ಗುರುವಾರ , ಫೆಬ್ರವರಿ 25, 2021
24 °C

ಮೂಲ ಸೌಕರ್ಯಗಳಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ ಸೌಕರ್ಯಗಳಿಗೆ ಆದ್ಯತೆ

ಲಿಂಗಸುಗೂರು: ಮೂಲತಃ ಗ್ರಾನೈಟ್‌ ಉದ್ಯಮಿಯಾಗಿರುವ ಸಿದ್ದು ಯಂಕಪ್ಪ ಬಂಡಿ ಅವರು ಸಹಕಾರಿ ಬ್ಯಾಂಕ್‌ಗಳ ಚುನಾವಣೆ ಹಾಗೂ ಅವರ ತಂದೆ ಯಂಕಪ್ಪ ಬಂಡಿ ಅವರ ರಾಜಕೀಯ ಗರಡಿಯಲ್ಲಿ ಬೆಳೆದು ಬಂದಿದ್ದಾರೆ. ಸಮಾಜಸೇವೆ ಮಾಡುತ್ತ ಬಂದಿರುವ ಅವರು ಕಳೆದ ಅವಧಿಯಲ್ಲಿ ಬಿಎಸ್‌ಆರ್‌ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ.

‌ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?

ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಚಟುವಟಿಕೆಗಳ ಜೊತೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಕರಿಗೆ ಪ್ರೋತ್ಸಾಹ ನೀಡುತ್ತ ಬಂದಿರುವೆ. ತಮ್ಮ ಕುಟುಂಬ ಶೋಷಿತ, ನೊಂದವರ ಧ್ವನಿಯಾಗಿ ಕೆಲಸ ಮಾಡುತ್ತ ಒಂಭತ್ತು ಸಾವಿರಕ್ಕೂ ಹೆಚ್ಚು ಸಾಮೂಹಿಕ ವಿವಾಹ ಮಾಡಿದ ನಿದರ್ಶನ ಇದೆ. ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2003 ರಿಂದ ವಿವಿಧ ಜಾತಿ ಸಮುದಾಯಗಳ ಸಾಮೂಹಿಕ ವಿವಾಹಗಳಿಗೆ ಆರ್ಥಿಕ ನೆರವು ನೀಡುತ್ತ ಬಂದಿರುವೆ. ಗ್ರಾಮೀಣ ಕ್ರೀಡೆಗಳಾದ ಟಗರಿನ ಕಾಳಗ, ಕಬಡ್ಡಿ, ಕೊಕ್ಕೊ ಸಂಗ್ರಾಣಿ ಕಲ್ಲು ಎತ್ತುವ, ಎತ್ತುಗಳಿಂದ ಭಾರದ ಕಲ್ಲು ಎಳೆಸುವುದು ಸೇರಿದಂತೆ ವಿವಿಧ ಕ್ರೀಡೆಗಳಿಗೆ ಉತ್ತೇಜನ ನೀಡಿದ್ದೇನೆ.

ಕ್ಷೇತ್ರದಲ್ಲಿ ನೀವು ಗುರುತಿಸಿರುವ ಸಮಸ್ಯೆಗಳೇನು?

ಕ್ಷೇತ್ರದಲ್ಲಿ ನೀರಾವರಿ ಯೋಜನೆ ಗಳನ್ನು ಅನುಷ್ಠಾನಗೊಳಿಸಿದ್ದರು ಕೂಡ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅಂಕನಾಳ, ಉಪನಾಳ, ವ್ಯಾಕರನಾಳ, ಕಡದರಗಡ್ಡಿ, ಜಲದುರ್ಗ ಸೇರಿದಂತೆ ಕೆಲ ಏತ ನೀರಾವರಿ ಯೋಜನೆಗಳು ಜನಮಾನಸದಿಂದ ಕಣ್ಮರೆಯಾಗಿವೆ. ನಾರಾಯಣಪುರ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ ಯೋಜನೆಗಳಿಂದ ಬಹುತೇಕ ಗ್ರಾಮಗಳು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿವೆ. ನಂದವಾಡಗಿ ಯೋಜನೆಯಡಿ ಮುದಗಲ್ಲ ಭಾಗದ ಬಹುತೇಕ ಗ್ರಾಮಗಳನ್ನು ಕೈಬಿಟ್ಟಿರುವುದು ರಾಜಕೀಯ ಕುತಂತ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಶುದ್ಧ, ಸಮರ್ಪಕ ಕುಡಿವ ನೀರಿನ ಸಮಸ್ಯೆ ತಾಂಡವವಾಡುತ್ತಿವೆ. ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲವಾಗಿದೆ. ಸರ್ಕಾರದ ಯೋಜನೆಗಳು ಕೆಲ ವ್ಯಕ್ತಿಗಳ ಪಾಲಾಗಿವೆ.

ಗೆದ್ದ ಮೇಲೆ ನಿಮ್ಮ ಆದ್ಯತೆಗಳೇನು?

ನಂದವಾಡಗಿ ಯೋಜನೆಯಡಿ ಬಿಟ್ಟು ಹೋಗಿರುವ ಗ್ರಾಮಗಳಿಗೆ ಅದೇ ಯೋಜನೆ ಅಥವಾ ಪ್ರತ್ಯೇಕ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸುವುದು. ಇತರೆ ಯೋಜನೆಗಳಿಗೆ ಪುನಶ್ಚೇತನ ನೀಡಿ ರೈತರ ಜಮೀನಿಗೆ ನೀರು ಹರಿಸುವುದು. ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸುವುದು, ಪ್ರತಿಯೊಂದು ಗ್ರಾಮ, ತಾಂಡಾ, ದೊಡ್ಡಿ ಪ್ರದೇಶಗಳಿಗೆ ಶುದ್ಧ ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವುದು. ಯುವಕರಿಗೆ ಉದ್ಯೋಗ ಕಲ್ಪಿಸುವುದು, ಗುಳೆ ಹೋಗದಂತೆ ಕಾರ್ಯಸೂಚಿ ಸಿದ್ಧಪಡಿಸುವುದು, ಪಟ್ಟಣ ಪ್ರದೇಶಗಳಲ್ಲಿ ಒಳಚರಂಡಿ ಯೋಜನೆಗೆ ಆದ್ಯತೆ ಸೇರಿದಂತೆ ಮಾದರಿ ಕ್ಷೇತ್ರ ಮಾಡುವ ಉದ್ದೇಶ ಹೊಂದಿದ್ದೇನೆ

ಸಾಮಾನ್ಯರಲ್ಲಿ ಅನುಕಂಪದ ಅಲೆ ಬರಲು ಕಾರಣ ಏನು?

ಕಳೆದ ಒಂದು ದಶಕದಿಂದ ಕ್ಷೇತ್ರದ ಮಗನಾಗಿ ಕೆಲಸ ಮಾಡುತ್ತ ಬಂದಿರುವೆ. ತಮಗೆ ಯಾವುದೇ ಜಾತಿ, ಧರ್ಮ ಆಧಾರಿತ ಸೇವೆ ಮಾಡಿದ ಉದಾಹರಣೆಗಳಿಲ್ಲ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೆ. ಈ ಅವಧಿಗೆ ತಮಗೆ ಟಿಕೆಟ್‌ ನೀಡುವುದು ಖಚಿತವಾಗಿತ್ತು. ಆದರೆ, ಮಾಜಿ ಶಾಸಕ ಮಾನಪ್ಪ ವಜ್ಜಲ ಬಿಜೆಪಿ ಸೇರ್ಪಡೆಯಿಂದ ನೊಂದ ತಮಗೆ ಜನಸಾಮಾನ್ಯರಲ್ಲಿ ಹಣ ಬಲದ ಮುಂದೆ ಸಾಮಾನ್ಯ ವ್ಯಕ್ತಿ ನಿಲ್ಲಬಾರದೆ ಎಂಬ ಅನುಕಂಪ ಇಂದು ತಮಗೆ ಆಶೀರ್ವಾದವಾಗಿ ಬೆಳೆದು ನಿಂತಿದೆ.

ನಿಮಗೆ ಏಕೆ ಮತ ನೀಡಬೇಕು

ಕಳೆದ ಒಂದು ದಶಕದ ಅವಧಿಯಲ್ಲಿ ಕ್ಷೇತ್ರದ ಜನತೆಯ ಮಗನಾಗಿ ಗುರುತಿಸಿಕೊಂಡಿರುವೆ. ಕೆಲ ರಾಜಕೀಯ ವ್ಯಕ್ತಿಗಳ ಹಣ ಬಲ, ಸರ್ವಾಧಿಕಾರದಿಂದ ರೋಷಿ ಹೋದ ಜನತೆ ತಮ್ಮನ್ನು ಸ್ವ ಇಚ್ಛೆಯಿಂದ ಚುನಾವಣೆ ಕಣಕ್ಕೆ ನಿಲ್ಲಿಸಿದ್ದಾರೆ. ತಾವು ಮಾಡಿದ ಸೇವೆ, ಬಿಜೆಪಿ ಪಕ್ಷ ಮಾಡಿದ ವಂಚನೆಯಿಂದ ರೊಚ್ಚಿಗೆದ್ದಿರುವ ಜನತೆಯ ಮನದಲ್ಲಿ ಅನುಕಂಪದ ಅಲೆಯಲ್ಲಿ ತೇಲಾಡುತ್ತಿರುವ ತಮಗೆ ಈ ಬಾರಿ ನಿಶ್ಚಿತವಾಗಿ ಆಶೀರ್ವದಿಸುತ್ತಾರೆ. ಜನರು ಹಣಕಾಸಿನ ನೆರವು ನೀಡುವ ಜೊತೆಗೆ ಸ್ವಯಂ ಪ್ರೇರಿತರಾಗಿ ವಾಹನ ಬಳಸಿ ಪ್ರಚಾರ ಮಾಡುತ್ತಿರುವುದು ಖುಷಿ ತಂದಿದೆ.

-ಬಿ.ಎ. ನಂದಿಕೋಲಮಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.