ಕೊಡಗಿನಲ್ಲಿ ಧಾರಾಕಾರ ಮಳೆ

7

ಕೊಡಗಿನಲ್ಲಿ ಧಾರಾಕಾರ ಮಳೆ

Published:
Updated:
ಕೊಡಗಿನಲ್ಲಿ ಧಾರಾಕಾರ ಮಳೆ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಮಡಿಕೇರಿಯಲ್ಲಿ ಅರ್ಧ ಗಂಟೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಬಿತ್ತು.

ಮಾದಾಪುರ, ಕಡಗದಾಳು, ಬೆಟ್ಟಗೇರಿ, ಆವಂದೂರು, ಉಡೋತ್‌ ಮೊಟ್ಟೆ, ಅಪ್ಪಂಗಳ, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ. ಸುಂಟಿಕೊಪ್ಪ, ಗೋಣಿಕೊಪ್ಪಲು ಭಾಗದಲ್ಲಿ ತುಂತುರು ಮಳೆ ಸುರಿದಿದೆ. ಬಿಸಿಲ ಧಗೆಯಿಂದ ಬಸವಳಿದಿದ್ದ ಜನರಿಗೆ ದಿಢೀರ್‌ ಸುರಿದ ಮಳೆ ತಂಪೆರೆಯಿತು.

ಬಿರುಸಿನ ಮಳೆ: ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ಗುಡುಗು–ಸಿಡಿಲು ಸಹಿತ ಬಿರುಸಿನ ಮಳೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಸಾಧಾರಣ ಮಳೆಯಾಗಿದೆ.

ಗುಡುಗು ಸಹಿತ ಮಳೆ: ಚಿಕ್ಕಮಗಳೂರು ನಗರದ ವಿವಿಧೆಡೆ ಸೋಮವಾರ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು. ಸಂಜೆ 7 ಗಂಟೆ ಹೊತ್ತಿಗೆ ಮಳೆ ಆರಂಭವಾಯಿತು. ತುಂತುರಾಗಿ ಶುರುವಾದ ಮಳೆ 7.30ರ ಹೊತ್ತಿಗೆ ರಭಸಗೊಂಡಿತು. 8 ಗಂಟೆಯಿಂದ  ಐದತ್ತು ನಿಮಿಷ ಮಳೆ ಬಿಡುವು ನೀಡಿತ್ತು.

8.30ರ ವೇಳೆಗೆ ಬಿರುಸಿನಿಂದ ಸುರಿಯುತ್ತಿತ್ತು. ಕೆಲವು ಬಡಾವಣೆಗಳಲ್ಲಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯಿತು. ನಗರದ ಸುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಹಿಡ್ಕಲ್‌ ಜಲಾಶಯದಲ್ಲಿ 5 ಸೆಂ.ಮೀ ಮಳೆ

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಹಿಡ್ಕಲ್‌ ಜಲಾಶಯದಲ್ಲಿ 5 ಸೆಂ.ಮೀ, ಸಿದ್ದಾಪುರ, ಅಥಣಿ ತಲಾ3 ಸೆಂ.ಮೀ, ಧರ್ಮಸ್ಥಳ, ಹೊನ್ನಾವರ, ಮಂಕಿ, ಗೋಕಾಕ್‌, ಇಳಕಲ್‌, ಬಾಳೆಹೊನ್ನೂರು, ಸಂತೆಬೆನ್ನೂರು ತಲಾ 2 ಸೆಂ.ಮೀ, ಮಂಗಳೂರು, ಮುಂಡಗೋಡು, ಖಾನಾಪುರ, ಹಿರೇಕೆರೂರ್‌, ಲಿಂಗದಹಳ್ಳಿ, ಚಿಕ್ಕಮಗಳೂರು ತಲಾ 1 ಸೆಂ.ಮೀ. ಮಳೆ ದಾಖಲಾಗಿದೆ.

ಕಲಬುರ್ಗಿಯಲ್ಲಿ 42.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಕರಾವಳಿ ಹಾಗೂ ಒಳನಾಡಿನ ಅಲ್ಲಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry