ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಜೆಡಿಎಸ್‌ಗೆ ಫಸಲಿನ ನಿರೀಕ್ಷೆ

ಸಾಂಪ್ರದಾಯಿಕ ಮತಗಳ ಮೇಲೆ ‘ಕಮಲ’ಕ್ಕೆ ನಂಬಿಕೆ, ಇತರ ಸಮುದಾಯದ ಭಯ
Last Updated 7 ಮೇ 2018, 12:45 IST
ಅಕ್ಷರ ಗಾತ್ರ

ಮಡಿಕೇರಿ: ಕಾಂಗ್ರೆಸ್‌ ಕೋಟೆಯನ್ನು ಛಿದ್ರಗೊಳಿಸಿ ಎರಡು ಬಾರಿ ಸತತವಾಗಿ ಅರಳಿದ್ದ ಕಮಲಕ್ಕೆ ಈಗ ವಿರಾಜಪೇಟೆ ಕ್ಷೇತ್ರದಲ್ಲಿ ಬಂಡಾಯದ್ದೇ ದೊಡ್ಡ ಅಡ್ಡಿ. ಅದರ ಲಾಭ ಪಡೆದು ಉತ್ತಮ ಫಸಲು ತೆಗೆಯುವ ತುಡಿತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನದ್ದು.

ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ, ಕೆ.ಜಿ.ಬೋಪಯ್ಯ ಅವರು ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದಲೇ ಟಿಕೆಟ್‌ ಗಿಟ್ಟಿಸಿ, ಸದ್ದಿಲ್ಲದೇ ಪ್ರಚಾರ ನಡೆಸುತ್ತಿದ್ದಾರೆ. ಹಳ್ಳಿ ಹಳ್ಳಿ ಸುತ್ತಿ ಮತಬುಟ್ಟಿ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಹಾಲಿ ಶಾಸಕರ ಮೇಲಿನ ವಿರೋಧಿ ಅಲೆ ಹಾಗೂ ಆ ಪಕ್ಷದಲ್ಲಿನ ಬಂಡಾಯವನ್ನೇ ಲಾಭವಾಗಿ ಪರಿವರ್ತಿಸಿಕೊಳ್ಳಲು ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನವೂ ಸಾಗುತ್ತಿದೆ.

ವಿರಾಜಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವು ಈ ಬಾರಿಯ ವಿಧಾನಸಭೆ ಚುನಾವಣೆಯ ವಸ್ತುಗಳಾಗಿಲ್ಲ. ಧರ್ಮ, ಜಾತಿ ಹಾಗೂ ಟಿಪ್ಪು ಜಯಂತಿ ವಿಚಾರವೇ ಮುನ್ನೆಲೆಗೆ ಬಂದಿದೆ. ‘ಪ್ರಚಾರದ ಅಸ್ತ್ರ’ವಾಗಿವೆ. ಭರವಸೆಗಳು ಕರಪತ್ರಕ್ಕೆ ಸೀಮಿತವಾಗಿವೆ.

ತನ್ನ ಸಾಂಪ್ರದಾಯಿಕ ಮತಗಳ ಮೇಲೆ ಬಿಜೆಪಿಗೆ ಅಪಾರ ನಂಬಿಕೆ. ಆ ಮತಗಳು ವಿಭಜನೆ ಆಗುವುದಿಲ್ಲ ಎನ್ನುವ ವಿಶ್ವಾಸ. ‘ಮೋದಿ ಅಲೆ’ಯೇ ಪ್ರೇರಕ ಶಕ್ತಿ. ಆದರೆ, ವಿರೋಧಿ ಅಲೆ, ಇತರ ಸಮುದಾಯಗಳ ಮತಗಳು ಕೈಕೊಡಬಹುದೆಂಬ ನಡುಕ ಬಿಜೆಪಿಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ನಡೆದ ಸಮಾವೇಶ ಹೊರತು ಪಡಿಸಿದರೆ, ಬೃಹತ್‌ ಸಮಾವೇಶದ ಮೂಲಕ ಮತದಾರರ ಒಲವು ಗಳಿಸಲು ಇದುವರೆಗೂ ಬಿಜೆಪಿಗೆ ಸಾಧ್ಯವಾಗಿಲ್ಲ. ಕ್ಷೇತ್ರದ ಮೂಲೆ ಮೂಲೆಯಲ್ಲಿರುವ ಬೆಂಬಲಿತ ಸಂಘಟನೆಗಳು ಚುನಾವಣೆಯಲ್ಲಿ ಕೈಕೊಡುವುದಿಲ್ಲ ಎನ್ನುವ ಭರವಸೆಯೊಂದಿಗೆ ಬಿಜೆಪಿ ಮುನ್ನುಗ್ಗುತ್ತಿದೆ.

ಬೋಪಯ್ಯ ಅವರು ‘ಹ್ಯಾಟ್ರಿಕ್‌’ ಜಯಕ್ಕೆ ತಮ್ಮ ವರ್ಚಸ್ಸು ಪಣಕ್ಕಿಟ್ಟಿ ದ್ದಾರೆ. ಕೊಡವ, ಅರೆಭಾಷೆ ಮತದಾರರ ಒಲವು ಗಳಿಸಿ, ವಿಶ್ವಾಸ ಮೂಡಿಸುವ ಪ್ರಯತ್ನದಲ್ಲಿದ್ದಾರೆ.

ಬೋಪಯ್ಯ ಅವರು ಅರೆಭಾಷೆ ಗೌಡ ಸಮುದಾಯದವರು. ಹೀಗಾಗಿ, ಕೊಡವ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕೆಂಬ ಬೇಡಿಕೆಯಿತ್ತು. ಆರ್‌ಎಸ್‌ಎಸ್‌ ಸಹ ಟಿಕೆಟ್‌ ನೀಡುವ ವಿಚಾರದಲ್ಲಿ ಬಿಗಿಹಿಡಿತ ಸಾಧಿಸಿತ್ತು. ಕೊನೆಗೂ ಟಿಕೆಟ್‌ ಪಡೆದಿದ್ದ ಬೋಪಯ್ಯ ಅವರು, ಕ್ಷೇತ್ರದಲ್ಲಿ ವಿರೋಧಿಗಳನ್ನೆಲ್ಲಾ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ಬಂಡಾಯವು ಆಂತರಿಕವಾಗಿ ಹೊಡೆತ ನೀಡಿದರೆ ಕಷ್ಟ ಎಂಬುದನ್ನು ಅರಿತು, ಗೋಣಿಕೊಪ್ಪ ಭಾಗದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಸಭೆ ನಡೆಸಿ ಹೋಗಿದ್ದಾರೆ. ಆದರೂ, ಲೆಕ್ಕಾಚಾರಗಳು ನಿಂತಿಲ್ಲ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ – ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. 3,414 ಮತಗಳ ಅಂತರದಲ್ಲಿ ಬೋಪಯ್ಯ ಗೆಲುವು ಸಾಧಿಸಿದ್ದರು. ಹೀಗಾಗಿ, ಈ ಬಾರಿ ವಿರೋಧದ ಕಾರಣಕ್ಕೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಮೀಸಲು ಕ್ಷೇತ್ರದ ಅವಧಿಯಲ್ಲಿ ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ ಎಚ್‌.ಡಿ.ಬಸವರಾಜ್ ಈಗ ಎಂಇಪಿಯ ಅಭ್ಯರ್ಥಿ. ಅದರ ಲಾಭ, ನಷ್ಟದ ಲೆಕ್ಕಾಚಾರವೂ ಜೋರಾಗಿದೆ.

ಕೈ ಪಕ್ಷದ ಅಭ್ಯರ್ಥಿಯ ಅಬ್ಬರ: ಕರಾಟೆಪಟುವೂ ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ಅರುಣ್‌ ಮಾಚಯ್ಯ ಅಬ್ಬರದ ಪ್ರಚಾರಕ್ಕೆ ಇಳಿದಿದ್ದಾರೆ. ಗೋಣಿಕೊಪ್ಪಲು, ಪೊನ್ನಂ ಪೇಟೆ, ಶ್ರೀಮಂಗಲ, ಕುಟ್ಟ ಭಾಗದಲ್ಲಿ ಹಿಡಿತವಿರುವ ಅರುಣ್, ಈ ಬಾರಿ ಕಮಲಕ್ಕೆ ಸಡ್ಡು ಹೊಡೆದಿದ್ದಾರೆ.

ಕ್ಷೇತ್ರದಲ್ಲಿರುವ ಶಾಸಕರ ವಿರೋಧಿ ಅಲೆಯನ್ನು ಮತವಾಗಿ ಪರಿವರ್ತಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಕ್ಷೇತ್ರದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೋಪಯ್ಯ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದರು. ‘ಯಡಿಯೂರಪ್ಪ ಸರ್ಕಾರವನ್ನು ಉಳಿಸಿದ್ದೇ ಬೋಪಯ್ಯ ಸಾಧನೆ. ಕೊಡಗಿನ ಮತದಾರರು ಪ್ರಬುದ್ಧರಾಗಿದ್ದು ರಾಜಕೀಯವಾಗಿ ಒಳ್ಳೆಯ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ನಡೆಸಿದ್ದರು.

ಜೆಡಿಎಸ್‌ ಸಹ ಈ ಬಾರಿ ಕ್ಷೇತ್ರದಲ್ಲಿ ಉತ್ತಮ ನೆಲೆ ಕಂಡುಕೊಂಡಿದೆ. ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಅಭ್ಯರ್ಥಿ ಸಂಕೇತ್‌ ಪೂವಯ್ಯ ಪರವಾಗಿ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ್ದರು. ಸಂಕೇತ್‌ ಅವರು ಕಾಫಿ ಬೆಳೆಗಾರರ ಸಾಲ ಮನ್ನಾ, ಆನೆ– ಮಾನವ ಸಂಘರ್ಷ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಮತದಾರರ ಒಲವು ಗಳಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್‌ ನಡುವೆಯೇ ಹಣಾಹಣಿ ಕಂಡುಬರುತ್ತಿದೆ. ಪಕ್ಷೇತರ ಅಭ್ಯರ್ಥಿ ಗಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಸ್ಥಿತಿಯಿದೆ. ಈ ಕ್ಷೇತ್ರದಲ್ಲಿ ಎರಡು ಅವಧಿಗೊಮ್ಮೆ ಪಕ್ಷವು ಬದಲಾಗಿರುವ ಇತಿಹಾಸವೂ ಇದೆ. ಆದರೆ, ಕಾಫಿ ನಾಡಿನ ಬುದ್ಧಿವಂತ ಮತದಾರರು ತಮ್ಮ ನಿರ್ಧಾರವನ್ನು ಗುಟ್ಟಾಗಿ ಇರಿಸಿದ್ದಾರೆ.

2013ರ ಚುನಾವಣಾ ಫಲಿತಾಂಶ

ಕೆ.ಜಿ.ಬೋಪಯ್ಯ (ಬಿಜೆಪಿ), ಪಡೆದ ಮತಗಳು: 67,250
ಬಿ.ಟಿ.ಪ್ರದೀಪ್‌ (ಕಾಂಗ್ರೆಸ್‌), ಪಡೆದ ಮತಗಳು: 63,836
ಬೋಪಯ್ಯ ಗೆಲುವಿನ ಅಂತರ: 3,414 ಮತಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT