ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯ: ರಮೇಶ

7
ಕೇಂದ್ರ ಸಚಿವ ರಮೇಶ ಜಿಗಜಿಣಗಿ ಆರೋಪ

ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯ: ರಮೇಶ

Published:
Updated:

ಚಿಕ್ಕೋಡಿ: ‘ಕಾಂಗ್ರೆಸ್‌ ಪಕ್ಷ ಉರಿಯುವ ಮನೆ ಇದ್ದಂತೆ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ದಲಿತ ಸಮುದಾಯ ಮತ್ತು ನಾಯಕರನ್ನು ಅವಮಾನಿಸಿದ ಪಕ್ಷವದು. ಇದನ್ನು ಯಾವೊಬ್ಬ ದಲಿತರೂ ಮರೆಯಬಾರದು’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.‌

ತಾಲ್ಲೂಕಿನ ಕಬ್ಬೂರ ಮತ್ತು ನಾಗರಮುನ್ನೋಳಿ ಗ್ರಾಮಗಳಲ್ಲಿ ರಾಯಬಾಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ ಪರ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವತಂತ್ರ ಭಾರತಕ್ಕೆ ಸಂವಿಧಾನ ರಚಿಸಿಕೊಟ್ಟು ದೇಶಕ್ಕೆ ದಿಕ್ಕು ತೋರಿದ ಡಾ.ಅಂಬೇಡ್ಕರ್ ಅವರು ಮೃತಪಟ್ಟಾಗ ರಾಜ್‌ಘಾಟ್‌ನಲ್ಲಿ ಹೂಳಲು ಆರಡಿ ಜಾಗವನ್ನೂ ನೀಡದ ಕಾಂಗ್ರೆಸ್‌ ನಾಯಕರ ದಲಿತ ವಿರೋಧಿ ನೀತಿಯನ್ನು ಮರೆಯಬಾರದು’ ಎಂದರು.

‘ಸಂವಿಧಾನದತ್ತವಾಗಿ ದಲಿತರಿಗೆ ಸಿಕ್ಕಿರುವ ಮೀಸಲಾತಿಯನ್ನು ಬಿಜೆಪಿ ಕಿತ್ತುಕೊಳ್ಳಲಿದೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಆದರೆ, ಆ ಮೀಸಲಾತಿ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಆಗದು’ ಎಂದು ಸ್ಪಷ್ಟಪಡಿಸಿದರು.

‘ಧರ್ಮ ಮತ್ತು ರಾಜಕಾರಣ ಜೋಡೆತ್ತಿನ ಬಂಡಿ ಇದ್ದಂತೆ. ಜೊತೆಯಾಗಿ ಸಾಗಿದರೆ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ. 10 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯ ಕೈಗೊಂಡಿರುವ ದುರ್ಯೋಧನ ಐಹೊಳೆ ಅವರನ್ನು ಬೆಂಬಲಿಸಬೇಕು’ ಎಂದು ಕೋರಿದರು.

ಮಾಜಿ ಸಂಸದ ಅಮರಸಿಂಹ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ನಾಯಿಕ, ಜಿಲ್ಲಾ ಪಂಚಾಯ್ತಿ ಸದಸ್ಯ ಪವನ ಕತ್ತಿ, ನಿವೃತ್ತ ಅಧಿಕಾರಿ ಗಿರಿಜಾಶಂಕರ ನಾಯಿಕ ಮಾತನಾಡಿದರು.

ಸಂಕೇಶ್ವರದ ಹಿರಾಶುಗರ್ಸ್‌ ಸಂಚಾಲಕ ಸುರೇಶ ಬೆಲ್ಲದ, ಮುಖಂಡರಾದ ದಾನಪ್ಪ ಕೊಟಬಾಗಿ, ಸೂರಜ ಪೀರಪ್ಪಗೋಳ, ವಿರೂಪಾಕ್ಷ ಈಟಿ, ಚಿದಾನಂದ ಕಪಲಿ, ದುಂಡಪ್ಪ ಬೆಂಡವಾಡೆ, ರಮೇಶ ಖೋತ, ಡಾ.ಆರ್.ಕೆ. ಬಾಗಿ, ಗುಲಾಬ್‌ ಜಮಾದಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry