿನಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಡಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಇಂದಿಗೂ ಕನ್ನಡಿಗರು ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ಈ ಹಾಡನ್ನು ಮರೆಯದೆ ಹಾಡುತ್ತೇನೆ.

* ನಾಲ್ಕು ದಶಕಗಳ ನಿಮ್ಮ ಸಂಗೀತದ ಹಾದಿ ಬಗ್ಗೆ ಹೇಳಿ...

ನಾನು ಆಶಾವಾದಿ. ಹಾಗಾಗಿ ಸಂಗೀತ ಜೀವನದಲ್ಲಿ ಯಶಸ್ಸು, ಸೋಲು ಸಮವಾಗಿದ್ದರೂ ಯಶಸ್ಸನ್ನು ಮಾತ್ರ ಸದಾ ನೆನೆಯುತ್ತೇನೆ. ಸೋಲುಗಳು ನನ್ನನ್ನು ಎಂದಿಗೂ ನಿರಾಶೆಯ ಕೂಪಕ್ಕೆ ತಳ್ಳಿಲ್ಲ. 1968,1969ರಲ್ಲಿ ನೈಟ್‌ ಕ್ಲಬ್‌ನಿಂದ ಆರಂಭವಾಯಿತು ನನ್ನ ಸಂಗೀತ ಜೀವನ. ಅದೇ ಜೀವನಪ್ರೀತಿ, ಜನರ ಅಭಿಮಾನದ ಹದಮಿಳಿತ.

* ಪ್ರತಿ ಕಾಲಘಟ್ಟದಲ್ಲಿ ಬದಲಾದ ಪ್ರೇಕ್ಷಕವರ್ಗವನ್ನು ಹೇಗೆ ಮೆಚ್ಚಿಸುತ್ತಿದ್ದೀರ?

ಬದಲಾವಣೆ ನಿಸರ್ಗ ಸಹಜ ಎಲ್ಲರೂ ಸ್ವೀಕರಿಸಲೇಬೇಕು. ಹಾಗಂತ ಹಟಕ್ಕೆ ಬಿದ್ದು ಯಾರನ್ನೊ ಮೆಚ್ಚಿಸಲು ಬದಲಾವಣೆಗೆ ಒಡ್ಡಿಕೊಂಡಿಲ್ಲ. ನಾನು ಹೇಗಿದ್ದೇನೊ ಹಾಗೆಯೇ ಅಭಿಮಾನಿಗಳು ನನ್ನನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿಶೇಷವಾದ ಸವಾಲು ಎದುರಾಗಿಲ್ಲ.

* ಯುವ ಗಾಯಕರಿಗೆ ನಿಮ್ಮ ಸಲಹೆ ಏನು?

ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಿಸಿ. ವೇದಿಕೆಯಲ್ಲಿ ಪ್ರಾಮಾಣಿಕತೆ ಇರಲಿ. ಮುಖದಲ್ಲಿನ ಮಂದಹಾಸ ಮನಸ್ಸಿನ ಪ್ರತಿಬಿಂಬವಾಗಿರಲಿ. ಎಂದೂ ತಲುಪದ ಅನಂತ ಗುರಿ ಇರಲಿ. ಆ ಗುರಿ ಸಾಧನೆಗೆ ಛಲ ಜೊತೆಗಿರಲಿ.

* ಯಾವುದೇ ಔಪಚಾರಿಕ ಸಂಗೀತ ತರಬೇತಿಯ ಹೊರತಾಗಿಯೂ ದೇಶದ ಅತ್ಯುತ್ತಮ ಗಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದೀರಿ. ನಿಮ್ಮ ಪ್ರತಿಭೆಯ ಪೋಷಣೆ ಹೇಗೆ?ಹೌದು. ನಾನು ಎಂದೂ ಔಪಚಾರಿಕ ತರಬೇತಿ ಪಡೆದವಳಲ್ಲ. ಕನಸಿನಲ್ಲಿ ನಂಬಿಕೆ ಇರಿಸಿ ಅದರ ಬೆನ್ನತ್ತಿರುವುದೇ ಸಾಧನೆಗೆ ಕಾರಣ. ನಾನು ಎಂದಿಗೂ ಯಾರನ್ನು ಅನುಕರಿಸಿಲ್ಲ. ದೇವರ ದಯೆಯಿಂದ ನಾನು ಸಂಗೀತವನ್ನು ವೃತ್ತಿಯಾಗಿ ಆರಂಭಿಸಿದ ದಿನಗಳಲ್ಲಿ ದೃಶ್ಯ ಮಾಧ್ಯಮ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಹಾಗಾಗಿ ನಾನು ಬೇರೆ ಯಾವ ಗಾಯಕರನ್ನು ಅನುಕರಿಸುವ ಪ್ರಸಂಗವೇ ಎದುರಾಗಿಲ್ಲ. ನನ್ನದೇ ಭಿನ್ನ ಅಸ್ಮಿತೆ ಕಂಡುಕೊಳ್ಳಲು ಸಾಧ್ಯವಾಯಿತು.

* 17 ಭಾರತೀಯ ಭಾಷೆಗಳು 7 ವಿದೇಶಿ ಭಾಷೆಗಳಲ್ಲಿ ಹಾಡಿದ್ದೀರ. ಭಾಷೆ ಕಲಿಕೆಯ ಸವಾಲು ಹೇಗಿತ್ತು?

ಬಾಲ್ಯದಿಂದಲೇ ಭಾಷೆ ಕಲಿಕೆಗೆ ಭದ್ರ ಬುನಾದಿ ಸಿಕ್ಕಿದೆ. ವಿವಿಧ ಭಾಷೆಗಳ ಕಲಿಕೆಯಲ್ಲಿ ನನಗೂ ಆಸಕ್ತಿ ಇತ್ತು. ನನ್ನ ಶಾಲೆ ನನ್ನ ಆಸಕ್ತಿಗೆ ಪೂರಕವಾಗಿತ್ತು. ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮವಾದರೂ, ಮನೆಯಲ್ಲಿ ಹಿಂದಿ, ಮರಾಠಿ, ಫ್ರೆಂಚ್‌, ತಮಿಳು ಭಾಷೆ ಕಲಿಕೆಯ ವಾತಾವರಣವಿತ್ತು.

* ನಿಮ್ಮ ಉಡುಗೆ, ತೊಡುಗೆ ಹಾಗೂ ಶೈಲಿಯ ಬಗ್ಗೆ ಹೇಳಿ?

ನನ್ನ ಶೈಲಿ ಮಧ್ಯಮ ವರ್ಗದ ಕುಟುಂಬದಿಂದ ಪ್ರೇರೇಪಿತಗೊಂಡಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯನ್ನೇ ಸದಾ ಅನುಕರಿಸುತ್ತೇನೆ.

* ಭಾರತ ಮತ್ತು ವಿದೇಶಗಳಲ್ಲಿ ನಿಮ್ಮ ಪ್ರತಿಭೆಯನ್ನು ಕೆಲ ಮಾನವಾಸಕ್ತಿ (humanitarian) ಕ್ಷೇತ್ರಗಳಿಗೂ ಬಳಸಿಕೊಂಡಿದ್ದೀರಿ. ಅದರಲ್ಲಿ ನಿಮ್ಮ ಹೃದಯಕ್ಕೆ ಆಪ್ತವಾಗಿದ್ದು ಯಾವುದು?

ಚಾರಿಟೆಬಲ್‌ ಟ್ರಸ್ಟ್‌ಗಾಗಿ ನೀಡಿದ ಎಲ್ಲ ಕಾರ್ಯಕ್ರಮಗಳು ನನಗೆ ಆಪ್ತವೇ. ನಿರಾಶ್ರಿತರ ಹಾಗೂ ಬಡ ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲು ನಡೆಸಿಕೊಟ್ಟ ಕಾರ್ಯಕ್ರಮಗಳು ಇಷ್ಟವಾಗಿದ್ದವು. ಇಂದಿಗೂ ಅಂತಹ ಕಾರ್ಯಕ್ರಮಗಳನ್ನು ನೀಡುವಾಗ ನನ್ನ ಸಾಮರ್ಥ್ಯ ಇಮ್ಮಡಿಯಾಗುತ್ತದೆ.

* ಕಲೆಯೊಂದಿಗೆ ಕಲಾವಿದರು ಭಾವನಾತ್ಮಕ ಸಂಬಂಧ ಇಟ್ಟುಕೊಳ್ಳುವುದು ಎಷ್ಟು ಮುಖ್ಯ?

ನನಗೆ ಎಲ್ಲವೂ ಭಾವನಾತ್ಮಕವೇ. ಎಲ್ಲವನ್ನೂ ನನ್ನ ಹೃದಯ ಮತ್ತು ಆತ್ಮದ ಸಮ್ಮಿಲನದೊಂದಿಗೆ ಮಾಡುತ್ತೇನೆ. ಒಬ್ಬ ಉತ್ತಮ ಕಲಾವಿದ ಕಲೆಯೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಲೇಬೇಕು. ಇಲ್ಲವಾದಲ್ಲಿ ಆತನ ಪ್ರದರ್ಶನ ಯಾಂತ್ರಿಕವಾಗುತ್ತದೆ.

* ನಿಮ್ಮ ಮುಂದಿನ ಯೋಜನೆಗಳೇನು?

ನಾನು ಈ ಕ್ಷಣಕ್ಕಾಗಿ ಜೀವಿಸುತ್ತೇನೆ. ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಈಗ ನಾನು ಏನಾಗಿದ್ದೇನೋ ಅದರಲ್ಲಿ ನನಗೆ ತೃಪ್ತಿಯಿದೆ. ಸದ್ಯ ದೇಶ, ವಿದೇಶಗಳಲ್ಲಿ ಸಂಗೀತ ಕಛೇರಿಗಳಲ್ಲಿ ನಿರತನಾಗಿದ್ದೇನೆ. ಮಗಳು, ಮೊಮ್ಮಗಳೊಂದಿಗೆ ಹಾಡುವ ಅನೇಕ ಯೋಜನೆಗಳು ನನ್ನ ಮುಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry