ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರದಿಂದ ಜ್ಞಾನ ಅಂಕುರ: ಶ್ರೀಗಳು

ರಾಘವೇಂದ್ರ ಮಠದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮ
Last Updated 7 ಮೇ 2018, 12:54 IST
ಅಕ್ಷರ ಗಾತ್ರ

ಕೊಪ್ಪಳ: ಉಪನಯನ ಸಂಸ್ಕಾರ ಪಡೆದ ಮಕ್ಕಳಲ್ಲಿ ಜ್ಞಾನದ ಅಂಕುರವಾಗುತ್ತದೆ. ಇದರಿಂದ ಸದ್ಗುಣಗಳು, ಉತ್ತಮವಾದ ಜ್ಞಾನ, ಸದ್ಬುದ್ಧಿ ಲಭಿಸಿ ಸಮಾಜ ಸುಧಾರಣೆಗೆ ಪೂರಕವಾಗುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಭಾನುವಾರ ಬ್ರಾಹ್ಮಣ ಸಮಾಜ ಆಯೋಜಿಸಿದ್ದ ಸಾಮೂಹಿಕ ಉಪನಯನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಬ್ರಾಹ್ಮಣತ್ವದ ಮೊದಲ ಸಂಕೇತವೇ ಉಪನಯನ ಕಾರ್ಯಕ್ರಮ. ಬಾಲ್ಯಾವಸ್ಥೆಯಿಂದ ಮೇಲೆ ಬರುವಾಗ ನೀಡುವ ಸಂಸ್ಕಾರ ಇದಾಗಿದೆ. ವ್ಯಕ್ತಿ ವಿಕಾಸವಾಗುತ್ತಾ ಸುಂದರ ಜೀವನ ರೂಪಿಸಿಕೊಳ್ಳಬೇಕು. ಹೊರ ಜಗತ್ತಿಗೆ ಸೂರ್ಯ ಬೆಳಕು ನೀಡುತ್ತಾರೆ. ಆದರೆ ಮನುಷ್ಯನ ಹೃದಯದಲ್ಲಿ ಜ್ಞಾನದ ಬೆಳಕು ನೀಡಲು ಸಂಸ್ಕಾರ ಪೂರಕ. ಎಲ್ಲರಿಗೂ ಒಳ್ಳೆಯದನ್ನು ಮಾಡು ಎಂಬ ಪ್ರಾರ್ಥನೆಯೊಂದಿಗೆ ನಮ್ಮ ಬದುಕು ಪ್ರಾರಂಭವಾಗಬೇಕು. ತನ್ನೋ ದಿಯೋಯೇನಃ ಪ್ರಚೋದಯಾತ್ ಎಂಬ ಸಂದೇಶದಂತೆ ನಾವು ನಡೆದುಕೊಳ್ಳಬೇಕು. ರೈತ ಉತ್ತಮ ಬೆಳೆಯ ಫಲ ಪಡೆಯಲು ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾನೆ. ಉತ್ತಮವಾದ ಬೀಜದ ಮೂಲಕ ಉತ್ತಮ ಫಲ ಪಡೆಯುತ್ತಾನೆ. ಅದೇ ರೀತಿ ನಾವು ಮಕ್ಕಳನ್ನು ಪ್ರಾರಂಭದ ಹಂತದಲ್ಲಿ ಉತ್ತಮ ರೀತಿಯಿಂದ ಪೋಷಿಸಿ, ಸಂಸ್ಕಾರ ನೀಡಿದರೆ ಸಮಾಜಕ್ಕೆ ಅವನಿಂದ ಒಳ್ಳೆಯದಾಗುತ್ತದೆ' ಎಂದು ಅವರು ತಿಳಿಸಿದರು.

'ಜೀವನದಲ್ಲಿ ನಿರಾಶರಾಗದೇ ಮುನ್ನಡೆಯಬೇಕು. ಪರಮಾತ್ಮನ ಅನುಗ್ರಹದಿಂದ ನಮಗೆ ಕ್ರಿಯಾಶೀಲತೆ ಹೆಚ್ಚುತ್ತದೆ. ಪರಮಾತ್ಮನ ರಾಗ ಮುದ್ರೆ ನಮ್ಮಲ್ಲಿದ್ದರೆ ಶತ್ರು ಕೂಡಾ ನಮ್ಮಿಂದ ದೂರಾಗುತ್ತಾನೆ.

ರಾಯರಮಠದ ಪಂಡಿತ ರಘು ಪ್ರೇಮಾಚಾರ, 29 ವಟುಗಳಿಗೆ ಉಪನಯನ ಸಂಸ್ಕಾರ ನೀಡಿದರು. ರಾಯರ ಮಠದ ವ್ಯವಸ್ಥಾಪಕ ಜಗನ್ನಾಥ ಹುನುಗುಂದ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ರಮೇಶ, ಲಕ್ಷ್ಮಿಕಾಂತ, ಅಶ್ವತ ಆಚಾರ್‌, ನಾರಾಯಣರಾವ್ ಕುಲಕರ್ಣಿ, ಶೇಷಗಿರಿರಾವ್, ಪ್ರಹ್ಲಾದರಾವ್ ಕಾಮನೂರು, ವಾದಿರಾಜ ಕುಲಕರ್ಣಿ ಇದ್ದರು.  29 ಮಕ್ಕಳಿಗೆ ಉಪನಯನ ನಡೆಸಲಾಯಿತು.

**
ಎಲ್ಲರೂ ನಾಲ್ಕು ‘ಗ’ಕಾರಗಳ ಅನುಷ್ಠಾನ ನಡೆಸಬೇಕು. ಗಂಗೆ ಸ್ಮರಣೆ, ಗಾಯತ್ರಿ ಮಂತ್ರ ಜಪ, ಗೀತಾ ಪಾರಾಯಣ, ಗೋವಿಂದನ ನಾಮಸ್ಮರಣೆ ಮಾಡಬೇಕು
– ವಿಶ್ವೇಶತೀರ್ಥ ಶ್ರೀಪಾದಂಗಳವರು, ಪೇಜಾವರ ಮಠ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT