ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮವಾಗಲಿ ಮತ ಚಲಾವಣೆ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಹಿಂದೆಲ್ಲ ವಿಧಾನಸಭೆಗೆ ಮತ್ತು ಲೋಕಸಭೆಗೆ ಚುನಾವಣೆ ನಡೆದಾಗ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಹೆಚ್ಚು ಚರ್ಚೆಗೆ ಒಳಪಡುತ್ತಿದ್ದವು. ಅದರಲ್ಲಿ ಗಂಭೀರ ಚಿಂತನೆಯ ವ್ಯಕ್ತಿಗಳು ಭಾಗಿಯಾಗುತ್ತಿದ್ದರು. ಅದಕ್ಕೆ ಮತದಾರರು ವಿವಿಧ ಮಾಧ್ಯಮಗಳ ಮೂಲಕ ಸ್ಪಂದಿಸುತ್ತಿದ್ದರು. ಅಲ್ಲೆಲ್ಲ ವ್ಯಕ್ತಿಗತ ತೇಜೋವಧೆಗೆ ಅವಕಾಶವೇ ಇರುತ್ತಿರಲಿಲ್ಲ. ಇದರಿಂದ ವ್ಯವಸ್ಥೆಯ ಬಗ್ಗೆ ಹಿರಿಮೆ ದಾಖಲಾಗುತ್ತ ಹೋಗುತ್ತಿತ್ತು. ಸ್ವಾತಂತ್ರ್ಯದ ನಂತರ ಇಷ್ಟು ದೀರ್ಘಕಾಲ ಎಲ್ಲಾ ವರ್ಗದ ಜನ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದರೆ ಅದಕ್ಕೆ ಗಂಭೀರ ಪರಂಪರೆಯೇ ಕಾರಣ. ಯಾಕೆಂದರೆ, ಅಲ್ಲಿ ‘ಅರಿವು’ ಮತ್ತು ‘ಭಾಗಿಯಾಗುವಿಕೆ’ ಏಕಕಾಲದಲ್ಲಿ ನಡೆಯುತ್ತಿತ್ತು. ಪರೋಕ್ಷವಾಗಿ ಅದು ಪ್ರಜಾಪ್ರಭುತ್ವದ ಹೆಚ್ಚುಗಾರಿಕೆಯಾಗುತ್ತಿತ್ತು. ನಿಜವಾದ ನೀತಿ ಸಂಹಿತೆಯಾಗಿ ಧ್ವನಿಪೂರ್ಣವಾಗುತ್ತಿತ್ತು.

ಇಂದು ಚುನಾವಣಾ ಪ್ರಣಾಳಿಕೆಗಳನ್ನು ಯಾರೂ ಗಂಭೀರವಾಗಿ ಮಂಡಿಸುತ್ತಲೇ ಇಲ್ಲ. ಸಂಪ್ರದಾಯವೆಂಬಂತೆ ಕೊನೆ ಗಳಿಗೆಯಲ್ಲಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಾರೆ. ಸಂಬಂಧಿಸಿದ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಅದರ ಬಗ್ಗೆ ಅರಿವೇ ಇರುವುದಿಲ್ಲ. ಆದ್ದರಿಂದಲೇ ಪ್ರಣಾಳಿಕೆಯ ಚೌಕಟ್ಟಿನಿಂದಾಚೆಗೆ ಎಲ್ಲರೂ ಮಾತಾಡಲು ಪ್ರಯತ್ನಿಸುವರು. ಈ ಮಾತು ಬಹಳಷ್ಟು ಬಾರಿ ಸಭ್ಯತೆಯ ಭಾಗವಾಗಿ ಬಂದಿರುವುದೇ ಇಲ್ಲ. ನಮ್ಮ ಮುಂದೆ ಒಂದು ನಾಗರಿಕ ಸಮಾಜವಿದೆ, ಅದು ನಮ್ಮ ಎಲ್ಲಾ ನಡಾವಳಿಗಳನ್ನುಗಮನಿಸುತ್ತಿರುತ್ತದೆ ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡುತ್ತದೆ ಎಂಬ ಯೋಚನೆಯೇ ಇಲ್ಲ ಎಂಬಂತೆ ಅದು ಅಭಿವ್ಯಕ್ತಿಗೊಳ್ಳುತ್ತಿದೆ.

ಒಂದು ಸಾಮಾಜಿಕ ಸಂದರ್ಭದಲ್ಲಿ ನಾವು ಬಯಸುವ ನೈತಿಕತೆ,‌ ಸೌಜನ್ಯ, ಪಾಪಪ್ರಜ್ಞೆ ಇತ್ಯಾದಿಗಳನ್ನು ಎಲ್ಲೂ ಒಳಗೆ ಬಿಟ್ಟುಕೊಂಡಿರುವುದಿಲ್ಲ. ಇದನ್ನು ಸಿನಿಕತನದಿಂದ ಆರೋಪಿಸುತ್ತಿಲ್ಲ. ಕೆಲವು ಸೌಜನ್ಯಪೂರ್ಣ ನಾಯಕರು ಮತ್ತು ಕಾರ್ಯಕರ್ತರು ಇದ್ದಾರೆ. ಆದರೆ ಆರೋಪ ಮತ್ತು ಪ್ರತ್ಯಾರೋಪ ತೀರಾ ಕ್ಷುಲ್ಲಕ ಮಟ್ಟದಲ್ಲಿ ನಡೆಯತೊಡಗಿರುತ್ತದೆ. ಹತ್ತು ಜನ ಕೂತಿರುವ ಜಾಗಕ್ಕೆ ಹೋಗಿ ನೋಡಿ. ಅಲ್ಲಿ ಅವರು ಮಾತಾಡಿಕೊಳ್ಳುವುದು, ‘ಏನು ಹೊಲಸು ರಾಜಕೀಯವಪ್ಪ’ ಎಂದು. ಈ ಅಭಿಪ್ರಾಯ ಜನಸಾಮಾನ್ಯರಲ್ಲಿ ಎಂದೆಂದೂ ಬರಬಾರದು. ಯಾಕೆಂದರೆ ಎಲ್ಲರೂ ಸರಳ ವ್ಯಕ್ತಿತ್ವವನ್ನು ಬಯಸುವಂಥವರು. ದೊಡ್ಡ ದೊಡ್ಡ ಘೋಷಣೆಗಳ ಬಗ್ಗೆ ಅವರಿಗೆ ನಂಬುಗೆಯೇ ಬರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಏನು ಮಾಡಿದರೂ ಸಂತೋಷಪಡುತ್ತಾರೆ. ಆದ್ದರಿಂದ ಗಾಂಧಿಯವರ ಚಿಂತನೆಗಳಿಂದ ಪ್ರಭಾವಿತರಾದ ಕಾಮರಾಜ ನಾಡಾರ್ ಅಂತಹವರು ‘ನೋಡೋಣ’ (ಪಾಕಲಾಮ್) ಎಂದು ಹೇಳುತ್ತಲೇ ಜನಸಾಮಾನ್ಯರ ಆಶಯಗಳಿಗೆ ಹತ್ತಿರವಾಗುತ್ತಿದ್ದರು.

ಮತ್ತೊಂದು ಮುಖ್ಯ ವಿಷಯ: ಚುನಾವಣಾ ಆಯೋಗದವರು ನೀತಿ ಸಂಹಿತೆಯ ನೆಪದಲ್ಲಿ ಅಕ್ರಮಹಣ, ಅಕ್ರಮವಾಗಿ ಸಾಗಿಸುವ ಬೇರೆ ಬೇರೆ ವಸ್ತುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇವೆಲ್ಲವೂಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುವಂಥವು ಎಂಬುದು ಅವರ ಆರೋಪ. ದುರಂತವೆಂದರೆ ಇದರಿಂದ ಜನಸಾಮಾನ್ಯರಲ್ಲಿ ಅರ್ಥಾತ್ ಮತದಾರರಲ್ಲಿ ಚುನಾವಣೆಯ ಬಗೆಗೆ ಹೇಸಿಗೆ ಬೆಳೆಯುತ್ತಾ ಹೋಗುತ್ತದೆ, ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಅವರು ಜುಗುಪ್ಸೆ ಬೆಳೆಸಿಕೊಳ್ಳುವರು. ಇದು ಗಾಢಗೊಳ್ಳಲು ಬಿಡಬಾರದು.

ಚುನಾವಣಾ ಆಯೋಗದವರಲ್ಲಿ ಒಂದು ಮನವಿ: ಹೀಗೆ ವಶಪಡಿಸಿಕೊಂಡ ಅಕ್ರಮ ಹಣ ಮತ್ತು ವಸ್ತುಗಳ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸುವ ಅಗತ್ಯವಿದೆಯೇ? ಚುನಾವಣೆ ಮುಗಿದ ನಂತರ ತಿಳಿಸಿದರೆ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ದುಪ್ಪಟ್ಟು ಆಗುವುದಿಲ್ಲವೇ? ಬೇಕಾದರೆ, ‘ಈ ಕಾರಣಕ್ಕಾಗಿ ಹೀಗೆ ಮಾಡಬೇಕಾಯಿತು’ ಎಂದರಾಯಿತು. ಅದರಿಂದ ಘನತೆಯೂ ಹೆಚ್ಚುವುದು. ಆ ಮೂಲಕ ಚುನಾವಣೆ ಎಂಬ ಪವಿತ್ರ ಕಾರ್ಯದ ಬಗೆಗೆ ಗೌರವ ಕಾಪಾಡಿದಂತಾಗುವುದು. ಪ್ರಜಾಪ್ರಭುತ್ವದ ಅತ್ಯುತ್ತಮ ವ್ಯವಸ್ಥೆಯ ಮೂಲ ಧರ್ಮ ವಿಸ್ತರಿಸಿದಂತಾಗುವುದು.

-ಶೂದ್ರ ಶ್ರೀನಿವಾಸ್, ಬೆಂಗಳೂರು

*** 

ಸ್ವಚ್ಛವಾಗಲಿ ವ್ಯವಸ್ಥೆ

ರಾಜಕೀಯ ಪಕ್ಷಗಳು ‘ಜಾಗೃತಿ ಯಾತ್ರೆ’, ‘ಜನಾಶೀರ್ವಾದ ಯಾತ್ರೆ’, ‘ವಿಕಾಸ ಪರ್ವ’ ಎಂದೆಲ್ಲ ಹಲವು ಮುಖವಾಡಗಳನ್ನು ಧರಿಸಿ ಜನರ ಬಳಿಗೆ ಧಾವಿಸಿವೆ. ಶಿಕ್ಷಣ, ಉದ್ಯೋಗ, ಆರೋಗ್ಯದಂಥ ಪ್ರಮುಖ ವಿಚಾರಗಳನ್ನು ಕಡೆಗಣಿಸಿ, ಮಿಕ್ಕೆಲ್ಲ ವಿಚಾರಗಳನ್ನು ತಮ್ಮ ಪ್ರಣಾಳಿಕೆಗಳಲ್ಲಿ ತುಂಬಿ ಜನರಿಗೆ ಆಮಿಷ ತೋರಿಸುತ್ತಿವೆ.

ನಿನ್ನೆ ಮೊನ್ನೆಯವರೆಗೆ ರಾಜಕೀಯ ಪಕ್ಷಗಳ ಬಗ್ಗೆ ಅಸಹನೆ ತೋರಿದ್ದ ವಿವಿಧ ಸಮುದಾಯಗಳ ಜನರು, ಇಂದು ಮೌನವಾಗಿ ಅವೇ ಪಕ್ಷಗಳ ಸಮಾವೇಶಗಳಿಗೆ ಹೋಗಿ ಜೈಕಾರ ಹಾಕಿ ಬರುತ್ತಿರುವುದು ಸೋಜಿಗ ಮೂಡಿಸುತ್ತಿದೆ.

ಕೃಷಿಯೇ ಪ್ರಧಾನವಾಗಿರುವ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ ಯಾವುದೇ ಪಕ್ಷಕ್ಕೆ ರೈತರ ಓಲೈಕೆ ಅತ್ಯಗತ್ಯ. ಆದರೆ ನಮ್ಮಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದು ಹೋದರೂ ರೈತರ ಸ್ಥಿತಿ ಮಾತ್ರ ಬದಲಾಗಿಲ್ಲ. ಚುನಾವಣಾ ಸಮಯದಲ್ಲಿ ರೈತರು ಆಮಿಷಕ್ಕೊಳಗಾಗುವುದೇ ಇದಕ್ಕೆ ಕಾರಣ. ‘ಸಮಾವೇಶಗಳಲ್ಲಿ ಪಾಲ್ಗೊಳ್ಳುವುದೇ ಭಾಗ್ಯ’ ಎಂದು ತಿಳಿಯುವ ರೈತ, ಇದರಿಂದ ತನ್ನ ಅಳಿವಿಗೆ ತಾನೇ ಕಾರಣವಾಗುತ್ತಿದ್ದೇನೆ ಎಂಬುದನ್ನು ಅರಿಯುತ್ತಿಲ್ಲ.

ನಮ್ಮಲ್ಲಿ ಜಾತಿಗೊಬ್ಬ ಧಾರ್ಮಿಕ ಗುರು ಇದ್ದಾರೆ. ಅಂಥ ಗುರುಗಳೇ ಈಗ ಚುನಾವಣಾ ರಾಜಕಾರಣದಲ್ಲಿಪ್ರಭಾವ ಬೀರಲು ಹೊರಟಿರುವುದು ದೊಡ್ಡ ದುರಂತ. ಮಠಾಧೀಶರು ಸಹ ಜಾತಿ ಲೆಕ್ಕಾಚಾರದಲ್ಲಿ ತೊಡಗಿರುವುದು ಸಮಾಜದ ಮುಂದಿರುವ ಬಹುದೊಡ್ಡ ಅಪಾಯವೂ ಹೌದು.

ಬೆಂಗಳೂರು ನಗರದಲ್ಲಿ ಉದ್ಯೋಗಿಯಾಗಿರುವ ಯುವಕನೊಬ್ಬ ಇತ್ತೀಚೆಗೆ ತನ್ನ ಹೆಸರನ್ನು ಹಳ್ಳಿಯೊಂದರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ್ದ. ಕಾರಣ ಕೇಳಿದರೆ, ‘ಗ್ರಾಮೀಣ ಪ್ರದೇಶದಲ್ಲಿ ವೋಟಿಗೆ ಲಾಭವಿದೆ. ಅಲ್ಲಿ ಮಾಂಸ, ಮದ್ಯ ಹಾಗೂ ಹಣ ಸಿಗುತ್ತದೆ’ ಎಂದು ಉತ್ತರಿಸಿದ. ವಿದ್ಯಾವಂತರೇ ಹೀಗೆ ಚಿಂತಿಸಿದರೆ, ಉಳಿದವರ ಚಿಂತನೆ ಹೇಗಿರುತ್ತದೆ?

ರಾಜಕಾರಣಿಗಳನ್ನು, ಸರ್ಕಾರವನ್ನು ಮತ್ತು ನಮ್ಮನ್ನು ನಾವೇ ಜರೆದುಕೊಳ್ಳುತ್ತಾ ನಾವು ನಮ್ಮ ಅಸಲಿ ಮುಖವನ್ನೇ ಮರೆತಿದ್ದೇವೆ. ಅದನ್ನು ನೋಡುವ ಧೈರ್ಯವೂ ನಮಗಿಲ್ಲದಂತಾಗಿದೆ. ಥಳುಕುಬಳುಕಿನ ಜೀವನವೇ ಒಗ್ಗಿ ಹೋಗಿದೆ. ನಾವು ಯಾವಾಗ ನಮ್ಮ ಅಸಲಿ ಮುಖದ ಸೌಂದರ್ಯವನ್ನು ಅರಿಯುತ್ತೇವೋ ಅಂದೇ ನಮ್ಮ ವ್ಯವಸ್ಥೆ ಸ್ವಚ್ಛವಾಗುತ್ತದೆ. ವ್ಯವಸ್ಥೆ ಮತ್ತು ಮತದಾರ ಸ್ವಚ್ಛಗೊಂಡಾಗ ಪಕ್ಷಗಳೂ ನೂರು ಬಾರಿ ಚಿಂತಿಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತವೆ. ಅಂತಹ ದಿನಗಳು ಬಹುಬೇಗ ಬರಲಿ ಎಂದು ಆಶಿಸೋಣ.

-ಕಿಕ್ಕೇರಿ ಎಂ. ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT