ಪರಿಣಾಮ ಬೀರದ ಬದಲಾವಣೆ

7

ಪರಿಣಾಮ ಬೀರದ ಬದಲಾವಣೆ

ಕೆ. ಜಿ. ಕೃಪಾಲ್
Published:
Updated:
ಪರಿಣಾಮ ಬೀರದ ಬದಲಾವಣೆ

ಷೇರುಪೇಟೆಯ ವಿಸ್ಮಯಕಾರಿ ಸಂಗತಿಗಳು ವೈವಿಧ್ಯಮಯ ವಿಶ್ಲೇಷಣೆಗಳಿಗೆ ಕಾರಣವಾಗುತ್ತಿವೆ. ಸಂವೇದಿ ಸೂಚ್ಯಂಕದಲ್ಲಿ ಉಂಟಾಗುವ ಯಾವುದೇ ರೀತಿಯ ಬದಲಾವಣೆಗಳು ಬಹಳಷ್ಟು ಕಂಪನಿಗಳ ಮೇಲೆ ಪರಿಣಾಮ ಬೀರದೆ ಇರುವುದು ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿದೆ.

ಷೇರಿನ ಬೆಲೆಗಳು ಏರಿಕೆ ಕಾಣಲು ಅಥವಾ ಇಳಿಕೆ ಕಾಣಲು ಮಹತ್ತವರಾದ ಕಾರಣಗಳು ಇರಲೇಬೇಕೆಂದಿಲ್ಲ. ಉದಾಹರಣೆಗೆ ಈ ವಾರ ಪಿ.ಸಿ ಜುವೆಲ್ಲರ್, ಗೋವಾ ಕಾರ್ಬನ್, ಕ್ಯಾಸ್ಟ್ರಾಲ್, ಬಿಪಿಸಿಎಲ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ಸ್‌, ರಿಲಯನ್ಸ್ ಕ್ಯಾಪಿಟಲ್, ಇಮಾಮಿ, ಬಾಂಬೆ ಡೈಯಿಂಗ್, ಮಾರುತಿ ಸುಜುಕಿ, ಕ್ಯಾನ್ ಫಿನ್ ಹೋಮ್ಸ್, ಕೋಲ್ ಇಂಡಿಯಾ ಉತ್ತಮ ಚೇತರಿಕೆ ಕಂಡಿವೆ.

ಕ್ಯಾಸ್ಟ್ರಾಲ್ ಇಂಡಿಯಾ ಕಂಪನಿಯ ಸಾಧನೆ ತೃಪ್ತಿಕರವಾಗಿಲ್ಲವೆಂಬ ಕಾರಣಕ್ಕೆ ಶುಕ್ರವಾರ ಷೇರಿನ ಬೆಲೆ ಹಿಂದಿನ ದಿನದ ₹195 ರಿಂದ ₹181.45 ರವರೆಗೂ ಕುಸಿದು ನಂತರ ₹184.50 ಯಲ್ಲಿ ಕೊನೆಗೊಂಡಿತು. ಸೋಜಿಗವೆಂದರೆ ಗುರುವಾರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆದು ಅಂದು ₹201 ರವರೆಗೂ ಏರಿಕೆ ಕಂಡಿತ್ತು.

ಬುಧವಾರ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ ಷೇರಿನ ಬೆಲೆ ದಿನದ ಮಧ್ಯಂತರದಲ್ಲಿ ₹460 ನ್ನು ದಾಟಿತ್ತು. ಆದರೆ ಅಲ್ಲಿಂದ ಷೇರಿನ ಬೆಲೆ ₹403 ರ ಸಮೀಪಕ್ಕೆ ಕುಸಿದು ನಂತರ ₹422 ರ ಸಮೀಪ ವಾರಾಂತ್ಯ ಕಂಡಿದೆ. ಈ ಕಂಪನಿಯು ₹ 9.50 ರಂತೆ ಲಾಭಾಂಶ ಘೋಷಿಸಿದ್ದು, ನಿಗದಿತ ದಿನ ಗೊತ್ತುಪಡಿಸಬೇಕಾಗಿದೆ.

ಬಾಂಬೆ ರೇಯಾನ್ ಕಾರ್ಪೊರೇಷನ್ ಕಂಪನಿಯ ಷೇರಿನ ಬೆಲೆ ಕಳೆದ ಐದು ತಿಂಗಳಿನಲ್ಲಿ ₹320 ರ ಸಮೀಪದಿಂದ ₹20 ರವರೆಗೂ ನಿರಂತರವಾಗಿ ಕುಸಿದು ಶುಕ್ರವಾರವೂ ಸಹ ಕೆಳಗಿನ ಅವರಣಮಿತಿಯಲ್ಲಿತ್ತು. ದಿನದ ಮಧ್ಯಂತರದಲ್ಲಿ ದಿಸೆ ಬದಲಿಸಿ ₹22.10ರಲ್ಲಿ ಮೇಲಿನ ಆವರಣ ಮಿತಿಯನ್ನು ತಲುಪಿ, ಮಾರಾಟ ಮಾಡುವವರೇ ಇಲ್ಲದಂತಾಗಿತ್ತು.

ತೈಲ ಮಾರಾಟ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್‌, ಐಒಎಲ್‌ಗಳು ಶುಕ್ರವಾರ ದಿನದ ಆರಂಭದಲ್ಲಿ ಇಳಿಕೆಯಲ್ಲಿದ್ದು ಮಧ್ಯಂತರದಲ್ಲಿ ಚೇತರಿಕೆ ಕಂಡವು. ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಷೇರು ₹292 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ನಂತರ ಅಲ್ಪ ಚೇತರಿಕೆ ಕಂಡಿತು. ಕಂಪನಿಯು ತನ್ನ ಸಾಧನೆಯ ಅಂಶಗಳನ್ನು ಈ ತಿಂಗಳ 10 ರಂದು ಪ್ರಕಟಿಸಲಿದೆ. ಆದರೂ ವಾರ್ಷಿಕ ಕನಿಷ್ಠಕ್ಕೆ ಕುಸಿದಿರುವುದು ವಿಶೇಷ.

ವಜ್ರಾಭರಣಗಳ ಕಂಪನಿ ಪಿ.ಸಿ. ಜುವೆಲ್ಲರ್ಸ್ ಕಂಪನಿ ಷೇರಿನ ಬೆಲೆ ಒಂದೇ ವಾರದಲ್ಲಿ ₹210 ರ ಸಮೀಪದಿಂದ ₹94 ರವರೆಗೂ ಕುಸಿದು ಅಲ್ಲಿಂದ ಪುಟಿದೆದ್ದು ₹180 ರ ಸಮೀಪಕ್ಕೆ ಬಂದಿರುವುದು ಸಹ ಮೌಲ್ಯ ನಷ್ಟ ಮತ್ತು  ಚೇತರಿಕೆ ಪ್ರಕ್ರಿಯೆಯು ಪೇಟೆಯಲ್ಲಿ ಎಂತಹ ವೇಗದಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿಸುತ್ತದೆ.

ಇಂತಹ ಅಸಹಜ ಚಟುವಟಿಕೆಯಿಂದ ಹೂಡಿಕೆ ರೂಪದಲ್ಲಿ ಪೇಟೆ ಪ್ರವೇಶಿಸುವವರಿಗೆ ಹಿಂಜರಿತವಾಗುತ್ತದೆ. ಈ ಕಂಪನಿಯ ಆಡಳಿತ ಮಂಡಳಿ ಈ ತಿಂಗಳ 25 ರಂದು ಷೇರು ಮರು ಖರೀದಿ  ಪರಿಶೀಲಿಸಲಿರುವ ಸಂಗತಿ ಪ್ರಕಟಿಸಿದ ನಂತರವೂ ಭಾರಿ ಮಾರಾಟದ ಒತ್ತಡಕ್ಕೊಳಗಾಗಿತ್ತು. ಕಂಪನಿಯ ಮುಖ್ಯಸ್ಥರು ಗುರುವಾರ, ಕಂಪನಿಯ ಚಟುವಟಿಕೆ ಎಂದಿನಂತಿದ್ದು, ಮರು ಖರೀದಿಯಲ್ಲಿ  ಪ್ರವರ್ತಕರು ಭಾಗವಹಿಸುವುದಿಲ್ಲ ಎಂದು ಸಮಜಾಯಿಷಿ ನೀಡಿರುವುದು ಸಹ ಈ ರೀತಿಯ ಚೇತರಿಕೆಗೆ ಕಾರಣವಾಗಿದೆ.  ಮುಂದಿನ ವಾರ ನಡೆಯಲಿರುವ ಕರ್ನಾಟಕದಲ್ಲಿನ ಚುನಾವಣೆ, ಕಚ್ಚಾ ತೈಲ ಬೆಲೆ, ಡಾಲರ್ ಬೆಲೆ ಏರಿಳಿತ ಈ ರೀತಿಯ ಅಸ್ಥಿರತೆಗೆ ಮುಖ್ಯ ಕಾರಣಗಳಾಗಿವೆ.

ಷೇರುಗಳನ್ನು ಖರೀದಿಸುವಾಗ ಲಾಭಾಂಶ  ಆಧರಿಸಿ ನಿರ್ಧರಿಸುವವರಿಗೆ ಮಾಹಿತಿ ಇಲ್ಲಿದೆ.   ಎಂಆರ್‌ಎಫ್‌ ಗುರುವಾರ ಫಲಿತಾಂಶ ಪ್ರಕಟಿಸಿತು. ಅಂದು ಷೇರಿನ ಬೆಲೆ ₹80,122 ರಿಂದ ₹76,800 ರವರೆಗೂ ಏರಿಳಿತ ಪ್ರದರ್ಶಿಸಿತು. ಅಂದು ಕಂಪನಿ   ₹54 ರ ಲಾಭಾಂಶ ಪ್ರಕಟಿಸಿತು. ಆದರೆ ಷೇರಿನ ಬೆಲೆಯು ₹54 ರ ಲಾಭಾಂಶಕ್ಕೆ ₹3,300 ರಷ್ಟು ಅಂತರದ ಏರಿಳಿತ ಪ್ರದರ್ಶಿಸಿತು. ಶುಕ್ರವಾರವೂ ಸುಮಾರು ₹2,300 ರಷ್ಟು ಏರಿಳಿತ ಪ್ರದರ್ಶಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್  70 ಪೈಸೆಯ ಲಾಭಾಂಶ ಪ್ರಕಟಿಸಿದೆ. ಆದರೂ ಷೇರಿನ ಬೆಲೆ ₹1,287 ರ ವಾರ್ಷಿಕ ಗರಿಷ್ಠ ತಲುಪಿದ ನಂತರ ₹1,231 ರಲ್ಲಿ ಕೊನೆಗೊಂಡಿದೆ. ಇದು ಪೇಟೆಯಲ್ಲಿ ಮೂಲಭೂತ ಸಂಗತಿಗಳಿಗಿಂತ ಷೇರಿನ ಬೆಲೆ ಹೆಚ್ಚಳದ ಮೂಲಕ ಬಂಡವಾಳ ಅಭಿವೃದ್ಧಿಯೇ ಮುಖ್ಯ ಗುರಿ ಎನ್ನಬಹುದು.

ಲಾಭಾಂಶ: ₹8 ರ ಮುಖಬೆಲೆ ಷೇರು: ಆರ್ ಪಿ ಜಿ ಲೈಫ್ ಸೈನ್ಸಸ್ ಪ್ರತಿ ಷೇರಿಗೆ ₹2.40.

₹ 5 ರ ಮುಖಬೆಲೆ ಷೇರುಗಳು: ಅಲಿಕಾನ್ ಕ್ಯಾಸ್ಟಲೈ ₹4.25, ಕೋಟಕ್ ಮಹಿಂದ್ರಾ ಬ್ಯಾಂಕ್ ₹0.70, ಅಪ್ಕೋ ಟೆಕ್ಸ್ ₹6.00, ಮ್ಯಾಟ್ರಿಮೊನಿ ಡಾಟ್ ಕಾಮ್ ₹1.50, ಸೆರಾ ಸ್ಯಾನಿಟರೀವೇರ್ ₹12.00, ಕಿರ್ಲೋಸ್ಕರ್ ಫೆರೋ ₹1.25,

₹2 ರ ಮುಖಬೆಲೆ ಷೇರುಗಳು: ಇಮಾಮಿ ಪೇಪರ್ ₹1.20, ಹೀರೊ ಮೋಟೊಕಾರ್ಪ್ ₹40.00, ಎಚ್‌ಟಿ ಮೀಡಿಯಾ   ₹0.40, ಹೆಕ್ಸವೇರ್ ಟೆಕ್ ₹1.00, ಎಚ್‌ಸಿಎಲ್‌ ಟೆಕ್‌ ₹2.00, ಅದಾನಿ ಪೋರ್ಟ್ಸ್ ₹2.00, ರಿಡಿಕೋ ಖೈತಾನ್ ₹1.00.

₹1 ರ ಮುಖಬೆಲೆ ಷೇರುಗಳು: ಡಾಬರ್ ₹6.25, ಕಾರ್ಬೊರೆಂಡಮ್ ಯೂನಿವರ್ಸಲ್ ₹1.25, ಜೆ ಎಂ ಫೈನಾನ್ಶಿಯಲ್‌ ₹1.10, ನವಕರ್ ಬಿಲ್ಡರ್ಸ್ ₹0.70, ಓರಿಯಂಟ್ ಪೇಪರ್ ₹0.60, ಟ್ರೆಂಟ್ ₹1.15, ಓರಿಯೆಂಟಲ್ ಸಿಮೆಂಟ್ ₹0.75, ಇಂಡೋ ಕೌಂಟ್ – ₹0.20,

ಹೊಸ ಷೇರು: ಇಂಡೊಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್ ₹570 ರಿಂದ ₹572 ರ ಅಂತರದಲ್ಲಿ ಮೇ 9 ರಿಂದ 11 ರ ವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 26 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದು.

ಬೋನಸ್ ಷೇರು: ಇಮಾಮಿ ಲಿಮಿಟೆಡ್ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ವಾರದ ಮುನ್ನೋಟ

ಈ ವಾರಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ, ಷೇರುಪೇಟೆಗಳು ಕುತೂಹಲಕಾರಿಯಾದ ಫಲಿತಾಂಶ ಎದುರು ನೋಡುತ್ತಿವೆ. ವಿಧಾನಸಭಾ ಚುನಾವಣೆಯಾದರೂ ಪ್ರಮುಖ ಪಕ್ಷಗಳು ಸವಾಲಾಗಿ ಎದುರಿಸುತ್ತಿರುವುದರಿಂದ ಮತ್ತು ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ ಈ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಒಂದು ವೇಳೆ ಕೇಂದ್ರದಲ್ಲಿನ ಆಡಳಿತ ಪಕ್ಷ ರಾಜ್ಯದಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವಂತಾದರೆ 2014 ರ ಮೇ ತಿಂಗಳಲ್ಲಿ ಆದಂತೆ, ಫಲಿತಾಂಶದ ನಂತರದಲ್ಲಿ, ಭರ್ಜರಿ ಏರಿಕೆ ನಿರೀಕ್ಷಿಸಬಹುದು. 2014 ರ ಮೇ ಚುನಾವಣಾ ಫಲಿತಾಂಶದ ನಂತರ ಸಂವೇದಿ ಸೂಚ್ಯಂಕ 1,200 ಅಂಶಗಳಿಗೂ ಹೆಚ್ಚಿನ ಏರಿಕೆ ಕಂಡು ನಂತರದಲ್ಲಿ ಕುಸಿತ ಕಂಡಿತು.

ಈಗ ರಾಜ್ಯದ ಚುನಾವಣೆಯಾಗಿರುವುದರಿಂದ ಆ ಮಟ್ಟದ ಏರಿಳಿತಗಳಿಲ್ಲದಿದ್ದರೂ  ಈಗಾಗಲೇ ನೀರಸಮಯವಾಗಿರುವ ಪೇಟೆಗೆ ಚುರುಕು ಮೂಡಿಸಬಹುದು. ಮುಂದಿನ ದಿನಗಳಲ್ಲಿ ಭಾರಿ ಕುಸಿತವೇನಾದರೂ ಉಂಟಾದಲ್ಲಿ ಅದು ದೀರ್ಘಕಾಲೀನ ಹೂಡಿಕೆಗೆ ಉತ್ತಮ ಅವಕಾಶ

ವಾಗಬಹುದು. ಕಳೆದ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು ಶೇ 12ರಷ್ಟು ಕುಸಿದಿದೆ ಮತ್ತು ಮಾರ್ಚ್ ಅಂತ್ಯದ ವರ್ಷದಲ್ಲಿ ಬ್ಯಾಂಕ್ ಠೇವಣಿ ಸಹ ಭಾರಿ ಕುಸಿತ ಕಂಡಿದೆ. ಇದರಲ್ಲಿ ಹೆಚ್ಚಿನ ಭಾಗವು ಷೇರುಪೇಟೆ ಮತ್ತು ಮ್ಯೂಚುವಲ್‌ ಫಂಡ್‌ಗಳತ್ತ ಹರಿದಿರುವುದೇ ಕಾರಣ. ಕಂಪನಿಗಳ ಸಾಧನೆಯು ಉತ್ತಮವಾಗಿಲ್ಲದಿದ್ದರೂ, ಇತರೆ ಕಾರಣಗಳಿಂದ ಪೇಟೆಗೆ ಚುರುಕು ಮೂಡಿಸಲಾಗುತ್ತಿದೆ. ಎಲ್ಲವೂ ತಾತ್ಕಾಲಿಕವಾಗಿರುತ್ತದೆ. ವ್ಯಾಲ್ಯೂ ಪಿಕ್‌ಗೆ ಸಿದ್ಧರಾಗಿರಿ. ಪಿ.ಸಿ ಜುವೆಲ್ಲರ್ ರೀತಿ ಉಂಟಾಗಬಹುದಾದ ಏರಿಳಿತಗಳ ಬಗ್ಗೆ ಹೆಚ್ಚಿನ ಎಚ್ಚರವಿರಲಿ.

(ಮೊ: 98863 13380, ಸಂಜೆ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry