7

ನೀರಿನ ಸುತ್ತ ಸುತ್ತುವ ರಾಜಕೀಯ

Published:
Updated:
ನೀರಿನ ಸುತ್ತ ಸುತ್ತುವ ರಾಜಕೀಯ

ಬರವನ್ನೇ ಹೊದ್ದು ಮಲಗಿರುವ ಜಿಲ್ಲೆಯಲ್ಲಿ ಜೀವಜಲದ ಕನವರಿಕೆಯಲ್ಲೇ ಜನ ಮತ್ತೊಂದು ಚುನಾವಣೆಗೆ ಮುಖಾಮುಖಿಯಾಗಿದ್ದಾರೆ. ಜೀವಜಲದ ಸುತ್ತಲೇ ರಾಜಕೀಯ ಗಿರಕಿ ಹೊಡೆಯುತ್ತಿದ್ದು, ನೀರಿನ ವಿಚಾರವಾಗಿ ಜನಪ್ರತಿನಿಧಿಗಳ ಕೆಸರೆರಚಾಟ ಜೋರಾಗಿದೆ.

ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಹೆಗ್ಗಳಿಕೆ ಜಿಲ್ಲೆಯದು. ಮೂರು ಮೀಸಲು ಕ್ಷೇತ್ರಗಳು ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಪಕ್ಷಗಳು ಸವಕಲು ನೀರಾವರಿ ಯೋಜನೆಗಳನ್ನು ಪ್ರಸ್ತಾಪಿಸುತ್ತಾ ಮತ ಬೇಟೆಗೆ ಮುಂದಾಗಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಬಿಜೆಪಿ ಪಾರುಪತ್ಯ ಮೆರೆಯಲು ಕಸರತ್ತು ನಡೆಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಚುನಾವಣಾ ಪ್ರಚಾರ ನಡೆಸಿ ಹೋಗಿದ್ದಾರೆ. ಎರಡನೇ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬರುತ್ತಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ.

ಅಭ್ಯರ್ಥಿ ಆಯ್ಕೆ ವಿಚಾರವಾಗಿ ‘ಕೈ’ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕಾಂಗ್ರೆಸ್‌ ನಾಯಕರು ಕವಲು ದಾರಿ ಹಿಡಿದಿದ್ದಾರೆ. ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಬಣಗಳು ಸೃಷ್ಟಿಯಾಗಿದ್ದು, ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಹಳಿ ತಪ್ಪಿದೆ. ಮುಖಂಡರ ಮುಸುಕಿನ ಗುದ್ದಾಟದಿಂದ ಅಭ್ಯರ್ಥಿಗಳು ಹೈರಾಣಾಗಿದ್ದಾರೆ. ಆಂತರಿಕ ಬೇಗುದಿಯು ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹ್ಯಾಟ್ರಿಕ್‌ ನಿರೀಕ್ಷೆ: ಜೆಡಿಎಸ್‌ ಪಾಳಯದಲ್ಲಿ ಕೋಲಾರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಗೆ ಎರಡು ತಿಂಗಳ ಹಿಂದೆಯೇ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಕೋಲಾರ ಕ್ಷೇತ್ರದಲ್ಲಿ ಕೊನೇ ಹಂತದವರೆಗೂ ಗೊಂದಲ ಮುಂದುವರಿದು, ವರಿಷ್ಠರು ಅಂತಿಮ ಕ್ಷಣದಲ್ಲಿ ಕೆ.ಶ್ರೀನಿವಾಸ ಗೌಡರನ್ನು ಕಣಕ್ಕಿಳಿಸಿದ್ದಾರೆ. ಆರಂಭಿಕ ಎಡರು ತೊಡರುಗಳೆಲ್ಲ ನಿವಾರಣೆಯಾಗಿದ್ದು, ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಓಂಶಕ್ತಿ ಚಲಪತಿ ಸ್ಪರ್ಧೆಯಿಂದ ಮತ ವಿಭಜನೆ ಸಾಧ್ಯತೆ ಹೆಚ್ಚಿದ್ದು, ಎದುರಾಳಿಗಳಲ್ಲಿ ಆತಂಕ ಶುರುವಾಗಿದೆ.

ಸತತ ಎರಡು ಬಾರಿ ಗೆಲುವು ಸಾಧಿಸಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಈ ಬಾರಿ ತಮ್ಮದೇ ‘ನಮ್ಮ ಕಾಂಗ್ರೆಸ್‌’ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿರುವ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ನಿವೃತ್ತ ಐಎಎಸ್ ಅಧಿಕಾರಿ ಜಮೀರ್‌ ಪಾಷಾ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಟಿಕೆಟ್‌ ಹಂಚಿಕೆಯಲ್ಲಿನ ಅಸಮಾಧಾನದ ಕಾರಣಕ್ಕೆ ಸಚಿವ ರಮೇಶ್‌ ಕುಮಾರ್‌, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌ ಒಳಗೊಂಡಂತೆ ಅವರ ಬಣದ ಮುಖಂಡರು ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ.

‘ಕೈ’ ಅಭ್ಯರ್ಥಿ ಇಲ್ಲ: ರಾಜ್ಯದ ‘ಮೂಡಣ ಬಾಗಿಲು’ ಎಂದೇ ಹೆಸರಾಗಿರುವ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಅವರ ಜಾತಿ ಪ್ರಮಾಣಪತ್ರವನ್ನು ಹೈಕೋರ್ಟ್‌ ಅಸಿಂಧುಗೊಳಿಸಿದ್ದರಿಂದ ಅವರ ನಾಮಪತ್ರವೇ ತಿರಸ್ಕೃತವಾಗಿ ಪಕ್ಷಕ್ಕೆ ಆರಂಭಿಕ ಹಿನ್ನಡೆಯಾಗಿದೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಇಲ್ಲದ ಕಾರಣ, ವರಿಷ್ಠರು ಪಕ್ಷೇತರರಾಗಿ ಕಣಕ್ಕಿಳಿದಿರುವ ಎಚ್‌.ನಾಗೇಶ್‌ ಅವರನ್ನು ಬೆಂಬಲಿಸುವ ನಿರ್ಣಯ ಕೈಗೊಂಡಿದ್ದಾರೆ.

ಕಾಂಗ್ರೆಸ್‌ ತೊರೆದು ಕಮಲ ಪಾಳಯದಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಅಮರೇಶ್‌ ಹಾಗೂ ಜೆಡಿಎಸ್‌ ಹುರಿಯಾಳು ಸಮೃದ್ಧಿ ಮಂಜುನಾಥ್‌ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ. ಕೊತ್ತೂರು ಮಂಜುನಾಥ್‌, ನಾಗೇಶ್‌ ಅವರ ಬೆನ್ನಿಗೆ ನಿಂತು ಪ್ರಚಾರ ನಡೆಸುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವ ವಿಚಾರವಾಗಿ ಮಂಜುನಾಥ್‌ ಮತ್ತು ಸಂಸದ ಮುನಿಯಪ್ಪ ನಡುವೆ ನಡೆದ ಶೀತಲ ಸಮರ ಬೇರೆ ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಪುತ್ರಿಯರ ಕದನ: ‘ಚಿನ್ನದ ಊರು’ ಕೆಜಿಎಫ್‌ ಮೀಸಲು ಕ್ಷೇತ್ರವು ಸಂಸದ ಮುನಿಯಪ್ಪ ಅವರ ಪುತ್ರಿ ಎಂ.ರೂಪಕಲಾ ಹಾಗೂ ಮಾಜಿ ಶಾಸಕ ವೈ.ಸಂಪಂಗಿ ಅವರ ಪುತ್ರಿ ಅಶ್ವಿನಿ (ಹಾಲಿ ಶಾಸಕಿ ವೈ.ರಾಮಕ್ಕ ಅವರ ಮೊಮ್ಮಗಳು) ಸ್ಪರ್ಧೆಯಿಂದ ಸಾಕಷ್ಟು ಸದ್ದು ಮಾಡಿದೆ. ಈ ಇಬ್ಬರು 2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಾರಂಡಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾರಣಕ್ಕೆ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿತ್ತು. ಈಗ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಇವರು ಮುಖಾಮುಖಿಯಾಗಿದ್ದು, ಕದನ ಕುತೂಹಲ ರೋಚಕ ಘಟ್ಟ ತಲುಪಿದೆ.

ಚುನಾವಣಾ ಕಣದಲ್ಲಿ ಮೇಲ್ನೋಟಕ್ಕೆ ರೂಪಕಲಾ ಮತ್ತು ಅಶ್ವಿನಿ ಮಧ್ಯೆ ಸ್ಪರ್ಧೆ ಎಂಬಂತೆ ಭಾಸವಾಗುತ್ತದೆ. ಆದರೆ, ವಾಸ್ತವದಲ್ಲಿ ಇದು ಮುನಿಯಪ್ಪ ಹಾಗೂ ಸಂಪಂಗಿ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿದೆ. ಜೆಡಿಎಸ್‌ ಅಭ್ಯರ್ಥಿ ಮಾಜಿ ಶಾಸಕ ಎಂ.ಭಕ್ತವತ್ಸಲಂ ಗೆಲುವಿಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ.

‘ಮಾವಿನ ಮಡಿಲು’ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹುರಿಯಾಳು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಮತ್ತು ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ನಡುವೆ ನೇರ ಹಣಾಹಣಿ ಇದೆ. ಪಕ್ಷ ರಾಜಕಾರಣಕ್ಕೆ ಅತೀತವಾಗಿರುವ ಈ ಕ್ಷೇತ್ರದಲ್ಲಿ ಚುನಾವಣೆ ಎಂದರೆ ರಮೇಶ್‌ ಕುಮಾರ್‌ ಮತ್ತು ವೆಂಕಟ ಶಿವಾರೆಡ್ಡಿ ನಡುವಿನ ಕಾದಾಟ. ಕಮಲ ಪಾಳಯವು ವೈದ್ಯ ಡಾ. ಕೆ.ಎನ್‌.ವೇಣುಗೋಪಾಲ್‌ ಅವರನ್ನು ಕಣಕ್ಕಿಳಿಸಿ ಗೆಲುವಿನ ಮಾಯಾಮೃಗದ ಬೆನ್ನು ಹತ್ತಿದೆ.

ತ್ರಿಕೋನ ಸ್ಪರ್ಧೆ: ಬಂಗಾರಪೇಟೆ ಮತ್ತು ಮಾಲೂರು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮಾಲೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಎಸ್‌.ಮಂಜುನಾಥ್‌ ಗೌಡ, ಕೈ ಪಡೆಯಿಂದ ಕೆ.ವೈ.ನಂಜೇಗೌಡ ಮತ್ತು ಕಮಲ ಪಾಳಯದಿಂದ ಮಾಜಿ ಸಚಿವ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ ಹುರಿಯಾಳು

ಗಳಾಗಿದ್ದಾರೆ.

ಬಂಗಾರಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟ ಮುನಿಯಪ್ಪ ಮತ್ತು ಜೆಡಿಎಸ್‌ನ ಮಲ್ಲೇಶ್‌ ಬಾಬು ಸ್ಪರ್ಧಿಗಳಾಗಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಜೆಡಿಎಸ್‌ ಸೇರಿದ್ದಾರೆ. ಈ ನಡೆಯಿಂದ ಬಿಜೆಪಿ ಶಕ್ತಿ ಕುಂದಿದ್ದು, ಜೆಡಿಎಸ್‌ಗೆ ಆನೆ ಬಲ ಬಂದಿದೆ.

**

ಜಿಲ್ಲೆಯಲ್ಲಿ ನೀರು ಜನಜೀವನದ ಭಾಗವಾಗಿಲ್ಲ, ಬದಲಿಗೆ ರಾಜಕೀಯದ ವಸ್ತುವಾಗಿದೆ. ಸದನದಲ್ಲಿ ನೀರಿನ ಸಮಸ್ಯೆ ಬಗ್ಗೆ ಧ್ವನಿ ಎತ್ತದ ಜನಪ್ರತಿನಿಧಿಗಳಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಜನರು ವಿಷಕಾರಿ ಫ್ಲೋರೈಡ್‌ಯುಕ್ತ ನೀರು ಕುಡಿದು ಸಾಯುತ್ತಿದ್ದರೆ, ಪಕ್ಷಗಳು ಅವರ ಹೆಣದ ಮೇಲೆ ರಾಜಕೀಯ ಮಾಡುತ್ತಿವೆ.

– ವಿ.ಕೆ.ರಾಜೇಶ್‌, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry