ತಮಿಳುನಾಡಿಗೆ 16 ಟಿಎಂಸಿ ಅಡಿ ಹೆಚ್ಚುವರಿ ನೀರು: ‘ಸುಪ್ರೀಂ’ಗೆ ಅಫಿಡವಿಟ್‌ ಸಲ್ಲಿಸಿದ ಕರ್ನಾಟಕ

7

ತಮಿಳುನಾಡಿಗೆ 16 ಟಿಎಂಸಿ ಅಡಿ ಹೆಚ್ಚುವರಿ ನೀರು: ‘ಸುಪ್ರೀಂ’ಗೆ ಅಫಿಡವಿಟ್‌ ಸಲ್ಲಿಸಿದ ಕರ್ನಾಟಕ

Published:
Updated:
ತಮಿಳುನಾಡಿಗೆ 16 ಟಿಎಂಸಿ ಅಡಿ ಹೆಚ್ಚುವರಿ ನೀರು: ‘ಸುಪ್ರೀಂ’ಗೆ ಅಫಿಡವಿಟ್‌ ಸಲ್ಲಿಸಿದ ಕರ್ನಾಟಕ

ನವದೆಹಲಿ: ‘ತಮಿಳುನಾಡಿಗೆ ಕಾವೇರಿ ನೀರು ಹರಿಸುವಲ್ಲಿ ಅಸಡ್ಡೆ ತೋರಿಲ್ಲ’ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿಕೆ (ಅಫಿಡವಿಟ್‌) ನೀಡಿರುವ ರಾಜ್ಯ ಸರ್ಕಾರ, 2017–18ನೇ ಸಾಲಿನಲ್ಲಿ ಮಳೆಯ ಅಭಾವದ ನಡುವೆಯೂ ನಿಗದಿಗಿಂತ 16.66 ಟಿಎಂಸಿ ಅಡಿಯಷ್ಟು ನೀರನ್ನು ಹೆಚ್ಚುವರಿಯಾಗಿಯೇ ಹರಿಸಿದ್ದಾಗಿ ತಿಳಿಸಿದೆ.

ಪ್ರಸಕ್ತ ಜಲವರ್ಷದಲ್ಲಿ ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣದ ವಿವರ ನೀಡುವಂತೆ ಕಳೆದ ಗುರುವಾರ ಸೂಚಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಸೋಮವಾರ ಈ ಹೇಳಿಕೆ ಸಲ್ಲಿಸಿದ್ದಾರೆ.

ಮಳೆಯ ಕೊರತೆ ವರ್ಷದ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ತಮಿಳುನಾಡಿಗೆ ಹರಿಯಬೇಕಿರುವ ನೀರಿನ ಪ್ರಮಾಣ ಕ್ರಮವಾಗಿ 1.24 ಟಿಎಂಸಿ ಅಡಿ ಹಾಗೂ 1.22 ಟಿಎಂಸಿ ಅಡಿ. ಆ ತಿಂಗಗಳುಗಳಲ್ಲಿ 1.40 ಟಿಎಂಸಿ ಅಡಿ ಹಾಗೂ 1.10 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಅಂತರರಾಜ್ಯ ಗಡಿಯಲ್ಲಿನ ಬಿಳಿಗುಂಡ್ಲುವಿನಿಂದ ಏಪ್ರಿಲ್‌ ಅಂತ್ಯಕ್ಕೆ ತಮಿಳುನಾಡಿಗೆ 100.04 ಟಿಎಂಸಿ ಅಡಿ ನೀರು ಹರಿಯಬೇಕಿತ್ತು. ಆದರೆ, ಈ ಅವಧಿಯಲ್ಲಿ 116.697 ಟಿಎಂಸಿ ಅಡಿ ನೀರು ಹರಿದುಹೋಗಿರುವುದು ಕೇಂದ್ರ ಜಲ ಆಯೋಗ ಅಳವಡಿಸಿರುವ ಜಲಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ ನ್ಯಾಯಪೀಠಕ್ಕೆ ತನ್ನ ಹೇಳಿಕೆ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಕರ್ನಾಟಕವು ಏಪ್ರಿಲ್‌ನಲ್ಲಿ 1.40 ಟಿಎಂಸಿ ಅಡಿಯಷ್ಟು ಕಡಿಮೆ ಪ್ರಮಾಣದ ನೀರನ್ನು ಹರಿಸಿದ್ದು, ಮೇ ತಿಂಗಳಲ್ಲಿ 2.50 ಟಿಎಂಸಿ ಅಡಿ ನೀರು ಹರಿಸಬೇಕಿದೆ. ಎರಡೂ ಸೇರಿ 4 ಟಿಎಂಸಿ ಅಡಿ ನೀರು ಹರಿಸುವಂತೆ ಸೂಚಿಸುವಂತೆ ಮನವಿ ಮಾಡಿದೆ.

ಕಾಲಾವಕಾಶ ಕೋರಿದ ಕೇಂದ್ರ

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತ ಯೋಜನೆಯ ಕರಡು ಸಲ್ಲಿಕೆಗಾಗಿ ಮತ್ತೆ 10 ದಿನಗಳ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರ ನ್ಯಾಯಪೀಠವನ್ನು ಕೋರಿದೆ.

ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಮಾರ್ಪಡಿಸುವ ಮೂಲಕ ಸುಪ್ರೀಂ ಕೋರ್ಟ್‌ ಕಳೆದ ಫೆಬ್ರುವರಿ 16ರಂದು ನೀಡಿದ ತೀರ್ಪಿನ ಅನ್ವಯ ನೀರು ಹಂಚಿಕೆ ಕುರಿತ ಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರ ಸಭೆ ಆಯೋಜಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜಲ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳೂ ರಾಷ್ಟ್ರದ ವಿವಿಧೆಡೆ ಅಸ್ತಿತ್ವದಲ್ಲಿರುವ ವಿವಿಧ ನದಿ ನೀರು ನಿರ್ವಹಣಾ ಮಂಡಳಿಗಳು, ನೀರು ನಿಯಂತ್ರಣ ಸಮಿತಿಗಳ ಕಾರ್ಯವೈಖರಿ ಅವಲೋಕಿಸಿದೆ ಎಂದು ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry