ಗೆದ್ದವರಿಲ್ಲದ ಯುದ್ಧ ಭೂಮಿ

7
ಕೊಳ್ಳೇಗಾಲ: ಕಣದಲ್ಲಿರದ ಶಾಸಕರು, ಕುತೂಹಲ ಮೂಡಿಸಿದ ಚುನಾವಣೆ

ಗೆದ್ದವರಿಲ್ಲದ ಯುದ್ಧ ಭೂಮಿ

Published:
Updated:

ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಈ ಬಾರಿ ಇತರೆ ಕ್ಷೇತ್ರಗಳಿಗಿಂತ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಶಾಸಕರು ಕಣದಲ್ಲಿದ್ದರೆ, ಇಲ್ಲಿ ಮಾತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಸ್ಪರ್ಧೆಯಲ್ಲಿಲ್ಲ.

ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಸ್ಥಿತಿಗಳು ಸಮಾನವಾಗಿಯೇ ಇರುವುದು ಮತ್ತೊಂದು ವಿಶೇಷ. ಎರಡೂ ಪಕ್ಷಗಳಲ್ಲಿ ಟಿಕೆಟ್ ಘೋಷಣೆಯಾದಾಗ ಭುಗಿಲೆದ್ದಿದ್ದ ಅಸಮಾಧಾನವನ್ನು ನಿವಾರಣೆ ಮಾಡುವಲ್ಲಿ ವರಿಷ್ಠರು ಯಶಸ್ವಿಯಾಗಿದ್ದಾರೆ. ಬಿಜೆಪಿಯಿಂದ ವಲಸೆ ಬಂದ ಎ.ಆರ್.ಕೃಷ್ಣಮೂರ್ತಿ ಅವರಿಗೆ ಟಿಕೆಟ್ ಸಿಗುತ್ತಲೇ ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಜಯಣ್ಣ, ಬಾಲರಾಜು, ಬಿ.ಎಂ.ನಟರಾಜು, ಕಿನಕಲಿ ರಾಚಯ್ಯ ಹಾಗೂ ಬಾಗಳಿ ಪುಟ್ಟಬುದ್ದಿ ಅಸಮಾಧಾನಗೊಂಡರು. ಇವರಲ್ಲಿ ಕೆಲವರು ಬಂಡಾಯ ಸ್ಪರ್ಧೆಗೂ ಮುಂದಾದರು. ಆದರೆ, ವರಿಷ್ಠರು ಎಲ್ಲರನ್ನೂ ಸಮಾಧಾನಗೊಳಿಸಿದರು. ಪುಟ್ಟಬುದ್ದಿ ಅಕಾಲಿಕವಾಗಿ ನಿಧನ ಹೊಂದಿದರು. ಉಳಿದವರು ಕೃಷ್ಣಮೂರ್ತಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.‌

ಇತ್ತ ಬಿಜೆಪಿಯಲ್ಲಿ ಜಿ.ಎನ್.ನಂಜುಂಡಸ್ವಾಮಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಲೇ ಸರ್ವೇಶ್ ಬಸವಯ್ಯ, ಕೂಡ್ಲು ಶ್ರೀಧರಮೂರ್ತಿ ಹಾಗೂ ಚಂದ್ರಕಲಾ ಬಾಯಿ ಅಸಮಾಧಾನಗೊಂಡರು. ಈ ಅಸಮಾಧಾನವನ್ನು ನಿವಾರಿಸಿರುವ ವರಿಷ್ಠರು, ಎಲ್ಲರೂ ಬಹಿರಂಗ ಪ್ರಚಾರದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಈ ಎರಡೂ ಪಕ್ಷಗಳಿಗೆ ಸೆಡ್ಡು ಹೊಡೆಯಲು ಬಿಎಸ್‌ಪಿ ರಣತಂತ್ರವನ್ನೇ ರೂಪಿಸಿದೆ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಈ ಬಾರಿ ‘ಆನೆ’ ಕಳೆದ ಬಾರಿಗಿಂತ ಹೆಚ್ಚು ಶಕ್ತಿಯುತ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಸತತ 3 ಬಾರಿ ಸೋತಿರುವ ಬಿಎಸ್‌ಪಿ – ಜೆಡಿಎಸ್ ಅಭ್ಯರ್ಥಿ ಎನ್.ಮಹೇಶ್ ಕಳೆದ ಬಾರಿ 2ನೇ ಸ್ಥಾನ ಪಡೆದಿದ್ದರು ಎಂಬುದು ಗಮನಾರ್ಹ. 10,193 ಮತಗಳಿಂದ ಕಾಂಗ್ರೆಸ್‌ನ ಜಯಣ್ಣ ಗೆಲುವು ಸಾಧಿಸಿದ್ದರೂ ಮಹೇಶ್ ಅವರ ಮತಗಳಿಕೆ ಪ್ರಮಾಣ ನಿಜಕ್ಕೂ ಅಚ್ಚರಿಗೆ ಕಾರಣವಾಗಿತ್ತು. ಈ ಕಾರಣದಿಂದಲೇ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

1999 ಮತ್ತು 2009ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಜಿ.ಎನ್.ನಂಜುಂಡಸ್ವಾಮಿ ಮೂರನೇ ಬಾರಿ ಆಯ್ಕೆಯಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ಹಾಗೂ ಕ್ಷೇತ್ರದಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭರ್ಜರಿ ಪ್ರಚಾರಗಳು ಇವರಿಗೆ ‘ಪ್ಲಸ್ ಪಾಯಿಂಟ್’ ಎನಿಸಿವೆ. ಇವುಗಳ ಬೆನ್ನೆತ್ತಿರುವ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಸಹ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರೆಸಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಜೀವಂತವಿರಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಇದರ ಜತೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 7ರಂದು ಪ್ರಚಾರಸಭೆಯನ್ನು ಹ‌ಮ್ಮಿಕೊಳ್ಳುವ ಮೂಲಕ ಬಿಜೆಪಿ ಹವಾಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹವಾ ಸೃಷ್ಟಿಸಲು ಯತ್ನಿಸಿದ್ದಾರೆ.

ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವಿರುದ್ಧವಾಗಿ ತಮ್ಮದೇ ಪ್ರಚಾರದ ತಂತ್ರವನ್ನು ರೂಢಿಸಿಕೊಂಡಿರುವ ಮಹೇಶ್ ಗೆಲುವಿಗಾಗಿ ವರಿಷ್ಠರ ಬೆನ್ನು ಬಿದ್ದಿಲ್ಲ. ಒಮ್ಮೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿಗೆ ಬಂದಿದ್ದನ್ನು ಬಿಟ್ಟರೆ ಉಳಿದ್ಯಾವ ನಾಯಕರನ್ನು ಕರೆಸಿಲ್ಲ. ಸ್ವತಃ ಬಿಎಸ್‌ಪಿಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಮಹೇಶ್ ತಮ್ಮದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರನ್ನೂ ಕರೆಸುವ ಗೋಜಿಗೆ ಹೋಗಿಲ್ಲ. ಈ ತಂತ್ರಗಾರಿಕೆ ಬದಲಿಗೆ ‘ಎಷ್ಟು ಬಾರಿ ಸೋಲಿಸುತ್ತೀರಿ? ಒಮ್ಮೆಯಾದರೂ ಗೆಲ್ಲಿಸಿ’ ಎಂದು ಪದೇ ಪದೇ ಮತದಾರರನ್ನು ಕೇಳುವ ಮೂಲಕ ಅನುಕಂಪದ ಅಲೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಈ ಅಲೆಯನ್ನೇ ಗೆಲುವಿಗಾಗಿ ಅವರು ಬಲವಾಗಿ ಹಿಡಿದಿದ್ದಾರೆ.

ಇಬ್ಬರು ಮಹಿಳೆಯರು ಕಣದಲ್ಲಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷ ಎನಿಸಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ‌ಯಿಂದ ಲಕ್ಷ್ಮೀ ಜಯಶಂಕರ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಂ.ನಾಗರತ್ನಾ ಕಣದಲ್ಲಿದ್ದಾರೆ.

ಕಣದಲ್ಲಿರುವವರು

ಎ.ಆರ್.ಕೃಷ್ಣಮೂರ್ತಿ      (ಕಾಂಗ್ರೆಸ್)

ಜಿ.ಎನ್.ನಂಜುಂಡಸ್ವಾಮಿ  (ಬಿಜೆಪಿ)

‌ಎನ್.ಮಹೇಶ್             (ಬಿಎಸ್‌‍ಪಿ–ಜೆಡಿಎಸ್ ಮೈತ್ರಿಕೂಟ)

ಎಸ್.ಚಿಕ್ಕಸಾವಕ          (ರಿಪಬ್ಲಿಕನ್ ಪಾ‌ರ್ಟಿ ಆಫ್ ಇಂಡಿಯಾ –ಎ)

ಜಿ.ನಿಂಗರಾಜ್            (ರಿಪಬ್ಲಿಕನ್ ಸೇನಾ)

ಲಕ್ಷ್ಮೀ ಜಯಶಂಕರ್   (ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ‌)

ಎಂ.ನಾಗರತ್ನಾ           (ಪಕ್ಷೇತರ)

19,960 ಹೊಸ ಮತದಾರರು

ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ 19,960 ಹೊಸ ಮತದಾರರು ಇದ್ದಾರೆ. ಇವರೂ ಈ ಬಾರಿಯ ಅಭ್ಯರ್ಥಿಯ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ. ಕಳೆದ ಬಾರ 1,91,562 ಮಂದಿ ಮತದಾರರು ಇದ್ದರು. ಇವರ ಸಂಖ್ಯೆ ಈ ಬಾರಿ 2,11,522ಕ್ಕೆ ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry