ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಇಸ್ತ್ರಿ ಸೋಮಣ್ಣ ಕನ್ನಡದ ಮೇಸ್ತ್ರಿ

ಅಕ್ಷರ ಗಾತ್ರ

‘ನಾವು ನವೆಂಬರ್ ಒಂದರ ಕನ್ನಡಿಗರಾಗುವುದು ಬೇಡ; ನಂಬರ್ ಒನ್ ಕನ್ನಡಿಗರಾಗೋಣ’ ಎಂಬ ಹೇಳಿಕೆ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡಿದ್ದು ಇನ್ನೂ ನೆನಪಿದೆ. ಬಡತನವನ್ನೇ ಹಾಸಿ ಹೊದ್ದ ಕೆಲವರು ಹಾಗೆ ನಿಜವಾಗಿ ನಂಬರ್‌ ಒನ್‌ ಕನ್ನಡಿಗರಾಗಿದ್ದಿದೆ. ಅಂಥವರಲ್ಲಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳಿನ ಸೋಮಶೇಖರ್ ಮಡಿವಾಳರ ಒಬ್ಬರು.

ಹಗರಿಬೊಮ್ಮನಹಳ್ಳಿಯ ರಾಮನಗರದ ಸರ್ಕಾರಿ ಶಾಲೆಯ ಬಳಿ ಇರುವ ಹೆಸರೇ ಇಲ್ಲದ ಅವರ ಇಸ್ತ್ರಿ ಅಂಗಡಿ ಕನ್ನಡ ಮನೆ ಇದ್ದಂತೆ. ದ್ವಿತೀಯ ಪಿ.ಯು.ಸಿ.ವರೆಗೂ ಓದಿರುವ ಸೋಮಶೇಖರ್‌ ಬಡತನದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರಾಗಿದ್ದರು. ಬಳಿಕ ಖಾಸಗಿ ಅಂಗಡಿಗಳಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಕೊನೆಗೆ ಗೆಳೆಯರ ನೆರವಿನಿಂದ ಚಿಕ್ಕ ಪೆಟ್ಟಿಗೆ ಅಂಗಡಿಯಲ್ಲಿ ಬಟ್ಟೆ ಇಸ್ತ್ರಿ ಮಾಡುವ ಕಾಯಕ ಪ್ರಾರಂಭಿಸಿದರು.

ಕೇರಂ ಬೋರ್ಡ್ ತಂದ ಅವರು ಬಿಡುವಿನ ವೇಳೆಯಲ್ಲಿ ಗೆಳೆಯರ ಜೊತೆ ಪ್ರತಿದಿನ ಆಡಲು ಪ್ರಾರಂಭಿಸಿದರು. ದಿನಗಳೆದಂತೆ ಆಟ ಅಡುವವರ ಸಂಖ್ಯೆ ಏರುತ್ತಾ 25-30ರವರೆಗೂ ತಲುಪಿತು. ಸರದಿ ಪ್ರಕಾರ ಆಟವಾಡುವ ನಿಯಮವೂ ನಡೆಯಿತು. ಸಂಖ್ಯೆ ಹೆಚ್ಚಾದಂತೆ ಗದ್ದಲ ಮತ್ತು ಸ್ಪರ್ಧೆ ಹೆಚ್ಚಾಯಿತು. ಮನರಂಜನೆ ಹೊರತಾಗಿ ಇದರಿಂದ ಏನೂ ಉಪಯೋಗವಿಲ್ಲ ಎಂದುಕೊಂಡ ಅವರು, ಅದರ ಬದಲು ಕನ್ನಡ ಪ್ರೇಮ ಹೆಚ್ಚಿಸುವ ಮತ್ತು ಜ್ಞಾನ ಪ್ರಸಾರವಾಗುವಂತಹ ಪತ್ರಿಕೆಗಳನ್ನು ತಂದು ಓದುವ ಹವ್ಯಾಸ ಬೆಳೆಸಲು ನಿರ್ಧರಿಸಿದರು. ಅದನ್ನು ತಕ್ಷಣ ಕಾರ್ಯರೂಪಕ್ಕೆ ತಂದರು.


 

ಸೋಮಶೇಖರ್‌ ಅವರು ಮನೆ ಮನೆಗೆ ತೆರಳಿ ಬಟ್ಟೆಗಳನ್ನು ಸಂಗ್ರಹಿಸಿ, ಇಸ್ತ್ರಿ ಮಾಡಿ ಮರಳಿ ಮುಟ್ಟಿಸುವ ತಮ್ಮ ಕಾಯಕದಿಂದ ಪ್ರತಿದಿನ ಅಂದಾಜು 200–250 ರೂಪಾಯಿ ಸಂಪಾದಿಸುತ್ತಿದ್ದಾರೆ. ಅದರಲ್ಲಿ ಬಾಡಿಗೆ ಮತ್ತು ಇದ್ದಲಿಗೆ ಅರವತ್ತು ರೂಪಾಯಿ ಖರ್ಚಾಗುತ್ತದೆ. ಉಳಿದ ಹಣದಲ್ಲಿ ಬದುಕಿನ ಬಂಡಿಯನ್ನು ಸಾಗಿಸುವುದೇ ದುಸ್ತರ. ಅಂಥದ್ದರಲ್ಲಿ ತಮ್ಮ ಅಂಗಡಿಗೆ ಪ್ರತಿದಿನ ಪ್ರಜಾವಾಣಿ, ಕನ್ನಡಪ್ರಭ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳನ್ನು ಕೊಂಡು ತಂದು ಗ್ರಾಹಕರಿಗೆ ಮತ್ತು ಸುತ್ತಲಿನ ಜನರಿಗೆ ಪತ್ರಿಕೆ ಓದಲು ಪ್ರೇರಣೆ ನೀಡಲಾರಂಭಿಸಿದರು. ಕಾಲೇಜು ಯುವಕರು, ಸರಕಾರಿ ಶಾಲೆಯ ಮಕ್ಕಳು, ರೈತರು, ನಿವೃತ್ತರು ಪ್ರತಿದಿನ ಬೆಳಿಗ್ಗೆ ಬಂದು ಪತ್ರಿಕೆಗಳನ್ನು ಓದಲಾರಂಭಿಸಿದರು. ಇಸ್ತ್ರಿ ಅಂಗಡಿ ಪತ್ರಿಕಾಲಯವಾದಂತೆ ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚಾಯಿತು. ಪತ್ರಿಕೆಗಳು ಸಾಲದಾದವು. ಒಬ್ಬರು ಓದುವಾಗ ಉಳಿದವರು ಸುಮ್ಮನೇ ಕುಳಿತುಕೊಳ್ಳಬೇಕಾಗಿತ್ತು. ಹಾಗಾಗಿ ಆ ಪತ್ರಿಕೆಗಳ ಜೊತೆಗೆ ವಿಜಯವಾಣಿ, ಉದಯವಾಣಿ, ವಿಶ್ವವಾಣಿ ದಿನ ಪತ್ರಿಕೆಗಳನ್ನೂ ತರಲಾರಂಭಿಸಿದರು. ಅದಕ್ಕೆ ಅವರ ಜೇಬಿನಿಂದ ಪ್ರತಿದಿನ ಕನಿಷ್ಠ ಮೂವತ್ತೈದು ರೂಪಾಯಿ ಖರ್ಚಾಗಲಾರಂಭಿಸಿತು. ಇವರ ಪತ್ರಿಕಾಸೇವೆ ನೋಡಿ ಕೆಲವರು ವಾರ ಮತ್ತು ಮಾಸಿಕ ಪತ್ರಿಕೆಗಳನ್ನು ಉಚಿತವಾಗಿ ನೀಡಲಾರಂಭಿಸಿದರು.


ಸೋಮಶೇಖರ್ ಮಡಿವಾಳ

‘ನನಗಂತೂ ಓದಲಾಗಲಿಲ್ಲ, ಇತರರಾದರೂ ಓದಬೇಕು. ನನಗೆ ಪತ್ರಿಕೆ ಓದುವುದರ ಬಗ್ಗೆ ಮೊದಲಿನಿಂದಲೂ ಅಪಾರ ಆಸಕ್ತಿ. ಆದರೆ ಪತ್ರಿಕೆಗಳು ಸಿಗುತ್ತಿರಲಿಲ್ಲ. ಯಾರಾದರೂ ಪತ್ರಿಕೆ ಓದುತ್ತಿದ್ದರೆ ಅವರ ಹಿಂದೆ ಕೈಕಟ್ಟಿ ನಿಂತುಕೊಂಡು ಹಿಂದಿನಿಂದ ಓದುತ್ತಿದ್ದೆ. ಈಗಲೂ ಹಲವರ ಸ್ಥಿತಿ ಹೀಗೇ ಇದೆ. ನಾನು ದುಡಿದ ಸ್ವಲ್ಪ ಹಣವನ್ನು ಸಮಾಜಕ್ಕೆ ಮೀಸಲಾಗಿರಬೇಕು ಎಂಬ ಸಣ್ಣ ಆಶಯ ಈ ಕೆಲಸದಿಂದ ನೆರವೇರಿದೆ’ ಎಂದು ಅವರು ಹೇಳುತ್ತಾರೆ.

ಅವರ ಸಂಪರ್ಕಕ್ಕೆ: 8495888662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT