ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಸಿ.ಎಂ ಮಾಡಿ ಎಂದರೆ ಏನು ಪ್ರಯೋಜನ: ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಮೈಸೂರು: ‘ಕೂಗಬೇಕಾದಾಗ ಕೂಗುವುದನ್ನು ಬಿಟ್ಟು ಈಗ ಕೂಗಿದರೆ ಏನು ಪ್ರಯೋಜನ?’

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರೊಬ್ಬರನ್ನು ಪ್ರಶ್ನಿಸಿದ ಪರಿಯಿದು. ನಗರದ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಎಂ.ಕೆ.ಸೋಮಶೇಖರ್‌ ಪರ ಮತ ಯಾಚನೆ ಸಲುವಾಗಿ, ಅಶೋಕಪುರಂನಲ್ಲಿ ಭಾನುವಾರ ಖರ್ಗೆ ಅವರ ರೋಡ್‌ ಷೋ ಹಮ್ಮಿಕೊಳ್ಳಲಾಗಿತ್ತು. ಡಾ. ಬಿ.ಆರ್‌.ಅಂಬೇಡ್ಕರ್‌ ಉದ್ಯಾನದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಖರ್ಗೆ ಮಾಲಾರ್ಪಣೆ ಮಾಡಿದರು. ಈ ವೇಳೆ, ಪಕ್ಕದಲ್ಲೇ ನಿಂತಿದ್ದ ಕಾರ್ಯಕರ್ತರೊಬ್ಬರು, ‘ಮುಂದಿನ ಮುಖ್ಯಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೈ’ ಎಂದು ಜೈಕಾರ ಹಾಕಿದರು. ಅಲ್ಲಿದ್ದವರೂ ಇದಕ್ಕೆ ಧ್ವನಿಗೂಡಿಸಿದರು.

ಇದನ್ನು ಕೇಳಿಸಿಕೊಂಡ ಖರ್ಗೆ ಮೇಲಿನಂತೆ ಹೇಳಿದರು. ಬಳಿಕ ನಡೆದ ರೋಡ್‌ ಷೋ ಬಿ.ಬಸವಲಿಂಗಪ್ಪ ವೃತ್ತದ ಬಳಿ ಕೊನೆಗೊಂಡಿತು. ಅಲ್ಲಿ ಖರ್ಗೆ ಪ್ರಚಾರ ಭಾಷಣ ಮಾಡಿದರು.

ಈ ವೇಳೆ, ಆಟೊ ಚಾಲಕ ಆನಂದ ಮೂರ್ತಿ ಎಂಬುವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿವಾದಿ. ಅವರು ದಲಿತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಮಾತ್ರ ನಾವು ಮತ ಹಾಕುತ್ತೇವೆ’ ಎಂದರು. ಇದಕ್ಕೆ ಅನೇಕರು ಧ್ವನಿಗೂಡಿಸಿದರು. ‌ಅವರನ್ನು ಸಮಾಧಾನಪಡಿಸಿದ ಖರ್ಗೆ, ‘ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷದ ಹೈಕಮಾಂಡ್‌ ಆಯ್ಕೆ ಮಾಡುತ್ತದೆ. ಬೀದಿಯಲ್ಲಿ ನಿಂತು ಆಯ್ಕೆ ಮಾಡಲು ಸಾಧ್ಯವಿಲ್ಲ. ನಾನು 50 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ’ ಎಂದರು.

ಆದರೂ ಕಾರ್ಯಕರ್ತರು ಪಟ್ಟುಬಿಡದೆ ‘ಖರ್ಗೆ ಮುಖ್ಯಮಂತ್ರಿ ಆಗಬೇಕು’ ಎಂದು ಕೂಗಿದರು.

ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ‘ಈಗ ಎರಡು ತತ್ವಗಳ ಮೇಲೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ತತ್ವಗಳನ್ನು ಗಮನಿಸಿ. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಉಳಿವಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ಅರಿತು ಮತ ಕೊಡಿ. ಆ ಸ್ವಾತಂತ್ರ್ಯವನ್ನು ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ನೀಡಿದ್ದಾರೆ’ ಎಂದು ಹೇಳಿದರು.

ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಪ್ರಶ್ನೆಯಲ್ಲ. ಯಾವ ತತ್ವವನ್ನು ಅನುಸರಿಸಿದರೆ ಹೆಚ್ಚು ಫಲ ನೀಡುತ್ತದೆ ಎಂಬುದು ಮುಖ್ಯ. ಕಾಂಗ್ರೆಸ್‌ ಪಕ್ಷವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಖರ್ಗೆ ಕಾರನ್ನೇರಿ ಹೊರಡುವ ವೇಳೆ ಅಶೋಕಪುರಂನ ನಾಗರಾಜ್‌ ಬಿಲ್ಲಯ್ಯ ಎಂಬುವರು, ‘ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕಾಂಗ್ರೆಸ್‌ನ ಹೈಕಮಾಂಡ್‌ ಹೇಳುತ್ತಾ ಬಂದಿದೆ. ಆದರೆ, ಈವರೆಗೂ  ಮಾಡಿಲ್ಲ. ದಲಿತರ ಮತ ಕೇಳುವ ಅಧಿಕಾರ ನಿಮಗೆ ಇಲ್ಲ. ನಾವು ಬಿಜೆಪಿಗೆ ಮತ ಹಾಕುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT