ತಟ್ಟೆ, ಆಸನ ಕಮೋಡ್‌ನಂತೆ; ಲೋಟ ಮೂತ್ರಿಯಂತೆ...!

7

ತಟ್ಟೆ, ಆಸನ ಕಮೋಡ್‌ನಂತೆ; ಲೋಟ ಮೂತ್ರಿಯಂತೆ...!

Published:
Updated:
ತಟ್ಟೆ, ಆಸನ ಕಮೋಡ್‌ನಂತೆ; ಲೋಟ ಮೂತ್ರಿಯಂತೆ...!

ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಸ್ಟೀಲ್‌, ಫೈಬರ್‌ ಪ್ಲಾಸ್ಟಿಕ್‌ ಅಥವಾ ಪಿಂಗಾಣಿಯ ತಟ್ಟೆ, ಲೋಟಗಳಲ್ಲಿ ಊಟೋಪಹಾರ ನೀಡುವುದು ಎಲ್ಲರಿಗೂ ಗೊತ್ತಿದೆ. ಆದರೆ ತೈವಾನ್‌ ರಾಜಧಾನಿ ತೈಪೆಯ ಒಂದು ಹೋಟೆಲ್‌ನಲ್ಲಿ ತಿಂಡಿ ಸರ್ವ್‌ ಮಾಡುವ ತಟ್ಟೆ, ಪಾನೀಯ ಕೊಡುವ ಪರಿಕರ ಹೇಗಿರುತ್ತದೆ ಗೊತ್ತೇ? ಥೇಟ್‌ ಕಮೋಡ್‌ನಂತಿರುತ್ತವೆ! ಈ ಹೋಟೆಲ್‌ನ ಹೆಸರು ‘ಮಾಡರ್ನ್‌ ಟಾಯ್ಲೆಟ್‌ ರೆಸ್ಟೊರೆಂಟ್‌.

‘ಅದರ ಹಾಗೆ’ ಆಕಾರ ಮತ್ತು ಬಣ್ಣ ಹೊಂದಿರುವ ತಿಂಡಿ ಇಲ್ಲಿ ಲಭ್ಯ. ಪುರುಷರ ಶೌಚಾಲಯದಲ್ಲಿ ಕಾಣಬಹುದಾದ ಮತ್ತು ಹಾಸಿಗೆ ಹಿಡಿದ ರೋಗಿಗಳ ಮೂತ್ರ ಸಂಗ್ರಹಿಸಲು ಬಳಸುವ ಮೂತ್ರಿಯಂತಹ ಪ್ಲಾಸ್ಟಿಕ್‌ ಜಗ್‌ನಲ್ಲಿ ಪಾನೀಯಗಳನ್ನು ಕೊಡುತ್ತಾರೆ. ಜೇನು, ಅಲೋವೆರಾ ಜ್ಯೂಸ್‌ಗೆ ಇಲ್ಲಿ ಅಪಾರ ಬೇಡಿಕೆಯಿದೆ.

ಕೂರುವ ಆಸನಗಳೂ ಥೇಟ್‌ ಕಮೋಡ್‌ನಂತೆಯೇ! ಮೇಲೊಂದು ಕುಷನ್‌ ಇರುತ್ತದೆ ಅಷ್ಟೇ. ಶೌಚಾಲಯದ ಕಮೋಡ್‌ಗಳು ಏಷ್ಯನ್‌ ಹಾಗೂ ವೆಸ್ಟರ್ನ್‌ ಎಂಬ ಎರಡು ಮಾದರಿಯಲ್ಲಿ ಲಭ್ಯವಿದೆಯಲ್ಲ, ಇಲ್ಲಿನ ಆಸನಗಳೂ ಅದೇ ಪರಿಕಲ್ಪನೆಯಲ್ಲಿ ವಿನ್ಯಾಸಗೊಂಡಿವೆ. ಟೇಬಲ್‌ಗಳು ಸಿಂಕ್‌ನ ಮೇಲೆ ಗಾಜು ಹೊದಿಸಿದಂತಿರುತ್ತವೆ!ಕೋಳಿ ಮಾಂಸದ ಖಾದ್ಯ ಕೇಳಿದರೂ ಕಮೋಡ್‌ ಆಕಾರದ ತಟ್ಟೆಯಲ್ಲಿ ತಂದುಕೊಡುತ್ತಾರೆ. ಕೇಕ್‌ ಆರ್ಡರ್‌ ಮಾಡಿದವರಿಗೂ ಅಂತಹುದೇ ತಟ್ಟೆಯಲ್ಲಿ ಕೊಡುತ್ತಾರೆ. ಶೌಚಾಲಯದ ಪರಿಕಲ್ಪನೆಗೆ ಧಕ್ಕೆ ಬರಬಾರದು ನೋಡಿ. ಅದಕ್ಕಾಗಿ ಆಹಾರ ಆಕಾರಗಳನ್ನು ‘ಹಾಗೆ’ ವಿನ್ಯಾಸ ಮಾಡಿ ಕೊಡುವುದು ಮತ್ತೊಂದು ವಿಶೇಷ. ಅಂದ ಹಾಗೆ, ಈ ಹೋಟೆಲ್‌ನ ಖಾದ್ಯಗಳ ಹೆಸರೂ ವಿಚಿತ್ರವಾಗಿಯೇ ಇದೆ. ‘ಪೂಪ್‌ ಮೀಟ್‌ಬಾಲ್ಸ್‌’, ಸ್ಟಫ್ಡ್‌ ಬ್ರೌನ್‌ ಶುಗರ್‌ ಪೂಪ್‌ ಪ್ಯಾನ್‌ಕೇಕ್‌’ ಹೀಗೆ ದೇಹದ ತ್ಯಾಜ್ಯಗಳನ್ನು ಉಲ್ಲೇಖಿಸಿ ಖಾದ್ಯಗಳಿಗೆ ಹೆಸರು ನೀಡಲಾಗಿದೆ.

ಹೀಗೆ ಥೀಮ್‌ ಆಧರಿಸಿ ಹೋಟೆಲ್‌ ತೆರೆಯುವುದು ತೈವಾನ್‌ನಲ್ಲಿ ಇದು ಹೊಸದೇನಲ್ಲ. ‘ಮಾಡರ್ನ್‌ ಟಾಯ್ಲೆಟ್‌ ರೆಸ್ಟೋರೆಂಟ್‌’ನ ಮಾಲೀಕ ವಾಂಗ್‌ ತಿಜಿ ವೀ ಬ್ಯಾಂಕ್‌ ಉದ್ಯೋಗ ಬಿಟ್ಟು ಐಸ್‌ಕ್ರೀಂ ಪಾರ್ಲರ್‌ ಆರಂಭಿಸಿದಾಗಲೇ ಶೌಚಾಲಯದ ಥೀಮ್‌ ಅನುಸರಿಸಿದ್ದ. ಅದು ಭಾರಿ ಯಶಸ್ಸು ಕಂಡಿದ್ದರಿಂದ ಅದೇ ಮಾದರಿಯ ರೆಸ್ಟೋರೆಂಟ್‌ ತೆರೆದನಂತೆ.

ನೀವೂ ಯಾವತ್ತಾದರೂ ತೈಪೆಗೆ ಭೇಟಿ ನೀಡಿದರೆ ಈ ರೆಸ್ಟೋರೆಂಟ್‌ಗೆ ಹೋಗಿ ಊಟೋಪಹಾರ ಸವಿಯುವ ಅವಕಾಶ ಮಿಸ್‌ ಮಾಡ್ಕೋಬೇಡಿ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry