ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಟಿಯಾಗುವುದೇ ಕಿಂಗ್ಸ್‌ಗೆ ರಾಯಲ್‌?

ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್‌ಆರ್‌ಗೆ ‘ಪವಾಡ’ದ ನಿರೀಕ್ಷೆ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಜೈಪುರ: ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವನ್ ಪಂಜಾಬ್‌ ಮತ್ತು ಕೊನೆಯ ಸ್ಥಾನ ಗಳಿಸಿರುವ ರಾಜಸ್ತಾನ್ ರಾಯಲ್ಸ್ ತಂಡಗಳು ಐಪಿಎಲ್‌ನ ಮಂಗಳವಾರದ ಪಂದ್ಯದಲ್ಲಿ ಸೆಣಸಲಿವೆ.

ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ಬೆನ್‌ ಸ್ಟೋಕ್ಸ್‌, ಹೆಚ್ಚು ಮೊತ್ತ ಗಳಿಸಿದ ಭಾರತದ ಆಟಗಾರ ಎಂದೆನಿಸಿಕೊಂಡ ಜಯದೇವ್‌ ಉನದ್ಕತ್‌, ಆಲ್‌ರೌಂಡರ್‌ ಕನ್ನಡಿಗ ಕೆ.ಗೌತಮ್‌ ಮುಂತಾದವರನ್ನು ಹೊಂದಿದ್ದರೂ ರಾಯಲ್ಸ್‌ಗೆ ಉತ್ತಮ ಆಟ ಆಡಲು ಆಗಲಿಲ್ಲ.

ತಂಡ ಪ್ಲೇ ಆಫ್ ಹಂತಕ್ಕೇರಬೇಕಾದರೆ ಪವಾಡವೇ ನಡೆಯಬೇಕು. ಇಂಥ ಪರಿಸ್ಥಿತಿಯಲ್ಲಿ ಮಂಗಳವಾರದ ಪಂದ್ಯ ಅತ್ಯಂತ ಮಹತ್ವದ್ದು.

ಕಳೆದ ಮೂರು ಪಂದ್ಯಗಳಲ್ಲಿ ನಿರಂತರ ಸೋಲು ಕಂಡಿರುವ ರಾಯಲ್ಸ್ ಇದೀಗ ಆಟದ ಎಲ್ಲ ವಿಭಾಗಗಳಲ್ಲೂ ಸುಧಾರಿಸಿಕೊಳ್ಳಲು ಶ್ರಮಿಸುತ್ತಿದೆ. ಭಾನುವಾರ ನಡೆದ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಕಿಂಗ್ಸ್‌ ಆರು ವಿಕೆಟ್‌ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ರಾಯಲ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಆಟವಾಡಿತ್ತು.

ಅಜಿಂಕ್ಯ ರಹಾನೆ ನೇತೃತ್ವದ ತಂಡ ಪ್ಲೇ ಆಫ್‌ ಕನಸು ಕಾಣಬೇಕಾದರೆ ಉಳಿದಿರುವ ಎಲ್ಲ ಪಂದ್ಯಗಳನ್ನೂ ಗೆಲ್ಲಬೇಕು ಮತ್ತು ಇತರ ತಂಡಗಳ ಸೋಲನ್ನು ಕಾಯುತ್ತ ಕುಳಿತುಕೊಳ್ಳಬೇಕು. ತವರಿನ ಅಂಗಳಕ್ಕೆ ಮರಳಿರುವುದು ತಂಡದಲ್ಲಿ ಹೊಸ ಉತ್ಸಾಹ ಮೂಡಿಸಿರುವುದು ನಿಜ. ಆದರೆ ಸೋಲಿನ ಸುಳಿಯಿಂದ ಹೊರಬರಬೇಕಾದರೆ ಪರಿಣಾಮಕಾರಿ ತಂತ್ರಗಳನ್ನು ಹೂಡಬೇಕಾಗಿದೆ.

ಅಜಿಂಕ್ಯ ರಹಾನೆ, ಬೆನ್‌ ಸ್ಟೋಕ್ಸ್‌ ಮತ್ತು ರಾಹುಲ್‌ ತ್ರಿಪಾಠಿ ಅವರ ಬ್ಯಾಟಿಂಗ್ ಸಾಕಷ್ಟು ಸುಧಾರಿಸಬೇಕಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಜಯದೇವ ಉನದ್ಕತ್‌ ಕೂಡ ಪರಿಣಾಮ ಬೀರಬೇಕಾಗಿದೆ. ವೆಸ್ಟ್ ಇಂಡೀಸ್‌ನ ಬೌಲರ್‌ ಜೊಫ್ರಾ ಆರ್ಚರ್‌ ಮಾತ್ರ ತಂಡದಲ್ಲಿ ಈ ವರೆಗೆ ಮಿಂಚಿದ್ದು ಅವರ ಮೇಲೆ ಈ ಪಂದ್ಯದಲ್ಲೂ ನಿರೀಕ್ಷೆಯ ಭಾರ ಇದೆ.

ಎರಡನೇ ಸ್ಥಾನದತ್ತ ಚಿತ್ತ
ನಿರಂತರ ಎರಡು ಸೋಲಿನ ನಂತರ ಗೆದ್ದು ಬೀಗುತ್ತಿರುವ ಕಿಂಗ್ಸ್ ಇಲೆವನ್‌ ‍ಪಂಜಾಬ್‌ ಮಂಗಳವಾರ ಗೆದ್ದರೆ ರನ್‌ ರೇಟ್ ಆಧಾರದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ.

ಸ್ಪೋಟಕ ಆರಂಭಿಕ ಜೋಡಿಯಾದ ಕ್ರಿಸ್‌ ಗೇಲ್‌ ಮತ್ತು ಕೆ.ಎಲ್‌.ರಾಹುಲ್, ಅಗ್ರ ಕ್ರಮಾಂಕಕ್ಕೆ ಬಲ ತುಂಬಬಲ್ಲ ಮಯಂಕ್ ಅಗರವಾಲ್‌ ಮತ್ತು ಕರುಣ್‌ ನಾಯರ್‌, ಮಧ್ಯಮ ಕ್ರಮಾಂಕದ ಶಕ್ತಿಯಾದ ಮಾರ್ಕಸ್ ಸ್ಟೋಯಿನಿಸ್ ಮುಂತಾದವರನ್ನು ಒಳಗೊಂಡ ಬ್ಯಾಟಿಂಗ್ ಬಳಗ ಕಿಂಗ್ಸ್‌ನ ಶಕ್ತಿ.

ರವಿಚಂದ್ರನ್ ಅಶ್ವಿನ್‌, ಅಕ್ಷರ ಪಟೇಲ್‌ ಮುಜೀಬ್‌ ಉರ್‌ ರಹಿಮಾನ್‌ ಅವರು ಇರುವ ಬೌಲಿಂಗ್ ವಿಭಾಗ ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಲು ಸಮರ್ಥವಾಗಿದೆ.

ಪಂದ್ಯ ಆರಂಭ: ರಾತ್ರಿ 8.00
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT