ವಾಯುವ ಕೂಡುವ ಮುನ್ನ

7

ವಾಯುವ ಕೂಡುವ ಮುನ್ನ

Published:
Updated:
ವಾಯುವ ಕೂಡುವ ಮುನ್ನ

ಲಿಂಗಾಯತವೆಂಬುದು ನಿತ್ಯ ಬದುಕಿನ ಶೋಧ. ಈ ಬದುಕು ಈ ಭೂಮಿಯ ಮೇಲೆ ಆಗುವುದು, ಆಗಬೇಕಾಗಿರುವುದು, ಆಗುತ್ತಾ ಸಾಗುವುದು. ಇದು ಕಾಯ-ಜೀವ; ಕಾಯಕ-ಜೀವ; ಲಿಂಗ-ಅಂಗ ಸಂಬಂಧಗಳಲ್ಲಿ ಪರಿಣಾಮಿಯಾಗುವುದು. ವಚನ ಚಳವಳಿಯ ಆಶಯವೇ ಈ ಪ್ರಕ್ರಿಯೆಯಲ್ಲಿ ಬದುಕನ್ನು ವ್ಯಾಖ್ಯಾನಿಸಿಕೊಂಡಿದೆ. ಕಾಯಕ್ಕೆ ಮಹತ್ವ ಕೊಡುತ್ತಲೇ ಕಾಯ ಶುದ್ಧಿಗೆ ಆದ್ಯತೆ ನೀಡಿದ್ದಾರೆ. ಕಾಯ-ಜೀವ ಸಂಬಂಧ ನಿಸರ್ಗಸಹಜ ಪ್ರಕ್ರಿಯೆಯಲ್ಲಿ ಆಗುವುದು. ಇದನ್ನು ಭವಿತನದಲ್ಲಿ ಗುರುತಿಸಲಾಗಿದೆ. ಇನ್ನು ಆಗಬೇಕಾಗಿರುವುದು, ಭವಿತನವನ್ನು ಕಳೆದುಕೊಂಡು ಭಕ್ತನಾಗುವುದು.

ಭವಿಯ ಕಳೆದೆವೆಂಬ ಮರುಳು ಜನಂಗಳು ನೀವು ಕೇಳಿರೆ

ಭವಿಯಲ್ಲವೆ ನಿಮ್ಮ ತನುಗುಣಾದಿಗಳು?

ಭವಿಯಲ್ಲವೆ ನಿಮ್ಮ ಪ್ರಾಣಾದಿಗಳು?

ಭವಿಯಲ್ಲವೆ ನಿಮ್ಮ ಮನಗುಣಾದಿಗಳು?

ಇವರೆಲ್ಲರೂ ಭವಿಯ ಹಿಡಿದು ಭವಭಾರಿಗಳಾದರು

ನಾನು ಭವಿಯ ಪೂಜಿಸಿ ಭವನಾಸ್ತಿಯಾದೆನು.

ಅಲ್ಲಮಪ್ರಭುಗಳ ಈ ವಚನ ಕಾಯ-ಜೀವ ಸಂಬಂಧದ ನೆಲೆಯ ಭವಿಗುಣಗಳನ್ನು ಹೇಳುತ್ತಾ ಅದನ್ನು ಹೇಗೆ ದಾಟಬೇಕೆನ್ನುವುದನ್ನು ಅಧ್ಯಾಹಾರಭಾವದಲ್ಲಿ ನಿವೇದಿಸಿದೆ. ಭವಿತನವನ್ನು ಕಳೆದುಕೊಂಡು ಭಕ್ತನಾಗುವುದು ಅಂದರೆ ಕಾಯವನ್ನು ಕಾಯಕಕ್ಕೆ ಅಣಿಗೊಳಿಸುವುದು. ಕಾಯಕ ಜೀವಿಯ ಆಗುವಿಕೆಯೆಂದರೆ ಸತ್ಯಶುದ್ಧ ಕಾಯಕದಿಂದ ಭಕ್ತನಾಗುತ್ತಾ ನಿತ್ಯ ದಾಸೋಹದಿಂದ ಶರಣನಾಗುವುದು. ಈ ಭವಿತನ ಭವ ಭಾರಿಯಾದುದು. ಭವನಾಸ್ತಿಯಾಗುವುದು ಅಂದರೆ ಭಕ್ತನಾಗುತ್ತಾ ಶರಣನಾಗುವುದು ಶರಣನಾದವನು ಮಾಹೇಶ್ವರನಾಗುವ ಆಗುತ್ತಾ ಸಾಗುವ ಪ್ರಕ್ರಿಯೆಗೆ ಸಂಬಂಧಿಸಿದುದು. ಇದಕ್ಕೆ ಉಪಾದಿಗುಣವಾಗಿ ಲಿಂಗ ಸಂಬಂಧಿಯಾದ ಅಂಗ ಲಿಂಗಾಂಗ ಸಾಮರಸ್ಯದಲ್ಲಿ ಸ್ವಯಂಭುವಾಗುತ್ತಾ ಜಂಗಮ ಶೀಲವಾಗುತ್ತದೆ.

ಎಣ್ಣೆ ಬೇರೆ ಬತ್ತಿ ಬೇರೆ ಎರಡೂ ಕೂಡಿ ಸೊಡರಾಯಿತ್ತು

ಪುಣ್ಯಬೇರೆ ಪಾಪ ಬೇರೆ ಎರಡೂ ಕೂಡಿ ಒಡಲಾಯಿತ್ತು

ಮಿಗಬಾರದು ಮಿಗದಿರಬಾರದು

ಕಾಯ ಗುಣವಳಿದು ಮಾಯಾ ಜ್ಯೋತಿ ವಾಯುವ ಕೂಡುವ ಮುನ್ನ

ಭಕ್ತಿಯ ಮಾಡಬಲ್ಲಡೆ ಆತನೇ ದೇವ ಗುಹೇಶ್ವರಾ.

ಹುಟ್ಟು-ಸಾವಿನ ನಡುವೆ ಜೀವ-ದೇವನಾಗುವ ಬದುಕನ್ನು ದಿವ್ಯವಾಗಿಸಿಕೊಳ್ಳುವ ಈ ಜೀವನ ಸಿದ್ಧಾಂತ ಕನ್ನಡ ನೆಲದ ಕನ್ನಡ ಭಾಷೆಯ ಅಸ್ಮಿತೆಯ ಲೋಕದರ್ಶನ. ಆತ್ಮವಾದಿಗಳ ಅವೈಜ್ಞಾನಿಕ ಕಲ್ಪಿತ ಮುಷ್ಠಿಮೈಥುನಕ್ಕಿಂತ ವೈಜ್ಞಾನಿಕವೂ ವೈಚಾರಿಕವೂ ಆದ ನೆಲೆಯಲ್ಲಿ ಜೀವ-ಭೂಮಿ ಹುಟ್ಟು ಸಾವುಗಳ ಅನುಬಂಧದಲ್ಲಿ ಬದುಕಿನ ಇರುವಿಕೆಯನ್ನುಕಾಣಿಸಿದ ಈ ಅಧ್ಯಾತ್ಮ ದರ್ಶನ ಕನ್ನಡ ಬದುಕಿನ ಚಿಂತನಾ ದ್ರವ್ಯ ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry