ಶುಕ್ರವಾರ, ಫೆಬ್ರವರಿ 26, 2021
28 °C

ಕೈಗಾರಿಕಾ ತರಬೇತಿ: ಉದ್ಯೋಗಾವಕಾಶ ವಿಪುಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗಾರಿಕಾ ತರಬೇತಿ: ಉದ್ಯೋಗಾವಕಾಶ ವಿಪುಲ

ಗೋಣಿಕೊಪ್ಪಲು: ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಲ್ಲಿ ಬಹಳ ಮಂದಿ ಪಿಯುನಂತಹ ಸಾಂಪ್ರದಾಯಿಕ ಕೋರ್ಸ್‌ಗಳ ಅಧ್ಯಯನದ ಕಡೆಗೆ ಗಮನಹರಿಸುತ್ತಾರೆ. ಆದರೆ ಕೇವಲ 2 ವರ್ಷ ವ್ಯಾಸಂಗ ಮಾಡಿದರೆ ಸಾಕು ಉದ್ಯೋಗ ಪಡೆದು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತಹ ವೃತ್ತಿಪರ ಶಿಕ್ಷಣದ ಕಡೆಗೆ ಗಮನ ಹರಿಸುತ್ತಿಲ್ಲ. ಇದಕ್ಕೆ ಕಾರಣ ಮಾಹಿತಿ ಹಾಗೂ ಮಾರ್ಗದರ್ಶನದ ಕೊರತೆ.

ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಎರಡು ವರ್ಷ ತರಬೇತಿ, ಶಿಕ್ಷಣ ನೀಡಿ ಅವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪೊನ್ನಂಪೇಟೆಯಲ್ಲಿದೆ. 1984ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಹಿಳೆಯರಿಗೆ ಮೀಸಲು.

ಕೋರ್ಸ್‌ಗಳು: ಇಲ್ಲಿ 2 ವರ್ಷ ಅವಧಿಯ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಕೋರ್ಸ್ ಇದೆ. ಇದು ಕೇಂದ್ರ ಸರ್ಕಾರದ ಎನ್‌ಸಿವಿಟಿಯಿಂದ ಸಂಯೋಜನೆ ಪಡೆದಿದೆ. ಪ್ರತಿ ವರ್ಷ 52 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ. ಮತ್ತೊಂದು, ಒಂದು ವರ್ಷ ಅವಧಿಯ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್ ಕೋರ್ಸ್. ಇದಕ್ಕೆ 26 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಈ ಕೋರ್ಸ್ ರಾಜ್ಯ ಸರ್ಕಾರದ ಎಸ್‌ಸಿವಿಟಿಯಿಂದ ಸಂಯೋಜನೆಗೊಂಡಿದೆ. ಎಲ್ಲ ಸೀಟುಗಳು ಮಹಿಳೆಯರಿಗೆ ಮೀಸಲು. ಸೀಟು ಉಳಿದರೆ ಮಾತ್ರ ಪುರುಷ ರಿಗೆ ಅವಕಾಶ. ಹೀಗಾಗಿ ಇಲ್ಲಿ ಪುರುಷರೂ ತರಬೇತಿ ಪಡೆಯುತ್ತಿದ್ದಾರೆ.

ಅರ್ಜಿ ಸಲ್ಲಿಕೆ ವಿಧಾನ: ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿ ಆನ್‌ಲೈನ್‌‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಎಸ್‌ಸಿ, ಎಸ್‌ಟಿ, ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮೀಸಲಾತಿ ಇದೆ. ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಮೇ ಮೊದಲ ವಾರದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ.

ಶುಲ್ಕ ವಿವರ : ಮೊದಲ ವರ್ಷ 2,200 ರೂಪಾಯಿ, 2ನೇ ವರ್ಷಕ್ಕೆ 1,200 ರೂಪಾಯಿ. ವಯೋಮಿತಿ 14ರಿಂದ 40 ವರ್ಷ. ದೂರದ ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯದ ಸೌಲಭ್ಯ ಇದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಮತ್ತು ಬರವಣಿಗೆ ಪುಸ್ತಕ, ಟೂಲ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಸೆಮಿಸ್ಟರ್‌ ಕೋರ್ಸ್ ಆಗಿದ್ದು ಹಾಜರಾತಿ ಶೇ 80 ಕಡ್ಡಾಯ. ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಮತ್ತೆರಡು ಸಂಸ್ಥೆಗಳು ಮಡಿಕೇರಿ ಮತ್ತು ಆಲೂರು ಸಿದ್ದಾಪುರದಲ್ಲಿವೆ. ಮಡಿಕೇರಿ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಫಿಟ್ಟರ್, ಟರ್ನರ್, ಮೆಕ್ಯಾನಿಕ್, ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ವೆಲ್ಡರ್ ಕೋರ್ಸ್‌ಗಳಿವೆ. ಆಲೂರು ಸಿದ್ದಾಪುರದಲ್ಲಿ ಫಿಟ್ಟರ್, ಟರ್ನರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್ ಕೋರ್ಸ್‌ಗಳಿವೆ. ಇವುಗಳ ಅವಧಿ 2 ವರ್ಷ.

‘ಪ್ರಜಾವಾಣಿ’ಜೊತೆ ಮಾತನಾಡಿದ ಪೊನ್ನಂಪೇಟೆ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿಜ್ಜಿ ಚೆರಿಯನ್ ಬೆಮೆಲ್, ಎಚ್ಇಎಲ್, ಬಿಎಚ್ಇಎಲ್ ಮೊದಲಾದ ಸರ್ಕಾರಿ ಸ್ವಾಮ್ಯದ ಕೈಗಾರಿಕಾ ಕೇಂದ್ರಗಳಿಗೆ ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳ ಅಗತ್ಯವಿದೆ. ಪ್ರತಿವರ್ಷ ಸಂಸ್ಥೆಗೆ ಬಂದು ಉದ್ಯೋಗಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಉದ್ಯೋಗ ಪಡೆದ ವಿದ್ಯಾರ್ಥಿಗಳು ಇಂದು ದೊಡ್ಡ ಹುದ್ದೆಯಲ್ಲಿದ್ದು ಕೈತುಂಬ ವೇತನ ಪಡೆದುಕೊಳ್ಳುತ್ತಿದ್ದಾರೆ. ಕೈಗಾರಿಕಾ ಕೇಂದ್ರಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ತರಬೇತಿ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಅಷ್ಟೊಂದು ಬೇಡಿಕೆ ಇದೆ’ ಎಂದರು.

ಪಿಯುಗೆ ಸಮಾನ

ಐಟಿಐ ವ್ಯಾಸಂಗವನ್ನು ಪಿಯುಗೆ ಸಮಾನ ಎಂದು ಸರ್ಕಾರ ಈಚೆಗೆ ಘೋಷಿಸಿದೆ. ಒಂದು ವೇಳೆ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗ ಮಾಡಲು ಬಯಸಿದರೆ ಡಿಪ್ಲೊಮಾ ಅಥವಾ ಪದವಿ ತರಗತಿಗೂ ಪ್ರವೇಶ ಪಡೆಯಬಹುದು ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ: 08274-249638/ 9880252218.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.