ಸೋಲಿನಿಂದ ಪಾರಾದ ರಿಯಲ್‌ ಮ್ಯಾಡ್ರಿಡ್‌

7

ಸೋಲಿನಿಂದ ಪಾರಾದ ರಿಯಲ್‌ ಮ್ಯಾಡ್ರಿಡ್‌

Published:
Updated:
ಸೋಲಿನಿಂದ ಪಾರಾದ ರಿಯಲ್‌ ಮ್ಯಾಡ್ರಿಡ್‌

ಬಾರ್ಸಿಲೋನಾ: ಗರೆತ್‌ ಬ್ಯಾಲ್‌ ಅವರ ಅಮೋಘ ಆಟದ ಬಲದಿಂದ ರಿಯಲ್ ಮ್ಯಾಡ್ರಿಡ್‌ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋಲಿನಿಂದ ಪಾರಾಗಿದೆ.

ಕ್ಯಾಂಪ್‌ ನುವಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಹಣಾಹಣಿ ಯಲ್ಲಿ ರಿಯಲ್‌ ಮ್ಯಾಡ್ರಿಡ್‌ 2–2 ಗೋಲುಗಳಿಂದ ಎಫ್‌ಸಿ ಬಾರ್ಸಿಲೋನಾ ವಿರುದ್ಧ ಡ್ರಾ ಮಾಡಿಕೊಂಡಿತು.

ಬಲಿಷ್ಠರ ಪೈಪೋಟಿಗೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಬಾರ್ಸಿಲೋನಾ 4–4–2ರ ಯೋಜನೆಯೊಂದಿಗೆ ಕಣಕ್ಕಿಳಿದಿತ್ತು. ಮ್ಯಾಡ್ರಿಡ್‌ ತಂಡ 4–3–3ರ ರಣನೀತಿ ಹೆಣೆದು ಆಡಿತು.

ಪಂದ್ಯದ ಶುರುವಿನಿಂದಲೇ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 10ನೇ ನಿಮಿಷದಲ್ಲಿ ಲೂಯಿಸ್‌ ಸ್ವಾರೆಜ್‌, ಬಾರ್ಸಿಲೋನಾ ಆಟಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಅವರು ಮಿಂಚಿನ ಗತಿಯಲ್ಲಿ ಗುರಿ ಮುಟ್ಟಿಸಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

14ನೇ ನಿಮಿಷದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮೋಡಿ ಮಾಡಿದರು. ಎದುರಾಳಿ ಆವರಣದ ಆರು ಗಜ ದೂರದಿಂದ ಚೆಂಡನ್ನು ಗುರಿ ತಲುಪಿಸಿದ ಅವರು ಮ್ಯಾಡ್ರಿಡ್‌ ತಂಡ 1–1ರಲ್ಲಿ ಸಮಬಲ ಸಾಧಿಸಲು ನೆರವಾದರು.

45+3ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡದ ಸರ್ಜಿ ರಾಬರ್ಟೊ, ಮ್ಯಾಡ್ರಿಡ್‌ ತಂಡದ ಮಾರ್ಷೆಲೊ ಅವರನ್ನು ತಳ್ಳಿ ನೆಲಕ್ಕೆ ಬೀಳಿಸಿದ್ದರಿಂದ ಅವರಿಗೆ ಪಂದ್ಯದ ರೆಫರಿ ‘ಕೆಂಪು ಕಾರ್ಡ್‌’ ತೋರಿಸಿ ಅಂಗಳದಿಂದ ಹೊರಗೆ ಕಳುಹಿಸಿದರು. ಹೀಗಾಗಿ ಬಾರ್ಸಿಲೋನಾ ತಂಡ ದ್ವಿತೀಯಾರ್ಧದಲ್ಲಿ 10 ಮಂದಿಯೊಂದಿಗೆ ಆಡಬೇಕಾಯಿತು.

ಹೀಗಿದ್ದರೂ ತಂಡ ಎದೆಗುಂದಲಿಲ್ಲ. 52ನೇ ನಿಮಿಷದಲ್ಲಿ ಲಯೊನೆಲ್‌ ಮೆಸ್ಸಿ ಕಾಲ್ಚಳಕ ತೋರಿದರು. ಲೂಯಿಸ್‌ ಸ್ವಾರೆಜ್‌ ಒದ್ದು ಕಳುಹಿಸಿದ ಚೆಂಡನ್ನು ಮೆಸ್ಸಿ, ಎದುರಾಳಿ ಆವರಣದ ಎಡಬದಿಯಿಂದ ಗುರಿ ಮುಟ್ಟಿಸಿದ ರೀತಿ ಮನ ಸೆಳೆಯುವಂತಿತ್ತು. ನಂತರದ 19 ನಿಮಿಷಗಳ ಆಟದಲ್ಲಿ ಮೇಲುಗೈ ಸಾಧಿಸಿದ ಬಾರ್ಸಿಲೋನಾ ಮುನ್ನಡೆ ಕಾಪಾಡಿಕೊಂಡಿತ್ತು.

72ನೇ ನಿಮಿಷದಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡದ ಗರೆತ್‌ ಬ್ಯಾಲ್‌, ಬಾರ್ಸಿಲೋನಾ ತಂಡದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಿ ಚೆಂಡನ್ನು ಗುರಿ ತಲುಪಿಸಿದರು. ಹೀಗಾಗಿ 2–2ರ ಸಮಬಲ ಕಂಡುಬಂತು. ನಂತರದ ಅವಧಿಯಲ್ಲಿ ಎರಡೂ ತಂಡಗಳು ರಕ್ಷಣಾ ವಿಭಾಗದಲ್ಲಿ ಗುಣಮಟ್ಟದ ಆಟ ಆಡಿದವು. ಹೀಗಾಗಿ ಯಾರಿಗೂ ಗೆಲುವಿನ ಗೋಲು ದಾಖಲಿಸಲು ಆಗಲಿಲ್ಲ.

ರೊನಾಲ್ಡೊಗೆ ಗಾಯ: ರಿಯಲ್ ಮ್ಯಾಡ್ರಿಡ್‌ ತಂಡದ ರೊನಾಲ್ಡೊ ಮೊದಲಾರ್ಧದ ಆಟದ ವೇಳೆ ಗಾಯಗೊಂಡರು. ಪಾದದಲ್ಲಿ ನೋವು ಉಲ್ಬಣಿಸಿದ್ದರಿಂದ ಅವರು ದ್ವಿತೀಯಾರ್ಧದಲ್ಲಿ ಅಂಗಳಕ್ಕಿಳಿಯಲಿಲ್ಲ.

‘ರೊನಾಲ್ಡೊಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದಲ್ಲ. ಅವರು ಶೀಘ್ರವೇ ಚೇತರಿಸಿಕೊಳ್ಳಲಿದ್ದು, ಮೇ 26 ರಂದು ನಡೆಯುವ ಲಿವರ್‌ಪೂಲ್‌ ಎದುರಿನ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ಕೋಚ್‌ ಜಿನೆಡಿನ್‌ ಜಿದಾನೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry