ಶನಿವಾರ, ಮಾರ್ಚ್ 6, 2021
32 °C
ಗೋಕಾಕದಲ್ಲಿ ಬಿಜೆಪಿ ಇದುವರೆಗೂ ಗೆಲುವಿನ ಖಾತೆ ತೆರೆದಿಲ್ಲ! l ಕುಗ್ಗಿದ ಜೆಡಿಎಸ್ ಪ್ರಭಾವ

ಕಾಂಗ್ರೆಸ್‌ ‘ಕೈ’ ಕಟ್ಟಲು ಕಮಲ ಕಸರತ್ತು

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ‘ಕೈ’ ಕಟ್ಟಲು ಕಮಲ ಕಸರತ್ತು

ಬೆಳಗಾವಿ: ಹಿಂದಿನಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಗೋಕಾಕ ವಿಧಾನಸಭಾ ಕ್ಷೇತ್ರವನ್ನು ವಶಪಡಿಸಿ

ಕೊಳ್ಳಲು ಬಿಜೆಪಿಯವರು ತಂತ್ರ, ರಣತಂತ್ರದ ಮೊರೆ ಹೋಗಿದ್ದಾರೆ. ಆರ್‌ಎಸ್‌ಎಸ್‌ ‘ಸ್ವಯಂ ಸೇವಕರು’ ಕೂಡ ಕೈಜೋಡಿಸಿರುವುದರಿಂದ ಕಮಲ ಪಕ್ಷದ ಉತ್ಸಾಹ ವೃದ್ಧಿಸಿದೆ.

‘ಗೋಕಾಕ –1’ ಎಂದು ಇದ್ದಾಗಿನಿಂದ ಹಿಡಿದು ಕ್ಷೇತ್ರ ಪುನರ್‌ವಿಂಗಡಣೆ ನಂತರ ‘ಗೋಕಾಕ’ ಕ್ಷೇತ್ರವಾಗಿ ರಚನೆ

ಯಾದ ನಂತರ 13 ಚುನಾವಣೆಗಳು ನಡೆದಿವೆ. ರಾಷ್ಟ್ರೀಯ ಪಕ್ಷ ಬಿಜೆಪಿ ಇಲ್ಲಿ ಗೆಲುವಿನ ಖಾತೆಯನ್ನೇ ತೆರೆದಿಲ್ಲ! ಕಾಂಗ್ರೆಸ್‌ 10, ಜನತಾಪಕ್ಷ  2 ಹಾಗೂ ಜನತಾದಳ 1 ಬಾರಿ ಗೆದ್ದಿದೆ. ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಬರೋಬ್ಬರಿ 20 ವರ್ಷಗಳಿಂದಲೂ ಅಧಿಪತಿಯಾಗಿ ಮೆರೆಯುತ್ತಿದ್ದಾರೆ. ಈ ಭಾಗದಲ್ಲಿ ‘ಸಾಹುಕಾರ’ ಎಂದೇ ಕರೆಸಿಕೊಳ್ಳುವ ಸಹಕಾರ ಸಚಿವರಿಗೆ ಸೋಲಿನ ರುಚಿ ತೋರಿಸಲು ಕಮಲ ಪಾಳಯ ಒಗ್ಗಟ್ಟಾಗಿದೆ. ಇತ್ತ ರಮೇಶ, ಸತತ 5ನೇ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ‘ಹೈವೋಲ್ಟೇಜ್‌ ಕದನ’ದಿಂದಾಗಿ ಈ ಕ್ಷೇತ್ರ ಇಡೀ ರಾಜ್ಯದ ಗಮನಸೆಳೆದಿದೆ.

ಪೂಜಾರಿ ಕಮಲ ತೆಕ್ಕೆಗೆ: ಹಿಂದಿನ ಎರಡೂ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ 2ನೇ ಸ್ಥಾನ ಪಡೆದಿದ್ದ ಅಶೋಕ ಪೂಜಾರಿ, ಅವರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿದೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಏ. 13ರಂದು ಅಲ್ಲಿ ರೋಡ್‌ ಷೋ ನಡೆಸಿ ಕಾರ್ಯಕರ್ತರನ್ನು  ಹುರಿದುಂಬಿಸಿದ್ದಾರೆ. ಚುನಾವಣಾ ತಂತ್ರ

ಗಳನ್ನು ಜಾರಿಗೊಳಿಸುವ ಉಸ್ತುವಾರಿಯನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ  ವಹಿಸಲಾಗಿದೆ. ಆರ್‌ಎಸ್‌ಎಸ್‌ ಕೂಡ ಬೆಂಬಲ ನೀಡುತ್ತಿದೆ. ಹಿಂದುತ್ವದ ದಾಳವನ್ನೂ ಪ್ರಯೋಗಿಸಲಾಗುತ್ತಿದೆ. ಬಿಜೆಪಿಯು ವನವಾಸ ಅಂತ್ಯಗೊಳಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದರೆ, ಪ್ರತಿಯಾಗಿ ರಮೇಶ ಜಾರಕಿಹೊಳಿ ಪ್ರಚಾರದಲ್ಲಿ ತೊಡಗಿದ್ದಾರೆ.

1999ರ ನಂತರ ನಡೆದ 4 ಚುನಾವಣೆಗಳಲ್ಲೂ ರಮೇಶ ಜಾರಕಿಹೊಳಿ ಗೆಲ್ಲುತ್ತಲೇ ಬಂದಿದ್ದಾರೆ. ಮೊದಲಿಗೆ ಜೆಡಿಯುನ ಚಂದ್ರಶೇಖರ ನಾಯಕ, 2004ರಲ್ಲಿ ಜನತಾಪಕ್ಷದಿಂದ ಬಿಜೆಪಿಗೆ ಬಂದಿದ್ದ ಎಂ.ಎಲ್‌. ಮುತ್ತೆನ್ನವರ, 2008 ಹಾಗೂ 2013ರಲ್ಲಿ ಜೆಡಿಎಸ್‌ನ ಅಶೋಕ ಪೂಜಾರಿ ಅವರಿಗೆ ಸೋಲುಣಿಸಿದ್ದಾರೆ. ರಮೇಶ–ಅಶೋಕ ನಡುವಿನ ಸತತ 3ನೇ ಜಿದ್ದಾಜಿದ್ದಿಯಿಂದಾಗಿ ಕಣ ರಂಗಾಗಿದೆ.

ಜೆಡಿಎಸ್‌ ಪ್ರಭಾವ ಮಂಕು: ಪೂಜಾರಿ ಬಿಜೆಪಿ ಪಾಲಾಗಿದ್ದರಿಂದ ಜೆಡಿಎಸ್‌ ಪ್ರಭಾವ ಇಲ್ಲಿ ಮಂಕಾಗಿದೆ. ಆ ಪಕ್ಷದಿಂದ ಕರೆಪ್ಪ ತಳವಾರ ಕಣದಲ್ಲಿದ್ದಾರೆ. ಆದರೆ, ಕಾಂಗ್ರೆಸ್– ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಗೋಕಾಕವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎನ್ನುವುದು ಈ ಭಾಗದ ಜನರ ಪ್ರಮುಖ ಬೇಡಿಕೆ. ಅಭಿವೃದ್ಧಿಗಿಂತಲೂ ವ್ಯಕ್ತಿ ಪ್ರತಿಷ್ಠೆ, ವೈಯಕ್ತಿಕ ವರ್ಚಸ್ಸಿನ ವಿಷಯಗಳೇ ಮುನ್ನಲೆಗೆ ಬಂದಿರುವುದು ಗಾಢವಾಗಿ ಗೋಚರಿಸುತ್ತಿದೆ.

2 ಬಾರಿ ಜೆಡಿಎಸ್‌ನಿಂದ ಸೋತಿದ್ದ ಪೂಜಾರಿಗೆ ಈ ಬಾರಿ ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಶಕ್ತಿ ಹೆಚ್ಚಬಹುದು. ಆಡಳಿತ ವಿರೋಧಿ ಅಲೆ ಇದೆ, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬ ನಿರೀಕ್ಷೆ ಅವರದು.

ಸಚಿವರಾದರೂ ಗೋಕಾಕವನ್ನೇ ‘ಕೇಂದ್ರ ಸ್ಥಾನ’ವನ್ನಾಗಿ ಮಾಡಿಕೊಂಡಿರುವ ರಮೇಶ ಕ್ಷೇತರ ಜನರ ನಾಡಿ ಮಿಡಿತವನ್ನು ಅರಿತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಲ್ಲದೇ, ಅವರಿಗೆ ಗೋಕಾಕ ಮಿಲ್ ಮೇಲೂ ಹಿಡಿತವಿದೆ. ಇದರಿಂದಾಗಿ, ಗೆಲುವಿನ ಅಂತರ ವೃದ್ಧಿಯಾಗುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ.

ಮಹಿಳಾ ಮತದಾರರು ಕೊಂಚ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ, ಗೆಲುವಿನ ಕರದಂಟಿನ ಸಿಹಿ ಯಾರಿಗೂ ಸುಲಭವಲ್ಲ ಎನ್ನುವಂತಹ ಸ್ಥಿತಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.