ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಗಡ’ ಕಾಂಗ್ರೆಸ್‌, ಬಿಜೆಪಿ ನಿರ್ಲಕ್ಷ್ಯ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪ
Last Updated 7 ಮೇ 2018, 9:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕರಗಡ ಏತ ನೀರಾವರಿ ಯೋಜನೆ ನಿಟ್ಟಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ 11 ವರ್ಷಗಳಿಂದ ನಿರ್ಲಕ್ಷ್ಯ ವಹಿಸಿವೆ. ಈ ಪಕ್ಷಗಳು ರೈತರ ನೆರವಿಗೆ ಬರುತ್ತಿಲ್ಲ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು. 2007ರ ಮಾರ್ಚ್‌ 23ರಂದು ಕರಗಡ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಇಷ್ಟು ವರ್ಷಗಳಾದರೂ ರೈತರಿಗೆ ನೀರು ನೀಡಲು ಈ ಪಕ್ಷಗಳು ವಿಫಲವಾಗಿವೆ’ ಎಂದು ದೂಷಿಸಿದರು.

‘ಪ್ರಧಾನಿ ಮೋದಿ ಅವರು ರೈತರ ಸಾಲಮನ್ನಾ ಮಾಡಲು ಕೈಚಲ್ಲಿದ್ದರು. ಆದರೆ, ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ರೈತರ ₹ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಈಗ ಹೇಳಿದ್ದಾರೆ. ರೈತರ ಸಂಪೂರ್ಣ ಸಾಲ ಮನ್ನ ಮಾಡುವುದಾಗಿ ಒಂದೂ ವರ್ಷದ ಹಿಂದೆಯೇ ಹೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು ಸಹಕಾರ ಸಂಘಗಳಲ್ಲಿ ಪಡೆದಿರುವ ₹ 50 ಸಾವಿರವರೆಗಿನ ಸಾಲಮನ್ನಾ ಘೋಷಣೆ ಮಾಡಿದ್ದರು. ಜಿಲ್ಲೆಗೆ ಬಾಬ್ತಿನ ₹ 167 ಕೋಟಿ ಪೈಕಿ ₹ 1 ಕೋಟಿ ಮಾತ್ರ ಬಿಡುಗಡೆಯಾಗಿದೆ’ ಎಂದು ಹೇಳಿದರು.

‘ಮಹದಾಯಿ ವಿವಾದ ಬಗೆಹರಿಸುವುದಾಗಿ ಪ್ರಧಾನಿ ಮೋದಿ ಅವರು ಈಗ ಹೇಳಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಅವರು ಈ ರೀತಿ ಹೇಳಿದ್ದಾರೆ. ವಿವಾದ ಪರಿಹರಿಸುವುದು ಈಗ ಅವರ ಕೈಯಲ್ಲಿ ಇಲ್ಲ, ನ್ಯಾಯಮಂಡಳಿ ತೀರ್ಪು ನೀಡಬೇಕಿದೆ. ಹೇಮಾವತಿ – ನೇತ್ರಾವತಿ ನದಿ ಜೋಡಿಸುವುದಾಗಿಯೂ ಹೇಳಿದ್ದಾರೆ. ಇಲ್ಲಿಗೆ ಬಂದಾಗ ಕರಗಡ ನೀರಾವರಿ ಯೋಜನೆ ಮುಗಿಸುವ ಭರವಸೆ ನೀಡಬಹುದು. ಇಷ್ಟೊಂದು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ಕಂಡಿಲ್ಲ’ ಎಂದು ಜರಿದರು.

‘ಜೆಡಿಎಸ್‌ ಅನ್ನು ಬಿಜೆಪಿ ‘ಬಿ’ ಟೀಂ ಎಂದು ಕಾಂಗ್ರೆಸ್‌, ಕಾಂಗ್ರೆಸ್‌ನ ‘ಬಿ’ ಟೀಂ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆ. ಆದರೆ, ಜೆಡಿಎಸ್‌ ಯಾವ ಪಕ್ಷದ ಜತೆಗೂ ಒಳಒಪ್ಪಂದ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚಿಕ್ಕಮಗಳೂರು ಮೂರು ಬಾರಿ ಬಿಜೆಪಿ ಪಾಲಾಗಲೂ ವೇದಿಕೆ ನಿರ್ಮಾಣ ಮಾಡಿಕೊಟ್ಟಿದ್ದು ಕಾಂಗ್ರೆಸ್‌. ಸಂವಿಧಾನ ಬದಲಾವಣೆಯ ಮಾತನ್ನು ಕೆಲವರು ಆಡಿದ್ದಾರೆ. ಆದರೆ, ಅಂಬೇಡ್ಕರ್‌ ರಚಿಸಿದ ಬದಲಾಯಿಸಲು ಸಾಧ್ಯ ಇಲ್ಲ. ದಲಿತರು, ಮುಸ್ಲಿಮರು, ಹಿಂದುಳಿದವರು ಎಲ್ಲರೂ ಈ ಬಾರಿ ಜೆಡಿಎಸ್‌ ಬೆಂಬಲಿಸಿ’ ಎಂದು ಕೋರಿದರು.

