ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ನೀರಿನಲ್ಲಿ ಕಬ್ಬು

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಬಸವರಾಜ ಗಿರಗಾಂವಿ

ಹವಾಮಾನ ವೈಪರೀತ್ಯದಿಂದ ಕೃಷಿಯ ಮೇಲೆ ವಿಪರೀತ ದುಷ್ಪರಿಣಾಮವಾಗಿ ಇಳುವರಿ ಕಡಿಮೆಯಾಗುತ್ತಿದೆ. ಬೇಸಿಗೆ ಕಾಲದಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲಾಗಿ ಪರಿಣಮಿಸಿದೆ.

ಕಬ್ಬು ಹೆಚ್ಚಾಗಿ ಬೆಳೆಯುವ ಬೆಳಗಾವಿ ಹಾಗೂ ಬಾಗಲಕೋಟೆ ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಕೆಳಗೆ ಕಾಣಿಸಿದ ಸೂಕ್ತ ಕ್ರಮಗಳನ್ನು ರೈತರು ತಮ್ಮ ಕಬ್ಬು ಬೆಳೆಗೆ ಅಳವಡಿಸಿ ನೀರಿನ ಸದ್ಬಳಕೆ ಮಾಡಿಕೊಳ್ಳಬಹುದು.

1 ನೀರಿನ ಲಭ್ಯತೆ ಪ್ರಮಾಣದ ಆಧಾರದ ಮೇರೆಗೆ ಕಬ್ಬು ಬೆಳೆಯ ಕ್ಷೇತ್ರವನ್ನು ನಿಗದಿಪಡಿಸಿಕೊಳ್ಳಬೇಕು.

2 ಕಬ್ಬು ನಾಟಿ ಪೂರ್ವದಲ್ಲಿ ಹಾಗೂ ಕುಳೆ ಕಬ್ಬಿನಲ್ಲಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ ಅಥವಾ 2 ಟನ್ ಭೂಮಿಶಕ್ತಿ ಅಥವಾ 1 ಟನ್ ಎರೆಹುಳು ಗೊಬ್ಬರ ಬಳಸಬೇಕು.

3 ನೀರಿನ ಕೊರತೆ ಕಂಡುಬಂದಲ್ಲಿ, ಪಟ್ಟಾ ಪದ್ಧತಿ (2.5–5-2.5 ಅಡಿ ಅಥವಾ 3’-6’-3’)ಯಲ್ಲಿ ಕಬ್ಬು ನಾಟಿ ಮಾಡಬೇಕು.

4 ಕಬ್ಬು ನಾಟಿ ಮಾಡುವ ಸಂದರ್ಭದಲ್ಲಿ ಸುಣ್ಣದ ತಿಳಿ ನೀರಿನಲ್ಲಿ ಕಬ್ಬಿನ ಬೀಜಗಳನ್ನು 10-15 ನಿಮಿಷ ನೆನೆಯಿಸಿ ನಂತರ ಕಬ್ಬು ನಾಟಿ ಮಾಡಬೇಕು.

5 ಸಾಲು ಬಿಟ್ಟು ಸಾಲು ನೀರು ಹಾಯಿಸಬೇಕು. ಮೊದಲು ನೀರು ಹಾಯಿಸಿದ ಸಾಲು ಬಿಟ್ಟು, ಈ ಹಿಂದೆ ಹಾಯಿಸದೇ ಇರುವ ಸಾಲಿಗೆ ನೀರು ಹಾಯಿಸಬೇಕು.

6 ಸಾಲುಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆಕುಂಟೆ ಹೊಡೆಯುವುದರಿಂದ ಮಣ್ಣಿನಲ್ಲಿರುವ ತೇವಾಂಶ ಸಂರಕ್ಷಿಸಿಕೊಂಡು ನೀರು ಹಾಯಿಸುವ ಅವಧಿಯ ಅಂತರ ಹೆಚ್ಚಿಸಿಕೊಳ್ಳಬಹುದು.

7 ಪ್ರವಾಹ ನೀರಾವರಿ ಪದ್ಧತಿಗಿಂತ ಹನಿ ನೀರಾವರಿ ಪದ್ಧತಿ, ತುಂತುರು

ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು.

8 ನಾಟಿ ಕಬ್ಬು ಬೆಳೆಯಲ್ಲಿ (5 ರಿಂದ 6 ತಿಂಗಳ ಬೆಳೆಯ ಅವಧಿ) ಸಂಪೂರ್ಣವಾಗಿ ಒಣಗಿದ ಕಬ್ಬಿನ ಕೆಳ ಭಾಗದ ಎಲೆಗಳನ್ನು ಸುಲಿದು ಸಾಲುಗಳ ಮಧ್ಯ ಹೊದಿಕೆ ಹಾಕುವುದರಿಂದ ಮಣ್ಣಿನಲ್ಲಿರುವ ತೇವಾಂಶ ಕಾಪಾಡಿಕೊಳ್ಳಬಹುದು.

9 ಕಬ್ಬು ಕಟಾವು ಮಾಡಿದ ತಕ್ಷಣ (ಕುಳೆ ಬೆಳೆಯಲ್ಲಿ) ಒಣಗಿದ ಎಲೆಗಳನ್ನು ಮತ್ತು ಇತರೇ ತ್ಯಾಜ್ಯ ವಸ್ತುಗಳನ್ನು ಕಬ್ಬಿನ ಸಾಲುಗಳಲ್ಲಿ ಹೊದಿಕೆಯಾಗಿ ಬಳಸುವುದರಿಂದ ಶೇ 30ರಿಂದ 40ರಷ್ಟು ನೀರು ಉಳಿತಾಯ ಮಾಡಬಹುದು.

10 ರವದಿ ನಿರ್ವಹಣೆಗಾಗಿ ಒಂದು ಕೆ.ಜಿ ರವದಿ ಕಳೆಯುವ ಸೂಕ್ಷ್ಮಾಣು ಜೀವಿಗಳನ್ನು ಪ್ರತಿ ಟನ್ ರವದಿಗೆ ತಿಪ್ಪೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಳಸಬೇಕು. ಇದರಿಂದ ರವದಿ ಬೇಗನೆ ಕಳೆತು ಗೊಬ್ಬರವಾಗುತ್ತದೆ.

11 ನೀರಿನ ಅಭಾವ ಪರಿಸ್ಥಿತಿಯಲ್ಲಿ ಶಿಫಾರಸ್ಸು ಪ್ರಮಾಣಕಿಂತ ಹೆಚ್ಚಿಗೆ, ಅಂದರೆ ಪ್ರತಿ ಎಕರೆಗೆ ಅಂದಾಜು 20 ಕೆ.ಜಿ. ಮ್ಯುರೇಟ್ ಆಫ್ ಪೋಟ್ಯಾಷ್(ಎಮ್‍ಒಪಿ) ಗೊಬ್ಬರವನ್ನು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಕಬ್ಬು ಬೆಳೆಗೆ ಹಾಕಬೇಕು.

12 ಪ್ರತಿ ಲೀಟರ್ ನೀರಿಗೆ 25 ಗ್ರಾಂ ಪೋಟ್ಯಾಷ್(ಎಮ್‍ಒಪಿ) ಗೊಬ್ಬರವನ್ನು ಮಿಶ್ರಣ ಮಾಡಿ ತಯಾರಿಸಿದ ಸಿಂಪಡಣಾ ದ್ರಾವಣವನ್ನು 10 ರಿಂದ 15 ದಿನಕ್ಕೊಮ್ಮೆ ಬೆಳವಣಿಗೆ ಅನುಗುಣವಾಗಿ ಸಿಂಪಡಿಸಬೇಕು.

13 ಸೂಕ್ಷ್ಮ ವಾತಾವರಣವನ್ನು ಕಲ್ಪಿಸಲು ಬೆಳೆಯ ಕ್ಷೇತ್ರದ ಸುತ್ತಲು ಬದುಗಳ ಮೇಲೆ ಗಾಳಿ ತಡೆಗಟ್ಟುವ ಗಿಡಗಳನ್ನು ಬೆಳೆಸಬೇಕು.

14 ನೀರಿನ ಕೊರತೆಯಲ್ಲಿ ಬೆಳೆಯುವ ಸಾಮರ್ಥ್ಯವುಳ್ಳ ಸಿಓಸಿ 671, ಸಿಓಎಸ್‍ಎನ್‍ಕೆ 03632 ಮತ್ತು ಸಿಓ 94012 ತಳಿಗಳನ್ನು ನಾಟಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT