‘ಮಹದಾಯಿ’ಗಾಗಿ ಬಿಎಸ್‌ವೈ– ಸಿ.ಎಂ ಜಟಾಪಟಿ

7
ವಾಕರಿಕೆ ಬರಿಸುವ ಹೇಳಿಕೆ– ಸಿ.ಎಂ * ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಅರ್ಜಿ–ಬಿಎಸ್‌ವೈ

‘ಮಹದಾಯಿ’ಗಾಗಿ ಬಿಎಸ್‌ವೈ– ಸಿ.ಎಂ ಜಟಾಪಟಿ

Published:
Updated:
‘ಮಹದಾಯಿ’ಗಾಗಿ ಬಿಎಸ್‌ವೈ– ಸಿ.ಎಂ ಜಟಾಪಟಿ

ಬೆಂಗಳೂರು: ‘ಮಹದಾಯಿ ಜಲ ವಿವಾದ ಇತ್ಯರ್ಥಪಡಿಸಲು ಬದ್ಧ’ ಎಂದು ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೆ, ‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 2–3 ದಿನಗಳಲ್ಲೇ ಈ ಸಂಬಂಧ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ.

ಪ್ರಧಾನಿ ಮಧ್ಯಪ್ರವೇಶದಿಂದ ಮಾತ್ರ ಮಹದಾಯಿ ಸಮಸ್ಯೆ ಪರಿಹಾರ ಸಾಧ್ಯ ಎಂದು ವಾದಿಸುತ್ತಿರುವ ಸಿದ್ದರಾಮಯ್ಯ, ಮೋದಿಯ ಈ ಆಶ್ವಾಸನೆ ‘ವಾಕರಿಕೆ ಬರಿಸುವ ಹೇಳಿಕೆ’ ಎಂದು ಟೀಕಿಸಿದ್ದಾರೆ. ಈ ರೀತಿ ಸುಳ್ಳು ಹೇಳುವ ಮೂಲಕ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದೂ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಮಾತು–ಮಂಥನ’ ಕಾರ್ಯಕ್ರಮದಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಮಾಜಿ– ಹಾಲಿ ಮುಖ್ಯಮಂತ್ರಿಗಳು, ಮಹದಾಯಿ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಪೂರಕವಾಗುವಂತೆ ಪ್ರತಿಕ್ರಿಯೆ ನೀಡಿದರು.

‘ಕರ್ನಾಟಕಕ್ಕೆ ಹನಿ ನೀರನ್ನೂ ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಗೋವಾ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ (2007) ಹೇಳಿದ್ದರು. ಈ ವಿವಾದ ಕಾಂಗ್ರೆಸ್‌ನ ಪಾಪದ ಕೂಪ’ ಎಂದು ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ‘ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನೆರೆ ರಾಜ್ಯಗಳ ಮುಖ್ಯಮಂತ್ರಿಗಳ ಮನವೊಲಿಸುತ್ತೇನೆ’ ಎಂದರು.

‘ಮೋದಿಯಿಂದ ಸಣ್ಣತನ ಪ್ರದರ್ಶನ’: ‘ಮಹದಾಯಿ ವಿವಾದ ಬಗೆಹರಿಸುವ ಹೊಣೆಗಾರಿಕೆ ಪ್ರಧಾನಿಯವರದ್ದು. ಆದರೆ, ಈ ವಿಷಯದಲ್ಲಿ ಸೋನಿಯಾ ಅವರಿಂದ ಸಮಸ್ಯೆ ಆಯಿತೆಂದು ಹೇಳುವ ಮೂಲಕ ಮೋದಿ, ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹಾಕಿ ಸಣ್ಣತನ ಪ್ರದರ್ಶಿಸಿದ್ದಾರೆ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.

‘ಪ್ರಧಾನಿ ಬಳಿ ನಿಯೋಗ ಒಯ್ದಿದ್ದೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಬಹುದಿತ್ತು. ಅದಕ್ಕೆ ಬದಲು, ಗೋವಾ ಕಾಂಗ್ರೆಸ್‌ನವರ ಬಳಿ ಹೋಗಿ ಮಾತನಾಡಿ ಬನ್ನಿ ಎಂದರು. ಇಂದಿರಾ ಗಾಂಧಿ ಮತ್ತು ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಂತರರಾಜ್ಯ ಜಲ ವಿವಾದಗಳನ್ನು ಬಗೆಹರಿಸಿದ್ದರು. 2007ರಲ್ಲಿ ಸೋನಿಯಾ ಪ್ರಧಾನಿ ಆಗಿರಲಿಲ್ಲ. ಅವರು ಪಕ್ಷದ ಅಧ್ಯಕ್ಷರಾಗಿದ್ದರು’ ಎಂದು ಹೇಳಿದರು.

‘ನೇತ್ರಾವತಿ, ಹೇಮಾವತಿ ನದಿ ಜೋಡಣೆ ಕುರಿತು ಈಗ ಪ್ರಸ್ತಾಪ ಮಾಡಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏನು ಮಾಡಿದೆ. ಕನಿಷ್ಠ ಯೋಜನಾ ವರದಿಯನ್ನಾದರೂ ತಯಾರಿಸಬೇಕಿತ್ತಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry