ಶನಿವಾರ, ಮಾರ್ಚ್ 6, 2021
24 °C

ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲ ಹೃದಯ ಬೇಕು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲ ಹೃದಯ ಬೇಕು: ಸಿದ್ದರಾಮಯ್ಯ

ಕೊಳ್ಳೇಗಾಲ (ಚಾಮರಾಜನಗರ): ‘ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲವಾದ ಹೃದಯ ಬೇಕು. ಬಾಡಿ ಬಿಲ್ಡರ್‌ಗೂ ಮೋದಿಯಂತೆ 56 ಇಂಚಿನ ಎದೆ ಇರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಛೇಡಿಸಿದರು.

ಇಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾನೂ ತಿನ್ನಲ್ಲ‌ ತಿನ್ನುವುದಕ್ಕೂ ಬಿಡುವುದಿಲ್ಲ. ಚೌಕಿದಾರನಾಗಿ ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ವಿಜಯ್ ಮಲ್ಯ, ನೀರವ್ ಮೋದಿ ದೇಶ ಕೊಳ್ಳೆ ಹೊಡೆದು ಹೋಗುವಾಗ ಪ್ರಧಾನಿ ಮೋದಿ ಎಲ್ಲಿ ಹೋಗಿದ್ದರು’ ಎಂದು ಅವರು ಪ್ರಶ್ನಿಸಿದರು.

‘ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತೈಲ, ಅಡುಗೆ ಅನಿಲ ಬೆಲೆ ಎಷ್ಟಿತ್ತು, ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟಾಗಿದೆ. ಇದೆ ಏನು ಅಚ್ಚೆ ದಿನ್. ಮನ್‌ ಕಿ ಬಾತ್ ಬದಲು ಕಾಮ್‌ ಕಿ ಬಾತ್ ಹೇಳಿ’ ಎಂದು ವಾಗ್ದಾಳಿ ನಡೆಸಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅವರು ನೂರು ಬಾರಿ ಬಂದರೂ, ಎಷ್ಟೇ ತಿಪ್ಪರಲಾಗ ಹಾಕಿದರೂ ಸೂರ್ಯ ಪೂರ್ವದ ಕಡೆ ಹುಟ್ಟುವುದು ಎಷ್ಟು ಸತ್ಯವೊ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಂದು ತಿಳಿಸಿದರು.

ಮತ್ತೆ ನಾನೇ ಮುಖ್ಯಮಂತ್ರಿ : ‘ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಮುಂದಿನ 5 ವರ್ಷದವರೆಗೂ ಆಳ್ವಿಕೆ ನಡೆಸುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಅನಂತಕುಮಾರ್ ಹೆಗ್ಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಅರ್ಹತೆ ಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ’ ಹರಿಹಾಯ್ದರು.

‘ಬಿಜೆಪಿ ಅವರಿಗೆ ಜಾತ್ಯಾತೀತ ತತ್ವದ ಬಗ್ಗೆ ನಂಬಿಕೆ ಇಲ್ಲ. ಅನಂತಕುಮಾರ ಹೆಗ್ಡೆ ಸಂವಿಧಾನವನ್ನೇ ಬದಲು ಮಾಡುತ್ತೇನೆ ಅಂತಾರೆ. ಒಂದು ವೇಳೆ ಈ ಕಾರ್ಯಕ್ಕೆ ಮುಂದಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅನಂತಕುಮಾರ್ ಹೆಗ್ಡೆಯ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಇವರು ಡೋಂಗಿಗಳು ಹೌದೋ ಅಲ್ಲವೊ’ ಎಂದು ಪ್ರಶ್ನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.