ವಾಯುಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಯೋಜನೆ ರೂಪಿಸಿ

7

ವಾಯುಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಯೋಜನೆ ರೂಪಿಸಿ

Published:
Updated:
ವಾಯುಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಯೋಜನೆ ರೂಪಿಸಿ

ವಿಶ್ವದ 20 ಅತ್ಯಂತ ಹೆಚ್ಚು ವಾಯುಮಾಲಿನ್ಯಪೀಡಿತ ನಗರಗಳ ಪಟ್ಟಿಯಲ್ಲಿ ದೆಹಲಿ ಸೇರಿದಂತೆ ಭಾರತದ 14 ನಗರಗಳು ಸ್ಥಾನ ಪಡೆದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವರದಿ ಹೇಳಿರುವುದು ಆತಂಕಕಾರಿ. ಭಾರತದ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಈಗಾಗಲೇ ಅನೇಕ ವರದಿಗಳು ಬಂದಿವೆ. ಆದರೆ ಭಾರತದ ಚಿಕ್ಕ ಚಿಕ್ಕ ನಗರಗಳಲ್ಲೂ ವಾಯುಮಾಲಿನ್ಯದ ಸಮಸ್ಯೆ ತೀವ್ರಗೊಳ್ಳುತ್ತಿದೆ ಎಂಬುದು ಈ ವರದಿಯಲ್ಲಿನ ಮುಖ್ಯ ಅಂಶ. ಇದು ನಮಗೆ ಎಚ್ಚರಿಕೆ ಗಂಟೆಯಾಗಬೇಕು. ಕಾನ್ಪುರ, ಫರಿದಾಬಾದ್, ವಾರಾಣಸಿ, ಗಯಾದಂತಹ ಪಟ್ಟಣಗಳಲ್ಲಿರುವ ವಾಯುಮಾಲಿನ್ಯ ತೀವ್ರ ಪ್ರಮಾಣದ್ದು. ಆದರೆ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳಲ್ಲಿ ದೆಹಲಿಯಂತಹ ದೊಡ್ಡ ನಗರಗಳು ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ಸಣ್ಣ ನಗರ– ಪಟ್ಟಣಗಳು ಹೆಚ್ಚಿನ ಗಮನ ಸೆಳೆದುಕೊಳ್ಳುತ್ತಿಲ್ಲ ಎಂಬುದು ನಮ್ಮ ನೀತಿನಿರೂಪಕರ ಕಣ್ಣು ತೆರೆಸಬೇಕಿದೆ.

ರಾಷ್ಟ್ರೀಯ ವಾಯು ಶುದ್ಧೀಕರಣ ಕಾರ್ಯಕ್ರಮ (ಎನ್‌ಸಿಎಪಿ) ಕರಡನ್ನು ಸಾರ್ವಜನಿಕ ಅವಗಾಹನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಈ ಸಂದರ್ಭದಲ್ಲೇ ಡಬ್ಲ್ಯುಎಚ್‍ಒ ವರದಿ ಪ್ರಕಟವಾಗಿರುವುದು ಕಾಕತಾಳೀಯ. ಈ ಕರಡಿಗೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯಗಳನ್ನು ಸಲ್ಲಿಸಲು ಮೇ 17ರವರೆಗೆ ಕಾಲಾವಕಾಶ ಇದೆ. ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳನ್ನು ಹೆಚ್ಚಿಸುವ ಬಗ್ಗೆ ಈ ಕರಡಿನಲ್ಲಿ ಪ್ರಸ್ತಾಪ ಇದೆ. ಆದರೆ ವಾಯುಮಾಲಿನ್ಯ ಕಡಿತಗೊಳಿಸುವ ಬಗ್ಗೆ ಇದರಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಇನ್ನು ಮೂರು ವರ್ಷಗಳಲ್ಲಿ ವಾಯುಮಾಲಿನ್ಯವನ್ನು ಶೇ 35ರಷ್ಟು ಹಾಗೂ ಐದು ವರ್ಷಗಳಲ್ಲಿ ಶೇ 50ರಷ್ಟನ್ನು ಇಳಿಸಬೇಕು ಎಂದು ಹಲವು ಪರಿಸರವಾದಿಗಳು ಸಲಹೆ ನೀಡಿದ್ದರು. ಆದರೆ ಈಗ ಬಿಡುಗಡೆ ಮಾಡಿರುವ ಕರಡಿನಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಕೇಂದ್ರ ಸರ್ಕಾರದ ವಾಯು ಶುದ್ಧೀಕರಣ ಕಾರ್ಯಕ್ರಮ ಮಹತ್ವಾಕಾಂಕ್ಷೆಯದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಗುರಿಗಳ ಸಾಧನೆಗೆ ರಾಜ್ಯ ಸರ್ಕಾರಗಳ ಕೊಡುಗೆಯೂ ಮುಖ್ಯ. ವಾಯುಮಾಲಿನ್ಯ ನಿಯಂತ್ರಣಕ್ಕೆ ಸಮನ್ವಯದ ಕಾರ್ಯಕ್ರಮ ಅಗತ್ಯ. ಏಕೆಂದರೆ ವಾಯುಮಾಲಿನ್ಯದ ಮೂಲ ನಗರದಿಂದ ನಗರಕ್ಕೆ ಭಿನ್ನವಾದುದು. ಹೀಗಾಗಿ ನಗರ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾಗುತ್ತದೆ.

ಕಳೆದ ಮೂರು ವರ್ಷಗಳಿಂದ ವಾಯುಮಾಲಿನ್ಯ ಕುರಿತಾದ ಅಭಿಯಾನಗಳು ಹಾಗೂ ಕೋರ್ಟ್ ಕೈಗೊಂಡ ಕ್ರಮಗಳಿಂದಾಗಿ ವಾಯುಮಾಲಿನ್ಯವನ್ನು ಗಂಭೀರ ಕಾಳಜಿಯ ವಿಚಾರವಾಗಿ ಭಾರತ ಪರಿಗಣಿಸುತ್ತಿದೆ. ರಾಷ್ಟ್ರೀಯ ವಾಯು ಶುದ್ಧೀಕರಣ ಕಾರ್ಯಕ್ರಮವನ್ನು ರೂಪಿಸುವುದಕ್ಕೂ ಸುಪ್ರೀಂ ಕೋರ್ಟ್ ಕಾರಣ. ನಾಲ್ಕು ವಾರದೊಳಗೆ ಯೋಜನೆಯೊಂದನ್ನು ರೂಪಿಸುವುದಾಗಿ ಪರಿಸರ ಸಚಿವಾಲಯ ಮಾರ್ಚ್ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಈ ವಾಯು ಶುದ್ಧೀಕರಣ ಕಾರ್ಯಕ್ರಮದ ಅಡಿ ರಾಜ್ಯದ ಬೆಂಗಳೂರು, ದಾವಣಗೆರೆ, ಕಲಬುರ್ಗಿ ಮತ್ತು ಹುಬ್ಬಳ್ಳಿ -ಧಾರವಾಡವನ್ನು ಗುರುತಿಸಲಾಗಿದೆ.

ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶದ ಕ್ಯಾನ್ಸರ್, ನ್ಯುಮೋನಿಯಾ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎಂಬುದು ಕಳವಳದ ಸಂಗತಿ. ಈ ಕಾಯಿಲೆಗಳಿಂದ ಜಗತ್ತಿನಲ್ಲಿ ಪ್ರತೀ ವರ್ಷ ಸಾಯುವವರ ಸಂಖ್ಯೆ 70 ಲಕ್ಷ. 2016ರಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಹೊರಗಿನ ವಾಯುಮಾಲಿನ್ಯದಿಂದ ಸತ್ತಿದ್ದಾರೆ. 30 ಲಕ್ಷಕ್ಕೂ ಹೆಚ್ಚು ಜನ ಸೌದೆ, ಬೆರಣಿ ಒಲೆಗಳ ಬಳಕೆಯಿಂದಾಗಿ ಉಂಟಾಗುವ ವಾಯುಮಾಲಿನ್ಯಕ್ಕೆ ಬಲಿಯಾಗಿದ್ದಾರೆ ಎಂಬುದನ್ನೂ ಡಬ್ಲ್ಯುಎಚ್ಒ ವರದಿ ಹೇಳಿದೆ. ಈ ಪೈಕಿ ಮೂರನೇ ಒಂದರಷ್ಟು ಸಾವುಗಳು ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದ್ದು ಇದರಲ್ಲಿ ಭಾರತವೂ ಸೇರಿದೆ ಎಂಬುದು ನಮಗೆ ನೆನಪಿರಬೇಕು. ಹೀಗಾಗಿ ಈ ಸಮಸ್ಯೆಯನ್ನು ತುರ್ತಿನದಾಗಿ ಭಾವಿಸಿ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry