ಶುಕ್ರವಾರ, ಡಿಸೆಂಬರ್ 6, 2019
20 °C

ಒಂದಲ್ಲ, 224 ಚುನಾವಣೆಗಳು ಈ ಸಲ

ನಾರಾಯಣ ಎ
Published:
Updated:
ಒಂದಲ್ಲ, 224 ಚುನಾವಣೆಗಳು ಈ ಸಲ

ಒಂದು ಮಹತ್ವದ ಹಂತಕ್ಕೆ ಬಂದು ನಿಂತಿರುವ ಕರ್ನಾಟಕದ ಚುನಾವಣಾ ಕಣದಲ್ಲಿ ಆಗುತ್ತಿರುವ ಕ್ಷಣಕ್ಷಣದ ಬೆಳವಣಿಗೆಗಳನ್ನು ಗಮನಿಸಿದರೆ ಒಂದು ವಿಚಾರ ವೇದ್ಯವಾಗುತ್ತದೆ. ಈ ರಾಜ್ಯದಲ್ಲಿ ನಡೆಯುತ್ತಿರುವುದು ಒಂದು ಚುನಾವಣೆಯಲ್ಲ. ಇಲ್ಲಿ ಏಕಕಾಲಕ್ಕೆ 224 ಚುನಾವಣೆಗಳು ನಡೆಯುತ್ತಿವೆ ಅಂತ ಅನ್ನಿಸುತ್ತದೆ. ರಾಜ್ಯಮಟ್ಟದಲ್ಲಿ ಆಗುತ್ತಿದೆ ಎನ್ನುವಂತಹ ಯಾವುದೂ ಈ ಚುನಾವಣೆಯಲ್ಲಿ ಇಲ್ಲ. ಇದ್ದರೂ ಅದು ಅಲ್ಪಸ್ವಲ್ಪ. ಈ ಬಾರಿ ಒಂದೊಂದು ಕ್ಷೇತ್ರದ್ದೂ ಒಂದೊಂದು ಚುನಾವಣೆ. ಬಿಡಿ-ಬಿಡಿಯಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಷ್ಟೂ ಕದನಗಳನ್ನು ಒಟ್ಟು ಸೇರಿಸಿದರೆ ಅದು ಕರ್ನಾಟಕ ವಿಧಾನಸಭಾ ಚುನಾವಣೆ – 2018.

ಪ್ರತೀ ಸಲ ಚುನಾವಣೆ ನಡೆಯುವುದು ಹೀಗೆಯೇ ಅಲ್ಲವೇ ಎನ್ನುವ ಪ್ರಶ್ನೆ ಮೂಡಬಹುದು. ಇಲ್ಲ. ಪ್ರತೀಬಾರಿ ಹೀಗಾಗಿರಲಿಲ್ಲ. ಹಿಂದೆ ರಾಜ್ಯ ಮಟ್ಟದ್ದು ಎನ್ನಬಹುದಾದ ಏನೋ ಒಂದಷ್ಟು ನಿರ್ಣಾಯಕ ವಿಷಯಗಳಿರುತ್ತಿದ್ದವು. ವಿಷಯಗಳಿಲ್ಲದ ಚುನಾವಣೆಯಲ್ಲಿ ಯಾರದ್ದೋ ನಾಯಕತ್ವ ದೊಡ್ಡ ಮಟ್ಟದಲ್ಲಿ ಮುಖ್ಯವಾಗುತ್ತಿತ್ತು. ಈಬಾರಿ ಅಂತಹದ್ದೇನೂ ಇಲ್ಲ ಎನ್ನುವುದು ಆರಂಭದಿಂದಲೂ ಇತ್ತು, ಬರಬರುತ್ತಾ ಅದು ಇನ್ನೂ ಸ್ಪಷ್ಟವಾಯಿತು. ಏನಾದರೊಂದು ರಾಜ್ಯ ಮಟ್ಟದ ವಿಷಯವನ್ನು ಸೃಷ್ಟಿಸಲೇಬೇಕೆಂದು ಮೂರೂ ಮುಖ್ಯ ಪಕ್ಷಗಳು ಹೆಣಗಾಡಿದವು. ಅದು ಸಾಧ್ಯವಾಗಲಿಲ್ಲ. ಸ್ಥೂಲವಾಗಿ ನೋಡಿದರೆ ಈ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಮಂತ್ರಿ ಮೋದಿಯವರ ಮುಖಾಮುಖಿ. ಆದರೆ ಇವರೀರ್ವರ ನಾಯಕತ್ವವೇ ಇಡೀ ಚುನಾವಣೆಯಲ್ಲಿ ನಿರ್ಣಾಯಕವಾಗಿ ಕಾಣುವುದಿಲ್ಲ. ಅಂದರೆ ಉಭಯ ನಾಯಕರ ವರ್ಚಸ್ಸಿನ ಮೇಲೆ ಆಯಾ ಪಕ್ಷದ ಅಭ್ಯರ್ಥಿಗಳು ವಿಶೇಷವಾಗಿ ಭರವಸೆ ಇರಿಸಿಕೊಳ್ಳುವ ಸ್ಥಿತಿ ಇಲ್ಲ. ರಾಜ್ಯದಾದ್ಯಂತ ಒಂದು ಸುತ್ತು ಹಾಕಿ ಚುನಾವಣಾ ಕಣವನ್ನೊಮ್ಮೆ ವೀಕ್ಷಿಸಿದ ಅನುಭವದಲ್ಲಿ ಹೇಳುವುದಾದರೆ ಈ ಬಾರಿ ‘ಅಭ್ಯರ್ಥಿಗಳೇ ಎಲ್ಲಾ, ಅಭ್ಯರ್ಥಿಗಳಿಂದಲೇ ಎಲ್ಲಾ’.

ಆರಂಭದಿಂದಲೂ ಒಂದು ವಿಷಯ ಸ್ಪಷ್ಟವಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಎದ್ದು ಕಾಣುವ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆಡಳಿತ ವಿರೋಧಿ ಅಲೆಯೊಂದನ್ನು ಹೇಗಾದರೂ ಮಾಡಿ ಹುಟ್ಟು ಹಾಕಬೇಕು ಎಂದು ಬಿಜೆಪಿ ಶತಾಯ-ಗತಾಯ ಪ್ರಯತ್ನಿಸಿತು. ಅರ್ಧ ಸತ್ಯಗಳನ್ನು ಮತ್ತು ಪೂರ್ತಿ ಸುಳ್ಳುಗಳನ್ನು ಅರೆ-ಸಂಸ್ಕೃತ ಮತ್ತು ಅಸಂಸ್ಕೃತ ಪದಗಳಲ್ಲಿ ಪೋಣಿಸಿ ದಿನ-ದಿನ, ಕ್ಷಣ-ಕ್ಷಣ ಜಾಹೀರಾತುಗಳನ್ನು ನೀಡಿತು. ಆದರೆ ಬಿಜೆಪಿಯ ಈ ಪ್ರಶ್ನಾರ್ಹ ಪ್ರಚಾರ ತಂತ್ರ ಕೃತಕವಾಗಿಯಾದರೂ ಅಂತಹದ್ದೊಂದು ಆಡಳಿತ ವಿರೋಧಿ ಅಲೆಯನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸಿದೆ ಅಂತ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಲ್ಲೂ ಹೇಳುವ ಹಾಗಿಲ್ಲ.

ಸತ್ಯವನ್ನೇ ಹೇಳುವುದರ ಮೂಲಕ, ಸುಸಂಸ್ಕೃತ ಪದಗಳನ್ನು ಬಳಸುವುದರ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅಭಿಪ್ರಾಯ ಮೂಡಿಸಲು ಬಿಜೆಪಿಗೆ ಸಾಕಷ್ಟು ಅವಕಾಶಗಳಿದ್ದವು. ಬಿಜೆಪಿ ಈ ಸಾಧ್ಯತೆಗಳನ್ನು ಬದಿಗಿರಿಸಿ ಬೇರೆಯೇ ಹಾದಿ ಹಿಡಿಯಿತು. ಒಂದೋ ಅದು ಬಿಜೆಪಿಯ ಯೋಚನೆಯ ಮಿತಿ, ಇಲ್ಲವೇ ಆ ಪಕ್ಷದ ಸಂಸ್ಕೃತಿ. ತನ್ನ ಸಾಧನೆಯನ್ನೇ ಪಣವಾಗಿರಿಸಿಕೊಂಡು ಚುನಾವಣೆ ಎದುರಿಸುತ್ತೇನೆ ಎಂದುಕೊಂಡಿದ್ದ ಕಾಂಗ್ರೆಸ್ಸಿಗೂ ಕೊನೆ ತನಕವೂ ಅದನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಲಿಲ್ಲ. ಜನತಾದಳದ ಬತ್ತಳಿಕೆಯಲ್ಲಿ ಪ್ರಾದೇಶಿಕತೆಗೆ ಸಂಬಂಧಿಸಿದ ಹಲವು ಪ್ರಭಾವಿ ಅಸ್ತ್ರಗಳಿದ್ದವು. ಆದರೆ ಚುನಾವಣೆಗೊಂದು ಸಮಗ್ರ ಸಂಕಥನ ರೂಪಿಸಲು ಅದು ಇವುಗಳಲ್ಲಿ ಯಾವೊಂದನ್ನೂ ಬಳಸಿಕೊಂಡಿಲ್ಲ.

ಏನೇ ಇರಲಿ. ಕೊನೆತನಕವೂ ಚುನಾವಣೆಗೊಂದು ವಿಷಯ ಎನ್ನುವುದೇ ಇಲ್ಲದೇಹೋದ ಕಾರಣ ಒಂದೊಂದು ಕ್ಷೇತ್ರಕ್ಕೆ ಒಂದೊಂದು ಕದನ ಕಣ ಸೃಷ್ಟಿಯಾಯಿತು. ಪ್ರತಿಯೊಂದು ಕ್ಷೇತ್ರವೂ ಒಂದೊಂದು ರಾಜ್ಯವೇ ಆಯಿತು. ಇದನ್ನು ಅರಿತೇ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಿಂದ ಬಂದು ಮುಧೋಳ ನಾಯಿಗಳ ಉದಾಹರಣೆಯನ್ನು ನೀಡುತ್ತಿರುವುದು, ಕಪ್ಪತಗುಡ್ಡವನ್ನು ಪ್ರಸ್ತಾಪಿಸುವುದು. ಉಡುಪಿ, ಮಂಗಳೂರಿಗೆ ಹೋದರೆ ಹಲವು ಬಾರಿ ಅಧಿಕೃತವಾಗಿ ತಿದ್ದುಪಡಿ ಮಾಡಲಾದ ಕೊಲೆಗಳ ಸಂಖ್ಯೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿರುವುದು. ಆದಕಾರಣವೇ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದೂ ತನ್ನ ಹಳೆಯ ಕ್ಷೇತ್ರ ಚಾಮುಂಡೇಶ್ವರಿಗೆ ಹೋದರೆ ಅಲ್ಲಿನ ಜನ ‘ಇವನ್ಯಾರವ ಇವನ್ಯಾರವ’ ಅಂತ ಶುದ್ಧ ಮೈಸೂರು ಕನ್ನಡದಲ್ಲಿ ಕೇಳುತ್ತಿರುವುದು. ಮಾತ್ರವಲ್ಲ, ಇದೇ ಕಾರಣಕ್ಕಾಗಿಯೇ ಮುಖ್ಯಮಂತ್ರಿಯಾಗಿದ್ದೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಒಂದು ಕ್ಷೇತ್ರ ಬೇಕು ಎಂದಾದಾಗ ಸ್ವಜಾತಿ ಬಾಂಧವರೇ ನಿರ್ಣಾಯಕ ಸಂಖ್ಯೆಯಲ್ಲಿರುವ ಬಾದಾಮಿಯನ್ನು ಆಯ್ಕೆ ಮಾಡಬೇಕಾಗಿ ಬಂದದ್ದು.

ರಾಜ್ಯ ಮಟ್ಟದಲ್ಲಿ ಇಲ್ಲದ್ದೆಲ್ಲಾ ಕ್ಷೇತ್ರ ಮಟ್ಟದಲ್ಲಿ ಸ್ಪಷ್ಟವಾಗಿದೆ. ರಾಜ್ಯ ಮಟ್ಟದಲ್ಲಿ ಕಾಣದ ಜಿದ್ದಾಜಿದ್ದಿ ಕ್ಷೇತ್ರ ಮಟ್ಟದಲ್ಲಿ ಸೃಷ್ಟಿಯಾಗಿದೆ. ರಾಜ್ಯ ಮಟ್ಟದಲ್ಲಿ ಇಲ್ಲದ ಆಡಳಿತ ವಿರೋಧಿ ಅಲೆ ಕೆಲ ಕ್ಷೇತ್ರ ಮಟ್ಟದಲ್ಲಿ ಇದೆ. ಅದು ಇರುವುದು ರಾಜ್ಯ ಸರ್ಕಾರದ ವಿರುದ್ಧ ಅಲ್ಲ. ಅದು ಇರುವುದು ಆಯಾ ಕ್ಷೇತ್ರದ ಶಾಸಕರ ವಿರುದ್ಧ. ಇವೆಲ್ಲಾ ಎಷ್ಟರಮಟ್ಟಿಗೆ ಇವೆ ಎಂದರೆ ಜನ ಶಾಸಕರನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಬಾರಿ ಪ್ರಶ್ನಿಸುತ್ತಿದ್ದಾರೆ.

ವೋಟು ಕೇಳಲು ಬರುವ ಶಾಸಕರು ಹಿಂದೆ ಎಷ್ಟು ಬಾರಿ ಬಂದಿದ್ದರು, ಏನೇನು ಮಾಡಿದರು ಅಂತ ನೆನಪಿಟ್ಟುಕೊಂಡು ಲೆಕ್ಕ ಕೇಳುತ್ತಿದ್ದಾರೆ. ಈ ರೀತಿ ಪ್ರಶ್ನಿಸುವುದಕ್ಕೆ ಪೂರಕವಾದ ವಾತಾವರಣವನ್ನು ಹಾಲಿ ಶಾಸಕರ ವಿರುದ್ಧ ಸ್ಪರ್ಧಿಸಿರುವವರು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹಾಲಿ ಶಾಸಕರು ಮತ್ತು ಅವರ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿಗಳು ಗಳಿಸಿರುವ ಜನಮನ್ನಣೆ, ನೀಡುತ್ತಿರುವ ಭರವಸೆ, ಸಂಪಾದಿಸಿರುವ ಗೌರವ ಇತ್ಯಾದಿಗಳೇ ನಿರ್ಣಾಯಕವಾಗಿ ಕಾಣಿಸುತ್ತಿವೆ.

ರಾಜ್ಯವ್ಯಾಪಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಇದ್ದಾಗ ಆಯಾ ಕ್ಷೇತ್ರದ ಶಾಸಕ ಎಷ್ಟೇ ಜನಪ್ರಿಯತೆ ಹೊಂದಿದ್ದರೂ ಅದೆಲ್ಲಾ ಕೊಚ್ಚಿ ಹೋಗಬಹುದು. ಅಂತಹ ಪರಿಸ್ಥಿತಿ ಇಲ್ಲದೇ ಇರುವ ಈ ಚುನಾವಣೆಯಲ್ಲಿ ಮುಖ್ಯವಾಗುವುದು ಏನು ಎಂದರೆ ಕ್ಷೇತ್ರದ ಶಾಸಕರ ವಿರುದ್ಧ ಇರಬಹುದಾದ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಆಯಾ ಪಕ್ಷಗಳ ಮತ್ತು ಪಕ್ಷಗಳ ನಾಯಕರ ಜನಪ್ರಿಯತೆ ನೆರವಾಗಬಹುದೇ ಎನ್ನುವ ಪ್ರಶ್ನೆ. ನೇರವಾಗಿ ಹೇಳಬೇಕು ಎಂದಾದರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಅವರ ಜನಪ್ರಿಯತೆ ಎಷ್ಟು ನೆರವಾದೀತು, ಬಿಜೆಪಿ ಅಭ್ಯರ್ಥಿಗಳಿಗೆ ಮೋದಿಯವರ ವರ್ಚಸ್ಸು ಎಷ್ಟು ನೆರವಾದೀತು ಎನ್ನುವ ಪ್ರಶ್ನೆ. ಚುನಾವಣೆಯ ದಿನಾಂಕ ಹತ್ತಿರವಾಗುತ್ತಿರುವಂತೆ ಒಂದು ವಿಷಯ ಸ್ಪಷ್ಟವಾಗುತ್ತಿದೆ. ಪ್ರಧಾನಮಂತ್ರಿ ಮೋದಿಯವರ ಮುಖ ನೋಡಿ ಬಿಜೆಪಿಯ ಯಾವ ಅಭ್ಯರ್ಥಿಗಾದರೂ ಜನ ವೋಟು ನೀಡಬಹುದು ಎನ್ನುವ ಪರಿಸ್ಥಿತಿ ಇಲ್ಲ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಮಾಜ ಕಲ್ಯಾಣ ಯೋಜನೆಗಳ ಜನಪ್ರಿಯತೆಯ ಆಧಾರದಲ್ಲಿ ಕಾಂಗ್ರೆಸ್ಸಿನಿಂದ ನಿಂತ ಯಾರೇ ಆದರೂ ಗೆಲ್ಲಬಹುದು ಎನ್ನುವ ಸ್ಥಿತಿಯೂ ಇಲ್ಲ. ಹಾಗಾಗಿ ಒಬ್ಬೊಬ್ಬ ಶಾಸಕನೂ ಆಯಾ ಕ್ಷೇತ್ರದ ಮಂತ್ರಿಯಂತೆ ಮಾತನಾಡುತ್ತಿದ್ದಾನೆ. ಹಾಲಿ ಶಾಸಕರ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲಾ ಕ್ಷೇತ್ರದ ಭಾವಿ ಮಂತ್ರಿಗಳಂತೆ ಭರವಸೆ ನೀಡುತ್ತಿದ್ದಾರೆ. ಹೆಚ್ಚಿನ ಮತಕ್ಷೇತ್ರಗಳಲ್ಲಿ ಪ್ರತೀ ಅಭ್ಯರ್ಥಿಯೂ ತನ್ನದೇ ಆದ ಚುನಾವಣಾ ಪ್ರಣಾಳಿಕೆ ಹೊರತಂದಿದ್ದಾರೆ. ಹಾಲಿ ಶಾಸಕರ ಸಾಧನೆಯ ಪಟ್ಟಿಯು ಸರ್ಕಾರದ ಸಾಧನೆಯ ಪಟ್ಟಿಗಿಂತಲೂ ಉದ್ದವಿದೆ. ಕೆಲ ಅಭ್ಯರ್ಥಿಗಳ ಕ್ಷೇತ್ರ ಮಟ್ಟದ ಪ್ರಣಾಳಿಕೆ ಆಯಾ ಪಕ್ಷದ ರಾಜ್ಯ ಮಟ್ಟದ ಪ್ರಣಾಳಿಕೆಯನ್ನು ನಾಚಿಸುವಂತಿದೆ. ಕೆಲ ಶಾಸಕರು ಆ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಹರಿದು ಬಂದ ಹಣಕ್ಕೆ ಪೈಸೆ ಪೈಸೆ ಲೆಕ್ಕ ನೀಡಿದ್ದಾರೆ. ನೀಡುತ್ತಿದ್ದಾರೆ. ಯಾಕೆ ನೀಡುತ್ತಿದ್ದಾರೆ ಎಂದರೆ ಜನ ಎಲ್ಲವನ್ನೂ ಕೇಳುತಿದ್ದಾರೆ. ರಸ್ತೆ-ಮೋರಿ ದುರಸ್ತಿಯಿಂದ ಹಿಡಿದು ನದಿ–ತಿರುವು ಯೋಜನೆಯ ಸಹಿತ ಕ್ಷೇತ್ರದಲ್ಲಿ ನಡೆಯುವ ಎಲ್ಲ ಕೆಲಸವೂ ನಮ್ಮಿಂದಾಗಿಯೇ ನಡೆದದ್ದು ಎಂದು ಹಾಲಿ ಶಾಸಕರು ಹೇಳುತ್ತಿದ್ದಾರೆ. ಪಂಚಾಯಿತಿಗಳು, ನಗರಸಭೆಗಳು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮಾಡಿದ ಎಲ್ಲಾ ಕೆಲಸಗಳೂ ಶಾಸಕರೇ ಮಾಡಿದ ಕೆಲಸಗಳು ಎಂದಾಗಿಬಿಟ್ಟಿವೆ. ಶಾಸಕ ಎಂದರೆ ಪಂಚಾಯಿತಿ, ಶಾಸಕ ಎಂದರೆ ನಗರಸಭೆ, ಶಾಸಕ ಎಂದರೆ ರಾಜ್ಯ ಸರ್ಕಾರ. ಜತೆಗೆ ಶಾಸಕ ಎಂದರೆ ದಾನಿ, ಕ್ಷೇತ್ರದ ಮಟ್ಟಿಗೆ ಶಾಸಕನೇ ಮುಖ್ಯಮಂತ್ರಿ ಮತ್ತು ಪ್ರಧಾನಿ. ಜನ ಇಂತಹದ್ದೊಂದು ಸ್ಥಾನವನ್ನು ಶಾಸಕರಿಗೆ ಕಲ್ಪಿಸಿ ನಿರೀಕ್ಷೆ ಬೆಳೆಸಿಕೊಂಡಿದ್ದಾರೆ. ಅದಕ್ಕೆ ಅನುಗುಣವಾಗಿ ಚುನಾವಣಾ ಕಣ ರೂಪುಗೊಂಡಿದೆ. ರಾಜಕೀಯ ಶಾಸ್ತ್ರದಲ್ಲಿ ಕಂಡುಬರುವ ಅಧಿಕಾರ ವಿಭಜನೆ, ಅಂದರೆ ಶಾಸಕರು ಮತ್ತು ಕಾರ್ಯಾಂಗ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂಬ ತತ್ವ ಇಲ್ಲಿ ಬುಡಮೇಲಾಗುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಭಾರತದ ರಾಜಕೀಯದಲ್ಲಿ ಇಡೀ ಪ್ರಜಾತಂತ್ರದ ಸಿದ್ಧಾಂತಗಳು, ಅಧಿಕಾರದ ಪ್ರತ್ಯೇಕ ವ್ಯಾಪ್ತಿ, ಅಧಿಕಾರ ವಿಕೇಂದ್ರೀಕರಣ ಎಲ್ಲವೂ ಕಲಸುಮೇಲೋಗರವಾಗುವ ಹಾದಿಯಲ್ಲಿವೆ ಅನ್ನಿಸುತ್ತದೆ. ಇದು ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಅಪ್ರಸ್ತುತ. ಹೀಗಾದದ್ದು ಒಳ್ಳೆಯದೋ ಕೆಟ್ಟದ್ದೋ ಎನ್ನುವುದೂ ಅಪ್ರಸ್ತುತ. ಇದು ಹೀಗಿದೆ. ಇದನ್ನು ಹೀಗಿರುವ ಸ್ಥಿತಿಯಲ್ಲೇ ಅರ್ಥ ಮಾಡಿಕೊಳ್ಳಬೇಕು. ಶಾಸಕ ಎಂದರೆ ಸರ್ಕಾರ, ಸರ್ಕಾರ ಎಂದರೆ ಶಾಸಕ. ಇದು ಈ ಕ್ಷಣದ ಸತ್ಯ.

ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಅಥವಾ ಆಯಾ ಜಿಲ್ಲಾ ಕೇಂದ್ರದಲ್ಲಿ ಕುಳಿತು ಚುನಾವಣೆಯ ಬಗ್ಗೆ ಹಾಕುವ ಲೆಕ್ಕಾಚಾರಗಳೆಲ್ಲಾ ಪಕ್ಕಾ ಏನಲ್ಲ. ಚುನಾವಣೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಎಲ್ಲರೂ ನಂಬುವ ಜಾತಿ ಕೂಡಾ ಏಕರೂಪದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರವರ್ತಿಸುತ್ತದೆ ಎನ್ನುವ ಹಾಗಿಲ್ಲ. ಸಿದ್ದರಾಮಯ್ಯ ಅವರ ಕಾರಣದಿಂದಾಗಿ ಕುರುಬ ಸಮುದಾಯದವರೆಲ್ಲರೂ ಕಾಂಗ್ರೆಸ್ಸಿಗೆ ವೋಟು ಹಾಕುತ್ತಾರೆ ಎಂದು ಸಾರಾಸಗಟಾಗಿ ತೀರ್ಮಾನಿಸುವಂತಿಲ್ಲ. ಇತರ ಪಕ್ಷದವರೂ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಎಷ್ಟೋ ಕ್ಷೇತ್ರಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅದೇ ರೀತಿ ಲಿಂಗಾಯತರು ವೀರಶೈವರಿಂದ ಬೇರಾಗಿ ಪ್ರತ್ಯೇಕ ಧರ್ಮವಾಗುವುದರ ಬೇಡಿಕೆಯನ್ನು ಬೆಂಬಲಿಸಿದ್ದಕ್ಕಾಗಿ ವೀರಶೈವರೆಲ್ಲಾ ಕಾಂಗ್ರೆಸ್ಸಿನ ವಿರುದ್ಧ ಮತ ಹಾಕುತ್ತಾರೆ ಎಂದಾಗಲೀ, ಜೆಡಿಎಸ್‌ನಿಂದ ಸ್ಪರ್ಧಿಸಿದ ಒಕ್ಕಲಿಗ ಅಭ್ಯರ್ಥಿಗಳ ಸಹಾಯಕ್ಕೆ ಹಳೆ ಮೈಸೂರಿನ ಎಲ್ಲಾ ಕ್ಷೇತ್ರಗಳ ಎಲ್ಲಾ ಒಕ್ಕಲಿಗ ಮತದಾರರು ನಿಲ್ಲುತ್ತಾರೆ ಎನ್ನುವ ತೀರ್ಮಾನಕ್ಕೆ ಅಪವಾದವಾಗಬಹುದಾದ ಸ್ಥಳೀಯ ಪರಿಸ್ಥಿತಿ ಇರುವ ಹಲವಾರು ಕ್ಷೇತ್ರಗಳಿವೆ. ಆಯಾ ಕ್ಷೇತ್ರದಲ್ಲಿ ಆಯಾ ಸಮುದಾಯದವರಿಗೆ ಅವರದ್ದೇ ಆದ ಲೆಕ್ಕಾಚಾರಗಳಿರುತ್ತವೆ. ಈ ಲೆಕ್ಕಾಚಾರವನ್ನು ಹಣದ ಮೂಲಕ, ಆಮಿಷಗಳ ಮೂಲಕ ಒಂದು ಹಂತದಿಂದಾಚೆಗೆ ಬದಲಾಯಿಸಿಬಿಡಬಹುದು ಎಂದು ತೋರುವುದಿಲ್ಲ. ಮತದಾರ ಪ್ರಜ್ಞಾವಂತ ಹೌದೋ ಅಲ್ಲವೋ ಎನ್ನುವುದು ಚರ್ಚಾಸ್ಪದ. ಆದರೆ ಮತದಾರರ ಬಳಿ ಪಕ್ಕಾ ಪ್ರಾಯೋಗಿಕ ಲೆಕ್ಕಾಚಾರಗಳಿವೆ. ಅಲ್ಲಿ ಒಂದು ಕೂಡಿಸು ಒಂದು ಎಂದರೆ ಎಲ್ಲಾ ಸಂದರ್ಭದಲ್ಲೂ ಎರಡು ಎಂದು ಊಹಿಸುವ ಹಾಗಿಲ್ಲ.

ಒಂದೊಮ್ಮೆ ರಾಜ್ಯಮಟ್ಟದ, ರಾಷ್ಟ್ರ ಮಟ್ಟದ ಯಾವುದೋ ದೊಡ್ಡ ವಿಷಯವೊಂದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ ಆಗ ಸ್ಥಳೀಯ ಲೆಕ್ಕಾಚಾರಗಳಾಚೆಗೆ ಕೆಲ ಅಭ್ಯರ್ಥಿಗಳಿಗೆ ಲಾಭವಾಗುವುದುಂಟು. ಈ ಚುನಾವಣೆಯಲ್ಲಿ ಅಂತಹ ಯಾವ ವಿಚಾರವೂ ಇಲ್ಲ ಎನ್ನುವ ಕಾರಣಕ್ಕಾಗಿ ಎಲ್ಲಾ ಅಭ್ಯರ್ಥಿಗಳೂ ಈ ಬಾರಿ ವಿಪರೀತ ಬೆವರು ಸುರಿಸಬೇಕಾಗಿದೆ. ಕೊನೆಗೆ ಯಾವ ಪಕ್ಷವಾದರೂ ಗೆಲ್ಲಲಿ, ಆ ಗೆಲುವು ಮೇಲಿನಿಂದ ಕೆಳಗೆ ಹರಿದು ಬಂದ ಗೆಲುವಲ್ಲ. ಅದು ಕೆಳಗಿನಿಂದ ಮೇಲೆದ್ದು ಬಂದ ಗೆಲುವು. ಅಂದರೆ ಅದು ಅಭ್ಯರ್ಥಿಗಳ ಕಾರಣದಿಂದ ಪಕ್ಷಕ್ಕೆ ಬಂದ ಗೆಲುವು, ಪಕ್ಷದ ಕಾರಣದಿಂದ ಅಭ್ಯರ್ಥಿಗಳಿಗೆ ಬಂದ ಗೆಲುವಲ್ಲ.

ಪ್ರತಿಕ್ರಿಯಿಸಿ (+)