‘ನಮ್ಮ ಅಭ್ಯರ್ಥಿ ಹರೀಶ್‌ ಅವರು ಮಾರಾಟವಾಗಿದ್ದಾರೆ ಎಂದು ಕೆಲವರು ಪುಕಾರು ಎಬ್ಬಿಸಿದ್ದಾರೆ. ಮಾರಾಟವಾಗುವ ವ್ಯಕ್ತಿ ಅವರಲ್ಲ. ಎಲ್ಲವನ್ನು ಲೆಕ್ಕ ಹಾಕಿಯೇ ಕಣಕ್ಕಿಳಿಸಿದ್ದೇವೆ. ಅವರನ್ನು ಮತದಾರರು ಬೆಂಬಲಿಸಬೇಕು. ಮತದಾನದ ದಿನ ನನ್ನನ್ನು ನೆನಪಿಸಿಕೊಳ್ಳಿ. ಹಣ, ಉಂಗುರ, ಸೀರೆ, ಮಿಕ್ಸಿ, ಕುಕ್ಕರ್‌ ಆಮಿಷಗಳಿಗೆ ಮರುಳಾಗಬೇಡಿ’ ಎಂದು ಕಿವಿಮಾತು ಹೇಳಿದರು.

ಜೆಡಿಎಸ್‌ ಮುಖಂಡ ಎಸ್‌.ಎಲ್‌.ಧರ್ಮೇಗೌಡ ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕೆ ಬದಲಾವಣೆಯೇ ಮಾರ್ಗ ಎಂದು ಅವರು ಹೇಳಿದರು. ವಿವಿಧೆಡೆಗಳಿಂದ ಸಹಸ್ರಾರು ಮಂದಿ ವಿಕಾಸ ಪರ್ವಕ್ಕೆ ಬಂದಿದ್ದರು.

ಎಚ್‌ಡಿಕೆ ಪ್ರಸ್ತಾಪಿಸಿದ ಭರವಸೆಗಳು

ರೈತರ ಸಂಪೂರ್ಣ ಸಾಲಮನ್ನಾ
ಹೊಸ ಕೃಷಿ ನೀತಿ ಅನುಷ್ಠಾನ
ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ₹ 4,300 ಕೋಟಿ ಸಾಲಮನ್ನಾ
65 ವರ್ಷದ ದಾಟಿದ ಹಿರಿಯನಾಗರಿಕರಿಗೆ ₹ 5,000 ಮಾಸಾಶನ
₹ 5,000ಕ್ಕೂ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಮಾಸಿಕ ₹ 2000 ನೆರವು
ಗರ್ಭಿಣಿ– ಬಾಣಂತಿಯರಿಗೆ 6 ತಿಂಗಳು ₹ 6,000 ವಿತರಣೆ

ನಿಮ್ಮ ಕಷ್ಟ ಆಲಿಸಲು ಅವರು ಬರಲ್ಲ

ಚುನಾವಣೆಗಾಗಿ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ಮೊದಲಾದ ರಾಷ್ಟ್ರಮಟ್ಟದ ನಾಯಕರು ದೆಹಲಿಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ನಾಯಕರು ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ ವಾಪಸಾಗುತ್ತಿದ್ದಾರೆ. ಈ ಚುನಾವಣೆ ಮುಗಿದ ಬಳಿಕ ಈ ನಾಯಕರಾರು ನಿಮ್ಮ ಕಷ್ಟ ಆಲಿಸಲು ಬರಲ್ಲ ಎಂದು ಕುಮಾರಸ್ವಾಮಿ ಕಟಕಿಯಾಡಿದರು.

**
ಪ್ರಾದೇಶಿಕ ಪಕ್ಷದ ನಾಯಕತ್ವ ವಹಿಸಿಕೊಂಡು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ರಾಜ್ಯದ ಮೂಲೆಮೂಲೆ ಪ್ರವಾಸ ಮಾಡಿದ್ದೇನೆ
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT