ಸೋಮವಾರ, ಮಾರ್ಚ್ 1, 2021
24 °C

ಮಹಿಳೆಯರಿಗೆ ದಾರಿ ಇನ್ನೂ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರಿಗೆ ದಾರಿ ಇನ್ನೂ ದೂರ

- ಎಸ್‌.ವೈ. ಸುರೇಂದ್ರ ಕುಮಾರ್‌

ಭಾರತದ ರಾಜಕೀಯ ಸನ್ನಿವೇಶದಲ್ಲಿ ಮಹಿಳೆಯರು ಮೂರು ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಮುಖ ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಸ್ಪರ್ಧಿಸಲು ಟಿಕೆಟ್‌ ಪಡೆಯುವುದು, ಚುನಾವಣೆಯಲ್ಲಿ ಗೆಲ್ಲುವುದು ಮತ್ತು ಸಚಿವ ಸ್ಥಾನ ಪಡೆಯುವುದು. ಪುರುಷರಿಗೂ ಈ ಸವಾಲುಗಳು ಇರುತ್ತವೆಯಾದರೂ ಅವರಿಗೆ ಹೋಲಿಸಿದರೆ ಈ ಸವಾಲುಗಳನ್ನು ಎದುರಿಸಿ ಗೆದ್ದುಬರುವ ಮಹಿಳೆಯರ ಪ್ರಮಾಣ ತೀರಾ ಕಡಿಮೆ. ಒಂದೊಮ್ಮೆ ಮಹಿಳೆ ಎಲ್ಲ ಸವಾಲುಗಳನ್ನು ಗೆದ್ದು, ಸಚಿವೆಯಾದರೂ ಆಕೆಗೆ ಅಷ್ಟು ಮುಖ್ಯವಲ್ಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನೋ ಅಥವಾ ಜವಳಿ ಖಾತೆಯನ್ನೋ ನೀಡಲಾಗುತ್ತದೆ. ಈ ಕಾರಣಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯ ಯಾವತ್ತೂ ಕಡೆಗಣನೆಗೆ ಒಳಗಾಗುತ್ತಲೇ ಬರುತ್ತಿದೆ.

ಈ ತಿಂಗಳ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಕೊಟ್ಟಿರುವ ಪ್ರಾತಿನಿಧ್ಯವನ್ನು ನೋಡಿದರೆ ಈ ಚುನಾವಣೆಯೂ ಮಹಿಳಾಸ್ನೇಹಿ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‌ 15 ಮಹಿಳೆಯರಿಗೆ, ಬಿಜೆಪಿ ಹಾಗೂ ಜೆಡಿಎಸ್‌ ತಲಾ 8 ಮಹಿಳೆಯರಿಗೆ ಟಿಕೆಟ್‌ ನೀಡಿವೆ.

ಒಟ್ಟು ಮತದಾರರಲ್ಲಿ ಶೇ 49ರಷ್ಟು ಮಹಿಳೆಯರೇ ಇದ್ದರೂ, ಟಿಕೆಟ್‌ ನೀಡುವ ವಿಚಾರದಲ್ಲಿ ‘ಮಹಿಳೆಯರು ನಮ್ಮ ಆದ್ಯತೆ ಅಲ್ಲ’ ಎಂಬುದು ಎಲ್ಲ ಪಕ್ಷಗಳ ಸ್ಪಷ್ಟ ನಿಲುವಾಗಿರುವುದು ಕಾಣಿಸುತ್ತದೆ. ಮಹಿಳೆಯರ ಮಹತ್ವಾಕಾಂಕ್ಷೆಗಳನ್ನು ನಿರ್ಲಕ್ಷಿಸಿ ಪುರುಷರಿಗೇ ಆದ್ಯತೆ ನೀಡಲಾಗಿದೆ. ‘ಗೆಲುವೇ’ ಎಲ್ಲ ಪಕ್ಷಗಳ ಮಾನದಂಡವಾಗಿದೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, 11 ಮಹಿಳೆಯರಿಗೆ ಟಿಕೆಟ್‌ ನೀಡಿತ್ತು. ಬಿಜೆಪಿ, ಜೆಡಿಎಸ್‌ ತಲಾ 10 ಮಹಿಳೆಯರಿಗೆ ಟಿಕೆಟ್‌ ನೀಡಿದ್ದವು. 2013ರ ಚುನಾವಣೆಯಲ್ಲಿ ಈ ಸಂಖ್ಯೆ ಇಳಿಕೆಯಾಯಿತು. ಕಾಂಗ್ರೆಸ್‌ 8, ಬಿಜೆಪಿ 7 ಹಾಗೂ ಜೆಡಿಎಸ್‌ 12 ಮಹಿಳೆಯರಿಗೆ ಟಿಕೆಟ್‌ ನೀಡಿದ್ದವು.

ಕಾಂಗ್ರೆಸ್‌ನಿಂದ ಈ ಬಾರಿ ಕಣಕ್ಕಿಳಿದಿರುವ ಮಹಿಳೆಯರಲ್ಲಿ ಸಚಿವೆ ಉಮಾಶ್ರೀ, ಮಾಜಿ ಸಚಿವೆ ಮೋಟಮ್ಮ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌, ಬೆಂಗಳೂರಿನ ಮಾಜಿ ಮೇಯರ್‌ ಜಿ. ಪದ್ಮಾವತಿ, ಶಾಸಕಿಯರಾದ ಶಾರದಾ ಮೋಹನ ಶೆಟ್ಟಿ ಹಾಗೂ ಶಕುಂತಳಾ ಶೆಟ್ಟಿ ಪ್ರಮುಖರು. ಇವರೆಲ್ಲಾ ರಾಜಕೀಯ ಅನುಭವ ಹೊಂದಿದ್ದಾರೆ. ಆದರೆ ಇದೇ ಪಕ್ಷದ ಅಭ್ಯರ್ಥಿಗಳಾಗಿರುವ ಸಚಿವೆ ಗೀತಾ ಮಹದೇವ ಪ್ರಸಾದ್‌, ಕೀರ್ತನಾ ರುದ್ರೇಶಗೌಡ ಹಾಗೂ ಕೆ. ಫಾತಿಮಾ ಅವರಿಗೆ ಟಿಕೆಟ್‌ ನೀಡಿರುವುದು ಅವರ ಪತಿಯ ‘ಪರಂಪರೆಯನ್ನು ಮುಂದುವರಿಸುವ’ ಉದ್ದೇಶದಿಂದ ಮಾತ್ರ.

ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಹಾಗೂ ಸಂಸದ ಕೆ.ಎಚ್‌. ಮುನಿಯಪ್ಪ ಅವರ ಪುತ್ರಿ ರೂಪಕಲಾ ಅವರಿಗೂ ಕಾಂಗ್ರೆಸ್ ಟಿಕೆಟ್‌ ನೀಡಿದೆ. ಆದರೆ, ಸೌಮ್ಯಾ ರೆಡ್ಡಿ ಅಭ್ಯರ್ಥಿಯಾಗಿರುವ ಬೆಂಗಳೂರಿನ ಜಯನಗರ ಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ನಿಧನದ ಕಾರಣದಿಂದ ಮುಂದಕ್ಕೆ ಹೋಗಿದೆ. ಕೆಜಿಎಫ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ರೂಪಕಲಾ ಅವರ ಮುಂದೆ ದೊಡ್ಡಸವಾಲಿದೆ. ಈ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿಲ್ಲ. ಪದ್ಮಾವತಿ ಮತ್ತು ಸುಷ್ಮಾ ರಾಜಗೋಪಾಲ ರೆಡ್ಡಿ ಅವರ ಮುಂದೆಯೂ ಇಂಥದ್ದೇ ಸವಾಲಿದೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಮಹಿಳೆಯರಲ್ಲಿ 5 ರಿಂದ 8 ಮಹಿಳೆಯರು ಗೆದ್ದರೂ ಕಾಂಗ್ರೆಸ್‌ಗೆ ಅದೊಂದು ಸಾಧನೆ.

ಬಿಜೆಪಿಯಿಂದ ಟಿಕೆಟ್‌ ಪಡೆದಿರುವ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಕಾರ್ಪೊರೇಟರ್‌ ರೂಪಾಲಿ ನಾಯ್ಕ್‌ ಹಾಗೂ ಪಕ್ಷದ ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆಲ್ಲಾ ರಾಜಕೀಯ ಅನುಭವ ಇದೆ. ಆದರೆ ನಂದಿನಿ ಗೌಡ (ಕನಕಪುರ) ಹಾಗೂ ಲೀಲಾವತಿ (ರಾಮನಗರ) ಅವರು ರಾಜಕೀಯಕ್ಕೆ ಹೊಸಬರು. ಇವರಿಗೆ ಕ್ರಮವಾಗಿ ಡಿ.ಕೆ. ಶಿವಕುಮಾರ್‌ (ಕಾಂಗ್ರೆಸ್‌) ಹಾಗೂ ಎಚ್‌.ಡಿ. ಕುಮಾರಸ್ವಾಮಿ (ಜೆಡಿಎಸ್‌) ಪ್ರತಿಸ್ಪರ್ಧಿಗಳು.

ಶಾಸಕ ಸಂಪಂಗಿ ವಿರುದ್ಧ ಭ್ರಷ್ಟಾಚಾರದ ಆರೋಪಗಳಿರುವುದರಿಂದ ಬಿಜೆಪಿಯು ಈ ಬಾರಿ ಅವರ ಪುತ್ರಿ ಅಶ್ವಿನಿಗೆ ಟಿಕೆಟ್‌ ನೀಡಿದೆ. ಶ್ವೇತಾ ಗೋಪಾಲ್‌ ಹಳೇ ಮೈಸೂರು ಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಇಲ್ಲಿ ಜೆಡಿಎಸ್‌ ಹಿಡಿತ ಬಲಿಷ್ಠವಾಗಿದೆ. ಪುಲಕೇಶಿನಗರದಲ್ಲಿ ಸುಶೀಲಾ ದೇವರಾಜ್‌ ಅವರು ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಎದುರಿಸಬೇಕಾಗಿದೆ.

ಬಿಜೆಪಿಯ 40 ಮಂದಿ ತಾರಾ ಪ್ರಚಾರಕರಲ್ಲೂ ಎಂಟು ಮಂದಿ ಮಹಿಳೆಯರು ಮಾತ್ರ ಇದ್ದಾರೆ. ಅವರಲ್ಲಿ ಶೋಭಾ ಕರಂದ್ಲಾಜೆ, ತಾರಾ ಅನೂರಾಧಾ ಹಾಗೂ ಶ್ರುತಿ ಮಾತ್ರ ಕರ್ನಾಟಕದವರು. ಪಕ್ಷವು ಕೇಂದ್ರ ನಾಯಕತ್ವವನ್ನು ಅತಿಯಾಗಿ ಅವಲಂಬಿಸಿದೆ ಎಂಬುದನ್ನು ಇದು ಬಿಂಬಿಸುತ್ತದೆ. ಪಕ್ಷದ ಜಾಹೀರಾತುಗಳಲ್ಲೂ ಮಹಿಳೆಯರ ಚಿತ್ರ ಕಾಣಿಸುವುದು ಅತಿ ವಿರಳ. ಈ ಪಕ್ಷದಿಂದ 3 ರಿಂದ 5 ಮಹಿಳೆಯರು ಗೆದ್ದರೆ ದೊಡ್ಡ ಸಾಧನೆ.

ಜೆಡಿಎಸ್‌ ತನ್ನ ಉಳಿವಿಗಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನೇ ಅವಲಂಬಿಸಿದೆ. ಪಕ್ಷದ ವೆಬ್‌ಸೈಟ್‌ನಲ್ಲಿ ಕಾಣಿಸುವ ನಾಯಕರ ಪಟ್ಟಿಯಲ್ಲಿ ಒಂದೇ ಒಂದು ಮಹಿಳಾ ಮುಖವಿಲ್ಲ. ತಾರಾ ಪ್ರಚಾರಕರ ಪಟ್ಟಿಯಲ್ಲೂ ನಟಿ ಪೂಜಾ ಗಾಂಧಿ, ರಚಿತಾ ರಾಮ್‌, ಅಮೂಲ್ಯಾ ಹಾಗೂ ಇನ್ನೂ ಒಂದಿಬ್ಬರ ಹೆಸರುಗಳು ಮಾತ್ರ ಇವೆ. ಪಕ್ಷ ಕಣಕ್ಕೆ ಇಳಿಸಿರುವ 8 ಮಹಿಳೆಯರಲ್ಲಿ ನಾಲ್ವರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಮೀಸಲು ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರ ಗೆಲುವಿನ ಸಾಧ್ಯತೆಗಳು ಹೆಚ್ಚು ಎಂಬ ಭಾವನೆ ಈ ಪಕ್ಷದಲ್ಲಿ ಬಲವಾಗಿದ್ದಂತೆ ಕಾಣಿಸುತ್ತಿದೆ. ಬಿಎಸ್‌ಪಿ ಜತೆಗಿನ ಮೈತ್ರಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕಾಗಿದೆ.

ಎಲ್ಲ ಅಡೆತಡೆಗಳ ಹೊರತಾಗಿಯೂ ಈ ಬಾರಿ ಕನಿಷ್ಠ 10 ಮಹಿಳೆಯರಾದರೂ ವಿಧಾನಸಭೆ ಪ್ರವೇಶಿಸಬಹುದೇ ಎಂಬುದನ್ನು ಕಾದು ನೋಡಬೇಕು. 1999ರಿಂದಲೂ ಇದು ಸಾಧ್ಯವಾಗಿಲ್ಲ. 1962ರ ಚುನಾವಣೆಯಲ್ಲಿ 18 ಮಹಿಳೆಯರು ಗೆದ್ದಿರುವುದೇ ಈವರೆಗಿನ ದಾಖಲೆ. ಈಗಿನ ಸಂದರ್ಭದಲ್ಲಿ ಆ ದಾಖಲೆಯನ್ನು ಮುರಿಯುವುದು ದೂರದ ಮಾತು. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಬೇಕಾದರೆ ‘ಮಹಿಳಾ ಮೀಸಲಾತಿ’ಯ ದೃಢ ಹೆಜ್ಜೆ ಇಡುವುದೊಂದೇ ಈಗ ಕಾಣಿಸುತ್ತಿರುವ ಹಾದಿ. ಮೀಸಲಾತಿ ಜಾರಿಯಾಗುವವರೆಗೂ ರಾಜಕೀಯದಲ್ಲಿ ಮಹಿಳೆಯರ ಕಡೆಗಣನೆ ಮುಂದುವರಿಯುತ್ತಲೇ ಇರುತ್ತದೆ.

ಲೇಖಕ: ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.