‘ಮೋದಿಯಿಂದ ಮ್ಯಾಚ್‌ ಫಿಕ್ಸಿಂಗ್‌ ದಾಳಿ’

7

‘ಮೋದಿಯಿಂದ ಮ್ಯಾಚ್‌ ಫಿಕ್ಸಿಂಗ್‌ ದಾಳಿ’

Published:
Updated:
‘ಮೋದಿಯಿಂದ ಮ್ಯಾಚ್‌ ಫಿಕ್ಸಿಂಗ್‌ ದಾಳಿ’

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಹೊಗಳಿದ ಬೆನ್ನಲ್ಲೆ ದೇವೇಗೌಡ ಪ್ರತಿಕ್ರಿಯಿಸಿರುವುದು, ಮರುದಿನ ಜೆಡಿಎಸ್‌ ವಿರುದ್ಧ ಮೋದಿ ವಾಗ್ದಾಳಿ ನಡೆಸಿರುವುದು ಎಲ್ಲವೂ ಬಿಜೆಪಿ– ಜೆಡಿಎಸ್‌ ನಡುವಿನ ‘ಮ್ಯಾಚ್‌ ಫಿಕ್ಸಿಂಗ್‌’ ದಾಳಿ ಎಂದು ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅಭಿಪ್ರಾಯಪಟ್ಟರು.‌

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಬೆಳಿಗ್ಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ‘ಮೋದಿ ಒಂದು ಸಮುದಾಯದ ಮತಗಳನ್ನು ತಮ್ಮತ್ತ ಸೆಳೆಯುವ ಯತ್ನವಾಗಿ ಗೌಡರನ್ನು ಹೊಗಳಿದ್ದರು. ಆದರೆ, ಅದೇ ಸಂದರ್ಭದಲ್ಲಿ ಮುಸ್ಲಿಂ ಮತಗಳು ದೂರವಾಗಬಹುದೆಂಬ ಆತಂಕ ಜೆಡಿಎಸ್‌ನಲ್ಲಿ ಮೂಡಿರಬೇಕು. ಬಿಜೆಪಿ ಮತ್ತು ಜೆಡಿಎಸ್‌ನ ಹಿರಿಯ ನಾಯಕರು ಸಲಹೆ ನೀಡಿದ ತಕ್ಷಣವೇ ಮೋದಿ ತಮ್ಮ ಮಾತಿನ ವರಸೆ ಬದಲಿಸಿರಬೇಕು’ ಎಂದರು.

‘ದೇವೇಗೌಡರನ್ನು ರಾಹುಲ್‌ ಅವಮಾನಿಸಿದ್ದಾರೆ ಎಂಬ ಮೋದಿ ಹೇಳಿಕೆ ಶುದ್ಧ ಸುಳ್ಳು. ಮೋದಿ ಪ್ರಧಾನಿಯಾದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದೇವೇಗೌಡರು ಹೇಳಿದ್ದರು ಎಂದು ಹೇಳುವ ಮೂಲಕ ಗೌಡರನ್ನು ಮೋದಿ ಅವಮಾನಿಸಿದ್ದಾರೆ’ ಎಂದು ಅವರು ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಈಗಾಗಲೇ ಮೋದಿ ಮೂರು ದಿನ ಪ್ರಚಾರ ಮಾಡಿದ್ದಾರೆ. ಅವರು ಬಂದು ಹೋದ ನಂತರ ನಾನು ನಮ್ಮ ಅಭ್ಯರ್ಥಿಗಳಿಗೆ ಕರೆ ಮಾಡಿ ಪರಿಸ್ಥಿತಿ ಬದಲಾಗಿದೆಯೇ ಎಂದು ವಿಚಾರಿಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗಳು ಬಹಳ ನಿರಾಳವಾಗಿದ್ದಾರೆ. ಮೋದಿ ಪ್ರವಾಸ ಮತದಾರರನ್ನು ಸೆಳೆಯಲು ವಿಫಲವಾಗಿದೆ’ ಎಂದರು.

‘ರಾಹುಲ್‌ ಗಾಂಧಿ ರಾಜ್ಯಾದ್ಯಂತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಹಿರಿಯ ನಾಯಕಿ ಸೋನಿಯಾ ಗಾಂಧಿ ವಿಜಯಪುರದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ನಾಯಕರು ಪ್ರಚಾರದಲ್ಲಿ ಹೆಚ್ಚು ತೊಡಗಿಕೊಂಡಿರುವುದರಿಂದ ರಾಷ್ಟ್ರಮಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಯಕರನ್ನು ಕರೆಸಿಕೊಂಡಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry